Sunday, January 27, 2013

ಪಂಡಿತ ಗಣಪತಿ ಭಟ್, ಹಾಸಣಗಿ

ಆ ಸನಾತನಿ ಹವ್ಯಕ ಮಾತಾ ಪಿತೃಗಳು ಅದೆಷ್ಟು ಭಾಗ್ಯಶಾಲಿಗಳು ?  ಆ ಶಿಷ್ಯರು ಅದೆಷ್ಟು ಅದೃಷ್ಟವಂತರು ?  ತನ್ನ ಒಡಲಲ್ಲಿ ಸಂಗೀತ ಸುಮವನ್ನರಳಿಸುತ್ತಿರುವ ಈ ಸಂಗೀತಾರಾಧಕನನ್ನು  ಕಂಡು ಆ ನಿಸರ್ಗ ಮಾತೆ ಅದೆಷ್ಟು ಸಂತಸಪಡುತ್ತಿರಬಹುದು ?  ಕೈಹಿಡಿದ  ಸತಿ, ತಂದೆಯನ್ನೇ ಅನುಸರಿಸುತ್ತಿರುವ ಮಗ ಅದೆಷ್ಟು ಪುಣ್ಯಶಾಲಿಗಳು ?  ಗಾನ ಗಂಗೆ ಗಂಗು ಮಾತೆಯ  ಗಾನಸುಧೆಯನ್ನು ಅಜರಾಮರವಾಗಿಸಲು ಜನ ಮನದಿಂದ ಪುರಸ್ಕೃತವಾಗಿ ಮುಂದಾಳತ್ವ  ಹಿಡಿದಿರುವ   ವರ್ತಮಾನದ  ಹಿಂದುಸ್ತಾನಿ ಸಂಗೀತ ಮಾಂತ್ರಿಕ ನಮ್ಮೊಡನೆ ನಮ್ಮವನು ಎಂಬುದು ಅದೆಂತಹ ಹೆಮ್ಮೆ ?  ದೇವಗುರುವಿನಂತಹ ರಾಜಗುರು ಗುರುವಾಗಿ ಪಡೆದ ಈ ಶಿಷ್ಯನ ಗಾನ ಮಧುವನ್ನು ಹೀರುವ ದುಂಬಿಯಾಗಲು ನಾವೆಷ್ಟು ಸಾನಂದಿತರು ?

ಹೀಗೆ ಅಕ್ಷರ ಮಾಲೆ ರಚಿಸಿದಷ್ಟೂ ಕೊರತೆಯಾಯಿತೋ ಎಂಬಂತೆ ನಮ್ಮನ್ನೆಲ್ಲ ತಮ್ಮ ಗಾನ ಸುಧೆಯಿಂದ ಗಂಧರ್ವ ಲೋಕಕ್ಕೆ ಕರೆದೊಯ್ಯುವ ಪಂಡಿತ ಹಾಸಣಗಿ ಭಟ್ಟರ ಗಾಯನ ಇಂದು ಬೆಳಿಗ್ಗೆ ಏಳುವರೆಗೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಟ್ಟಿತ್ತು.


ಗಾನ ಮಾಧುರ್ಯ ರಸಾಸ್ವಾದನೆಗೆ ಸೇರಿದ ಅಭಿಮಾನಿಗಳಿಂದ ಕಿಂಚ ಹಾಲ್ ತುಂಬಿ ಹೋಗಿತ್ತು. ಸಪ್ತಕ ಹಾಗು ಗೆಳೆಯರ ಬಳಗ ಎಂಬೆರಡು ಸಂಗೀತ ಸಮರ್ಪಣೆಗೆ ತೊಡಗಿಕೊಂಡ ಸಂಸ್ತೆಗಳು ಪ್ರಾಯೋಜಿಸಿದ ಸ್ವರ ಸುಪ್ರಭಾತ ಮಾಲಿಕೆಯ ಎರಡನೆ ಈ ಕಾರ್ಯಕ್ರಮವನ್ನು  ಬೈರಾಗಿ ರಾಗದಿಂದ ಶ್ರೀಯುತ ಗಣಪತಿ ಭಟ್ಟರು ಆರಂಭಿಸಿ ಸತತ ಐವತ್ತೆರಡು ನಿಮಿಷಗಳ ಕಾಲ ಸ, ರಿ, ಗ, ಮ ....... ನಾದ ಸರಸ್ವತಿಯ ನಾದ ಸುಧೆ ಹರಿಸಿದರು. ಜೊತೆಗೆ ಪಂಡಿತ ವಿಶ್ವನಾಥ್ ನಾಕೋಡ್  ರವರ ಬೆರಳುಗಳು ತಬಲಾದಲ್ಲಿ ತಾಳ ಸರಸ್ವತಿಯ ವಿವಿಧ ಸ್ವರಗಳನ್ನು ಸ್ಫುರಿಸಿದವು . ಪಂಡಿತ ವ್ಯಾಸಮುರ್ತಿ   ಕಟ್ಟೆಯವರು  ಹಾರ್ಮೋನಿಯಮ್ ದಲ್ಲಿ   , ತಂಬೂರದಲ್ಲಿ ವಿಶಾಲ್ ಹೆಗಡೆ, ವಸಂತ್ ಭಟ್ ಬೆರಗುಗೊಳಿಸುವ ಮೆರಗು ನೀಡಿದರು .


ನಂತರ ಅಹಿರಾವತಿ ರಾಗದಲ್ಲಿ , " ಚಂಚಲ ನಯನಾ ....................  ನೇಹಲ ಗಾಯಿ .................... ಇಪ್ಪತ್ತು ನಿಮಿಷ ಗಳಷ್ಟು   ಕಾಲ  ಗಾಯನಾಸಕ್ತರನ್ನು  ಸೆರೆಹಿಡಿದರು.


ಮುಂದೆ " ಭಜರೆ  ಅಭಿಮಾನ ....................."  ಖಿಲಾಸ್ ಖಾನೆ ಕೋಟಿ ರಾಗದಲ್ಲಿ  .


  " ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಪುರುಷೋತ್ತಮಾ .............................
....................................................... ಶ್ರೀ ಕೃಷ್ಣಾ ........................... ಎಂದು ಕೃಷ್ಣ ಭಕ್ತಿ ಸುಧೆಯಾಗಿ ಹರಿದಾಗ ಬೆಳಗ್ಗಿನ ಒಂಭತ್ತುವರೆಯಾಗಿತ್ತು .  ತದನಂತರ "  ಬನ್ಸಿ ವಾಲೆನೇ ಮನಮೋಹಾ ...............................  ಬೋಲೆ ಬೋಲೆ ಮೀಠಿ ಲಾಹೀ .................. "  ಮುಗಿದಾಗ ಗಡಿಯಾರದ ಮುಳ್ಳು ಹತ್ತರ ಮೇಲಿತ್ತು.


Thanks  to  Mr .G .S.Hegde   ಹೇಳುತ್ತಾ,  ಭಾನುವಾರದ ಬೆಳಗನ್ನು ಸುಂದರವಾಗಿಸಿ, ಮನಸ್ಸನ್ನು ಮುದಗೊಳಿಸಿದ  ಪಂಡಿತ ಗಣಪತಿ ಭಟ್,  ಹಾಸಣಗಿ ಯವರನ್ನು ಮನದಲ್ಲೇ ವಂದಿಸುತ್ತ ಆಚೆ ಬಂದಾಗ ಎಂದಿನ ಜನ ಜೀವನ ಆರಂಭಗೊಂಡಿತ್ತು  .


ಹರಿಹರ ಭಟ್, ಬೆಂಗಳೂರು.

hariharbhat .blogspot .com 

Jan  27  , 2013 .

Friday, January 25, 2013

Havyaka Mahasabha

ಮನುಷ್ಯನಿಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಹವ್ಯಕ ಸಮಾಜ, ಹವ್ಯಕರು ಸಂಸ್ಕ್ರತಿ ಯುಳ್ಳವರು ಎಂಬುದು ಪ್ರಶ್ನಾತೀತವಾಗಿ ಅನೂಚಾನಾಗಿ ನಡೆದುಬಂದಿರುವ ನಂಬಿಗೆ.


ಹಳ್ಳಿಯ ಮನೆಗಳಲ್ಲಿ ಮನೆಯ ಯಜಮಾನನಿಂದಾದಿಯಾಗಿ ಎಲ್ಲರೂ ಅತಿಥಿಯನ್ನು  ಆತ್ಮೀಯವಾಗಿ ಪ್ರತಿಸಾರಿಯೂ , ಬೇಕಿದ್ದರೆ ನಿನ್ನೆ ಬಂದವನೇ ಇಂದು ಬರಲಿ, ದಿನವೂ ಬರುವವನೇ ಇರಲಿ , ಸ್ವಾಗತಿಸುವ ಕ್ರಮ  ಅಜ್ಜನಿಂದ  -  ಮಗನಿಗೆ  , ಮಗನಿಂದ - ಮೊಮ್ಮಗನಿಗೆ , ಮೊಮ್ಮಗನಿಂದ - ಮಿಮ್ಮಗನಿಗೆ, ಮಿಮ್ಮಗನಿಂದ - ಮರಿಮಗನಿಗೆ ............ ಹೀಗೇ ಅನೂಚಾನಾಗಿ ನಡೆದುಬಂದ ಸಂಸ್ಕೃತಿ ಹವ್ಯಕ ಸಮಾಜದ್ದು.  ಈ ದಿನಗಳಲ್ಲಿ ಈ ಸಂಸ್ಕೃತಿಗೆ ಕುಂದು ಬರುತ್ತಿದೆ ಎಂಬುದು ವಿಶಾದನೀಯ ಸಂಗತಿ. ಪೇಟೆ ಮನೆಗಳಲ್ಲಂತೂ ಅಪ್ಪನ ಪರಿಚಯದವರು ಬಂದರೆ ಅಪ್ಪ ಅಷ್ಟೇ , ಅಮ್ಮನ ಪರಿಚಯದವರು ಬಂದರೆ ಅಮ್ಮ ಅಷ್ಟೇ , ಮಗನ ಪರಿಚಯದವರು ಬಂದರೆ ಮಗನಷ್ಟೇ ..........  ಹೀಗೆ ಮಾತನ್ನಾಡಿಸಿ ಕಳಿಸುವ ಬದಲಾದ ಜೀವನ  ರೀತಿ  ಎಲ್ಲೆಡೆ ಕಾಣಬಹುದು. ಮಧ್ಯೆ ಕೆಲವು ದಶಕಗಳಲ್ಲಿ  ಅತಿಥಿ   ಬಂದಾಗ ಹಾಯ್ ಎನ್ನುವದು ಅಥಿತಿ ಹೋಗುವಾಗ ಬಾಯ್ ಅನ್ನುವದು ಇತ್ತು. ಈಗೀಗ ಕಂಪ್ಯೂಟರ್, ಮೊಬೈಲ್ , ಲ್ಯಾಪ್ಟಾಪ್, ಐಪೆಡ್   , ಐಪೊಡ್  ಗಳಲ್ಲಿ ಮುಳುಗಿರುವ ಇಂದಿನ ಜನಾಂಗದ ಮಕ್ಕಳು ಹಾಯ್ , ಬಾಯ್ ಹೇಳಲೂ ಪುರುಸೊತ್ತಿಲ್ಲದವರಾಗಿದ್ದಾರೆ .


ಇನ್ನು ಹೀಗೆ ಬದಲಾವಣೆಗಳು ನಮ್ಮ  ಪ್ರತಿನಿಧಿ ಸಂಸ್ಥೆ ಹವ್ಯಕ ಮಹಾಸಭೆಯನ್ನು ಬಿಟ್ಟೀತೇ ? ಮೊದಲೆಲ್ಲಾ ಇರದಿದ್ದ ಚೇಂಬರ್ ಸಂಸ್ಕ್ರತಿ , ಈ ಹತ್ತು ವರ್ಷಗಳಿಂದೀಚೆ  ನಮ್ಮ ಮಹಾಸಭೆಯನ್ನೂ ಆವರಿಸಿಬಿಟ್ಟಿದೆ.  ಯಾವ ಮಹಾಶಯರು , ಚೇಂಬರ್ ಇಲ್ಲದ ಅಧ್ಯಕ್ಷರು ಕಿರೀಟವಿಲ್ಲದ ರಾಜನಂತೆ ಎಂದು ನಿರ್ಧರಿಸಿದರೂ ಏನೋ , ಮೊದಲಿಲ್ಲದ ಚೇಂಬರ್ , ಚೇಂಬರ್ ಸಂಸ್ಕ್ರತಿ ನಿಧಾನವಾಗಿ   ಮಹಾಸಭೆಯನ್ನೂ ಜೊತೆ ಜೊತೆಗೆ ಸಾಮಾನ್ಯವಾಗಿ ಚುರುಕಾಗಿ ಓಡಾಡಿ , ಸಮಾಜದ ಕೆಲಸಗಳಲ್ಲಿ ತೊಡಗಿಕೊಂಡವರನ್ನೂ ಬಹುಮಟ್ಟಿಗೆ ಆವರಿಸಿಬಿಟ್ಟಿದೆ. ಉಳಿದವರನ್ನು ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆ ಎಂಬಂತೆ ತನ್ನ ಮಾರ್ಜಾಲ ನಡಿಗೆಗಳಲ್ಲಿ ಈ ಬದಲಾವಣೆಗಳು ಆವರಿಸಿಕೊಳ್ಳುವ ದಿನಗಳು ದೂರವಿರಲಿಕ್ಕಿಲ್ಲ. ಈ ಚೇಂಬರ್ ಸಂಸ್ಕ್ರತಿಯ ಪರಿಣಾಮಗಳೇ ,  ಚೇಂಬರ್ ನಲ್ಲಿ      ಕುಳಿತವರಿಗೆ ಚೇಂಬರ್ ನಿಂದ   ಈಚೆ ಬಂದಾದಮೆಲೆ ಅಥವಾ ಚೇಂಬರ್ ಬಿಟ್ಟು ಮಾಜಿಯಾದಮೇಲೆ ಉಳಿದವರ ಜೊತೆ ಸರಿ - ಸರಿ ಕುಳಿತುಕೊಳ್ಳಲು ಅಥವಾ ಸ್ಟೇಜ್ ಕಟ್ಟೆ ಕೆಳಗೆ ಕುಳಿತುಕೊಳ್ಳುವದೆ ಮುಜುಗರದ ಸಂಗತಿ. ಅಲ್ಲದೆ  ಚೇಂಬರ್ ಸಂಸ್ಕ್ರತಿಯ ಪರಿಣಾಮವೆಂದರೆ ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಚೇಂಬರ್ ತಲುಪಿ ಚೇಂಬರ್ ಇಲ್ಲವಾದೊಡನೆ , ಸಕ್ರಿಯತೆಯೆಲ್ಲ ಪರಾರಿಯಾಗಿ ನಿಷ್ಕ್ರಿಯರಲ್ಲ ಎಂಬ ಪುರಾವೆಗೆ ವರ್ಷಕ್ಕೊಮ್ಮೆ , ಎರಡು ಬಾರಿ ತಮ್ಮ ಉಪಸ್ತಿತಿ ಕರುಣಿಸಿ ಸಾಗುವ ಪರಿ , ಹಿಂದೆ ನಗುವವರು ಸರಿ,  ಮುಂದೆ (ನೇರ) ಹೇಳುವವರ ಇರಿ ಎಂಬುದಕ್ಕೆ ಇಂಬು ಕೊಡುವಂತಿರುತ್ತದೆ.


ಹೀಗೆಲ್ಲ ಬರೆಯುವದರಿಂದ ಬದಲಾವಣೆಗಳನ್ನು ನಿರೀಕ್ಷಿಸುವಂತೇನೂ ಇಲ್ಲ. ಹಾಗೆಂದು ಬದಲಾವಣೆ ಬರುವದಿಲ್ಲ ಎಂದಿಲ್ಲ. ಆವೇಶದ ಬದಲಾವಣೆಗಳು ಬಹುಕಾಲ ನಿಲ್ಲುವಂತಹದ್ದಾಗಿರುವದಿಲ್ಲ . ಹಾಗಾಗಿ ಬದಲಾವಣೆಗಳು ಅದರದೇ ಆದ ಓಘದಲ್ಲಿ ಬರಲಿ. ಸಕಾಲಿಕ ಬದಲಾವಣೆಗಳೂ ಬೇಕು ಎನ್ನುವ ಚಿಂತನೆಯತ್ತ ಈ ಅಕ್ಷರಗಳು ಪ್ರಚೋದಿಸಲಿ ಎಂಬುದೇ ಹಾರೈಕೆ.

ಧೀ ಯೋ ಯೋ ನಃ  ಪ್ರಚೋದಯಾತ್ .

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www .hariharbhat .blogspot .com

Jan  25 , 2013.

Tuesday, January 22, 2013

Bheeshma Yakshagaana.



ಯಕ್ಷಗಾನ ಲೋಕದ ಎನ್ಸೈಕ್ಲೋಪೀಡಿಯಾ ದಿವಂಗತ ಡಾ. ಕೆರೆಮನೆ ಮಹಾಬಲ ಹೆಗಡೇರು. ರಂಗಸ್ಥಳದಲ್ಲಿ ಯಾರೊಬ್ಬರೂ ಸಹಕಾರಿಯಾಗದಿದ್ದರೂ , ಭಲೇ ಮಹಾಬಲ ಎನ್ನುವಂತೆ ಭಾಗವತಿಕೆಯನ್ನೂ   ಮಾಡಿಕೊಂಡು , ತಾಳ, ಲಯ , ರಾಗ ಬದ್ಧವಾಗಿ ಕುಣಿದು ಹೂಂಕರಿಸಿ , ಝೇಂಕರಿಸಿ ರಂಗವನ್ನು ಸಮರ್ಥವಾಗಿ ರಂಗೇರಿಸಿ , ಇನ್ನೂ ಬೇಕು - ಮತ್ತೂ ಬೇಕು ಎಂಬ ಪ್ರೇಕ್ಷಕನ ಮಹದಾಸೆಯನ್ನು  ಪೂರೈಸಬಲ್ಲ, ಪೂರೈಸಿದ    ಶ್ರೇಷ್ಟ ಯಕ್ಷಗಾನಿ .  ಈ  ಗಂಡು ಮೆಟ್ಟಿನ ಕಲೆ ಯಕ್ಷಗಾನದ  ಇತಿಹಾಸದಲ್ಲಿ ಅಳಿಸಲಾಗದ, ಮರೆಯಲಾಗದ  ನೆನಪುಗಳನ್ನು   ಸುವರ್ಣಾಕ್ಷರಗಳಲ್ಲಿ ಬರೆದು ಹೋಗಿದ್ದಾರೆ.  ಕಟ್ಟಿರೈ ಈ ಚೋರನ ಎಳೆತಂದು ................ , ಕುರುರಾಯನಿದನೆಲ್ಲ ಕಂಡು ಸಂತಾಪದಿ ..................., ಇತ್ಯಾದಿ ಯಕ್ಷಗಾನ ಪದ್ಯಗಳನ್ನು ಕೇಳಿದೊಡನೆ ಮೈ ನವಿರೇಳುವಂತಹ , ಅಸಹಾಯಕತೆಯಲ್ಲೂ ಎದ್ದು ನಿಲ್ಲುವ ಛಲ ಭಾವಾಂಕುರವಾಗುವ ಪರಿ  ಇಂದಿಗೂ ಜನಮಾನಸದಲ್ಲಿರುವ ಸತ್ಯ.  ತನ್ನಲ್ಲಿ ಆವಿರ್ಭವಿಸುವ ಭಾವಪ್ರಚೋದಕ ವಿಷಯ ವಿಚಾರಗಳು ಯಕ್ಷರಂಗಕ್ಕೆ ಸಂಭಂದಿಸಿದ್ದು  ಯಾವುದೇ ಇರಲಿ,  ರಂಗ ಸಂಗದ ಯಾವುದೇ ಘಟಾನುಘಟಿಯಾಗಿರಲಿ   ನಿರ್ಭಿಡೆಯಿಂದ  ವ್ಯಕ್ತಪಡಿಸಬೇಕಾದುದು ಯಕ್ಷಧರ್ಮ ಎಂಬುದನ್ನು ಬಲವಾಗಿ ನಂಬಿ, ನಂಬಿದಂತೆ ನಡೆದು ತೋರಿಸಿ , ಪರಿಣಾಮ - ಪರಿಸ್ತಿತಿಗೆ  ಯಾವುದೇ ರೀತಿಯ ಅನಿಯಮಿತ - ಅನೈತಿಕ ಹೊಂದಾಣಿಕೆ ಮಾಡಿಕೊಳ್ಳದೆ ಯಕ್ಷೇಶ್ವರರಾಗಿ ಬಾಳಿ , ಬೆಳಗಿ ಬದುಕಿದ ಧ್ಯೇಯತೇಜಸ್ವಿ ಕೆರೆಮನೆ ಮಹಾಬಲ ಹೆಗಡೆಯವರೆಕೋ ತುಂಬ ನೆನಪಾಗಿ ಕಾಡುತ್ತಿದ್ದಾರೆ.



