Wednesday, February 13, 2013

ಮತ ಚಲಾಯಿಸಲು ಒಂದು ಪ್ರಮಾಣದ ಶೈಕ್ಷಣಿಕ ಅರ್ಹತೆ


ನಮ್ಮ ವ್ಯವಸ್ಥೆಯಲ್ಲಿ ಎಡಗೈ ಹೆಬ್ಬೆಟ್ಟಿನ ಗುರುತಿನವರಿಂದ ಹಿಡಿದು ಅತಿ ಹೆಚ್ಚಿನ ಶಿಕ್ಷಣ ಪಡೆದವರೂ ಪ್ರಜಾ ಪ್ರತಿನಿಧಿಗಳಾಗುತ್ತಾರೆ. ಅಂದರೆ ಎಂ.ಎಲ್.ಎ / ಎಂ.ಪಿ /ಮಂತ್ರಿ ಗಳು. ಯಾವುದಾದರೂ ಅನಪೇಕ್ಷಣೀಯ   ಘಟನೆಗಳು ನಡೆದಾಗ ವಿಶ್ರಾಂತ ( ರಿಟೈರ್ಡ್ ) ನ್ಯಾಯಾಧೀಶರ ಆಯೋಗವನ್ನು ರಚಿಸಿ ವರದಿ ಕೇಳುತ್ತಾರೆ. ಆ ನ್ಯಾಯಾಧೀಶರು ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ಕಾಲ ಶಿಕ್ಷಣ ಪಡೆದು, ತದನಂತರ ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ನ್ಯಾಯ ನಿರ್ವಹಣೆಯ ಕೆಲಸಗಳನ್ನು ಪೂರೈಸಿ ವಿಶ್ರಾಂತರಾಗಿರುತ್ತಾರೆ. ಈ ರೀತಿ ಅನುಭವ, ಶೈಕ್ಷಣಿಕ ಸಂಪನ್ನತೆ ಇರುವ ನ್ಯಾಯಾಧೀಶರು ನೀಡಿದ ವರದಿಯನ್ನು ಸ್ವೀಕರಿಸಬೇಕೆ , ಬೇಡವೇ , ಸ್ವೀಕರಿಸುವದಾದರೆ  ಸಂಪೂರ್ಣವಾಗಿ ಸ್ವೀಕರಿಸಬೇಕೆ , ಇಲ್ಲವಾದರೆ   ಯಾವ  ಯಾವ ಅಂಶಗಳನ್ನು ಸ್ವೀಕರಿಸಬೇಕು , ಅಥವಾ ಸಂಪೂರ್ಣ ವರದಿಯನ್ನೇ ಸ್ವೀಕರಿಸದಿರಬೇಕೇ ಎಂಬ ನಿರ್ಣಯವನ್ನು   ಕೈಗೊಳ್ಳುವವರು ಈ ಎಡಗೈ ಹೆಬ್ಬೆಟ್ಟಿನ ಮಂದಿ ಅಥವಾ ಎಡಗೈ ಹೆಬ್ಬೆಟ್ಟಿನ ಮಂದಿ ಕೈಗೊಳ್ಳುವಂತಹ ನಿರ್ಣಯ ಕೈಗೊಳ್ಳುವ ಜಾಯಮಾನದವರು. ಅಂದರೆ ಮಂತ್ರಿ ಮಹಾಶಯರು. ಈ ಮಂತ್ರಿ ಮಹಾಶಯರಿಗೆ ಸಲಹೆಗಳನ್ನು ಕೊಡುವ ಅಧಿಕಾರಿ ವಲಯದಲ್ಲಿರುವವರೇ ನಿರ್ಣಯ ತೆಗೆದುಕೊಳ್ಳುವವರು.


ಈ ರೀತಿ ವ್ಯವಸ್ಥೆ ಇರುವ  ಸಮಾಜದಲ್ಲಿ ಯಾವ ರೀತಿಯ ಸಹಜ ನ್ಯಾಯ ( natural  justice  ) ಪಡೆಯುವದು ಸಾಧ್ಯ. ಹೀಗಿರುವಾಗ ಮತ ಚಲಾಯಿಸಲು ಒಂದು ಪ್ರಮಾಣದ ಶೈಕ್ಷಣಿಕ ಅರ್ಹತೆ  ನಿಗದಿಪಡಿಸುವ ಅವಶ್ಯಕತೆ ಇದೆಯಲ್ಲವೇ?  ಮಂತ್ರಿಗಳಾಗಲು , ಮಂತ್ರಿಗಳಾಗಿ ತಮ್ಮ ಕೆಲಸ ನಿರ್ವಹಿಸುವಾಗ ತಮಗೆ ಅಧಿಕಾರಿ ವರ್ಗ ನೀಡಿದ ಸಲಹೆಗಳನ್ನು ಅರ್ಥೈಸಿ , ಯೋಗ್ಯ ನಿರ್ಣಯ ಕೈಕೊಳ್ಳುವ ಸಾಮರ್ಥ್ಯ ಪಡೆಯಲು ಶಿಕ್ಷಣ ಮೂಲಭೂತವಾಗಿ ಬೇಕಲ್ಲವೇ? ಇಂದು ಸ್ವಾತಂತ್ರೋತ್ತರ ಕಾಲದಲ್ಲಿ ಸಮಾಜದ ಎಲ್ಲ ಜನಾಂಗಗಳು ಹೆಚ್ಚಿನ ಶಿಕ್ಷಣ ಪಡೆದ ಯುವ ಜನಾಂಗವನ್ನು ಹೊಂದಿರುವ ವರ್ತಮಾನದಲ್ಲಿ ಸೂಕ್ತ ಬದಲಾವಣೆಗಳಿಗೆ ಯೋಚಿಸುವದೊಳ್ಳೆಯದಲ್ಲವೆ  ?


ಏನಂತೀರಿ ?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www .hariharbhat .blogspot .com
 

No comments:

Post a Comment