Saturday, February 2, 2013

Grama Rajya - Hare Rama.in

ಹರೇ ರಾಮ. ಹರೇ ರಾಮ ರಾಮ ರಾಮ ಹರೇ ಹರೇ.

ಇಷ್ಟು ದಿವಸ ಈ ವಿಚಾರಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಶ್ರೀಕಾಂತ್ ಹೆಗಡೆಯವರು ಫೇಸ್ ಬುಕ್ ನಲ್ಲಿ ನೀಡಿದ ಲಿಂಕ್ ನೋಡಿದಾಗ ಈ ವಿಚಾರಗಳು ನನ್ನ ಗಮನಕ್ಕೆ ಬಂದವು. ಇದಕ್ಕೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳದಿದ್ದರೆ , ನಾವು ಸನಾತನಿಯಾಗಿ ಸ್ವತಂತ್ರವಾಗಿ ಇರುವ ವೈಚಾರಿಕ ಮನೋಧರ್ಮವನ್ನು ಅಡವಿಟ್ಟು ಬದುಕುವ ವರ್ತಮಾನ ಪರಿಸ್ಥಿತಿಗಳೊಡನೆ ಸಂಪೂರ್ಣ ರಾಜಿ ಮಾಡಿಕೊಂಡಂತಾದೀತು ಮತ್ತು ಪರಿಣಾಮವಾಗಿ ಅತ್ಮಸಾಕ್ಷಿಗನುಗುಣವಾಗಿ ನಡೆಯದವ ದೇವದ್ರೋಹ , ಧರ್ಮದ್ರೋಹ, ಗುರುದ್ರೋಹ ಮಾಡಿದಂತಾದೀತು ಎಂದು ಈ ವಿಚಾರಗಳನ್ನು ಹಂಚಿಕೊಂಡಿದ್ದೇನೆ.