ನಿನ್ನೆ ಯಕ್ಷಗಾನ ಭೀಷ್ಮ ಪರ್ವ ನೋಡಿದ್ದೇ ಈ ಮಾನಸಿಕ ಹೊಯ್ದಾಟಗಳಿಗೆ ಕಾರಣ. ನೂರರಲ್ಲಿ ಅರವತ್ತರ್ಸ್ಟು  ಭಾಗ ಮಹಾಬಲ ಹೆಗಡೆಯವರ ಅನುಕರಣೆ , ನಿರಾಕರಿಸಲಾಗದಸ್ಟು ಸ್ಪಸ್ಟ. ಇನ್ನುಳಿದಿದ್ದು ಈ ಕಾಲದ ಅಪಸವ್ಯವಾದ ಇಳಿವಯಸ್ಸಿನ ಭೀಷ್ಮನೂ ತುಂಡು ಗುಪ್ಪು ಹೊಡೆದು ತಾಳಕ್ಕೆ ಹೆಜ್ಜೆ ಹಾಕುವದು .  ಮಾನಸಿಕವಾಗಿ, ಚಿಂತನಾತ್ಮಕವಾಗಿ ಮುಪ್ಪನರಿಯದ  ಭೀಷ್ಮ ಎಂಬುದು ಸತ್ಯವಾದರೂ, ಕುಣಿತದಲ್ಲಿ ದೈಹಿಕ ಸ್ವಾಸ್ತ್ಯದ ಇಳಿಜಾರಿನಲ್ಲಿರುವ ಭೀಷ್ಮನನ್ನು ವ್ಯಕ್ತಪಡಿಸದಿದ್ದರೆ ಕಲಾ ಪ್ರೇಮಿಗಳಿಗೆ ಆಭಾಸವಾಗುತ್ತದೆ ಎಂಬುದೂ ಗಮನದಲ್ಲಿಡುವದು ಅವಶ್ಯಕ.   ಕಲಿಯುವಿಕೆಯ ಹಂತದಲ್ಲಿ ಅಥವಾ ಕಲಾ  ಪ್ರದರ್ಶನದ ಆರಂಭಿಕ ವರ್ಷಗಳಲ್ಲಿ  ಶ್ರೇಷ್ಟ ನಟರನ್ನು ಅನುಕರಿಸುವದು ಅಪೆಕ್ಷಣೀಯವಾದರೂ , ಕಾಲಸಂದಂತೆ , ಕಲಾರಾಧನೆ ಹೆಚ್ಚಿದಂತೆ ಕಲಾವಿದನೊಬ್ಬ ಇನ್ನೊಬ್ಬರ ಛಾಯೆಯಿಂದ    ಹೊರಬಂದು, ತನ್ನದೇ ಛಾಪು ಮೂಡಿಸದಿದ್ದರೆ , ಕಾಲಕ್ರಮೇಣ ಜನಮಾನಸದಿಂದ ದೂರವಾಗುವದು , ವಾಸ್ತವಿಕತೆ ಅರಿವಿಗೆ ಬಂದಾಗ ಬದಲಾವಣೆ ಅಸಾಧ್ಯವಾದ ಹಂತ ತಲುಪಿರುವದನ್ನು ಅಷ್ಟೇ ಅಲ್ಲದೆ ನಿರಾಶಾವಾದದತ್ತ ಬದಲಾವಣೆ ಹೊಂದುವದನ್ನೂ ಅಲ್ಲಲ್ಲಿ ಕಂಡಿದ್ದೇವೆ, ಕಾಣುತ್ತಿದ್ದೇವೆ.  ಇನ್ನು ಪ್ರಸಂಗಗಳನ್ನು ಆಯ್ದು ಪ್ರದರ್ಶಿಸುವಾಗ ಪಾತ್ರಪೋಷಣೆಗೆ ಸೂಕ್ತವಾದ ಕಲಾವಿದರನ್ನಿಟ್ಟುಕೊಳ್ಳದಿದ್ದರೆ ಆಡು ಭಾಷೆಯ ಗಾದೆಯಂತೆ " ತನ್ನೂರಿನ ಶಾಲೆಗೆ ತಾನೇ ಪ್ರಥಮ ಬಹುಮಾನಿತ, ವಿಶ್ಲೇಷಿಸಿದರೆ ಶಾಲೆಗೊಬ್ಬನೇ ಹುಡುಗ " ಎಂಬಂತೆ ಇತ್ಯಾತ್ಮಕ ರೀತ್ಯಾ ಸ್ಪರ್ಧೆಯೇ ಇಲ್ಲದಂತೆ ಪಾತ್ರಗಳೆಲ್ಲಾ ಕೇವಲ ಹೂಂಗುಟ್ಟುವದರಲ್ಲೇ ಕಾಲ ವ್ಯಯವಾಗಿ , ಪ್ರಸಂಗದಲ್ಲಿರುವ ಮುಖ್ಯ ಪಾತ್ರಗಳೆಲ್ಲಾ ಪೋಷಕ ಪಾತ್ರಗಳಾಗಿ ಬದಲಾವಣೆ ಪಡೆದು " ಏಕ ವ್ಯಕ್ತಿ ಪ್ರದರ್ಶನದಂತೆ " ರಸಾಭಾಸವಾಗುವದು . ಅಲ್ಲದೆ ಪಾತ್ರಧಾರಿಗಳನ್ನು ಸಮರ್ಥವಾಗಿ ಆಯ್ದು ಸರ್ವರಿಗೂ ಸಮನ್ವಯಿಸಲ್ಪಟ್ಟ ಅವಕಾಶಗಳನ್ನು ನೀಡಿದರೆ ಕಲಾವಿದನಲ್ಲಿರುವ ಪ್ರಸಂಗ ಪ್ರದರ್ಶನದ ಆರಂಭದಲ್ಲಿರುವ ತುಡಿತ - ನೃತ್ಯದಲ್ಲಿ  , ಸಾಹಿತ್ಯದಲ್ಲಿ, ರಸ ಭಾವಗಳ ವ್ಯಕ್ತನೆಯಲ್ಲಿ ಪ್ರಸಂಗ ಕಾಲಾವಧಿಯ ಮಧ್ಯಭಾಗದಲ್ಲಿ ಕ್ಷೀಣಗೊಂಡು , ಅಂತ್ಯದಲ್ಲಿ ಕೆಲವೊಮ್ಮೆ ಮುಗಿದರೆ ಸಾಕಪ್ಪ ಎಂದು , ಮುಗಿದೊಡನೆ ಉಸ್ಸಪ್ಪಾ ಎಂಬಂತಹ ಸ್ತಿತಿಯಿಂದ ದೂರವಾಗಿ, ಸ್ಪರ್ಧಾತ್ಮಕ ಮನೋಭಾವದ ಸಮರ್ಥ ಕಲಾವಿದರಿಂದ , ಒಬ್ಬನ ಸಮಯ ಬಳಕೆಯ ಅವಧಿಯಲ್ಲಿ ಇನ್ನೊಬ್ಬನಿಗೆ ವಿಶ್ರಾಂತಿಯೊದಗಿ , ಪ್ರಸಂಗವನ್ನು ಆದಿಯಿಂದ ಅಂತ್ಯದ ವರೆಗೂ ಕಲಾರಸಿಕರ ಆಶಾ ಭಾವನೆಗಳಿಗೆ ಭಂಗ ಬರದಂತೆ , ರಸಾಸ್ವಾದನೆ ಹೆಚ್ಚುವಂತೆ ಪರಿಶ್ರಮಿಸಬಹುದು. ವಜ್ರಗಳೆರಡನ್ನು ಜೊತೆಗಿಟ್ಟ್ರೆ , ವಜ್ರಗಳ ಹೊಳ್ಪಿಗೇನೂ ಭಾಧೆಯಿಲ್ಲವೋ ಹಾಗೆ ಶ್ರೇಷ್ಟ ಕಲಾವಿದರು ಒಗ್ಗೂಡಿದಾಗ , ಕಲಾವಿದರ ಕಲಾಸಾಧನೆಯೇನೂ ಕಮ್ಮಿಯಾಗುವದಿಲ್ಲ, ಬದಲಿಗೆ ವಜ್ರ ತಿಕ್ಕಿದಷ್ಟು ಹೊಳಪು ಪಡೆಯುವಂತೆ , ಕಲಾವಿದರ ಶ್ರೆeಸ್ಟತೆ  ಹೆಚ್ಚುವದು. ಅಹಮಿಕೆ ಅಡ್ಡಬರಬಾರದಷ್ಟೇ !!



ನಟನಿಗೆ ದಿನಾಲು ಕಲಿಯಲು, ಬೆಳೆಯಲು, ಉತ್ತುಂಗಕ್ಕೇರಲು ಅವಕಾಶವಿರುವ ಕಲೆ ಯಕ್ಷಗಾನ. ರಾಮಾಯಣ, ಮಹಾಭಾರತಗಳನ್ನಾಧರಿಸಿ   ರಚಿಸಿದ ಪ್ರಸಂಗಗಳು ವಾಂಗ್ಮಯ  ಸಂಪತ್ತನ್ನು ಹೆಚ್ಚಿಸಿಕೊಳ್ಳಲು , ನಾಟ್ಯ - ನೃತ್ಯ ಪ್ರಕಾರಗಳಲ್ಲಿ ವಿವಿಧ ರೂಪಗಳನ್ನು ಸಂಶೋಧಿಸಲು , ರಾಗ - ತಾಳ - ಲಯಗಳಲ್ಲಿ  ನೂತನ ಆವಿಷ್ಕಾರಗಳನ್ನು ಸಂಯೋಜಿಸಲು ಯಕ್ಷಗಾನದ ಚೌಕಟ್ಟಿನಲ್ಲಿ ಸಾಕಷ್ಟು ಅವಕಾಶಗಳಿವೆ. ಆ ಕುರಿತು ತಜ್ಞರು ಧೀರ್ಘವಾಗಿ , ಜವಾಬ್ದಾರಿಯುತವಾಗಿ ಯೋಚಿಸಬೆಕಷ್ಟೇ. ಇಲ್ಲಿ ನುರಿತ , ಶ್ರೇಷ್ಟ ಪಾತ್ರಧಾರಿಗಳ ಪಾಲುದಾರಿಕೆ ಹೆಚ್ಚಿನ ಪ್ರಮಾಣದಲ್ಲಿರಬೇಕು. ದಿನ ನಿತ್ಯದ ಪ್ರದರ್ಶನಗಳಿಂದ  ಎದುರಿನ ಪಾತ್ರಧಾರಿ ಯಾವ ಯಾವ ರೀತಿಯ ಅಪ್ರಸ್ತುತ ಮಾತುಗಳನ್ನಾಡಿದ, ಎಲ್ಲೆಲ್ಲಿ ಅಪಬ್ರಂಶಕ್ಕೀಡಾದ ಶಬ್ದಗಳನ್ನು ಬಳಸಿದ, ಕುಣಿತದಲ್ಲಿ ಲಯ - ತಾಳಗಳೆಲ್ಲಿ ತಪ್ಪಿತು , ಪ್ರತಿ ಪಾತ್ರಧಾರಿ ಯಾವ ಯಾವ ಸಂಧರ್ಭದಲ್ಲಿ ಪೇಲವವಾಗಿ ಅಭಿನಯಿಸಿದ, ಎದುರು ಪಾತ್ರಧಾರಿಯ ಮುಖ ಚರ್ಯೆ - ವರ್ತನೆ ರಸಾಭಿವ್ಯಕ್ತನೆಯಲ್ಲಿ ಹೇಗೆ ಸೋತಿತು , ಎದುರು ಪಾತ್ರಧಾರಿಯಲ್ಲಿರುವ ವಿಶೇಶತೆಗಳೇನು   ಇತ್ಯಾದಿ, ಇತ್ಯಾದಿ ದಿನಿ ನಿತ್ಯ ಅಭ್ಯಸಿಸಿ , ಬದಲಾವಣೆಯತ್ತ, ಸುಧಾರಣೆಯತ್ತ ಸಾಗಿ ತನ್ನ ಕಲಾ ಶ್ರೆಷ್ಟತೆಯನ್ನು ಸಾಕಾರಗೊಳಿಸುತ್ತ , ಪ್ರೇಕ್ಷಕ ಅಭಿಮಾನಿಗಳಿಗೆ ಕಲಾಕೇಸರಿಯಾಗಿ ಕಲೆಯೆಂಬ ಪಾಯಸವನ್ನು ಉಣಬಡಿಸಲು ಸದವಕಾಶ ಒದಗಿಸಿದೆ ಈ ಯಕ್ಷಗಾನ ಕಲೆ. ಯಕ್ಷಗಾನ ಜೆರಾಕ್ಸ್ ಕಾಪಿ ಯಲ್ಲ. ದಿನ ನಿತ್ಯ ನೂತನ, ವಿನೂತನ ರಾಗ, ತಾಳ, ಲಯ ಬದ್ಧ ನಾಟ್ಯ ಸಂಯೋಜನೆಗಳಿಂದ ಲಾಲಿತ್ಯಮಯವಾಗಿ , ಪ್ರಭುದ್ಧ ಸಾಹಿತ್ಯದಿಂದೊಡಗೂಡಿ ಪ್ರೆಕ್ಷಕ  ಭಾಂದವರಿಗೆ ಉಣವಡಿಸುವ ಔತಣ ಯಕ್ಷಗಾನ.



ಈ ಕಾಲ ಎಲ್ಲ ಜೀವನ ಪ್ರಕಾರಗಳಲ್ಲೂ  ಸ್ಫರ್ಧಾ ಕಾಲ.  ನೂತನ  ಆವಿಷ್ಕಾರಗಳ   ಸಮಯ. ಆಡು ಭಾಷೆಯಲ್ಲಿ ಹೇಳುವದಾದರೆ  " ಅವ ಎಂಥ ಬಡ್ಡ.. ..  ಬಡ್ಡ ....... ಬಡದ್ನೋ  ಮಾರಾಯಾ , ಇವ  ಧಡ್ಡ .... ಧಡ್ಡ ........ ಕುಣಿದ್ನೋ .........  ಬಾವ .......  ಬೆಳಿಗ್ಗೆ ವರೆಗೂ ಕಣ್ ಯೆಮೆ ಮುಚ್ಚಿ ನಿದ್ದೆ ಬಂಜಿಲ್ಲೆ / ಬೈಂದಿಲ್ಲೆ , ನೋಡು ಆಟ ಮಸ್ತಿತ್ತ .......... ಎಂಬ ಕಾಲವಲ್ಲ  ಈಗ.   ಬಣ್ಣ , ಬಟ್ಟೆಗಳಲ್ಲಿ    ಕಾಲಕ್ಕೆ   ಸಮಂಜಸವಾದ  ಬದಲಾವಣೆಗಳು ಬಂದಂತೆ ಉಳಿದೆಡೆಗಳಲ್ಲೂ ಸ್ಪರ್ಧಾತ್ಮಕ ಪ್ರಪಂಚಕ್ಕೆ    ಸೂಕ್ತವಾದ ಬದಲಾವಣೆಗಳೊದಗಿಬಂದರೆ  ಮಾತ್ರ  ಯಕ್ಷಗಾನ ಜನಮಾನಸದಲ್ಲಿ ಉಳಿದೀತು ಅಲ್ಲದೇ ನವಜನಾಂಗದ ಮೆಚ್ಚುಗೆ ಗಳಿಸಿeತು , ಯಕ್ಷಾಭಿಮಾನಿಗಳ ಅಭಿಮಾನ ಉಳಿಸಿಕೊಂಡಿeತು .  



ಇನ್ನು ನಿನ್ನೆ ನೋಡಿದ ಭೀಷ್ಮ ಕಾಪಿ ಕ್ಯಾಟ್   ( copy  cat  ) ಯಾವ ಮಟ್ಟಿಗೆಂದರೆ , ಸಂಭಾಷಣೆ , ವಾಗ್ಝರಿ ಉತ್ತುಂಗಕ್ಕೆ ತಲುಪಿ ಇನ್ನೂ ಹೆಚ್ಚಿನ ನಿರೀಕ್ಷೆಯಲ್ಲಿ ಸುಸಂಸ್ಕ್ರತ ಕಲಾರಸಿಕನಿರುವಾಗ , ಜನ ಸಾಮಾನ್ಯರನ್ನು ರಂಜಿಸುವ ಆಡು ಭಾಷೆಯ , ಕೀಳು ಅಭಿರುಚಿಯ ಹಾಸ್ಯ ಮಿಶ್ರಿತ ಪದ ಪುಂಜಗಳ ಸರಣಿಯೊಂದನ್ನು ಹೊಸೆದು ರಸಾಭಾಸಗೊಳಿಸುವದನ್ನು ದೋಷ ಎನ್ನಬಹುದಾದರೆ , ಈ ದೋಷವೂ ಗುರುವಿನಿಂದ ಶಿಷ್ಯನ ವರೆಗೆ ಹರಿದು ಬಂದಿದೆ. ಆಖ್ಯಾನದಲ್ಲಿ , ಕರ್ಣ ನಿರ್ಗಮನದ ತರುವಾಯ, "ಅವನೇನು ಗಾಳ ಹಾಕಿ ಮೀನು ಹಿಡಿತಿದ್ನ ?" ಎಂಬಂತಹ ಮಾತುಗಾರಿಕೆ ಜನಪ್ರಿಯತೆ ಪಡೆಯುವದೇ  ಗುರಿ  ವಿನಃ  ಭೀಷ್ಮ ಪಿತಾಮಹನಂತಹ ಮೇರು ವ್ಯಕ್ತಿತ್ವದ ವ್ಯಕ್ತಿ ಅಭಿನಯಕ್ಕೆ , ಪ್ರಸ್ತುತೆಗೆ ನ್ಯಾಯೋಚಿತ ಗೌರವವಲ್ಲ.



ಅರ್ಜುನ ಪಾಶುಪತಾಸ್ತ್ರವನ್ನು ಭೀಷ್ಮನ ಮೇಲೆ ಪ್ರಯೋಗಿಸಿದಾಗ , " ಭಳಿರೆ ಮಗನೆ ಪಾರ್ಥ .................." ಹಾಡಿಗೆ ಕಾಡಿದ ಅಭಿವ್ಯಕ್ತನೆಯ ಕೊರತೆ , ಕೆರೆಮನೆ ಮಹಾಬಲರನ್ನು ಮತ್ತೆ ನೆನೆಯಿತು. ಅಂತೆಯೇ " ಶ್ರೀ ಮನೋಹರ ಸ್ವಾಮೀ ಪರಾಕು ............................"  ಹಾಡಿನ ಕುಣಿತ ನೋಡಿ , ಹನುಮನೂ ಒಂದೇ , ಭಲ್ಲೂಕನೂ ಒಂದೇ, ಭೀಷ್ಮನೂ   ಒಂದೇ !!!! ಕುಣಿತಕ್ಕೆ ಎಂಬ ಸೋಜಿಗ ಉಂಟಾಯಿತು.


