Saturday, February 9, 2013

Kannada , Kannada ????????????


ನೋಡಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡದ ಕಹಳೆ ಎಲ್ಲೆಡೆ ಮೊಳಗುತ್ತಿದೆ. ವೀರಾವೇಶದಿಂದ ಭಾಷಣ ನಡೆಯುತ್ತಿದೆ. ಕನ್ನಡ ಉಳಿಸಿ, ಬೆಳೆಸಿ ಕರೆ ನೀಡುತ್ತಿದ್ದಾರೆ. ಈ ರೀತಿಯ ವೀರಾವೇಶ ಕೇವಲ ಸಾಹಿತ್ಯಸಮ್ಮೇಳನಗಳಿಗೆ , ನವೆಂಬರ್ ತಿಂಗಳಿನ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಮೀಸಲಾಗುತ್ತಿದೆ.



ಹಾಗಾದರೆ ಕನ್ನಡಿಗರಿಗೆ ತಮ್ಮ ಮಾತ್ರಭಾಷೆಯ ಅಭಿಮಾನವಿಲ್ಲವೇ? ಖಂಡಿತ ಅಭಿಮಾನ ಇದೆ. ಅದನ್ನು ಉಳಿಸಿಕೊಂಡೂ ಇದ್ದಾರೆ. ಉಳಿಸಿಕೊಳ್ಳುತ್ತಲೂ ಇದ್ದಾರೆ. ಹಾಗಿದ್ದರೆ ಕನ್ನಡಿಗರು ಅಭಿಮಾನಶೂನ್ಯರು, ಅಭಿಮಾನಶೂನ್ಯರಾಗುತ್ತಿದ್ದಾರೆ ಎಂಬ ಕೂಗುಗಳೇಕೆ    ?



ಲಾಗಾಯ್ತಿನಿಂದ ಕರ್ನಾಟಕದಲ್ಲಿ ಆಡಳಿತ ನಡೆಸುವವರು ದುಡಿಯಬಲ್ಲ ಕೈಗಳಿಗೆ ಉದ್ಯೋಗ ದೊರಕಿಸುವಲ್ಲಿ ಸೋತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು  ಕೇವಲ ಸರಕಾರೀ ನೌಕರಿ ಪಡೆಯಲು ಅವಶ್ಯವಾದ ಪ್ರಮಾಣಪತ್ರ (ಸರ್ಟಿಫಿಕೇಟ್) ಪಡೆಯಲು ಸಜ್ಜು ? ಗೊಳಿಸಿದ್ದಾರೆ. ನಮ್ಮ ಸಮಾಜದ ಮೂಲ ಕಸುಬುಗಳಿಗೆ  ( ಉದ್ಯೋಗಳಿಗೆ ) ಇರುವ ಗೌರವ ಕಡಿಮೆಯಾದಾಗ , ಆ ಗೌರವವನ್ನು ದೊರಕಿಸಿಕೊಡುವಲ್ಲಿ ಆಡಳಿತ ನಡೆಸಿದ, ನಡೆಸುತ್ತಿರುವ ಸರಕಾರಗಳು ಸೋತಿವೆ. ಈ ಎಲ್ಲಾ ಬದಲಾವಣೆಗಳಿಂದ ಸೋತ ಜನಸಾಮಾನ್ಯ ನಾಗರಿಕ ಜೀವನದಲ್ಲಿ ಬದುಕಲು ಸಹಜವಾಗಿ ಈ ರಾಜ್ಯಕ್ಕೆ ಬರುವ ಪರ ಭಾಷಿಕರ ಭಾಷೆಯನ್ನೇ ಅನುಸರಿಸಿ ಅವರಿಗೆ ಮನಸಂತೋಷವಾಗುವಂತೆ  ನಡೆದುಕೊಂಡು ತನ್ನ ಕೌಟುಂಬಿಕ ಜೀವನ ನಿರ್ವಹಣೆಗೆ ಬೇಕಾದ ದಾರಿ ಕಂಡುಕೊಂಡಿದ್ದಾನೆ. ಇದರರ್ಥ ಕನ್ನಡದ ಅಭಿಮಾನ ಕಳೆದುಕೊಂಡಿದ್ದಾನೆ ಎಂದಲ್ಲ. ಈ ಅನಪೇಕ್ಷಿತ ಬೆಳವಣಿಗೆಗಳಿಂದ ಪರಭಾಷೆಯ ಜನರು ಆಸರೆಗಾಗಿ ಹೆಚ್ಚು ಬೆಂಗಳೂರಿಗೆ ಬಂದಾಗ  ಸ್ಥಳೀಯರು ಹೆಚ್ಚು ಉದ್ಯೋಗವಕಾಶಗಳನ್ನು ಪಡೆದು ಆರ್ಥಿಕ ಬಲದಿಂದ ನೆಮ್ಮದಿ ಪಡೆದಿದ್ದಾರೆ.  ಹಾಗಾಗಿ ಕ್ರಮೇಣ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತ ಸಾಗಿದೆ. ಕನ್ನಡ ಮಾತನಾಡುವವರ ಕಲರವ ಕಡಿಮೆಯಾಗಿ ಇತರ  ಭಾಷೆಗಳೇ   ಕೇಳಿಬರುತ್ತಿರುವದರಿಂದ , ಅಳಿದುಳಿದ ಕನ್ನಡಿಗರಲ್ಲ್ಲಿ , ರಸ್ತೆ ಬೀದಿಗಳಲ್ಲಿ ಕಾಲ ಕಳೆದು ರಾತ್ರೆ ಮನೆ ಸೇರುವ  ಮೂಲ ಕನ್ನಡಿಗರು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿರುವದನ್ನು ಮನಗಂಡು , ಅಲ್ಲಲ್ಲಿ ಸಂಘಟನೆಗಳನ್ನು ಮಾಡಿ ರಾಜಕಾರಣಿಗಳ ಸಹಕಾರದಿಂದ ಸರಕಾರದ ಕಾಸು ಪಡೆದು , ಹೊಡಿ ಬಡಿ, ತಾ ಮಚ್ಚು , ಏನ್ಲಾ , ಎಂತ್ಲಾ ಎಂಬ ಕನ್ನಡದಲ್ಲಿ ಆರ್ಭಟಿಸುತ್ತ ಸಾಗಿದ್ದರಿಂದ , ಇಂದು ಕನ್ನಡ ಎಂದರೆ ರಸ್ತೆಯಲ್ಲಿ ಗುಂಪು ಗುಂಪಾಗಿ ಸಾಗಿ ಅರ್ಭಟೀಸುವ ಕನ್ನಡಿಗರ ಕನ್ನಡ ಆಗಿದೆ. ಸಂಪನ್ನವಾದ ಸುಮಧುರ , ಜೀವನ ಪಾಠ ಗಳ ಸೌಂದರ್ಯವನ್ನೊಳಗೊಂಡ   ಕನ್ನಡ ಅಡಿಗೆಮನೆ ಸೇರಿ ಕೇವಲ ಸಾಹಿತ್ಯ ಸಮ್ಮೇಳನಗಳಿಗೆ , ಹಿಂದಿನ ತಲೆಗಳಿಗೆ ( ಇಂದು ಐವತ್ತು ಅರವತ್ತು ದಾಟಿದವರು ) ಸೀಮಿತವಾಗಿ ಉಳಿದಿದೆ.