Author , ಶ್ರೀಕಾಂತ್ ಹೆಗಡೆ , ಅಂತರವಳ್ಳಿ ಬರೆದ ವಾಕ್ಯಗಳೆಲ್ಲ ಈ ವಿಚಾರಗಳನ್ನು ಮೊದಲ ಸಲ ಓದುವವನಿಗೆ ಅಥವಾ ಜೀವನದ ಇಪ್ಪತ್ತೈದರಿಂದ ನಲವತ್ತು ವರ್ಷಗಳ ವಯೋಮಾನದಲ್ಲಿರುವ ಶಿಷ್ಯರೆಲ್ಲರಿಗೂ ಅತಿ ಆಕರ್ಷಕವಾಗಿ ತೋರುತ್ತವೆ . ಪ್ರಸ್ತುತ ಪಡಿಸಿದ ರೀತಿ ಮೆಚ್ಚಲೇ ಬೇಕು. ಇದು ಯಾವುದೋ ಬಹುರಾಸ್ಟ್ರೀಯ ಕಂಪನಿಯೊಂದು ತನ್ನ ಉತ್ಪನ್ನಗಳನ್ನು ಗ್ರಾಹಕನಿಗೆ ತಲುಪಿಸಲು ಯೋಜಿಸುವ ಯೋಜನೆಯ ಮಾದರಿಯಲ್ಲಿದೆ. ಇನ್ನು ತಿಳಿಸಿದ ಧ್ಯೇಯೋದ್ದೇಶಗಳು ಅತಿ ಆದರ್ಶವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ದೇಶ ಬ್ರಿಟಿಷ್ ದಾಸ್ಯದಿಂದ ವಿಮೋಚನೆಯಾದಾಗಲಿಂದಲೂ ಚುನಾವಣೆಗಳಿಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತದನಂತರ ಆಡಳಿತ ನಡೆಸುವ ಸರಕಾರಗಳು ಹೇಳುತ್ತಾ ಬಂದಿದ್ದು ಇದೇ ಮಾತುಗಳನ್ನು. ಹೇಳುವ ಭಾಷೆ , ಅಚ್ಚು ಹಾಕುವ ಕಾಗದಗಳು, ಕಾಗದದ ಬಣ್ಣಗಳು ಬೇರೆಯಾದರೂ ಎಲ್ಲ ಜಾತಿ, ಮತ , ಧರ್ಮಗಳೂ ಹೇಳಿದ ವಿಚಾರಗಳೂ ಇವೇ ಆಗಿವೆ. ನಾವ್ಯಾರನ್ನು ರಾಷ್ಟ್ರಪಿತ ಎಂದು ಸಂಭೋಧಿಸುತ್ತೇವೋ ಆ ಗಾಂಧೀ ಮಹಾತ್ಮ ಹೇಳಿದ್ದು ಇವೇ ಮಾತುಗಳು. ರಾಮ ರಾಜ್ಯ ಸ್ಥಾಪನೆಯಾದರೆ ಸುಖ ಶಾಂತಿ ನೆಮ್ಮದಿ ಪ್ರಜೆಗಳಿಗೆ ದೊರೆತೀತು ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದುಂಟು. ನಮ್ಮ ದೇಶದ ನಾಡಿ ಮಿಡಿತವಿರುವದೇ ಹಳ್ಳಿಗಳಲ್ಲಿ ಎಂದು ಎಲ್ಲರೂ ಘಂಟಾ ಘೋಶವಾಗಿ ಸಾರಿದ್ದಾರೆ. ಆದರೆ ವಿಚಿತ್ರವಾದರೂ ಸತ್ಯವೆಂದರೆ ಈ ರೀತಿ ಘೋಶಿಸುವವರು , ಕಾರ್ಯಕ್ರಮಗಳಿಗೆ ಉದ್ಯುಕ್ತರಾಗುವವರು ಸದಾ ಕಾಲ ನಗರ ಜೀವನದ ಥಳಕು ಬಳುಕಿನಲ್ಲಿಯೇ ಕಾಲ ಕಳೆಯುವವರಾಗಿದ್ದಾರೆ . ಆಗಾಗ ನೆಂಟರು ಬಂದಂತೆ ಹಳ್ಳಿಗಳಿಗೆ ” ಧೀಂ ಥಕ ಧೀಂ , ಧೀಂ ಥಕ ಧೀಂ ” ಎಂದು ಆಗೀಗ ಭೇಟಿ ನೀಡಿ ಬರುವವರಾಗಿದ್ದಾರೆ.