ನಿನ್ನೆಯ ಭೀಷ್ಮ ಪರ್ವ ಆಖ್ಯಾನದಲ್ಲಿ ಅಭಿಮನ್ಯು ಪಾತ್ರಧಾರಿಣಿ  ಕುಮಾರಿ .ನಾಗಶ್ರೀ ಗೀಜಗಾರ್ ತನ್ನ ಚುರುಕು ಮಾತು, ತಾಳ - ಲಯಗಳ ಮೇಲೆ ಸಾಧಿಸಿದ ಹಿಡಿತ , ಹಿರಿಯ ಕಲಾವಿದ  , ಜನ ಮೆಚ್ಚಿದ ಕಲಾಕಾರ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿಯವರ ಭೀಷ್ಮನ   ಎದುರು  ಸಮರ್ಥ ಪಾತ್ರ ಪೋಷಣೆ ಮಾಡಿ ಗಮನಸೆಳೆದಳು.  ಪಾರಂಪರಿಕ   ಕಲೆ  ಅಧುನಿಕ ಪದ್ಧತಿಯ ವ್ಯವಸ್ಥಿತ ಕಲಿಕೆಯಿಂದ ಹೇಗೆ ಲಯ ತಾಳ ಹಿಡಿತವುಳ್ಳ ಯಕ್ಷಗಾನದ ನೃತ್ಯವನ್ನು ಎಳೆವೆಯಲ್ಲಿಯೇ ಗತ್ತಿನ ಗಮ್ಮತ್ತಿನೊಂದಿಗೆ ಸಾಧಿಸಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾಳೆ ಈ ನಾಗಶ್ರೀ.  ಪಾತ್ರ ಪೋಷಣೆಗೆ ಬೇಕಾದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಅರಳುವ , ನಗೆ ಸೂಸುವ ಮುಖಾರವಿಂದ , ಹಲ್ಲು ಪ್ರದರ್ಶನ ..... ಈ ಬದಲಾವಣೆಗಳು ಶ್ರೇಷ್ಟ ಕಲಾವಿದೆಯ ಸ್ಥಾನದತ್ತ ಕೊಂಡೊಯ್ಯಬಲ್ಲವು.



" ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ   ಭಾರತ   ....................... "  ಶ್ಲೋಕಕ್ಕೆ  ನೀಡಿದ  ಸ್ವರ ಸಂಯೋಜನೆ ಮತ್ತು ಮಾಧುರ್ಯ, ಶ್ರೀ ಕೃಷ್ಣನ ಅಭಿನಯ  ಮನಸೂರೆಗೊಂಡಿತು .



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ  .
hariharbhat.blogspot.in 
Jan  21  , 2013 .

Sunday, January 20, 2013

ಕೊಂಡದಕುಳಿ ರಾಮಚಂದ್ರ ಹೆಗಡೆ

ನಿನ್ನೆ  ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನೇತ್ರತ್ವದ ಯಕ್ಷಗಾನ ದಕ್ಷಯಜ್ಞ ನೋಡಿದೆ. ಅತ್ಯಾಧುನಿಕ ವೇಷ ಭೂಷಣಗಳೂ , ರಂಗು ರಂಗಾದ ವರ್ಣ ವಿನ್ಯಾಸಗಳು ಮನಸೆಳೆಯುತ್ತವೆ. ಜೊತೆಗೆ ಆಧುನಿಕ ದೀಪ ವ್ಯವಸ್ತೆಗಳು ಪೂರಕವಾಗಿವೆ.


ಒಂದು ಅಭಿಮಾನದ ವಿಷಯವೆಂದರೆ ಕೇವಲ ರಂಜನೆಯತ್ತ ಗಮನವೀಯದೇ ಯಕ್ಷಗಾನದ ಕುಣಿತ, ತಾಳಗಳ ಜೊತೆಗೆ ಮೇಳೈಸಿರುವ ಮಾತಿನ ಚಮತ್ಕಾರಕ್ಕೂ ಯೋಗ್ಯ ಪುರಸ್ಕಾರ ನೀಡಲ್ಪಟ್ಟಿದೆ. ದಕ್ಷ ಪಾತ್ರಧಾರಿ ತನ್ನ ಪಾತ್ರ ಪೋಷಣೆಗೆ ಬೇಕಾದ ಪದ ಸಂಪದಗಳನ್ನು ಬಹು ವಿಧವಾಗಿ ಯೋಗ್ಯವಾಗಿ ಭೇಷ್ ಎನ್ನುವಂತೆ ಪ್ರಯೋಗಿಸಿದರೂ , ಆಡುಭಾಷೆಯ ಪದಗಳನ್ನುಪಯೋಗಿಸದೇ   ಇದ್ದರೆ , ಪಾತ್ರಕ್ಕೆ ಇನ್ನೂ ಹೆಚ್ಚು ತೂಕ ಬಂದೀತು.   ಚಿತ್ರ - ವಿಚಿತ್ರ ಅಂಗಾಭಿನಯದಿಂದ , ಚಿತ್ರ - ವಿಚಿತ್ರ ಕುಣಿತಗಳಿಂದ , ಚಿತ್ರ - ವಿಚಿತ್ರ ಸಾಹಿತ್ಯದಿಂದ   ಜನರಂಜನೆ  ನೀಡುವದು  ಹಾಸ್ಯಗಾರನಿಗೆ  ಯಕ್ಷಲೋಕ   ಕೊಟ್ಟ ಬಳುವಳಿ. ಈ ಬಳುವಳಿಯನ್ನು ಎಲ್ಲ ಪಾತ್ರಧಾರಿಗಳೂ ಉಪಯೋಗಿಸ ಹೊರಟರೆ , ಯಕ್ಷ ಲೋಕ ವೈಭವ  , ಊಟದ ಬಟ್ಟಲಿನಲ್ಲಿ ಕೇವಲ ಉಪ್ಪಿನಕಾಯಿ ತುಂಬಿದಂತಾದೀತು.  ಯಕ್ಷ ಪ್ರಿಯರೆಲ್ಲಾ, ಅದರಲ್ಲೂ ಕಲಾವಿದರು ತೀಕ್ಷ್ಣವಾಗಿ, ತೀವ್ರವಾಗಿ ಯೋಚಿಸಬೇಕಾದ ವಿಷಯ.



ಈಶ್ವರನನ್ನು ಕೇವಲವಾಗಿ ಹಳಿಯುವ ದಕ್ಷನ ಅಂಗಾಂಗ ಚಲನೆಗಳು ( body  language  ) , ಮುಖ ವ್ಯಕ್ತನೆಗಳು ( expressions  in  face   )  ಮತ್ತು  ಆಮೇಲೆ   ದಕ್ಷನ  ಮಾತುಗಳನ್ನೆಲ್ಲ ಖಡಾ ಖಂಡಿತವಾಗಿ ತುಂಡರಿಸುವ ಈಶ್ವರನ ಶಬ್ದ ಸಾಹಿತ್ಯ  ಬಹು  ಪ್ರಶಂಸನೀಯ.



ಈಶ್ವರ ಪಾತ್ರಧಾರಿ ರಾಮಚಂದ್ರ ಹೆಗಡೆಯವರಿಗೆ ಅವರದೇ ಆದ ಅಭಿಮಾನಿ ಬಳಗವಿದೆ.  ಯಕ್ಷಕಲಾಪ್ರಾಕಾರಗಳಲ್ಲಿ ತಿಳುವಳಿಕೆಯುಳ್ಳ ಅಭಿಮಾನಿ ಬಳಗವನ್ನು ಬಹುಕಾಲ ತನ್ನ ಜೊತೆಗೂಡಿ ಸಾಗಲು  ರಾಮಚಂದ್ರ ಹೆಗಡೆಯವರು  ನೃತ್ಯಪ್ರಕಾರಗಳಲ್ಲಿ   ಮತ್ತು  ಸಾಹಿತ್ಯ ವಾಂಗ್ಮಯ ಅಭ್ಯಾಸದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡರೆ , ಧೀರ್ಘಕಾಲ ಜನ ಮನದಲ್ಲಿ ನೆಲೆಸುವರೆಂಬುದರಲ್ಲಿ ಎರಡು ಮಾತಿಲ್ಲ. ಅವರ ಮಾತಿನ ಓಘ, ವೈಖರಿ ಗಮನಿಸಿದರೆ ಈ ದಿಶೆಯಲ್ಲಿ ಅವರು ತೊಡಗಿಕೊಂಡಂತೆ   ಅಥವಾ ತೊಡಗಿಕೊಳ್ಳುವತ್ತ   ಮನ ಮಾಡಿದಂತೆ ತೋರಿ ಬರುತ್ತದೆ. ಈ ಮಧ್ಯೆ ಇನ್ನೊಂದು ಅಂಶವನ್ನು ಅವರ ಸ್ನೇಹಿತರು ಅವರ ಗಮನ ಸೆಳೆಯುವ ಅವಶ್ಯಕತೆ ಇದೆ. ಅಧುನಿಕ ಜೀವನ ಪದ್ಧತಿಯ
 " ಡೈಟಿಂಗ್ "  ಅಥವಾ ಪ್ರಾಚೀನ   ಪದ್ಧತಿಯ ಯೋಗ , ಬಳಸಿ  ದೇಹವನ್ನು ನೃತ್ಯ ನರ್ತನಕ್ಕೆ ಪ್ರಭಾವಿಯಾಗಿ ರೂಪುಗೊಳಿಸಬೇಕಾದ   ಜರೂರು ಇದೆ.


ಹರಿಹರ ಭಟ್, ಬೆಂಗಳೂರು.
Jan  21 , 2013 .



.

ಬಿ.ಜೆ.ಪಿ ಯಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶ.

ಸಹೃದಯರಿಗೆ ನಮಸ್ಕಾರಗಳು.

*******************************

ಭಾನುವಾರ. ಬಿ.ಜೆ.ಪಿ ಯಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶ. ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಉದ್ಯಮಿಗಳು ಹಾಗೂ ದೇಶದ ವಿವಿಧೆಡೆಗಳಿಂದ ಆಗಮಿಸಿದ ಬಿ.ಜೆ.ಪಿ ಗಣ್ಯರ ಉಪಸ್ಥಿತಿ.



 ಭಾರೀ ಭೂರಿ  ಭೋಜನ, ತಿಂಡಿ - ಕಾಫಿ ಗಳ ಜೊತೆಗೆ ಬಿ ಜೆ.ಪಿ ಯವರು ಒಂದು ಅಲೆ ಎಬ್ಬಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ತಪ್ಪು ಮಾಡಿದ್ದೇವೆ. ನಮ್ಮ ಎಣಿಕೆ ಮೀರಿ ತಪ್ಪುಗಳಾಗಿವೆ . ಆದರೆ ಇನ್ನು ಆ ರೀತಿ ತಪ್ಪುಗಳಾಗುವ ಸಾಧ್ಯತೆ ಇಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರತ್ತ  ತಪ್ಪುಗಳ ಮೂಟೆಯನ್ನು ಸರಿಸುವ ಪ್ರಯತ್ನ ಮಾಡುತ್ತಾರೆ. ತಪ್ಪುಗಳನ್ನು ಹೋಲಿಕೆಮಾಡಿದರೆ, ನಮ್ಮ ಕಾಲದಲ್ಲಾದ   ತಪ್ಪುಗಳು ಕಾಂಗ್ರೆಸ್ಸಿನಲ್ಲಾದ   ತಪ್ಪುಗಳಿಗಿಂತ ಬಹಳ ಬಹಳ ಕಡಿಮೆ , ಜೆ.ಡಿ.ಎಸ್ ಅಂತೂ ಹೇಳಲಾರದಸ್ಟು ತಪ್ಪುಗಳನ್ನೆಸಗಿವೆ ಎಂದು , ಸಾರುವ ಭಾಷಣಗಳು , ಕಾಂಗ್ರೆಸ್ಸಿನಂತೆ ಬಿ.ಜೆ.ಪಿ ಆಗಿದೆ ಎನ್ನುವದು ಸ್ವಲ್ಪ ಪ್ರಮಾಣದಲ್ಲಿ ಸರಿಯಾದರೂ ಸಂಪೂರ್ಣವಾಗಿ ಒಪ್ಪತಕ್ಕ ವಿಷಯವಲ್ಲ .......  ಈ ರೀತಿ ಮುಖಂಡರುಗಳ ಭಾಷಣ ಸಾಗುತ್ತದೆ. ಕೇಳುಗನಿಗೆ,  ಮುಂದೆ ಸಾಕಷ್ಟು ತಪ್ಪುಗಳನ್ನೆಸಗುವ ಅವಕಾಶ ಬಿ.ಜೆ.ಪಿ ಗಿದೆ, ಇನ್ನೂ ಕಾಂಗ್ರೆಸ್ಸನ್ನು ಮೀರಿಸಿಲ್ಲ , ಆದ್ದರಿಂದ ಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಗೆ ಇನ್ನೊಮ್ಮೆ ವೋಟು ಕೊಡಿ ಎಂಬ ಸಂದೇಶವನ್ನು ನೀಡುತ್ತದೆ ಎಂಬುದು ಭಾಷಣ ಮಾಡುವ ಮುಖಂಡರುಗಳಿಗೆ ಅರಿವಾಗದಿರುವದು ಶೋಚನೀಯ.  "Once bitten , twice shy" ಎಂಬಂತೆ ಮತದಾರ ಏನುಮಾಡುತ್ತಾನೋ ಕಾಯ್ದು ನೋಡಬೇಕಾಗಿದೆ.




ಪ್ರೊ.ಬಿ.ಎಂ.ಕುಮಾರಸ್ವಾಮಿ ಯವರು ವಾಲ್ ಮಾರ್ಟ್ ರಿಟೇಲ್ ಕ್ಷೇತ್ರ ಪ್ರವೆಶಿಸುವದರ ಕುರಿತು ವಿರೋಧವಾಗಿ , ತೀವ್ರಗತಿಯಿಂದ, ಭಾವಾವೇಶಪೂರ್ಣವಾಗಿ  , ಸಂಕಲಿಸಿದ ಅಂಕಿ ಅಂಶಗಳ ಸಾಕ್ಷಾತ್ಕಾರಗಳೊಡನೆ UPA ಸರಕಾರದ ನಡೆಗಳನ್ನು ಖಂಡಿಸುತ್ತ , ಪ್ರೆಕ್ಷಕನ ಮನ ರಂಜಿಸುತ್ತ ಸುಮಾರು ಮುಕ್ಕಾಲು ಘಂಟೆ ವಿಶ್ಲೇಷಣೆ ಮಾಡಿದರು. ಆಮೇಲೆ ಪ್ರೆಕ್ಷಕರಿಂದ ಪ್ರಶ್ನೆಗಳನ್ನು   ಆವ್ಹಾನಿಸಲಾಯಿತು. ನಾನು ಪ್ರಶ್ನಾರಂಭ   ಮಾಡಿ , ಇಂದು ಚಿಲ್ಲರೆ ಅಂಗಡಿಗಳನ್ನು ನಡೆಸುತ್ತಿರುವವರೆಲ್ಲ ಐವತ್ತರಿಂದ ಅರವತ್ತು ವಯಸ್ಸಿನವರು, ಅವರ ಮಕ್ಕಳೆಲ್ಲ ಐ.ಟಿ , ಬಿ.ಟಿ ಕಂಪನಿಗಳಲ್ಲಿ ಅವರವರ ಉದ್ಯೋಗಾರ್ಹತೆಗೆ ತಕ್ಕಂತಹ ಕೆಲಸ ಮಾಡುತ್ತಿದ್ದಾರೆ, ಆ ಮಕ್ಕಳಾರೂ   ಚಿಲ್ಲರೆ ಅಂಗಡಿ ಮುನ್ನಡೆಸುವವರಲ್ಲ, ಈಗ ನಾವು ವಾಲ್ಮಾರ್ಟ್ ವಿರೋಧಿಸಿದರೂ ಇನ್ನು ಹತ್ತಾರು ಇಲ್ಲ ಐವತ್ತು ವರ್ಷಗಳಲ್ಲಿ ನಾವೇ ವಾಲ್ಮಾರ್ಟ್ ನ್ನು ಸ್ವಾಗತಿಸಬೇಕಾದೀತು ಎಂದೆನು. ಇಂದು ಹಳ್ಳಿ ಹುಡುಗನಿಗೆ ನಲವತ್ತಾದರೂ ಮದುವೆಗೆ ಹುಡುಗಿ ಸಿಗುತ್ತಿಲ್ಲ, ವ್ಯವಸಾಯ ಮಾಡುವ ಯುವ ಜನಾಂಗವಿಲ್ಲಾ, ಎಲ್ಲ ಬೆಂಗಳೂರು ಸೇರಿದ್ದಾರೆ, ಸೇರುತ್ತಿದ್ದಾರೆ, ವಯಸ್ಸಾದವರಷ್ಟೇ   ಹಳ್ಳಿಯಲ್ಲಿರುವ ಪರಿಸ್ಥಿತಿಯಲ್ಲಿ ವ್ಯವಸಾಯದ ಶೋಚನೀಯ ಅಧೋಗತಿ ಇಂದಿದೆ,   ಹತ್ತು ಹದಿನೈದು ವರ್ಷಗಳ   ಹಿಂದೆ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಉದ್ಯೋಗಕ್ಕೆ ಜನರೇ ಬರದಂತಹ ಪರಿಸ್ಥಿತಿ ಇತ್ತು ಎಂದೆಲ್ಲಾ ಹೇಳಿದಾಗ ಸಭಿಕರಿಂದ  ಬಂದ ಮಹಾ ಕರತಾಡನ ಮನಸ್ಸನ್ನು ಪ್ರಫುಲ್ಲಗೊಳಿಸಿತು. ಕುಮಾರಸ್ವಾಮಿಯವರು ಹೇಳಿದ ಲಾಬಿ ಮಾಡುವದು , ರಾಜಕೀಯ ಲಂಚಗುಳಿತನ ಇವೆಲ್ಲ ನಮಗೆ ಹೊಸತಲ್ಲ, ಯು.ಪಿ.ಎ ಕಾಲದ ಬೊಫೋರ್ಸ್ , ಏನ್.ಡಿ .ಎ ಕಾಲದ  ಕೊಫಿನ್  ಗೇಟ್ , ಇತ್ತೀಚಿನ ನೀರಾ ರಾಡಿಯ ಹಗರಣಗಳನ್ನೆಲ್ಲ   ನೋಡಿದ್ದೇವೆ ಎಂದು ಸ್ವಲ್ಪ ಖಾರ ಮಿಶ್ರಿತವಾಗಿ ಮಾತು ಮುಗಿಸಿದೆನು. ಕುಮಾರಸ್ವಾಮಿಯವರು ಉತ್ತರಿಸುತ್ತ,  ಈ ಮಹನೀಯರು  ಈಗ ಹೇಳಿರುವದು ಸಮಸ್ಯೆಗಳು ಹೌದು, ಆದರೆ ಉತ್ತರಿಸಲು ಪ್ರಶ್ನೆಗಳನ್ನೇ ಕೇಳಿಲ್ಲ ಎಂದು ಜಾರಿಕೊಂಡರು. ಪ್ರಹ್ಲಾದ ಜೋಷಿಯವರು ಕೊಫಿನ್   ಗೇಟ್ ಹಗರಣ ಎತ್ತ್ಕೊಂಡು ,  ಜಾರ್ಜ ಫರ್ನಾಂಡಿಸ್   ನಿಶ್ಕಲಂಕಿತರು ಎಂದು ಸಿ.ಬಿ.ಐ ಹೇಳಿದೆ ಎಂದು ಸಮರ್ಥಿಸಿದರು. ಅನುಕೂಲಕ್ಕೆ ತಕ್ಕಂತೆ ರಾಜಕಾರಣಿಗಳು ಸಿ.ಬಿ.ಐ ಹೆಸರನ್ನು ಬಳಸಿ ವಿಷಯ ಮರೆಮಾಚುತ್ತಾರೆ ಎಂಬ ಬುದ್ಧಿಜೀವಿಗಳ ಮಾತು ನೆನಪಿಗೆ ಬಂತು. ಚರ್ಚೆಯಲ್ಲಿ ಭಾಗವಹಿಸಲು ಬಹಳ ಜನ ಉತ್ಸುಕರಾಗಿದ್ದುದು ಕಂಡು ಬಂತು.  ಆದರೆ ಎಲ್ಲ ಸಂವಹನ, ಮುಕ್ತ ಚರ್ಚೆ ಕಾರ್ಯಕ್ರಮಗಳಂತೆ ಇಲ್ಲಿಯೂ ಸಮಯದ ಅಭಾವ ಎಂದು ಚರ್ಚೆಯನ್ನು ಐದಾರು ಪ್ರಶ್ನೆಗಳಿಗೆ   ಸೀಮಿತಗೊಳಿಸಲಾಯಿತು. ಮುಕ್ತ ಸಂವಾದ , ಚರ್ಚೆ ಕಾರ್ಯಕ್ರಮಗಳನ್ನೇರ್ಪಡಿಸಿ   ಸಂಘಟಕರು ಉದ್ಘಾಟನೆ , ವಿಡಂಬನೆಯ ವಿಜ್ರಂಭಣೆಗಳಿಗೇ  ಹೆಚ್ಚಿನ ಸಮಯ ವಿನಿಯೋಗಿಸಿ , ಸಂವಾದ, ಚರ್ಚೆಗಳನ್ನು ಕಾಟಾಚಾರಕ್ಕೆ ನಡೆಸುವದು ಈ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ.