ಇನ್ನು ಇಂದಿನ ನಮ್ಮ ಸರಕಾರೀ ಮತ್ತು ಅರೆ ಸರಕಾರೀ ಶಾಲೆಗಳನ್ನು ನೋಡಿ . ತುಂಬಾ ಶಾಲೆಗಳಲ್ಲಿ ಇಂಗ್ಲೀಶ್ ಮಾಧ್ಯಮ ಎಂದು ಬೋರ್ಡ ಹಾಕಿರುತ್ತಾರೆ. ಒಳಗೆ ಕಲಿಸುವದು ಕನ್ನಡ ಮಾಧ್ಯಮದಲ್ಲಿ , ಆಗಾಗ ಪುಸ್ತಕಗಳಿಂದ ಇಂಗ್ಲೀಶ್ನಲ್ಲಿರುವದನ್ನು   ತಪ್ಪು ತಪ್ಪಾಗಿ ಮಕ್ಕಳಿಗೆ ಓದಿ ಹೇಳಿ ಕಾಟಾಚಾರಕ್ಕೆ ಇಂಗ್ಲೀಶ್ ಮಾಧ್ಯಮದಂತೆ ತೋರ್ಪಡಿಸುತ್ತಾರೆ. ಇದೇನು ವಿಶೇಷ ತಿಳುವಳಿಕೆಯಿಂದ ಬರಬೇಕಾಗಿಲ್ಲ, ಸ್ಥಳೀಯರನ್ನು ಮಾತನಾಡಿಸಿದರೆ ಯಾವ ಯಾವ ಶಾಲೆಯಲ್ಲಿ ಕಲಿಕೆ ಹೇಗಿದೆ ಎನ್ನುವದು ಎಲ್ಲರಿಗೂ ಗೊತ್ತಾಗುವ ವಿಷಯ. ಈ ನಾಲ್ಕೈದು ದಶಕಗಳಲ್ಲಿ ನಾವು ನಮ್ಮವರು, ನನ್ನ   ಜಾತಿ, ನಮ್ಮ ದೇವರು, ನಮ್ಮ ಮಠ ಎಂಬ ಸಂಕುಚಿತ ಭಾವನೆಗಳು  ಹೆಚ್ಚು ಹೆಚ್ಚು ಜಾಗ್ರತವಾಗಿರುವದರಿಂದ ಹಾಗೂ ರಾಜಕೀಯ ಪ್ರಭಾವಗಳಿಂದ ಶಿಕ್ಷಕರು ತಮಗೆ ಅನುಕೂಲವೆನಿಸುವ ತಮ್ಮ ಸಂಖ್ಯೆಯೇ  ಜಾಸ್ತಿ ಇರುವ ಶಾಲೆಗಳಿಗೆ ವರ್ಗಾವಣೆಬಯಸಿ ಹೋಗುವದರಿಂದ ಸಮಾಜದಲ್ಲಿ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಅತಿ ಹಿಂದುಳಿದ ಶಾಲೆಗಳಿಗೆ ಸಿಗುವ ಶಿಕ್ಷಕರು ಯಾರಿಗೂ ಬೇಡವಾದವರಾಗಿದ್ದಾರೆ.  ಉತ್ತಮ ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಆರ್ಥಿಕ ಅನುಕೂಲತೆ ಇಲ್ಲದಿರುವ ಮತ್ತು ಉತ್ತಮ ಇಂಗ್ಲೀಶ್ ಶಾಲೆಗಳಿಗೆ ಪ್ರವೇಶ ಸಿಗದ ಮಕ್ಕಳಷ್ಟೇ ಸರಕಾರೀ, ಅರೆಸರಕಾರಿ ಶಾಲೆಗಳಿಗೆ ಸೇರುವವರಾಗಿದ್ದಾರೆ.  ಪರಿಣಾಮವಾಗಿ ತುಂಬಾ ಹಿಂದುಳಿದ ಮಕ್ಕಳು ಮತ್ತು ಆರ್ಥಿಕವಾಗಿ ಅಸಹಾಯಕವಾಗಿರುವವರ ಮಕ್ಕಳು ಮಾತ್ರ ಓದುವ ಪರಿಸರದಲ್ಲಿ ಮಾತ್ರ ಕನ್ನಡ.  ಈ ಎಲ್ಲಾ ಬೆಳವಣಿಗೆಗಳಿಂದ  ಹೊಡಿ ಬಡಿ, ಮಚ್ಚು ಲಾಂಗು, ಏನ್ಲಾ  ಯೆಲ್ಲಲಾ ಕನ್ನಡ ಉಳಿದು ಬೆಳೆದು, ರಸ್ತೆಗಳ ಸಂದು ಗೊಂದುಗಳಲ್ಲಿ, ದರ್ಶನಿ ಹೋಟೇಲುಗಳಲ್ಲಿ , ಗಬ್ಬು ನಾರುವ ಸಿನೇಮಾ ಥಿಯೇಟರುಗಳಲ್ಲಿ ಮಾತ್ರ ಕನ್ನಡ ಕೇಳಿಬರುತ್ತಿದೆ.