ಇನ್ನು ಸ್ವತಂತ್ರ ಭಾರತದಲ್ಲಿ ಕಾನೂನು ಮಾಡುವ, ಕಾನೂನು ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿದ ಅಡಳಿತ ನಡೆಸುವ ಸರಕಾರಗಳೇ ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸೋತಿರುವಾಗ , ಸಮಾಜದ ಅತಿ ಕಡಿಮೆ ಸಂಖ್ಯೆಯಲ್ಲಿರುವ ಶಿಷ್ಯರ ಗುಂಪೊಂದು ಈ ರೀತಿ ಬೃಹದಾಕಾರದ ಯೋಜನೆಯೊಂದನ್ನು ಕೈಗೆತ್ತಿಕೊಂಡಾಗ ಇದು ಕಾರ್ಯ ಸಾಧುವೇ ಎಂದೂ ಯೋಚಿಸಬೇಕಷ್ಟೇ . ಪ್ರತಿ ವರ್ಷ ಲಕ್ಷ ಲಕ್ಷ ಕೋಟಿ ರೂಪಾಯಿಗಳ ಯೋಜನೆ ಅನುಷ್ಟಾನ ಮಾಡುವ , ಬೃಹತ್ ಸಂಪತ್ತನ್ನು ತನ್ನ ಅಡಿದಾವರೆಗಳಲ್ಲಿ ಅಡಗಿಸಿಕೊಂಡಿರುವ , ಹಿಂದಿನ – ಇಂದಿನ – ಮುಂದಿನ ಆಗುಹೋಗುಗಳನ್ನು ಈ ದೇಶದಲ್ಲಿ ತನ್ನ ಅಂಕುಶದಲ್ಲಿ ಬುದ್ಧಿ ಸಾಮರ್ಥ್ಯದಿಂದ ಹಿಡಿದಿಟ್ಟುಕೊಂಡಿರುವ ಅಧಿಕಾರಿ ವಲಯದ ಗುಂಪುಗಳನ್ನು ತನ್ನ ಅಂಕುಶದಲ್ಲಿಟ್ಟಿರುವ ಸರಕಾರ ಸಾಧಿಸಿ ಯಶಸ್ಸು ಕಾಣಲಾಗದ ಈ ರೀತಿಯ ಗ್ರಾಮಾಧಾರಿತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಹತ್ತಾರು ಹೆಚ್ಚೆಂದರೆ ನೂರಾರು ಕೋಟಿ ಸಂಪತ್ತಿನ , ಒಂದು ನೂರಾ ಇಪ್ಪತ್ತು ಕೋಟಿ ಜನ ಸಂಖ್ಯೆಯ ದೇಶದಲ್ಲಿ ಅಂದರೆ ಆರು ಕೋಟಿ ಜನಸಂಖ್ಯೆಯ ಈ ರಾಜ್ಯದ ಮೂರರಿಂದ ನಾಲ್ಕು ಲಕ್ಷಗಳಲ್ಲಿರುವ ಶಿಷ್ಯ ಸಮೂಹದಿಂದ , ಬಹುಆದರ್ಶಗಳನ್ನೊಳಗೊಂದ ಈ ಯೋಜನೆ ಯಶಸ್ವಿಯಾದೀತೇ ಎಂಬ ಪ್ರಶ್ನೆಗಳನ್ನೆಬ್ಬಿಸುವದಿಲ್ಲವೇ? ಅಷ್ಟೇ ಅಲ್ಲದೆ ಹಾಲಿ ಸಮಾಜದ ಗ್ರಾಮ ವ್ಯವಸ್ಥೆಯನ್ನು ಅವಲೋಕಿಸಿದರೆ ಗ್ರಾಮವೊಂದರಲ್ಲಿ ಎಲ್ಲ ರೀತಿಯ ಜಾತಿ, ಮತ, ಧರ್ಮಗಳ ಪ್ರಜೆಗಳು ಕಾಣಬರುತ್ತಾರೆ. ಅಲ್ಲದೆ ಪ್ರತಿ ಜಾತಿ, ಮತ, ಧರ್ಮಗಳ ಸಂಘಟನೆಗಳು ಕಾರ್ಯೋನ್ಮುಖವಾಗಿವೆ. ಇನ್ನೊಂದು ಆಘಾತಕಾರಿ ಸತ್ಯ ಸಂಗತಿಯೆಂದರೆ ಇಂದು ಚತುರ್ವರ್ಣ ರೀತಿಯ ಜನಜೀವನವು ಕಂಡುಬರುತ್ತಿಲ್ಲ ಜೊತೆಗೆ ಚಾತುರ್ವರ್ಣ್ಯ ವ್ಯವಸ್ತೆಯಲ್ಲಿ ಒಪ್ಪಿಕೊಂಡ ಬುದ್ಧಿಜೀವಿ ಬ್ರಾಹ್ಮಣರ ವೈಚಾರಿಕ ಮುಖಂಡತ್ವವೂ ಸಮಾಜದಿಂದ ಒಟ್ಟಾರೆ ಸಾಮಾಜಿಕ ಜೀವನದಲ್ಲಿ ಒಪ್ಪಿಗೆಯಿಲ್ಲ.

ನನ್ನ ಅನಿಸಿಕೆಗಳಿಗೆ ತಮ್ಮೆಲ್ಲರ ಪ್ರಭುದ್ಧ ಅನಿಸಿಕೆಗಳು ಜೊತೆಗೂಡಲಿ , ಶ್ರೀಕಾಂತ ಹೆಗಡೆಯವರಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.

ಹರೇ ರಾಮ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat .blogspot .com

Feb 02 , 2013 .




http://hareraama.in/articles/gramarajya-intro/

No comments:

Post a Comment