ಆಮೇಲೆ ಚಹಾ ಕುಡಿಯುವಾಗ , ತಾವು ಹೇಳಿದ ದಿನ ನಿತ್ಯದ ವ್ಯವಹಾರದಲ್ಲಿ  ಮಾರಾಟ ತೆರಿಗೆ ಟ್ಯಾಕ್ಸ್ ಇನಸ್ಪೆಕ್ಟರ್ಸ್ ಗಳ ಸಮಸ್ಯೆಯೆಲ್ಲ ರಾಜ್ಯ ಸರಕಾರವೇ ಪರಿಹರಿಸುವದಲ್ಲವಾ?, ಈ ನಾಲ್ಕು ವರ್ಷಗಳಲ್ಲಿ ಪರಿಹಾರ ಕಂಡುಕೊಳ್ಳಬಹುದಿತ್ತಲ್ಲ?  ಎಂದರೆ , ಕುಮಾರಸ್ವಾಮಿಯವರು "ಜಾಣರ ಕಿವುಡು " ಎಂಬಂತೆ ಕೇಂದ್ರ ಸರಕಾರದ ದೋಷಗಳನ್ನೆತ್ತಿ    ಎತ್ತಿ   ಚರ್ಚೆಗೆ ತೊಡಗಿದರು. ನಾನೂ ಜಾಣತನ ಪ್ರದರ್ಶಿಸಿ ಬಿಸ್ಕೆಟ್ ಎತ್ತಿಕೊಂಡು ಬರುವೆ ಎಂದು ಅವರಿಂದ ದೂರ ಬಂದೆನು.



ಬೆಳಿಗ್ಗೆ  ಸಿ.ಟಿ.ರವಿ ಭಾಷಣ ಮಾಡುವಾಗ ಒಳ್ಳೊಳ್ಳೆಯ ಅಂಶಗಳನ್ನು ನೆನಪಿನಲ್ಲಿಟ್ಟು ಬಂದಂತೆ ಅನಿಸಿತು. ಆದರೆ ಭಾಷಣ , ದತಪೀಠದತ್ತ ನಾವು  ಎಂದು ಹುರಿದುಂಬಿಸುವ ಭಾಷಣದಂತಾಗಿ  , ಒಳ್ಳೆಯ ಅಂಶ ಸಭಿಕರನ್ನು ತಲುಪಲೇ ಇಲ್ಲ. ಅವರು ಪ್ರಸ್ತಾಪಿಸಿದ ಒಳ್ಳೆಯ ಅಂಶಗಳೆಂದರೆ ಸಣ್ಣ ಕೈಗಾರಿಕಾ ವಲಯದ ಸಬ್ಸಿಡಿ ಹಣ ಪಾವತಿ ಬಹಳ ವರ್ಷಗಳಿಂದ ಆಗಿರಲಿಲ್ಲ, ನಮ್ಮ ಸರಕಾರ ಒಮ್ಮೆ ಒಂದು ನೂರಾ ಹತ್ತು ಕೋಟಿ, ಇನ್ನೊಮ್ಮೆ ಒಂದು ನೂರಾ ಮೂವತ್ತು ಕೋಟಿ ನೀಡಿದೆ. ಇನ್ನುಳಿದ ಒಂದು ನೂರಾ ಐದು ಕೋಟಿ ರೂಪಾಯಿಗಳನ್ನು ಸದ್ಯದಲ್ಲಿಯೇ ನೀಡುತ್ತೇವೆ   ಎಂದು ಹೇಳಿದರು. ಎಲ್ಲ ಇಂಡಸ್ಟ್ರಿಗಳಿಗೆ ನೌಕರರನ್ನು ಒದಗಿಸುವದೇ ಶಿಕ್ಷಣ ಇಲಾಖೆ, "ಸ್ಪೆಷಲ್ ಎಕನಾಮಿಕ್ ಝೋನ್ " ಮಾದರಿಯಲ್ಲಿ ಜಿಲ್ಹಾ ಮಟ್ಟದಲ್ಲಿ " ಸ್ಪೆಷಲ್ ಎಜುಕೇಶನ್ ಝೋನ್  "  ತೆರೆಯುವಂತೆ ವಿಶೇಷ ಪರಿಣಿತರು ಸಲಹೆ ನೀಡಿದ್ದಾರೆ, ನಾವದನ್ನು ಯೋಚಿಸುತ್ತಿದ್ದೇವೆ ಎಂದರು.



ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಕೈಗಾರಿಕೆಗಳ ಸಮಸ್ಯೆಗಳನ್ನು ಬಗೆ ಹರಿಸುವ ಕುರಿತು,  ಬರುವ ಬಜೆಟ್ ನಲ್ಲಿ ಪ್ರಯತ್ನಿಸುವದಾಗಿ ಆಶ್ವಾಸನೆ ನೀಡಿದರು.

 

ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಬಿ.ಜಿ.ಪಿ ರಾಜ್ಯಸಭಾ ಎಂ.ಪಿ ಮತ್ತು ಬಿ.ಜೆ.ಪಿ ಕೋಶಾಧ್ಯಕ್ಷ  ಶ್ರೀ ಪಿಯೂಶ್ ಗೋಯೆಲ್  ಪ್ರಭಾವಿ ಭಾಷಣಕಾರ. ಇಂಗ್ಲಿಶ್ ಭಾಷೆ ಬಲ್ಲವರಿಗಂತೂ ಅವರ ಭಾಷಣ ಕೇಳುವದು ಮನಕೆ  ಚೇತೋಹಾರಿ. ಕಬ್ಬಿಣದ ಕಡಲೆಯಾದ ಅರ್ಥಶಾಸ್ತ್ರ ವನ್ನು ಸುಲಲಿತವಾಗಿ ವಿಷಯಸಂಗ್ರಹದೊಂದಿಗೆ   , ಶ್ರೀ ಅಟಲ್ ಬಿಹಾರಿ ವಾಜಪಯೀ ಯವರ ರಾಜಕೀಯ ಆಡಳಿತ ಕಾಲ ಹೇಗೆ ಶ್ರೇಷ್ಟ , ಹೇಗೆ ಭಾರತಕ್ಕಾದ ಅರ್ಥಿಕ ಅನುಕೂಲತೆಗಳಿಗೆ ವಾಜಪಯೀ ಇಟ್ಟ ಬುನಾದಿ , ಹೇಗೆ ಯು.ಪಿ.ಎ ಗೆ ಲಾಭ ತಂದುಕೊಟ್ಟಿತು  , ಫೋಕರಣ್ ಅಣುಸ್ಫೊಟ ದೇಶಕ್ಕೆ ಹೇಗೆ ಅಂತರರಾಸ್ಟ್ರೀಯ        ಮನ್ನಣೆ ತಂದು ಕೊಟ್ಟಿತು ಎಂಬ ಅಭಿಮಾನ, ಇತ್ಯಾದಿ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಒಂದು ಹಂತದಲ್ಲಿ ಶ್ರೀ  ಅರುಣ್ ಜೇಟ್ಲಿ ಯವರ ಭಾಷಣವನ್ನು ನೆನಪಿಸಿತು. ವಿಷಯ ಸಂಗ್ರಹ, ವಿಷಯ ನಿರೂಪಣೆಯಲ್ಲಿ ಶ್ರೀ ಅರುಣ್ ರಷ್ಠೇ ಪ್ರತಿಭಾನ್ವಿತರಾದ   ಶ್ರೀ ಪೀಯುಶ್ ರಿಗೆ  ದೇವರು ನೀಡಿದ ಧ್ವನಿ ಮಾಧುರ್ಯ ಅರುಣ್ ರಿಗಿಂತ ಮೇಲಾಗಿ , ಆಕರ್ಷಣೀಯವಾಗಿದೆ .  ಎಕನಾಮಿಕ್ ಲಿಬರೇಶನ್ ಎಂಬುದು ಹೊಸದೇನಲ್ಲ, ಜನಸಂಘದ ಕಾಲದಿಂದಲೂ ಬಿ.ಜೆ.ಪಿ ಜನರು ಹೇಳುತ್ತಾ ಬಂದಿದ್ದೇವೆ  " ಗವರ್ನಮೆಂಟ್ ಹ್ಯಾಸ್ ನೋ ರೋಲ್ ಇನ್ ಬಿಸಿನೆಸ್ ಅಂಡ್ ಗವರ್ನಮೆಂಟ್  ಇಸ್ ಟು ಫೆಸಿಲಿಟೇಟ್              ಬಿಸಿನೆಸ್ " , ಸರಕಾರ ಹೇಗೆ ಬುಸಿನೆಸ್ಸ್ನವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು, ಸರಕಾರೀ ಹಿಡಿತಗಳನ್ನು ಹೇಗೆ ಕಮ್ಮಿ ಮಾಡಬೇಕು , ಅಭಿವೃದ್ಧಿ ಹಿಂದೂ ರೇಟ್ ಆಫ್ ಗ್ರೋಥ್ ನಿಂದ ಹೇಗೆ ಅಭಿವೃದ್ಧಿ ಗೊಂಡು ಇಂದು ಪುನಃ ಹಿಂದೂ ರೇಟ್ ಆಫ್ ಗ್ರೋಥ್ ಗಿಂತ ಕೆಳಕ್ಕೋಡುವ ಅಪಾಯದಲ್ಲಿದೆ , ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾಗಿದ್ದು ಪುನಃ ಕ್ಷೀಣಗೊಳ್ಳುವ ಅಪಾಯವೇಕಿದೆ , ಇತ್ಯಾದಿ ಇತ್ಯಾದಿ ವಿಷಯಗಳನ್ನು ಅಧಿಕೃತ ಅಂಕಿ ಅಂಶಗಳ ಜೊತೆಗೆ, ಕೇಳುಗನಿಗೆ ಮನಮುಟ್ಟುವಂತೆ ವಿವರಿಸಿದರು. ಉಳಿದಂತೆ ರಾಜಕೀಯ ಅಂಶಗಳು ,  ಅಂದು ಏನ್.ಡಿ.ಎ ತಂದ ಒಳ್ಳೆಯ ಕಾರ್ಯಕ್ರಮಗಳನ್ನೆಲ್ಲ ಬದಿಗೊತ್ತಿ , ರಾಜಕೀಯಕ್ಕಾಗಿ ಯು.ಪಿ.ಎ ಅದೇ ಕಾರ್ಯಕ್ರಮಗಳನ್ನು ನೂತನ ಹೆಸರಿನಲ್ಲಿ ತರುತ್ತಿದೆ ಆದರೆ ಕಾರ್ಯಕ್ರಮ ಜಾರಿ ಯಲ್ಲಿ ಅತಿ ಬ್ರಷ್ಟಾಚಾರದಿಂದ ಕಾರ್ಯಕ್ರಮಗಳು ವಿಫಲವಾಗುತ್ತಿವೆ ಇತ್ಯಾದಿ ಆರೋಪಗಳು. ಈ ಸರಕಾರದ ಬ್ಯಾಂಕಿಂಗ್ ವ್ಯವಸ್ತೆ ಸದಾ ಸಾಲ ವಸೂಲಿಗಾಗಿ ಚಿಕ್ಕ ಪುಟ್ಟ ಸಾಲಗಾರರ ಹಿಂದೆ ಓಡುತ್ತದೆ, ದೊಡ್ಡ ದೊಡ್ಡ ಸಾಲಗಾರರಿಗೆ ಎ.ಸಿ ರೂಮ್ ಗಳಲ್ಲಿ ಮೇಜವಾನಿ ನೀಡುತ್ತದೆ ಇತ್ಯಾದಿ ಸಭಾ ರಂಜನೀಯ ಅಂಶಗಳನ್ನೊಳಗೊಂಡ ಮಾತುಗಳು ಶ್ರೀ ಪೀಯುಶ್ ಗೋಯೆಲ್ ರವರನ್ನು ಮನಸ್ಸಿನಲ್ಲುಳಿಯುವಂತೆ   ಮಾಡಿತು ಎನ್ನುವದು ಅತಿಶಯೋಕ್ತಿಯಲ್ಲ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ,  ಫೇಸ್ ಬುಕ್ ಬರಹಗಾರ.
Freelance  Journo.
hariharbhat.blogspot.com

Jan 21 , 2013.

Friday, January 18, 2013

Reasoning why this Rape ?




ಡ್ರೆಸ್ ಒಂದೇ ರೇಪಿಗೆ ಕಾರಣ  ಅಥವಾ ಡ್ರೆಸ್ಸೇ  ಇಂದಿನ  ಸಮಸ್ಯೆ  ಎಂಬುದು ಶುದ್ಧ ಸುಳ್ಳು. ರೇಪಿಗೆ ಡ್ರೆಸ್ಸೂ ಕಾರಣ ಎಂಬುದು ಒಪ್ಪತಕ್ಕ ವಿಷಯ.


ಡ್ರೆಸ್ಸೇ ರೇಪಿಗೆ ಕಾರಣ ಎನ್ನುವಂತಿದ್ದರೆ ಈ ಸಮಸ್ಯೆ ಕೇವಲ ಇಪ್ಪತ್ತು ಇಪ್ಪತ್ತೊಂದನೇ ಶತಮಾನದ್ದಾಗಿರುತ್ತಿತ್ತು. ರೇಪು ವಿವಿಧ ರೂಪಗಳಲ್ಲಿ ಮಾನವರು ಜೀವಿಸಿದಲ್ಲೆಲ್ಲಾ   ಇತ್ತು ಎಂಬುದು ಪುರಾಣ, ಇತಿಹಾಸಗಳಿಂದ ಗೊತ್ತಾಗುತ್ತದೆ. ವಿವರಿಸಿ ವ್ಯಂಜನ ಸೇರಿಸುವ ಅವಶ್ಯಕತೆಯೇನಿಲ್ಲ.


ಹಾಗಿದ್ದರೆ ರೇಪಿಗೇನು ಕಾರಣ ಎಂದು ಯೋಚಿಸಿದರೆ ಹೊಳೆಯುವ ವಿಚಾರವೆಂದರೆ ಮನುಷ್ಯನ ಮನಸ್ಸು. ನಾನೇನು ವಿಷಯದಲ್ಲಿ ಪಂಡಿತನಲ್ಲ ಆದರೂ ನನ್ನ ಯೋಚನೆಗೆ ನಿಲುಕುವದೇನೆಂದರೆ , ತರಬೇತು ಗೊಂಡಿರದ ಮನಸ್ಸು, ಅದರಲ್ಲೂ ಪುರುಷ ದೇಹದಲ್ಲಿ ಆವಿರ್ಭವಿಸಿರುವ ಮನಸ್ಸು ದೈಹಿಕ ಕಾಮನೆಯತ್ತ ಅಪವಾದ ರಹಿತವಾಗಿ , ಆಕರ್ಶಿತವಾಗುತ್ತದೆ. ಆದರೆ ಸುಸ್ಥಿರ ಸಮಾಜಕ್ಕೆ ಪ್ರಾಣಿ ಸದೃಶ ದೇಹ-ಕಾಮನೆ ಸೂಕ್ತವಲ್ಲದೆಂಬುದನ್ನು  ಅರಿತ ಮನುಷ್ಯ ಸಾಮಾಜಿಕ ಬಂಧನಗಳನ್ನು ವಿಧಿಸಿಕೊಂಡಿದ್ದಾನೆ. ಆ ಸಾಮಾಜಿಕ ಬಂಧನಗಳನ್ನು  ಪಾಲಿಸಲು ಪ್ರತಿಯೊಬ್ಬರ ಮನಸ್ಸನ್ನು ತರಬೇತುಗೊಳಿಸುವ ಅವಶ್ಯಕತೆಯಿದೆ. ಪುರಾಣ , ಇತಿಹಾಸ ಕಾಲಗಳಿಂದಲೂ ಹದಿನೆಂಟು ಹತ್ತೊಂಭತ್ತನೇ ಶತಮಾನಗಳ ವರೆಗೂ ಸಂಸ್ಕಾರಗಳು, ಸಾಮಾಜಿಕ ಕಟ್ಟು ಪಾಡುಗಳು ಎಂಬ ಬಂಧನದಿಂದ , ಮನಸ್ಸನ್ನು ಹದ್ದು ಬಸ್ತಿನಲ್ಲಿಡುವ ವ್ಯವಸ್ಥೆ ಇತ್ತು. ಆಮೇಲೆ ಸ್ವಾತಂತ್ರ್ಯ ಎಂಬ ಶಬ್ದ ವಿವಿಧ ರೀತಿಯ ಆವಿಷ್ಕಾರಗಳನ್ನು ಪಡೆದು ಇಂದು ಸ್ವೇಚ್ಚೆಯತ್ತ ಬಂದು ನಿಂತಿದೆ.


ಇಂದೂ ಸಹ ಅತಿ ವಿರಳವಾಗಿ ಬಟ್ಟೆ ತೊಡದೆ ಬದುಕುವ ಜನಾಂಗಗಳಿವೆ . ಸಾಮಾಜಿಕ ವ್ಯವಸ್ತೆಯ ಕಟ್ಟು ಪಾಡುಗಳಿಗೆ ಅವರು ಒಳಪಟ್ಟಿರುವದರಿಂದ ಆ ಜೀವನ ವ್ಯವಸ್ತೆಯಲ್ಲಿ ರೇಪಿಗೆ ಆಸ್ಪದವಿಲ್ಲದಂತೆ ಬದುಕುತ್ತಿದ್ದಾರೆ. ಹಾಗೆಂದು ನಾನು ಬಟ್ಟೆಗಳಿಲ್ಲದೇ ಬದುಕುವ ರೀತಿಯನ್ನು ಪ್ರತಿಪಾದಿಸುತ್ತಿಲ್ಲ. ಮನುಷ್ಯನ ಮನಸ್ಸೇ ಅನಾಹುತಗಳಿಗೆ ಮೂಲ ಕಾರಣ, ಎನ್ನುವದನ್ನು ಎಳೆವೆಯಲ್ಲಿಯೇ ಅರಿವು ಮೂಡಿಸುವ ಕಾರ್ಯ ಇಂದು ಅತಿ ಶೀಘ್ರವಾಗಿ ಆಗಬೇಕಾಗಿದೆ ಎಂದು ಒತ್ತುಕೊಟ್ಟು ಹೇಳುತ್ತಿದ್ದೇನೆ.