ಹಾಗೆಂದು ಜನಸಾಮಾನ್ಯ ಕನ್ನಡಿಗನಲ್ಲಿ ಕನ್ನಡಾಭಿಮಾನ ಕುಗ್ಗಿಲ್ಲ  , ತಗ್ಗಿಲ್ಲ.   ಸಾಹಿತ್ಯ ಸಮ್ಮೇಳನಗಳು , ಸಾಹಿತ್ಯ ಸಂತೆಗಳಲ್ಲಿ ಪುಸ್ತಕ ಮಾರಾಟದ ಭರಾಟೆಗಳು ,  ಕನ್ನಡ ಪುಸ್ತಕಗಳ ಮಾರಾಟದ ಆಧುನಿಕ ಶೈಲಿಯ ಮಳಿಗೆಗಳು  ಇವನ್ನೆಲ್ಲ ಕಂಡಾಗ ಅಭಿಮಾನ ಉಕ್ಕುತ್ತದೆ.  ಅಂತರ್ಜಾಲದ ಸಮೂಹ ಸಂವಹನ ಜಾಲಗಳನ್ನು ಕಂಡಾಗ , ಅವುಗಳಲ್ಲಿ ಕನ್ನಡದಲ್ಲಿ ಬರೆಯುವವರ ಶೈಕ್ಷಣಿಕ ಹಿನ್ನೆಲೆ, ದಿನ ನಿತ್ಯ ಅವರೆಲ್ಲ ಆದಾಯಕ್ಕಾಗಿ ತೊಡಗಿಕೊಂಡಿರುವ ಅಧುನಿಕ   ಉದ್ಯೋಗಗಳ ಹೊರತಾಗಿಯೂ ಕನ್ನಡದಲ್ಲಿ ಬರೆಯುವ ಅವರ ಭಾಷಾಭಿಮಾನ ಎಲ್ಲ ಕಂಡಾಗ ಕನ್ನಡದ ಕೊಲೆ ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸುವ ರಾಜಕಾರಣಿಗಳಿಂದ , ರಾಜಕೀಯ ಪಕ್ಷಗಳಿಂದ ಆಗಿದೆಯೇ ವಿನಃ ಜನಸಾಮಾನ್ಯ ಕನ್ನಡಿಗನಿಂದಾಗಲಿಲ್ಲ ಅಥವಾ ಜೀವನ ನಿರ್ವಹಣೆಗಾಗಿ ಆದಾಯ ಅರಸಿ ಬರುವ ಇತರ  ಭಾಷಿಕರಿಂದಾಗಲಿಲ್ಲ   ಎಂದು ಧೈರ್ಯವಾಗಿ ಹೇಳಬಹುದು.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ,
hariharbhat.blogspot.com
ಫೆಬ್ರವರಿ 10  , 2013 .

No comments:

Post a Comment