ಹರಿಹರ ಭಟ್, ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan  19 , 2013.

Sunday, January 13, 2013

ಡಿ . ಉಮಾಪತಿಯವರೆ , ನಿಮ್ಮ ಇಂದಿನ ಲೇಖನ ಓದಿ ಈ ಪ್ರತಿಕ್ರಿಯೆ.

ಡಿ . ಉಮಾಪತಿಯವರೆ ,

ನಿಮ್ಮ ಇಂದಿನ ಲೇಖನ ಓದಿ ಈ ಪ್ರತಿಕ್ರಿಯೆ. ಇಲ್ಲಿ ಜನ್ಮಕ್ಕೆ ಬಂದ ಯಾರೊಬ್ಬರೂ ಪರಿಪೂರ್ಣರಲ್ಲ. ಸ್ವಾಮಿ ವಿವೇಕಾನಂದರೆe ಇರಲಿ, ಮದರ್ ತೆರೇಸಾ ಇರಲಿ , ಜನರೆಲ್ಲಾ ನಂಬುವ ವಿವಿಧ ಧರ್ಮಗಳ ದೇವರುಗಳೇ ಇರಲಿ ಯಾರೊಬ್ಬರೂ ಪರಿಪೂರ್ಣರಲ್ಲ ಅಥವಾ ಅವರೆಲ್ಲ ಪರಿಪೂರ್ಣರೆಂದು ಅವರೂ ಘೋಶಿಸಿಕೊಳ್ಳಲಿಲ್ಲ  .  ಇವೆಲ್ಲ ಅನುಯಾಯಿಗಳೆಂದು ಹೇಳಿಕೊಂಡು ಸ್ವಾರ್ಥ ಸಾಧಿಸುವವರ ಕಿತಾಪತಿ ಅಲ್ಲ ಲಫಂಗತನ  ಅನ್ನಿ.

ನಾವು ಹಿರಿಯರನ್ನು, ಉದಾತ್ತ ಜೀವಿಗಳನ್ನು ಸ್ಮರಿಸಿಕೊಳ್ಳುವದು ಅವರಲ್ಲಿರುವ ಒಳ್ಳೆ ಗುಣಗಳನ್ನು ನೆನಪಿಸಿಕೊಳ್ಳಲು , ಆ ಒಳ್ಳೆ ಗುಣಗಳಿಂದ ಇಂದಿನ ಯುವ ಜನಾಂಗಕ್ಕೆ ಅನುಕೂಲವಾಗಲಿ ಎಂದು. ತಾವು ಪತ್ರಕರ್ತರು , ತಿಳಿದವರು , ಜವಾಬ್ದಾರಿಯುಳ್ಳವರು ಎಂದು ಸಮಾಜ ಒಪ್ಪಿರುವಾಗ ಉದಾತ್ತ ಜೀವಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಇಂದಿನ ಪೀಳಿಗೆಗೆ ನೀಡಬಲ್ಲ ಪುಸ್ತಕಗಳನ್ನು ಪರಿಚಯಿಸುವ ಬದಲು, ಉದಾತ್ತ ಜೀವಿಗಳಲ್ಲಿದ್ದ ನೇತ್ಯಾತ್ಮಕ ಅಂಶಗಳನ್ನೇ ಎತ್ತಿ ಹೇಳುತ್ತಾ , ಹಣ ಮಾಡಲು ಬರೆದ ಪುಸ್ತಕಗಳ ಕುರಿತು ಸಮಾಜಕ್ಕೆ ಲೇಖನ ನೀಡುತ್ತೀರಲ್ಲಾ , ಇದು ನ್ಯಾಯವೇ ? ಉಚಿತವೇ ? ನಿಮ್ಮನ್ನು ಅನುಸರಿಸುವ ಯುವ ಜನಾಂಗ ಕೇವಲ ನೇತ್ಯಾತ್ಮಕವಾಗಿ ಬೆಳೆಯಬೇಕೆ ಎಂಬ ಪ್ರಶ್ನೆಗಳು ನಿಮ್ಮ ಮನ ಕಲಕೀತು ಎಂಬ ಸದಾಷಯಗಳೊಂದಿಗೆ ಬರೆದಿದ್ದೇನೆ.      

ಮತ್ತೆ ನಾನೇನೂ ಸಂಘ ಪರಿವಾರದವನಲ್ಲ.  ಹೆಮ್ಮೆಯಿಂದಿರುವ  ಹಿಂದೂ  ಹೌದು.  ಅದೇ ರೀತಿ ಇತರ ಮತ ಧರ್ಮಗಳನ್ನೂ ಗೌರವದಿಂದ ಕಾಣುವ ಒಬ್ಬ ಭಾರತೀಯ ಪ್ರಜೆ.

ಶ್ರೀ. ಡಿ. ಉಮಾಪತಿಯವರ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ:

http://vijaykarnatakaepaper.com/Details.aspx?id=2888&boxid=13715751


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan  14  , 2013 .
hariharbhat.blogspot.in

Legislation for Solid Waste Management System .

                        ಬೆಂಗಳೂರಿಗರಿಗೊಂದು ಆಶಾದಾಯಕ ಸುದ್ದಿ.


Autonomous Special Purpose Vehicle working with BBMP within a month - Assurance by Mr. Anantakumar , Bangalore MP.

Irreversible Development Programme to be implemented.

Legislation for Solid Waste Management System .

ಇವೆಲ್ಲ ಬಾಜಪ ಎಂ.ಪಿ  ಶ್ರೀ. ಅನಂತಕುಮಾರ್ ಭರವಸೆಗಳು.  ಅನಂತಕುಮಾರ್ ಹಿಂದೊಮ್ಮೆ ಬರವಸೆ ಕೊಟ್ಟಿದ್ದನ್ನು ಬರೆದಿದ್ದೆ. ನಮ್ಮ ಕನ್ನಡ ಭಾಷೆ ಅಂತರ್ಜಾಲದಲ್ಲಿ ತೀವ್ರ ಬೆಳವಣಿಗೆ ಹೊಂದಲು ಸಹಕಾರಿಯಾಗುವ ಯೂನಿಕೋಡ್ ಒಪ್ಪಿ ಅನ್ವಯಿಸಲು ಸರಕಾರದಿಂದ ಆಗಬೇಕಾದ ಕೆಲಸಗಳು ಆಗುತ್ತಿಲ್ಲ , ಎಲ್ಲಾ ಕಚೇರಿ , ಅಧಿಕಾರಿಗಳನ್ನು ಬೆನ್ನತ್ತಿದರೂ ಸರಕಾರೀ ಗೆಜೆಟ್ ನೋಟಿಫಿಕೇಶನ್ ಆಗುತ್ತಿಲ್ಲ ಎಂದು ಚಂದ್ರಶೇಖರ್ ಕಂಬಾರರವರು ಅನಂತಕುಮಾರ್ ಗಮನಕ್ಕೆ ತಂದಾಗ ಮುಂದಿನ ಮೂರು ತಿಂಗಳಲ್ಲಿ ಈ ಕೆಲಸಗಳು ಸಲೀಸಾಗುವಂತೆ ಸಂಭಂಧಿಸಿದವರಿಗೆಲ್ಲಾ ಹೇಳಿ ಕೆಲಸ ಮಾಡಲಾಗುವದು ಎಂದು ಕೊಟ್ಟ ಭರವಸೆಯಂತೆ ಕಾರ್ಯ ಮಾಡಿದ್ದರಿಂದ , ಬೆಂಗಳೂರಿಗರಿಗೊಂದು ಆಶಾದಾಯಕ ಸುದ್ದಿ ಎಂದು ಬರೆದೆನೀಗ.


ಬೆಂಗಳೂರನ್ನು ಜಗದ್ವಿಖ್ಯಾತ ಗೊಳಿಸಿದ ಐ.ಟಿ , ಬಿ.ಟಿ  ಜೊತೆಗೆ ರಾಕ್ಷಸೀ ಸಹೋದರನಾಗಿ ವಿಖ್ಯಾತಿ ಪಡೆದು ದಿನದಿಂದ ದಿನಕ್ಕೆ ತನ್ನ ಅಪಖ್ಯಾತಿಯನ್ನು ವೃದ್ಧಿಗೊಳಿಸುತ್ತಾ ಮುನ್ನುಗ್ಗುತ್ತಿರುವ ಘನ ತ್ಯಾಜ್ಯ ಅಂದರೆ ಕಸ ಅಂದರೆ ಸಾಲಿಡ್ ವೇಸ್ಟ್ ಸಮಸ್ಯೆ ಬಗೆಹರಿಸುವ ಕುರಿತು ಶ್ರೀ ರಾಜೀವ್ ಚಂದ್ರಶೇಖರ್ ನೇತ್ರತ್ವದ  ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ನೇತ್ರತ್ವದ ಅದಮ್ಯ ಚೇತನ ಸಂಸ್ಥೆಗಳು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಒಂದು ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಿದ್ದವು.  ಹಿಂದೆ ಬೆಂಗಳೂರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅಬೈಡ್ (ABIDE)  ಎಂಬುದೊಂದು   ಸಂಸ್ಥೆ  ಕಾರ್ಯಪೃವೃತ್ತವಾಗಿ ಸರಕಾರಕ್ಕೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದ ನೆನಪಿರಬಹುದು ಹಾಗೆಯೇ ABIDE  ವರದಿಯನ್ನು ಚೆಂದಾಗಿ ಬೈಂಡ್ ಮಾಡಿ ಬದಿಗಿಟ್ಟಿದ್ದು ನಿಮಗೆ ನೆನಪಿರಬಹುದು. ಅದೇ ಅಬೈಡ್  ಈಗ ಇನ್ನೊಂದು ರೂಪದಲ್ಲಿ ಕ್ರಿಯಾಶೀಲವಾಗಿದೆ. ಆದರೆ ಈಗ ಬೆಂಗಳೂರಿಗರಿಗೆ ಆಶಾದಾಯಕ ಸುದ್ದಿ ಯಾಕೆಂದರೆ ಅನಂತಕುಮಾರ್ ಹೇಳುವ ಮಾತುಗಳಿಗೆ ಬೆಲೆ ಬರುವ ಕಾಲ ಬಂದಿರುವದರಿಂದ , ನೀಡಿದ ಆಶ್ವಾಸನೆಗಳನ್ನು ನೆನಪಿಟ್ಟು ಕಾರ್ಯರೂಪಕ್ಕೆ ತರುವ ಅನಂತಕುಮಾರ್ ಆಸಕ್ತಿವಹಿಸಿರುವದರಿಂದ ಬೆಂಗಳೂರಿಗರಿಗೆ ಆಶಾದಾಯಕ ಸುದ್ದಿ. ಅನಂತಕುಮಾರ್ ಮಾತುಗಳಲ್ಲೇ ಹೇಳುವದಾದರೆ " we  have  political  will  now, ರಾಜಕೀಯ ಇಚ್ಚಾಶಕ್ತಿ ಇದೆ. "


ಉಳಿದೆಲ್ಲ ಎಂದಿನಂತೆ ನಾವು ನೀವೆಲ್ಲ ಮಾಧ್ಯಮಗಳ ಮುಖಾಂತರ ಅರಿತಿರುವ ವಿಷಯಗಳೇ. ಎತ್ತು ಎರೆಗೆ, ಕೋಣ ಕೆರೆಗೆ ಎಂಬ ಕಾರ್ಪೊರೇಟರ್ - ಅಧಿಕಾರಿ ನಡೆ , ಹತ್ತರಿಂದ ಹದಿನೈದು ಲಕ್ಷ ಜನವಸತಿ ಇರುವ ವಿದೇಶಗಳ ಅಚ್ಚುಕಟ್ಟು ಜೀವನದ ಹೊಗಳಿಕೆ, ನಾನು ಹೀಗೆ ಸಲಹೆ ಕೊಟ್ಟೇ.... ಅದಕ್ಕೆ ಬೆಲೆ ಇಲ್ಲ ಎಂಬ ಆಲಾಪಗಳು  ಇತ್ಯಾದಿ. ಒಂದು ವಿಶೇಷವೆಂದರೆ ಕಹಿ ಸತ್ಯವನ್ನು ಹೇಳಲು ಪೊಲ್ಯುಶನ್   ಕಂಟ್ರೋಲ್ ಬೋರ್ಡ್ ಅಧ್ಯಕ್ಷರಾದ ವಾಮನ ಆಚಾರ್ಯರು ಧೈರ್ಯ ಮಾಡಿದ್ದು - ಈಗ ಹತ್ತು ಹದಿನೈದು ವರ್ಷಗಳಲ್ಲಿ ಎಲ್ಲಾ ಕಾರ್ಪೊರೇಟರ್ ಗಳು, ಎಲ್ಲಾ ಎಂ.ಎಲ್.ಎ ಗಳು ಹತ್ತಿಪ್ಪತ್ತು ಎಕರೆ ಖರೀದಿ ಸ್ವಂತಕ್ಕೆ ಮಾಡಿದ್ದೀರಿ  , ಆದರೆ ಎಲ್ಲರೂ  ಕಾರ್ಪೋರೇಶನ್ ಕಡೆ ಯಾರ್ಡ್ ಸಲುವಾಗಿ ಜಾಗ ಇಲ್ಲಾ , ಜಾಗ ಇಲ್ಲ ಅಂತೀರೀ ........., ನೀವೇ ನಾಲ್ಕಾರು ಮಂದಿ ಸೇರಿ ಜಾಗ ಲೀಸ್ ಕೊಡಬಹುದಲ್ಲಾ, ಯಾರು ಯಾಕೆ ಒಪ್ಪೋದಿಲ್ಲಾ ಎಂಬ ಉತ್ತರವಿಲ್ಲದ ಪ್ರಶ್ನೆ ಎಸೆದು , ಸಕತ್ ಚಪ್ಪಾಳೆ ಗಿಟ್ಟಿಸಿಕೊಂಡರು.


ಈ ಎಲ್ಲಾ ಚರ್ಚೆಗಳಲ್ಲಿ ಸಮಯೋಚಿತವಾದ, ಕಾರ್ಯಸಾಧುವಾದ ಸಲಹೆಯನ್ನು ಶ್ರೀ ಅಶ್ವಿನ್ ಮಹೇಶ್ , ಹಿಂದೆ ಅಬೈಡ್ ಸದಸ್ಯರಾಗಿದ್ದವರು , ನೀಡಿದರು. ಅದೇ ಶ್ರೀ ಅನಂತಕುಮಾರ್ ರವರು ಕೊನೆಯಲ್ಲಿ ನೀಡಿದ ಭರವಸೆಗಳು. ಹಾಗಾಗಿ ಪುನರಾವರ್ತನೆ ಬರಹ ಬೇಡ.  ಅಂದ ಹಾಗೆ ಇದು ಅಶ್ವಿನ್ ಮತ್ತು ಅನಂತಕುಮಾರ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆ....  ಗೊತ್ತಿಲ್ಲಾ. ಹೇಗೇ ಇರಲಿ ಬೆಂಗಳೂರಿಗರಿಗಂತೂ ಇದು ಸಿಹಿ ಸುದ್ದಿ ಮತ್ತು ಕಸ ಸಮಸ್ಯೆ ಬಗೆಹರಿಯುವಂತೆ ಆಶಾಕಿರಣವೊಂದು ಗೋಚರಿಸುತ್ತಿದೆ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan  13  , 2013 .

ಶ್ರೀ ಭಗವದ್ಗೀತಾ ಅಭಿಯಾನದ ಹದಿಮೂರನೆ ಅಧ್ಯಾಯದ ಸಮರ್ಪಣ

ಶ್ರೀ ಭಗವದ್ಗೀತಾ ಅಭಿಯಾನದ ಹದಿಮೂರನೆ ಅಧ್ಯಾಯದ ಸಮರ್ಪಣ ಸಮಾರಂಭದ ಕಾರ್ಯಕ್ರಮಕ್ಕೆ ಹೋಗಿದ್ದೆ.  ಸ್ವರ್ಣವಲ್ಲಿ  ಶ್ರೀ ಗಳ ಪ್ರಸ್ತಾವನಾ ಮಾತುಗಳು, ಗೀತೆಯ ಹದಿಮೂರನೇ ಅಧ್ಯಾಯದ ಪಠಣ ಕೇಳಿ ನಂತರ ಇನ್ನೊಂದು ಕಾರ್ಯಕ್ರಮ ನಿಮಿತ್ತ ಆಚೆ ಹೋದೆನು.


ಗೀತಾ  ಪಠಣಕ್ಕೆ ಮುನ್ನ ಕಾಲಲ್ಲಿ ಚಪ್ಪಲಿಯಿರುವವರು ಚಪ್ಪಲಿ ಬಿಟ್ಟು ಪಠಣ ಮಾಡುವಂತೆ ಸೂಚಿಸಲಾಯಿತು. ನನ್ನ ಅಕ್ಕ ಪಕ್ಕ ದಲ್ಲಿರುವ ಹದಿ ವಯಸ್ಸಿನವರಿಗೆ  " ಚಪ್ಪಲಿ ಬಿಡಲು ಏನು ಕಾರಣವಿರಬಹುದು ? " ಎಂಬ ಕುತೂಹಲ. ಅವರಲ್ಲೇ ಚರ್ಚೆ. ಪಠಣ ಮಧ್ಯೆ ಇವೆಲ್ಲ ನಡೆದುಹೋಯಿತು.   ಅರಿತವರು ( ಸಂಘಟಕರು ಅರಿತವರೆಂಬ ವಿಶ್ವಾಸ ) ಕೆಲವೇ ಸೆಕೆಂಡ್ ಗಳಲ್ಲಿ ಉಧ್ಗೋಶದ ಮಧ್ಯೆ   ವಿವರಣೆ ನೀಡಿದ್ದರೆ ಸಾರ್ವಜನಿಕ ಕಾರ್ಯಕ್ರಮ ಮಾಡುವದರ ಉದ್ದೇಶ , ಅಂದರೆ ಹಿಂದೂ ಧರ್ಮ ಜಗವ್ಯಾಪಿಯಾಗಬೇಕು ಎಂಬ ಸದುದ್ದೇಶ , ಸಾಧಿಸುವತ್ತ ಸಹಾಯಕವಾದಿತೇನೋ ಅನಿಸಿತು. ನನ್ನ ತಿಳುವಳಿಕೆಯಂತೆ ಭೂಮಿ ಮತ್ತು ವ್ಯೋಮದ ಮಧ್ಯೆ ಇರುವ ಈ ದೇಹಕ್ಕೆ ಇನ್ನ್ಯಾವುದೇ ಭಾದಕಗಳಿಲ್ಲದೆ ( ಇಲ್ಲಿ ಚಪ್ಪಲಿ ) ನಮ್ಮ ಸ್ವರ ತಂತುಗಳಿಂದ ಹೊರಟ ನಾದ  ಭೂಮಿ - ದೇಹ - ವ್ಯೋಮದ ಸಂಪರ್ಕ ಬೆಸೆದು ( through electrical impulses ) ಇವುಗಳ ಆಚೆ ಇರುವ ಪರಮಾತ್ಮನ ತಲುಪಲಿ ಎಂದಿರಬಹುದೆನೋ ಎಂದು.


ಇನ್ನು , ನಮ್ಮ ಹಿಂದು ಧರ್ಮದ ಕಾರ್ಯಕ್ರಮಗಳಲ್ಲಿ , ಧರ್ಮಾಭಿಮಾನಿಗಳನ್ನು, ಧರ್ಮಾನುಯಾಯಿಗಳನ್ನು   ಧರ್ಮ ಪರ ಮಾರ್ಗಗಳಲ್ಲಿ ತೊಡಗಿಸಿಕೊಳ್ಳುವ ಭರದಲ್ಲಿ ಇತರೆ ಧರ್ಮಗಳ ಅಂದರೆ ಇಸ್ಲಾಂ , ಕ್ರಿಶ್ಚಿಯನ್ ಮುಂತಾದ ಧರ್ಮದವರ್ಯಾರೋ ಏನೇನೋ ಕಾರಣಗಳಿಂದ ನಮ್ಮ ಧರ್ಮ ಗ್ರಂಥಗಳನ್ನು ಓದಿದರೆ , ಅದನ್ನೇ ನಮ್ಮ ಧರ್ಮ ಗ್ರಂಥಗಳ ಶಕ್ತಿಯನ್ನು ಎತ್ತಿ ಹಿಡಿಯಲು ಉದಾಹರಿಸಿದರೆ ಇದೇನೋ  ಹಾಸ್ಯಾಸ್ಪದ ಎನಿಸುವದು. ಇಂದಿನ ಕಾಲಘಟ್ಟದಲ್ಲಿ ಕುತೂಹಲಕ್ಕಾದರೂ , ಆಧುನಿಕ ಶಿಕ್ಷಣ ಪಡೆದವರು ವಿವಿಧ ಧರ್ಮಗ್ರಂಥಗಳ ಸಾಹಿತ್ಯವನ್ನು ಸಾಧ್ಯವಾದಸ್ಟು   ಓದುತ್ತಾರೆ. ಹಿಂದೂ ಧರ್ಮ ಎಂದೂ ಇತರರ ಧರ್ಮ ಅಥವಾ ಜೀವನ ಪದ್ದತಿಯನ್ನು ಹೀಯಾಳಿಸಿಲ್ಲ   ಅಥವಾ ದ್ವೇಶಿಸಿಲ್ಲ. ಆದರೆ ಇಂದು " ಎಲ್ಲರೊಂದಿಗೆ ನಾವು " ( Inclusive policy  ) ಎಂಬುದನ್ನು ಪ್ರಚುರಪಡಿಸುವತ್ತ ಹೆಚ್ಚಿನ ಒತ್ತು ಹಿಂದೂ ಧರ್ಮದ ಸಭೆಗಳಲ್ಲಿ  ಕಂಡು ಬರುತ್ತದೆ.  ಇಂದಿನ ಸಭೆಯಲ್ಲಿ ಕೇಸರಿ ಬಾವುಟಗಳೆಲ್ಲೂ ಕಂಡುಬರಲಿಲ್ಲ.  ಹಸಿರು ಸಮೃದ್ಧಿಯ ಸಂಕೇತ ಎಂದು ಸಾರುತ್ತಾ ಹಸಿರು ಅಕ್ಷರಗಳಲ್ಲಿ ಬರೆದ  " ಸಮರ್ಪಣಾ ಸಮಾರಂಭ ", " ಭಗವದ್ಗೀತೆ ಶಾಲೆಗಳಲ್ಲಿ ಓದಿಸಿದರೆ ಕೇಸರೀಕರಣ ಅಲ್ಲ , ಹಸೀರೀಕರಣ ಎನ್ನಿ "  ಎಂದು ಒತ್ತು ಪಡೆದ ಮಾತು, ಗೀತಾ ಪಠಣದ ನಾರಿಯರ ಸಮವಸ್ತ್ರಗಳೆಲ್ಲ   ಹಸಿರು,  ಸಭೆಯಲ್ಲಿ ಹಾಸಿದ ಚಾಪೆ ( mat  )   ಸಹ ಹಸಿರು  , inclusive policy  ಎಂಬುದನ್ನು ಸಾರುವತ್ತ ಹೆಚ್ಚಿನ  ಮಹತ್ವ ಕಂಡು ಕೊಂಡಂತಿದೆ.
ಆದರೆ  " ಭಗವದ್ಗೀತೆ ಶಿಕ್ಷಣ , ಆಗಲೇಬೇಕು ತಕ್ಷಣ "   ಎಂದು ನೀಡಿದ ಘೋಷ ವಾಕ್ಯ ಈ ಎಲ್ಲ ಪ್ರಯತ್ನಗಳನ್ನು  ಮರೆಮಾಚುವಂತೆ , ಯಾವ ಮಾಧ್ಯಮ ವಿಭಾಗವು   ಹಿಂದೂ ಧರ್ಮ ವಿರೋಧಿ ಎಂದು ಚರ್ಚಿಸಲ್ಪಡುವದೋ , ಆ ವಿಭಾಗ ತನ್ನ ಕಾರ್ಯಗಳನ್ನು ಹೆಚ್ಚು ಒತ್ತು ನೀಡಿ ಮುಂದುವರೆಸಲು ಅನುಕೂಲವಾಯಿತೆನಿಸುತ್ತಿದೆ.


ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು. ಎಲ್ಲರ ವೇಷ ಭೂಷಣಗಳು ಮನ ಸೂರೆಗೊಳ್ಳುವಂತಿದ್ದವು. ಊಟ ರುಚಿ, ರುಚಿಯಾಗಿತ್ತು. ಇವೆಲ್ಲ ವಿಶೇಷವಲ್ಲ. ಹವ್ಯಕರು, ಅದರಲ್ಲೂ ಬ್ರಾಹ್ಮಣರು ಇವಕ್ಕೆಲ್ಲ ಎತ್ತಿದ ಕೈ.  ಒಂದು ಕೋಟಿ  ಜನಸಂಖ್ಯೆಯಿರುವ  ಬೆಂಗಳೂರು ಶಹರದಲ್ಲಿ  ಒಂದು ನೂರಾ ಅರವತ್ತೈದು ಕೇಂದ್ರಗಳಲ್ಲಿ ಪಾರಾಯಣ, ಇಪ್ಪತ್ತೈದು ಸಾವಿರ ಗೀತಾ ಪುಸ್ತಕ ಹಂಚಲಾಗಿದೆ ಎಂಬ ಹಿರಿಮೆಗಳು ಯಾಕೋ ಕಿರಿದಾಗಿ ಮನ ಕಲಕಿತು.


ಶ್ರೀ  ಗುರುಭ್ಯೋ  ನಮಃ  /   ಸ್ವರ್ಣವಲ್ಲಿ   ಶ್ರೀ  ಗಂಗಾಧರೇಂದ್ರ ಮಹಾ ಸ್ವಾಮಿಕೀ  ಜೈ  //

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
ಜನವರಿ ೧೩ , ೨೦೧೩.

Wednesday, January 9, 2013

ಮಿತ್ರರೇ,


ನಾವು ಯಾರನ್ನು ಸಮಾಜದಲ್ಲಿ ದೊಡ್ಡವರು , ಜೀವನದಲ್ಲಿ ಮೇಲೆ ಬಂದವರು ಎಂದು ಒಪ್ಪಿರುತ್ತೆeವೆಯೋ ಅವರೆಲ್ಲ ನೂರಕ್ಕೆ ನೂರು ದೊಡ್ಡವರಾಗಿರುವದಿಲ್ಲ. ಮಾಂಸ ಮಜ್ಜೆಯಿಂದ ಕೂಡಿದ ಈ ದೇಹದಲ್ಲಿ ಅರಿಶಡ್ವೈರಗಳು  ಸುಮ್ಮನಿರುತ್ತವೆ ಅಂದರೆ ಸುಪ್ತವಾಗಿ ಅಡಗಿರುತ್ತವೆ ಎಂದರ್ಥ. ಆಚೆ  ನೈಜ ಸ್ಥಿತಿ ತೋರ್ಪಡಿಸದಂತೆ ಮನಸ್ಸಿನ ಮೇಲೆ,  ಬುದ್ಧಿ ಹಿಡಿತ ಹೊಂದಿರುತ್ತದೆ. ಆ ಅರಿಶಡ್ವೈರಗಳು  ಬುದ್ಧಿಯ ಹಿಡಿತ ತಪ್ಪಿಸಿಕೊಂಡು ಪ್ರದರ್ಶಿತವಾಗಲು ಸಮಯೋಚಿತ ಸಂಧರ್ಭಗಳು ಒದಗಿ ಬಂದಾಗ ತಮ್ಮತನ ತೋರ್ಪಡಿಸುತ್ತವೆ.  ಒಮ್ಮೆ ಆ ರೀತಿಯ ಸಂಧರ್ಭಗಳು ಒಮ್ಮೆಯಲ್ಲ , ಆಗಾಗ ಒದಗಿ ಬಂದರೂ ಅರಿಶಡ್ವೈರಗಳ  ಮುಷ್ಠಿಯಲ್ಲಿ  ಸಿಗಲಿಲ್ಲ ಎಂದರೆ ಆ ಮಹನೀಯರು , ಪ್ರತಿಶತ ನೂರರಸ್ಟೂ ದೊಡ್ಡವರು ಎಂದು ಒಪ್ಪಿಕೊಳ್ಳಲಡ್ಡಿಯಿಲ್ಲ.   


ಬಾಹ್ಯ ಸೌಂದರ್ಯ, ಸಾರ್ವಜನಿಕವಾಗಿ ತೋರಿಬರುವ ವ್ಯಕ್ತಿತ್ವದ ಮುಖ , ಬಹುಪಾಲು ಅಡಗಿಸಿಕೊಂಡಿರುವ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ  ಕಾಳಜಿವಹಿಸುವ  ಪರಿಯಷ್ಟೇ.  ಈ ರೀತಿ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ ಜತನದಿಂದ ಹೊರವ್ಯಕ್ತಿತ್ವ ಕಾಪಿಟ್ಟುಕೊಂಡವರೇ , ದ್ವಿಮುಖ ವ್ಯಕ್ತಿತ್ವದ ನಾಯಕರ, ಮುಂದಾಳುಗಳ ಹಿಂಬಾಲಕರು.  ದ್ವಿಮುಖವ್ಯಕ್ತಿತ್ವ ಹೊಂದಿರದಿದ್ದರೆ ಇಂದಿನ ಜನ ಜೀವನದಲ್ಲಿ ಶೀಘ್ರವಾಗಿ ದುಡ್ಡು ಮಾಡಲು ಅಸಾಧ್ಯ.  ಒಮ್ಮೆ ಬಹು ಪ್ರಯತ್ನದಿಂದ ದುಡ್ಡುಮಾಡಿದರೆ , ದ್ವಿಮುಖ ವ್ಯಕ್ತಿತ್ವದ ಜನರು ಸುತ್ತ ಸೇರಿ, ದ್ವಿಮುಖ ವ್ಯಕ್ತಿತ್ವದ ಜಾಲದಲ್ಲಿ ಅವರನ್ನು ಸೇರಿಸಿಕೊಂಡುಬಿಡುತ್ತಾರೆ  . ಒಮ್ಮೆ ಆ ಜಾಲದ ಪರಿಧಿಯ ಒಳಸೇರದಿದ್ದರೆ ಇಂದಿನ ಜನ ಜೀವನದಲ್ಲಿ ಜನಪ್ರಿಯರಾಗದೆ, ಸಾರ್ವಜನಿಕವಾಗಿ ಗುರುತಿಸಲ್ಪಡದೇ ಉಳಿದುಬಿಡುತ್ತಾರೆ. ಹೀಗೆಂದು ಆ ಪರಿಧಿಯೊಳಸೇರಿದರೆ  ಕ್ರಮೇಣ ತನ್ನತನ ಕಳೆದುಹೋಗಿ , ಸಾರ್ವಜನಿಕ ಜೀವನದ ಉತ್ತುಂಗಕ್ಕೇರಿದರೂ , ವೈಯಕ್ತಿಕ ಜೀವನದಲ್ಲಿ ನಿರಾಸೆಹೊಂದುತ್ತಾರೆ.  ಈ ರೀತಿಯ ಜೀವನದ ಉತ್ತುಂಗ  ಹಂತ ತಲುಪಿದಾಗ , ಸುಪ್ತವಾಗಿದ್ದ ಅರಿಶಡ್ವೈರಗಳು ಜಾಗ್ರತವಾಗಿ ಉನ್ಮತ್ತನಾಗಿ denotify  ಹಗರಣಗಳು,  rape the known  and  unknown   ಅಂತಹ ನೀಚ ಪ್ರವ್ರತ್ತಿಗೆ ಉದ್ಯುಕ್ತನಾಗುತ್ತಾನೆ.  ಒಮ್ಮೆ ಈ ನೀಚ ಪ್ರವೃತ್ತಿಗಳು   ಜಾಹೀರಾದಾಗ ತನ್ನನ್ನು ಸುಭಗನಂತೆ ತೋರ್ಪಡಿಸಲು ಅಧಿಕಾರದ ಮದ, ತಾನೇ ಬೆಳೆಸಿದ ಹಿಂಬಾಲಕರು, ಅಸಮರ್ಪಕ ವಿಧಾನಗಳಿಂದ ಗಳಿಸಿದ ಸಂಪತ್ತು ಎಲ್ಲ ಉಪಯೋಗಿಸಿ ಆಪತ್ತುಗಳಿಂದ ಪಾರಾಗಲು ಕಾರ್ಯ ಪ್ರವೃತ್ತನಾಗುತ್ತಾನೆ .ಈ ವರ್ತುಲದಿಂದ ಹೊರ ಬರಲಿ , ಬರದಿರಲಿ ಕಾಲ ಕ್ರಮೇಣ ಸಮಾಜದಲ್ಲಿ  ಸ್ಥಾನ ಬ್ರಷ್ಠನಾಗುತ್ತಾನೆ .   


ವಾನಪ್ರಸ್ಥದ ಹಂತ ತಲುಪಿರುವ ಹಿರಿಯರ ಜೊತೆ ಆತ್ಮೀಯವಾಗಿ ಹರಟಿದರೆ ಇಂತಹ ನೂರಾರು ಜನರ ಇತಿಹಾಸ ಬೆಳಕಿಗೆ ಬರುತ್ತದೆ. ಇತಿಹಾಸ ರಚಿಸಿದವರಸ್ಟೇ ಅಲ್ಲ, ಪ್ರಸಕ್ತ ಕಾಲದಲ್ಲೂ ಇತಿಹಾಸ ರಚಿಸುತ್ತಿರುವವರ ನಿಜ ಮುಖಗಳ ಅರಿವಾಗುತ್ತವೆ. ಆದ್ದರಿಂದಲೇ ಇಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ   ವ್ಯವಹಾರಗಳ   ಜವಾಬ್ದಾರಿತನ  ( Accountability  ),   ಪಾರದರ್ಶಕತೆ
 ( Transperancy  )  ಕುರಿತು ಎಲ್ಲೆಡೆ ಹೆಚ್ಚಿನ ಕೂಗು ಕೇಳಿ ಬರುತ್ತಿರುವದು. ಇಂದಿನ ಈ ಕಾಲ ಮಾನದಲ್ಲಿ  ಈ ಬೆಳವಣಿಗೆಗಳು ಸಮಾಜದ ಯಾವ ವಿಭಾಗಗಳನ್ನೂ  ಬಿಟ್ಟಿಲ್ಲ.  ನಾನು ಇಲ್ಲಿ ಒಂದೊಂದಾಗಿ ಹೆಸರಿಸಬಹುದು, ಹೆಸರಿಸಿದರೆ ಮುಜುಗರವುಂಟಾದೀತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು  ಅಲ್ಲದೆ   ನೀವೆಲ್ಲ   ಆ ರೀತಿಯ   ಮುಖಂಡರುಗಳು,  ಸಮಾಜವನ್ನು ಮುನ್ನಡೆಸುವವರುಗಳ ಮಧ್ಯೆಯೇ ಬದುಕುತ್ತಿರುವದರಿಂದ , ಹತ್ತಾರು ಕಡೆ ಹತ್ತಾರು ಸಲ ಈ ರೀತಿಯ ಘಟನೆಗಳ ಮಾಹಿತಿವುಳ್ಳವರಾಗಿರುತ್ತೀರಿ.


ಯಾವುದೋ ಒಂದು ಘಟನೆಯ ಸುತ್ತ ಚರ್ಚೆಯಲ್ಲಿ ಭಾಗಿಯಾದಾಗ ಈ ಎಲ್ಲ ವಿಚಾರಗಳು ಮನಸ್ಸಿನಲ್ಲಿ ಸುಳಿದವು. ನಿಮ್ಮೊಡನೆ ಹಂಚಿಕೊಂಡೆನು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 10, 2013.

Tuesday, January 8, 2013

About Corruption.

ಇಂದಿನ ಸಮಾಜದಲ್ಲಿ ಧನವಂತರು ಬೆಳೆಯುತ್ತಿರುವದು ಅಭಿಮಾನದ ಸಂಗತಿಯಾದರೂ , ನ್ಯಾಯ ಸಂಮತವಲ್ಲದ ಮಾರ್ಗೋಪಾಯಗಳನ್ನು ಅನುಸರಿಸಿ ಸಿರಿವಂತರಾಗುತ್ತಿದ್ದಾರೆಂಬುದು   ಖೇದನೀಯ.

೧.             ಸರಕಾರ ವಿಧಿಸುವ ಟ್ಯಾಕ್ಸ್ ಗಳನ್ನು ತಪ್ಪಿಸಿ , ಕಡಿಮೆ ಬೆಲೆ ನಮೂದಿಸಿ ಸಿರಿವಂತರಾಗುತ್ತಾರೆ. ಟ್ಯಾಕ್ಸ್ ಆಫೀಸ್ ನ ಜವಾನನಿಗೂ ಒಳ್ಳೆ ಗೌರವ.   ಹಿರಿ ಕಿರಿಯ ಅಧಿಕಾರಿಗಳ ಸಂಪರ್ಕಕ್ಕೆ ಬುನಾದಿ ಹಾಕಲು ಅವರೇ ದಾರಿದೀಪ.

೨.            ಸರಕಾರೀ ಕಾಮಗಾರಿಗಳಲ್ಲಿ ಒಂದಕ್ಕೆ ನಾಲ್ಕು ಬೆಲೆ ನಮೂದಿಸಿ ಸಂಭಂದಿಸಿದವರಿಗೆಲ್ಲಾ   ಪಾಲು ಕೊಟ್ಟು , ಮಿಕ್ಕುಳಿವ ಹಣದಿಂದ ನಾಲ್ಕಾರು ವರ್ಷಗಳಲ್ಲೇ ಕೊeಟ್ಯಾಧಿಪತಿಗಳಾಗುತ್ತಾರೆ.


೩.            ಅಧಿಕಾರಿಗಳ ವರ್ಗಾವಣೆ ರಾಜಕೀಯದವರಿಗೆ ಕೋಟಿ , ಕೋಟಿ ಗಳಿಸುವ ಇನ್ನೊಂದು ಮಾರ್ಗ.  ತಮ್ಮ ಖಜಾನೆಗೆ ಹಣ ಸುರಿಯುವವರನ್ನೇ ಆಯಕಟ್ಟಿನ ಸ್ಥಳಗಳಿಗೆ ವರ್ಗಾಯಿಸುತ್ತಾರೆ.


ಈ ರೀತಿ ವಿಷ ವರ್ತುಲವೇ ನಿರ್ಮಿತಿಯಾಗಿದೆ. ಈ ವಿಷ ವರ್ತುಲ ಯಾವ ಪರಿ ಸಾಮಾಜಿಕ ವಿಶಣ್ಣತೆ ಸೃಸ್ಟಿಸಿದೆಯೆಂದರೆ  , ಐಶಾರಾಮೀ ಕಾರುಗಳಲ್ಲಿ ಓಡಾಡುವವರು, ಐಶಾರಾಮೀ ಬಂಗಲೆಗಳಲ್ಲಿ ವಾಸಿಸುವವರು , ಐಶಾರಾಮಿ ಮದುವೆ  , ಸುನ್ನತಿಗಳನ್ನು ಏರ್ಪಡಿಸುವವರನ್ನು ಕಂಡರೆ ಮನಸ್ಸಿನಲ್ಲಿಯೇ ರೇಜಿಗೆ ಹುಟ್ಟುವದು.  ರಸ್ತೆ ಬದಿಯ ದರೋಡೆಗಳಿಗೆ  ಈ ರೀತಿಯ ಗಳಿಕೆಯ ದರ್ಪದಿಂದ  ಮೋಜು ಮಾಡುತ್ತ ಜೀವನ ನಡೆಸುವವರ ಕೊಡುಗೆಯೇ ಅಧಿಕವಾಗಿದೆ. ಇದೇ ರೀತಿ ಜನ ಜೀವನದ ಸಮಾಜ ಅಸಹಾಯಕರನ್ನು ಸುಲಿಗೆ ಮಾಡುತ್ತ ಸಾಗಿದರೆ, ಒಂದೆರಡು ದಶಮಾನಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಕೊಂದು ಬದುಕುವ ಪರಿಸ್ಥಿತಿ ನಿರ್ಮಾಣವಾದೀತು !!!.  ಕೊಲೆ ಸುಲಿಗೆಗಳನ್ನು ಮಾಡಿದವರು ಪಾರಾಗುವಂತಹ ಕಾನೂನುಗಳು , ಕಾನೂನು ನಿರ್ಮಾತೃರಲ್ಲಿ  ಕೊಲೆ , ಸುಲಿಗೆಗಳ ಆರೋಪವನ್ನು ಹೊತ್ತ ಪ್ರತಿನಿಧಿಗಳು ,  ಆಳುವವರು, ಕಾನೂನು ನಿರ್ಮಾಪಕರು, ಕಾರ್ಯ ನಿರ್ವಹಿಸುವ ಅಧಿಕಾರ ವರ್ಗ ದ ಅನೈತಿಕ ಹೊಂದಾಣಿಕೆ  ಎಲ್ಲ ಸೇರಿ,  ಇಂದಿನ ಸಮಾಜವನ್ನು ಅಧೋಗತಿಗೆ ಸಾಗಿಸುತ್ತಿವೆ.

ಈ ರೀತಿ ವಿಚಾರಗಳು ಹೊರಹೊಮ್ಮಲು ಕಾರಣ, ಈ ವರದಿ. ನೀವೂ ಒಮ್ಮೆ ಓದಿ :
http://www.vijaykarnatakaepaper.com/Details.aspx?id=2734&boxid=235227578 


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
January 08 , 2013.

Monday, January 7, 2013

Vijaya Karnataka - Shri D Umapati Article

ಇಂದಿನ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ( January  07 , 2013 )  ಶ್ರೀ  ಡಿ . ಉಮಾಪತಿ ಯವರು ಒಂದು ಲೇಖನ ಬರೆದಿದ್ದಾರೆ. ಎಲ್ಲರೂ  ಓದಿ ಪ್ರತಿಕ್ರಿಯಿಸಬೇಕಾದ ಲೇಖನ.

http://www.vijaykarnatakaepaper.com/Details.aspx?id=2715&boxid=1249515


ನಾನು ಓದಿದಾಗ ನನಗೆ ಅನ್ನಿಸಿದ್ದು:


೧.           ಈ ಲೇಖಕರೆಲ್ಲ ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವವರು. ಯಾವುದೇ ಹಳೆಯ ಗ್ರಂಥಗಳಲ್ಲಿ ಇರಬಹುದಾದ ವಿಷಯಗಳನ್ನು ಅಧಿಕೃತವಾಗಿ ಟೀಕಿಸುವಾಗ , ಈ ಮಹನೀಯರು ಆ ಗ್ರಂಥಗಳನ್ನು ಓದಿರಬಹುದೇ   ಎಂಬ ಸಂಶಯ ಉಂಟಾಗುತ್ತದೆ. ಅಧಿಕೃತವಾಗಿ ಗ್ರಂಥದ ಯಾವುದೋ ಒಂದು ಘಟನೆಯನ್ನೋ , ಪರಿಚ್ಚೆeಧವನ್ನೋ ಉದಾಹರಿಸಿ , ಈ ಮಹನೀಯರು ವಿಶ್ಲೆeಶಿಸಿದಂತೆ  ಆ ಗ್ರಂಥದ ಅರ್ಥ ಎಂದು, ಜನಸಾಮಾನ್ಯ ಓದುಗರ ಅಭಿಪ್ರಾಯ ಮೂಡಿಸಲು ನ್ಯಾಯಯುತವಾಗಿ ಇವರು ಸಮರ್ಥರೆ ?


೨.           ದಿನಪತ್ರಿಕೆ ಲೇಖನ ಬರೆಯುವವರು ಇಂದು ಶೀಲಾಪಹರಣ ಎಂದೊಡನೆ ದ್ರೌಪದಿಗೋ  , ಸ್ತ್ರೀ ಶೋಷಣೆ ಎಂದೊಡನೆ ಶೂರ್ಫನಖಿಗೊe   ಅಣ್ಣ ತಮ್ಮಂದಿರೊ  ಎಂಬಂತೆ ಕಣ್ಣಿಗೆ ಕಟ್ಟುವಂತೆ ಅಕ್ಷರಗಳಿಂದ ಚಿತ್ರಿಸಿ , ಜನ ಸಾಮಾನ್ಯರ ಅಭಿಪ್ರಾಯ ರೂಪಿಸುತ್ತಾರಲ್ಲ ? ಇದು ಸಮಂಜಸವೇ ?



೩.         ಉದಾಹರಣೆಗೆ ನನ್ನಂಥವರು  ಕುರಾನನ್ನೋ, ಬೈಬಲ್ಲನ್ನೋ ಸರಿಯಾಗಿ ನಾಲ್ಕು ಪುಟಗಳನ್ನೂ ಓದದೆ , ಅಲ್ಲಿಇಲ್ಲಿ ಯಾವುದೋ ಮಹಾಶಯರ ಲೇಖನಗಳನ್ನೋ,  ಇಲ್ಲ ಭಾಸಣಗಳನ್ನೊe  ಕೇಳಿ , ನನ್ನ ಅಕ್ಷರ ಸಾಮರ್ಥ್ಯದಿಂದ ಕುರಾನಿನ ಯಾವುದೋ ಭಾಗವನ್ನೋ, ಬೈಬಲ್ಲಿನ ಯಾವುದೋ ಘಟನೆಯನ್ನೋ ಟೀಕಿಸಿದರೆ ಅದು ಸಮಂಜಸವೇ ?



ಹೀಗೆ ಬರೆದೆ ಎಂದು ಮತಾಂಧ ದುರಭಿಮಾನಿಗಳೇನೂ  ನನ್ನ ಪಕ್ಷ ವಹಿಸಬೇಕಾಗಿಲ್ಲ. ನನ್ನಂಥವರು  ಎಲ್ಲೂ ಸಲ್ಲುವವರಲ್ಲ. ಮುಚ್ಚು ಮರೆಯಿಲ್ಲದೆ ಬರೆದುಬಿಡುವವರು, ಮಾತನಾಡಿಬಿಡುವವರು ನಾವು. ನಿನ್ನೆ ಒಂದು ಅಸ್ಠಾವಧಾನ ಕಾರ್ಯಕ್ರಮಕ್ಕೆ ಹೋಗಿದ್ದೆ.  ಅಲ್ಲಿ  ಜ್ಞಾನಿ  ಅವಧಾನಿಗಳು,  ಪ್ರೇಕ್ಷಕರು ಅವಧಾನಿಗಳಿಗೆ ಯಾವುದೇ ಪ್ರಶ್ನೆಯನ್ನು  ಕೇಳಬಹುದು ಎಂದು ವಿಷಯದ ಮಡಿ ಮೈಲಿಗೆಯಿಲ್ಲದೆ ಉತ್ತರಿಸುತ್ತಿದ್ದರೆ , ಅಪ್ರಸ್ತುತ ಪ್ರಸಂಗಿ ಮಡಿ ಮೈಲಿಗೆಯಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಿ , ಈ ಅಪ್ರಸ್ತುತ ಪ್ರಸಂಗಿಯೇ ನಮಗೆಲ್ಲ ಅಪ್ರಸ್ತುತನಾದನಲ್ಲ ಎಂಬ ವಿಷಾದವಾಯಿತು.  ಅಂದ ಹಾಗೆ ನಾ ಕಳಿಸಿದ ಪ್ರಶ್ನೆ ಹೀಗಿತ್ತು :   " ಆರ್ಎಸ್ಎಸ್  ಮುಸ್ಲಿಂ ವಿಭಾಗವೊಂದನ್ನು ತೆರೆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತೆ ? " .    ಪ್ರಶ್ನೆಗೆ ಅವಕಾಶ ಸಿಗದೇ ಉತ್ತರ ಕುತೂಹಲವಾಗಿಯೆe
ಉಳಿಯಿತು.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ. 

Saturday, January 5, 2013

ಬೆಂಗಳೂರು ಭಾಷೆಯಲ್ಲಿ ತಿಪ್ಪೆ ಅಂದರೆ

ಇಂದು ತಿಪ್ಪೆಯ ಕುರಿತು ನಾಲ್ಕು ಸಾಲುಗಳನ್ನು ಬರೆಯೋಣ. ಬೆಂಗಳೂರು ಭಾಷೆಯಲ್ಲಿ ತಿಪ್ಪೆ ಅಂದರೆ
ಕಸ ಚೆಲ್ಲಿ ಗಬ್ಬೆದ್ದು ವಾಕರಿಕೆ ಬರುವಂತಹ ದೃಶ್ಯ . ಸಮಾಜದಲ್ಲಿ ಆಚೆ ಹೋದಾಗ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾವು ನೀವೆಲ್ಲ ಉಸಿರನ್ನು ಬಿಗಿಹಿಡಿದೋ ಇಲ್ಲ ಕರ ವಸ್ತ್ರವನ್ನು ಮೂಗಿಗೆ   ಹಿಡಿದೋ ಆ ಜಾಗದಿಂದ ಪಾರಾಗುತ್ತೇವೆ. ಈ ಪರಿಸ್ತಿತಿ ಅಲ್ಲಿ ಇಲ್ಲಿ ಅಂತೇನಲ್ಲ ಎಲ್ಲೆಡೆ ಸಾಮಾನ್ಯವಾಗಿಬಿಟ್ಟಿದೆ. ಅಂತೆ ಜನರು , ಮುಖಂಡರುಗಳು ಎಂದಿನಂತೆ ಬೆಳಿಗ್ಗೆ , ಮಧ್ಯಾಹ್ನ, ಸಾಯಂಕಾಲ   ದೇವರ ದರ್ಶನ ಮಾಡಿದಂತೆ , ತಿಪ್ಪೆಯ ದರ್ಶನ ಮಾಡಿ ಮುಂದೆ ಸಾಗುತ್ತಾರೆ ವಿನಃ , ಬದಲಾವಣೆಗೆ ಆದ್ಯತೆ ನೀಡುವದಿಲ್ಲ.


ಇದೇನು ಮಹಾ ಎಂದಿರಾ ?  ಅಲ್ಲೇ ಇರುವದು - ಎಲ್ಲೆಡೆ ತಿಪ್ಪೆ ದರ್ಶನ. ನಾನೀಗ ಎಂಟು , ಹತ್ತು ವರ್ಷಗಳಿಂದ ನಮ್ಮ ಸಮಾಜದ ಸಂಘಟನೆಯಾದ ಹವ್ಯಕ ಮಹಾಸಭೆಯ ಮಲೇಶ್ವರದ ವಿಘ್ನ ವಿನಾಯಕನ ದರ್ಶನಕ್ಕೆ ಆಗಾಗ ಹೋಗುತ್ತಿರುತ್ತೇನೆ.  ಮಹಾಸಭೆಯಿರುವದಂತೂ   ನಿಮಗೆ ತಿಳಿದ ವಿಷಯ. ಕಾರ್ಯಾಲಯದ ಮುಂಬಾಗ ದಿನದ ಹೆಚ್ಚಿನ ವೇಳೆ ಗೇಟಿನ ಬಳಿ ನಿಮಗೆ  ಅಸಹ್ಯವಾದ ತಿಪ್ಪೆ ದರ್ಶನವಾಗುತ್ತದೆ. ಸಾಮಾನ್ಯವಾಗಿ ವರ್ಷದ ಹೆಚ್ಚಿನ ದಿನಗಳಲ್ಲಿ ಸಭಾಭವನದಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳಿರುತ್ತವೆ. ಮದುವೆ , ಮುಂಜಿ ಶುಭ ಕಾರ್ಯಗಳಿರುವಾಗ ಊಟ ತಿಂಡಿ ನೀಡುವದು ಸಾಮಾನ್ಯ. ನಂತರ ಎಲ್ಲಾ ಆಹಾರ - ತಿಂದು ಬಿಟ್ಟ ಉಳಿಕೆಗಳು ( wastes ) ,
ಬಾಳೆ - ಎಂಜಲೆಲೆಗಳು  ಎಲ್ಲಾ ಗೇಟಿನ ಬಳಿ ಪ್ಲಾಸ್ಟಿಕ್ ಡಬ್ಬಿಯಲಿ ನರ್ತನ ಮಾಡುತ್ತಿರುತ್ತವೆ. ತಮ್ಮ ಇರುವಿಕೆಯನ್ನು ನೀವೇನಾದರೂ ಗುರುತಿಸದೆ ಮುಂದೆ ಹೋದೀರೆಂದು ಆಗಾಗ ಡಬ್ಬದಿಂದ ಈಚೆ ಇಣುಕುತ್ತ , ಸುರ ಸುಂದರಿಯಂತೆ ತನ್ನ ಸೌಂದರ್ಯವನ್ನೆಲ್ಲ ಲೋಕಕ್ಕೆ ರಾರಾಜಿಸುತ್ತಿರುತ್ತದೆ !!! ಎಷ್ಟೆಂದರೂ  ಸುಸಂಸ್ಕೃತ ಜನಾಂಗವಾದ   ಹವ್ಯಕ ಬ್ರಾಹ್ಮಣರ ಸಂಘಟನೆಯ ಮಹಾಸಭೆಯಾದ್ದರಿಂದ , ತಿಪ್ಪೆ ವಾಸನೆ ಹೊಡೆಯುವವರೆಗೆ ಇಟ್ಟಿರುವದಿಲ್ಲ   ಎಂಬುದೇ ಸಮಾಧಾನ. ಆದರೂ ಸಂಘಟಕರ ಕೈಮೀರಿ ( ಪಾಪ !!! ) ಆಗಾಗ ವಾಸನೆ ಬೀರಿ , ತನ್ನ ಇರುವಿಕೆಯತ್ತ ನಿಮ್ಮೆಲ್ಲರ ಗಮನ ಸೆಳೆಯುತ್ತದೆ.



ಈ ತಿಪ್ಪೆಯ ಭಾಗ್ಯ ನೋಡಿ !  ನಾವು ನೀವೆಲ್ಲ ಈ ತಿಪ್ಪೆಯ ಇರುವಿಕೆಗೆ , ನಾನು ಬಲ್ಲಂತೆ ಎಂಟು ಹತ್ತು ವರುಷಗಳ ಸಾಕ್ಷಿಯಾಗಿದ್ದೆeವೆ . ತಿಪ್ಪೆ ಎಷ್ಟೇ ಗಹ ಗಹಿಸಿ ನಕ್ಕರೂ ನಾವು ನೀವಾಗಲಿ ತಲೆ ಕೆಡಿಸಿಕೊಂಡಿಲ್ಲ.  ಯಾರಾದರು ತಲೆ ಕೆಡಿಸಿಕೊಂಡರೂ , ಎನೂ ಆಗದಯ್ಯಾ ಎಂದು ,    ಈ ಎಂಟು ಹತ್ತು ವರ್ಷಗಳಲ್ಲಿ ಬದಲಾದ ಅಧ್ಯಕ್ಷರು, ಉಪಾಧ್ಯಕ್ಷರು, ಖುರ್ಚಿಪ್ರಿಯರು,  ಕಾಸಿಗೆ  ಕೊಂಡನು ಕಸ್ತೂರಿ ಎಂದು ತುತ್ತೂರಿ ಊದುತ್ತಿರುವವ ಪಟಾಲಂ , ಇತ್ತ  - ಎತ್ತು ಎರೆಗೆ , ಕೋಣ ಕೆರೆಗೆ ಎಂಬ ಹೌದಪ್ಪಗಳ ತಲೆದುಗೂವಿಕೆ ಮಧ್ಯೆ ,  ಯಾರೇ ಕೂಗಾಡಲಿ  , ಎನ್ನ ನೆಮ್ಮದಿಗೆ ಭಂಗವಿಲ್ಲ ಎಂದು  ಶಾಶ್ವತವಾಗಿ ಮೆರೆಯುವವರ  ಜೊತೆ ಸಂಗಾತಿಯಾಗಿ  ನೆಲೆನಿಂತಿರುವ   ಈ ತಿಪ್ಪೆಯ ಭಾಗ್ಯವೋ ಭಾಗ್ಯ.



ಹೌದ್ರೀ  ಸುಮ್ಮನೆ ಮಾತನಾಡುತ್ತೀರಿ , ಪರಿಹಾರ ಹೇಳಿ ಎಂಬುವರಿಗೊಂದು ಮಾತು.  ಇವೆಲ್ಲ ನಮ್ಮ ವ್ಯವಸ್ತೆ ಜಡ್ಡು ಗಟ್ಟಿರುವದರ ದ್ಯೋತಕ. ಶೃಂಗರವಾಗಿ ರಚಿಸಿಹ ದೇವಮಂದಿರದಲ್ಲಿ  ಸೂಕ್ತ ರೀತಿಯಲ್ಲಿ ದೇವರೇ ಪ್ರತಿಷ್ಟಾಪನೆಯಾಗದಿದ್ದರೆ ಹೇಗೆ  ಅನಿಸಿಕೆ  ಹಾಗೆ, ಯಾವುದೇ  ಸಂಸ್ಥೆಯ   ಚೇತನ ಅಳೆಯುವದು  ಚಿಕ್ಕ ಚಿಕ್ಕ ವಿಚಾರದತ್ತ  ಎಷ್ಟು ಗಮನ ನೀಡುತ್ತಾರೆ, ಸಮಾಜದಲ್ಲಿ ಅತಿ ಕೆಳಸ್ಥರದಲ್ಲಿ  ಇರುವವರಿಗೆ ಅಂದರೆ ನಮ್ಮ ಹವ್ಯಕರಲ್ಲಿ ಆರ್ಥಿಕವಾಗಿ ಅತಿ ಕೆಳ  ಹಂತದಲ್ಲಿರುವವರಿಗೆ , ಕೇವಲ ಮಾತುಗಳ ಸ್ಪಂದನೆಯಲ್ಲದೆ, ಧೀರ್ಘಕಾಲ ಪ್ರಯೋಜನವಾಗಬಲ್ಲ ಯಾವ ಯಾವ ಕಾರ್ಯಕ್ರಮಗಳಿವೆ  ಎಂಬುದರ ಮೇಲೆ ಯಾವುದೇ ಸಂಘ -ಸಂಸ್ಥೆಗಳ   ಮೌಲ್ಯವನ್ನು ಅಳೆಯಲಾಗುತ್ತದೆ.  ನಮ್ಮ ಮಿತ್ರರೊಬ್ಬರು ಹೇಳುತ್ತಿದ್ದ ಮಾತು - ವರ್ಣಾಶ್ರಮ ರೀತ್ಯ ಅತಿ ಕೆಳ ಸ್ಠರದಲ್ಲಿರುವ ಜನಾಂಗದ ಸಂಘ , ಕೋಟಿ - ಕೋಟಿ ಮೌಲ್ಯದ ನೂರಾರು ಕಟ್ಟಡಗಳನ್ನು ಹೊಂದಿದೆ, ಆದರೆ ಈ  ಯುಗದಲ್ಲೂ   ಸಹ ಬ್ರಾಹ್ಮಣರನ್ನು ಅಂದರೆ ಈ ನನ್ನ ಮಿತ್ರರನ್ನು ಕಾಲು ಮುಟ್ಟಿ ಆ ಸದಸ್ಯರು ನಮಸ್ಕರಿಸುತ್ತಾರೆ .  ಈ ರೀತಿ ಶ್ರೇಷ್ಠ ಜನಾಂಗವೊಂದಕ್ಕೆ ಸೇರಿದ ನಮ್ಮ ಜನ ಪ್ರತಿನಿಧಿ ಸಂಘಟನೆಗೆ ಚಿಕ್ಕ ಚಿಕ್ಕ ವಿಚಾರಗಳತ್ತ, ಆರ್ಥಿಕವಾಗಿ ಹಿಂದುಳಿದು ಬದುಕುತ್ತಿರುವ  ಸದಸ್ಯರತ್ತ , ಅವರ ಅವಲಂಬಿಗಳತ್ತ  ಸೂಕ್ತ  ಗಮನವಿeಯಲಾಗದಿದ್ದುದು  ವ್ಯಕ್ತ ಪಡಿಸಲಾಗದ ವಿಷಾದದ ಸಂಗತಿ.



ಇನ್ನು ತಿಪ್ಪೆಗೆ ಪರಿಹಾರ. ಹವ್ಯಕ ತಿಪ್ಪೆಗೆ ಪರಿಹಾರ ಸುಲಭ. ಯಾಕೆಂದರೆ ನಮ್ಮಲ್ಲಿ ತಿಪ್ಪೆಗಳ ಮಧ್ಯೆಯೂ ಎಲೆಮರೆಯ ಕಾಯಿಯಂತೆ ಬದುಕುವ ಸಾವಿರಾರು ಶುದ್ಧ, ಸಕಾರಾತ್ಮಕ ಚಿಂತನೆಯ ಹವ್ಯಕ ಚೇತನಗಳಿವೆ. ಈ ಚೇತನಗಳನ್ನು ಬಳಸಿ , ಸಂಘಟನೆಯನ್ನು ಬೆಳಗಿಸುವ ಕಾರ್ಯವಾಗಬೇಕಾಗಿದೆ ಅಷ್ಟೇ .  ಈ ಮೇಲೆ ಹೇಳಿದ ಕಣ್ಣು ಕುಕ್ಕುವ ತಿಪ್ಪೆಗೆ ಸುಲಭ ಪರಿಹಾರ ಇಂತಿದೆ. ಯಾವ ಪ್ರಮಾಣದಲ್ಲಿ ತಿಪ್ಪೆ ದಿನಾಲೂ ಸೇರುತ್ತದೆಯೋ ಅದಕ್ಕಿಂತ ಜಾಸ್ತಿ ಹಿಡಿಸಬಲ್ಲ ದೊಡ್ಡ ಪ್ರಮಾಣದ ಪ್ಲಾಸ್ಟಿಕ್
ಡಬ್ಬದಲ್ಲಿಟ್ಟು ಸರಿಯಾದ ಮುಚ್ಚಳ ಹಾಕಿ , ಈಗಿನಂತೆ ಕಸ ಎತ್ತುವವರಿಗೆ ವಿಲೇವಾರಿ ಮಾಡಿದರಾಯಿತು. ಒಳಗಡೆ ಎಲ್ಲೋ ಕತ್ತಲೆ ಮೂಲೆಯಲ್ಲಿ ಈ ತಿಪ್ಪೆರಾಯನನ್ನು ಸ್ಠಳಾಂತರಿಸಿದರಾಯಿತು . ಈ ರೀತಿ ಚಿಕ್ಕ ಪುಟ್ಟ ವಿಚಾರಗಳು ಹೊಳೆಯದಂತಹ ಶ್ರೇಷ್ಠ ??? ರೇನೂ ಈ ಎಂಟು ಹತ್ತು ವರುಷಗಳಲ್ಲಿ ನಮ್ಮನ್ನು ಮನ್ನಡೆಸುತ್ತಿಲ್ಲ. ಯಾರೋ ಪರಿಹಾರ ಸೂಚಿಸಿದಾಗ ಅದನ್ನು ಒಪ್ಪಿ ಬದಲಾವಣೆ ತರಲು ಅಡ್ಡ ಬರುವ ಅಹಂಭಾವವೆ ನಮ್ಮ ಸಮಾಜಕ್ಕಿರುವ ದೊಡ್ಡ ಶಾಪ.



ನಿಮ್ಮ ಬಿಚ್ಚು ಮನಸ್ಸಿನ ಅನಿಸಿಕೆ ಹೇಳಿ. ನನ್ನ ಅಕ್ಷರಗಳನ್ನು ಖಂಡಿಸಿ . ಹೊಗಳಿಕೆಯೇ ಇರಲಿ ತೆಗಳಿಕೆಯೆe  ಬರಲಿ , ಸಮ ಚಿತ್ತದಿಂದ ಸ್ವೀಕರಿಸಲಾಗುವದು. ಆದರೆ ಬದಲಾವಣೆ ತರುವ ಸ್ಥಾನದಲ್ಲಿ ನಾನಿಲ್ಲ.  ಸಾಗರ( ಸಮುದ್ರ ) ದಲ್ಲೊಂದು ಬಿಂದಿಗೆ ಪ್ರಮಾಣದ ನೀರನ್ನು ಎರೆಯುವಂತೆ , ಈ ಅಕ್ಷರಗಳನ್ನು    ಜೋಡಿಸಿದ್ದೇನೆ.  ಸ್ವೀಕರಿಸಿ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ,  ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 06 , 2013.

Wednesday, January 2, 2013

" ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೇ ಕಾಣೆಯಾಗುತ್ತಿದ್ದಾರಾ ?!"

ವಿ. ಭಟ್ ರಿಗೆ ವಂದನೆಗಳು.

ತಮ್ಮ ಲೇಖನ  " ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರೇ ಕಾಣೆಯಾಗುತ್ತಿದ್ದಾರಾ ?!"  ಓದಿದೆ.

ನಿಜಕ್ಕೂ ಸತ್ಯ ,  ಪತ್ರಿಕಾ ಗೋಷ್ಠಿಯಲ್ಲಿ  ಹಾಜರಾತಿ  ಸಂಖ್ಯೆ ಜಾಸ್ತಿಯಾಗುತ್ತಿದೆ. ಪತ್ರಿಕಾಕರ್ತರು ಕಾಣೆಯಾಗುತ್ತಿದ್ದಾರೆ.  ಇಂದಿನ ಸಮಾಜ ಬೇರೆ ಬೇರೆ ಇಸಂ ಗಳಲ್ಲಿ ಹಂಚಿ ಹೋದಂತೆ ಪತ್ರಿಕಾ ಪ್ರಪಂಚದಲ್ಲೂ ನವ ನವೀನ , ತರಾ ತರಿ -  ತಾರೆ  ವಾರೆ   ಪಂಗಡಗಳು ಹುಟ್ಟಿಕೊಂಡು, ಮೇಲಾಟಕ್ಕೆ ತೊಡಗಿಕೊಂಡಿವೆ.

ಇಲ್ಲೂ ಬಾಕ್ಸ್ ಥಾಟ್ ( box  thoughts )ಗಳೇ ದಿನದ ಆಟಗಳಾಗಿವೆ.  ಬಾಕ್ಸ್ ಆಚೆ ಯೋಚಿಸುವವರಿಗೆ ಉಳಿಗಾಲವಿಲ್ಲದ ( survival  ) ವಾತಾವರಣ ನಿರ್ಮಾಣವಾಗಿದೆ.  ಜಾತಿ - ಧರ್ಮ ಪಂಗಡಗಳ ಕಪಿ ಮುಷ್ಟಿಯಲ್ಲಿ  ಸಿಕ್ಕಿರುವ ಪತ್ರಿಕಾರಂಗ , ಅದೇ ರೀತಿಯ ವಿಚಾರಧಾರೆಯಲ್ಲಿ ಹಂಚಿ ಹೋಗಿರುವ ಓದುಗ ಸಮಾಜದಿಂದ ಪ್ರೋತ್ಸಾಹಿತವಾಗುವದರಿಂದ ಪತ್ರಿಕೆಯೊಂದರ ಪ್ರಸಾರ ಸಂಖ್ಯೆಯಲ್ಲೂ  ಹೇಳಿಕೊಳ್ಳುವಂತಹ  ಬದಲಾವಣೆ ನಿರೀಕ್ಷಿಸುವದು ಅಸಾಧ್ಯ.  ಬದಲಾವಣೆಗಳೆeನಿದ್ದರೂ ಸ್ವಲ್ಪ ಪ್ರಮಾಣದಲ್ಲಾದಿತೆe ವಿನಃ, ಅಗಾಧ ಬದಲಾವಣೆ ಅಸಾಧ್ಯ.      

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ. 
Jan 03 , 2013.

Tuesday, January 1, 2013

ಅದಮ್ಯ ಚೇತನ    -   ಚೇತನದೊಂದಿಗೆ ಚಿಂತನೆ ಬರಲಿ.


" ಅದಮ್ಯ ಚೇತನ " ಮೊದಲನೆಯ ದಿನದ ಕಾರ್ಯಕ್ರಮಕ್ಕೆ ಹೋಗಿದ್ದೆ. ( ೩೦.೧೨.೨೦೧೨ ). ಬಹು
ವಿಜ್ರಂಭಣೆಯ ಕಾರ್ಯಕ್ರಮ.  ಸಿರಿವಂತರ  ಅಂದರೆ ಕರೋಡಪತಿಗಳ ಮನೆಯ ಮದುವೆ ಪಂಚತಾರ ಹೋಟೆಲ್ಗಳಲ್ಲಿದ್ದಂತೆ. ಇಲ್ಲಿ ಸಾಮಾನ್ಯರಿಗಿಲ್ಲ ಮರ್ಯಾದೆ.  ಸಿರಿವಂತರಿಗೆ,  ಮುಖ ಪರಿಚಯವುಳ್ಳವರಿಗೆ, ಮಂತ್ರಿ ಮಾಗಧರ ಪಟಾಲಂ ಗಳಿಗೆ ರಾಜಮರ್ಯಾದೆ.  ಪಬ್ಲಿಕ್ ಎಂಬ ನಾಮಾಂಕಿತರಿಗೆ  ರೈಲ್ವೆ ಯವರೇ ಕಿತ್ತೊಗೆದ ಮೂರನೆ ದರ್ಜೆ ವೈಭೋಗ !


ಎರಡು ಲಕ್ಷ ಮಕ್ಕಳು, ಸರಕಾರೀ ಶಾಲೆ ಮಕ್ಕಳಿಗೆ ಮದ್ಯಾಹ್ನ ಊಟದ ಸರಬರಾಜು ಎಂಬ ಹೆಗ್ಗಳಿಕೆಯನ್ನೇ ಪುಂಖಾನುಪುಂಕವಾಗಿ ಊದುತ್ತಾರೆ. ಹೇಳಿದ್ದನ್ನೇ ಹೇಳುವದು, ಯಾರೊಬ್ಬರನ್ನೊe  ಖುಷಿ ಪಡಿಸುವ ಧಾವಂತದಲ್ಲಿ , ಫುಡ್ ಪಾಯಿಸನ್  ಆಗದಂತೆ  ಊಟ ನೀಡುತ್ತಿರುವದೆ ವಿಶೇಷ ಎಂದು ಮಂತ್ರಿಗಳೂ ಬಾಯಿತುಂಬ ಹೇಳುತ್ತಾರೆ. ಒಂದು ಚೂರೂ ನಾಚಿಕೆಯಿಲ್ಲದಂತೆ , ಸರಕಾರದಿಂದಾಗದ ಕಾರ್ಯಕ್ರಮ , ಮಾಡುತ್ತಿದ್ದಾರೆ ಎಂದು ಘಂಟಾನುಘೋಶದಿಂದ  ಊದುತ್ತಾರೆ.  ಇಷ್ಟೊಂದು ಅಧಿಕಾರ , ಹಣ ಸಂಪತ್ತು  ತಮ್ಮ ಸುಪರ್ದಿಯಲ್ಲಿ ಪ್ರಜೆಗಳೆಲ್ಲ ಕೊಟ್ಟಿ ರುವಾಗ ತಾವೇನೂ ಮಾಡಲಿಲ್ಲ , ಇವರಿಗೇ ಎಲ್ಲ ಅವಕಾಶಗಳನ್ನು ಬಿಟ್ಟು ಬಿಟ್ಟಿದ್ದೇವೆ  ಎಂಬುದನ್ನು ಮುಗ್ಧತೆಯಿಂದ ಸಾರ್ವಜನಿಕವಾಗಿ , ತಮಗೆ ಅರಿವಾಗದಂತೆ  ಅಲವತ್ತುಕೊಳ್ಳುತ್ತಾರೆ,  ಅತಿ ಪ್ರಭಾವಿಯಾಗಿರುವ ಮಂತ್ರಿಗಳು.  ಸಾಮಾನ್ಯ ಪ್ರಜೆಯು ಯೋಚಿಸುವಂತೆ, ಈ ಅಗಾಧವಾದ ಸ್ತುತ್ಯ ಕಾರ್ಯಗಳಿಗೆ ಹಣದ ಮೂಲ ಯಾವುದು, ಯಾವ ಪ್ರತಿಫಲಗಳನ್ನಪೆeಕ್ಷಿಸಿ ಈ ಪ್ರಮಾಣದ ಹಣ ಹರಿದು ಬರುತ್ತದೆ ಎಂಬ ಕಡೆ ಯೋಚಿಸದೆ ಇರುವ ಜಾಣತನ  ಅಥವಾ  ಯೋಚಿಸಿದರೂ ಹೇಳದಂತಹ ಅಸಹಾಯಕತೆಯ ಬಂಧನದಲ್ಲಿ ಇರಬಹುದಾದ ಮಂತ್ರಿವರ್ಯರ ಭಾಷಣ ಕೇಳುವದೇ ಅಸಹ್ಯವೆನಿಸುವದು.


ಅದಮ್ಯ ಚೇತನದ ಕಾರ್ಯಗಳು ಹೇಳುವಂತಹ, ಕಾಣುವಂತಹ ಥಳುಕು ಬಳುಕಿನ ಆಚೆ ಹೇಳಲಾಗದ ಸತ್ಯಗಳಿವೆ ಎಂಬುದು ಒಂದೆರಡು ಘಟನೆಗಳಿಂದ ತಿಳಿಯಿತು. ಸರಕಾರೀ ಶಾಲೆಯಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಮಾಡಿಸಿದ್ದೇವೆ, ಶುಚಿತ್ವ ಕಾಪಾಡುವಂತೆ ವ್ಯವಸ್ತೆ ಮಾಡಿದ್ದೇವೆ , ಸರಕಾರೀ ಶಾಲೆಗಳಲ್ಲಿ ಮಾಡಿದ್ದೇವೆ ಎಂದು ಸುಂದರವಾದ ಕರಪತ್ರದೊಂದಿಗೆ ವ್ಯವಸ್ತಿತವಾಗಿ ವಿವರಣೆ ನೀಡಿದ ಕಾರ್ಯಕರ್ತರನ್ನು , ಮುಗ್ದವಾಗಿ ಎಷ್ಟು ಶಾಲೆಗಳಲ್ಲಿ ಮಾಡಿದ್ದೀರಿ  ಎಂದು   ಪ್ರಶ್ನಿಸಿದಾಗ ಬಂದ ಉತ್ತರ , ಪೆಚ್ಚು ಮೋರೆಯೊಂದಿಗೆ - " ನಾಲ್ಕು ಶಾಲೆಗಳು ".   ಯೋಚಿಸಿ ಬೆಂಗಳೂರಿನ ಜನಸಂಖ್ಯೆ   ಹತ್ತಿರ  ಹತ್ತಿರ  ಎಂಭತ್ತು ಲಕ್ಷ , ಸರಕಾರೀ ಶಾಲೆಗಳು ಸಾವಿರಾರು ಇವೆ , ಬಸವನಗುಡಿ ಸುತ್ತ ಮುತ್ತ ನೂರಾರು ಸರಕಾರೀ ಶಾಲೆಗಳಿರಬಹುದು,  ನಾಲ್ಕು ಶಾಲೆಗಳಿಗೆ ಶೌಚಾಲಯ ನಿರ್ಮಿಸಿ, ಈ ಕೆಲಸವನ್ನು ಜನತೆಗೆ ತಿಳಿಸಲು ಮಾಡಿದ ಮುದ್ರಣ ವೆಚ್ಚವೇ ಹತ್ತಾರು ಸಾವಿರವಾಗಿರಬಹುದು.  ಹೆಚ್ಚಿನ ವಿಷಯ ಕೇಳಿ ಅವರ ಉತ್ಸಾಹ ಕುಗ್ಗಿಸುವ ಮನಸ್ಸು ಬರಲಿಲ್ಲ.


ಇನ್ನು ಪ್ರದರ್ಶನಗಳು . ಆ ಶಂಕರನಿಗೆ ಪ್ರಿಯವಾದದ್ದು. ನಮ್ಮ ದೇವ ದೇವತೆಗಳ ಗೊಂಬೆಗಳು ಬಣ್ಣ ಕಾಣದೆ, ಕೇಶ ಶ್ರಂಗಾರ ಕಾಣದೆ ವರ್ಷಗಳೇ ಉರುಳಿ ಹೋಗಿವೆ.  ಹಣದ ಭರಾಟೆಯ ಈ ದಿನಗಳಲ್ಲಿ , ಕಾಲ ಕಾಲಕ್ಕೆ ಹೊಸತನ ಮೂಡಿಸುವ ಪುರುಸೊತ್ತಾದರೂ ಎಲ್ಲಿ ?  ಎಂಬಂತಹ   ಪ್ರಶ್ನೆಗಳನ್ನು  ಪ್ರದರ್ಶನಕ್ಕೆ ಅಸಹಾಯಕವಾಗಿ ನಿಂತಿರುವ ನಮ್ಮ ದೇವ ದೇವತೆಗಳು  ಕೇಳುತ್ತಿರುವ೦ತಿವೆ . ವಿದೇಶಿ ಪ್ರವಾಸಿಗರನ್ನು ಎಳೆದು ತಂದರೆ ಪ್ರದರ್ಶನ ಬಹು ಹೊಗಳಿಕೆ ಕಾಣಬಹುದೇನೋ ?


ಬಂದವರಿಗೆಲ್ಲ ಊಟದ ವ್ಯವಸ್ತೆ ಇತ್ತು. ಮಂತ್ರಿ ಮಾಗಧರಿಗೆ ವಿಶೇಷ ವ್ಯವಸ್ತೆ . ಇಂದಿನ  ಸಾರ್ವಜನಿಕ ಜೀವನದ ಸಹಜ ಭಾಗ ಎಂದುಕೊಳ್ಳೋಣ.  ಇಲ್ಲೂ " ಪಬ್ಲಿಕ್ ಜನ "  ಎಂದು ಒಂದು ಮೂಲೆಯಲ್ಲಿ ಸಾರ್ವಜನಿಕ ದಾಸೋಹಕ್ಕಿಂತ ಕಡಿಮೆ ದರ್ಜೆಯ ಅನ್ನ ಸಾಂಬಾರು ಜೊತೆಗೆ ನೀರು ಮಜ್ಜಿಗೆ ಸಾಥ್ !!!. ಬಿದ್ದೆನೋ ಎದ್ದೆನೋ ಎಂದು ಓಡುವ ಪಾಯಸ ಬೇರೆ !!!!!!

ನೀವು ಹೋಗಿಲ್ಲವೇ ಪಾಯಸ ಸವಿಯಲು !!!!!


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
January 01 , 2013.