Sunday, January 27, 2013

ಪಂಡಿತ ಗಣಪತಿ ಭಟ್, ಹಾಸಣಗಿ

ಆ ಸನಾತನಿ ಹವ್ಯಕ ಮಾತಾ ಪಿತೃಗಳು ಅದೆಷ್ಟು ಭಾಗ್ಯಶಾಲಿಗಳು ?  ಆ ಶಿಷ್ಯರು ಅದೆಷ್ಟು ಅದೃಷ್ಟವಂತರು ?  ತನ್ನ ಒಡಲಲ್ಲಿ ಸಂಗೀತ ಸುಮವನ್ನರಳಿಸುತ್ತಿರುವ ಈ ಸಂಗೀತಾರಾಧಕನನ್ನು  ಕಂಡು ಆ ನಿಸರ್ಗ ಮಾತೆ ಅದೆಷ್ಟು ಸಂತಸಪಡುತ್ತಿರಬಹುದು ?  ಕೈಹಿಡಿದ  ಸತಿ, ತಂದೆಯನ್ನೇ ಅನುಸರಿಸುತ್ತಿರುವ ಮಗ ಅದೆಷ್ಟು ಪುಣ್ಯಶಾಲಿಗಳು ?  ಗಾನ ಗಂಗೆ ಗಂಗು ಮಾತೆಯ  ಗಾನಸುಧೆಯನ್ನು ಅಜರಾಮರವಾಗಿಸಲು ಜನ ಮನದಿಂದ ಪುರಸ್ಕೃತವಾಗಿ ಮುಂದಾಳತ್ವ  ಹಿಡಿದಿರುವ   ವರ್ತಮಾನದ  ಹಿಂದುಸ್ತಾನಿ ಸಂಗೀತ ಮಾಂತ್ರಿಕ ನಮ್ಮೊಡನೆ ನಮ್ಮವನು ಎಂಬುದು ಅದೆಂತಹ ಹೆಮ್ಮೆ ?  ದೇವಗುರುವಿನಂತಹ ರಾಜಗುರು ಗುರುವಾಗಿ ಪಡೆದ ಈ ಶಿಷ್ಯನ ಗಾನ ಮಧುವನ್ನು ಹೀರುವ ದುಂಬಿಯಾಗಲು ನಾವೆಷ್ಟು ಸಾನಂದಿತರು ?

ಹೀಗೆ ಅಕ್ಷರ ಮಾಲೆ ರಚಿಸಿದಷ್ಟೂ ಕೊರತೆಯಾಯಿತೋ ಎಂಬಂತೆ ನಮ್ಮನ್ನೆಲ್ಲ ತಮ್ಮ ಗಾನ ಸುಧೆಯಿಂದ ಗಂಧರ್ವ ಲೋಕಕ್ಕೆ ಕರೆದೊಯ್ಯುವ ಪಂಡಿತ ಹಾಸಣಗಿ ಭಟ್ಟರ ಗಾಯನ ಇಂದು ಬೆಳಿಗ್ಗೆ ಏಳುವರೆಗೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಟ್ಟಿತ್ತು.


ಗಾನ ಮಾಧುರ್ಯ ರಸಾಸ್ವಾದನೆಗೆ ಸೇರಿದ ಅಭಿಮಾನಿಗಳಿಂದ ಕಿಂಚ ಹಾಲ್ ತುಂಬಿ ಹೋಗಿತ್ತು. ಸಪ್ತಕ ಹಾಗು ಗೆಳೆಯರ ಬಳಗ ಎಂಬೆರಡು ಸಂಗೀತ ಸಮರ್ಪಣೆಗೆ ತೊಡಗಿಕೊಂಡ ಸಂಸ್ತೆಗಳು ಪ್ರಾಯೋಜಿಸಿದ ಸ್ವರ ಸುಪ್ರಭಾತ ಮಾಲಿಕೆಯ ಎರಡನೆ ಈ ಕಾರ್ಯಕ್ರಮವನ್ನು  ಬೈರಾಗಿ ರಾಗದಿಂದ ಶ್ರೀಯುತ ಗಣಪತಿ ಭಟ್ಟರು ಆರಂಭಿಸಿ ಸತತ ಐವತ್ತೆರಡು ನಿಮಿಷಗಳ ಕಾಲ ಸ, ರಿ, ಗ, ಮ ....... ನಾದ ಸರಸ್ವತಿಯ ನಾದ ಸುಧೆ ಹರಿಸಿದರು. ಜೊತೆಗೆ ಪಂಡಿತ ವಿಶ್ವನಾಥ್ ನಾಕೋಡ್  ರವರ ಬೆರಳುಗಳು ತಬಲಾದಲ್ಲಿ ತಾಳ ಸರಸ್ವತಿಯ ವಿವಿಧ ಸ್ವರಗಳನ್ನು ಸ್ಫುರಿಸಿದವು . ಪಂಡಿತ ವ್ಯಾಸಮುರ್ತಿ   ಕಟ್ಟೆಯವರು  ಹಾರ್ಮೋನಿಯಮ್ ದಲ್ಲಿ   , ತಂಬೂರದಲ್ಲಿ ವಿಶಾಲ್ ಹೆಗಡೆ, ವಸಂತ್ ಭಟ್ ಬೆರಗುಗೊಳಿಸುವ ಮೆರಗು ನೀಡಿದರು .


ನಂತರ ಅಹಿರಾವತಿ ರಾಗದಲ್ಲಿ , " ಚಂಚಲ ನಯನಾ ....................  ನೇಹಲ ಗಾಯಿ .................... ಇಪ್ಪತ್ತು ನಿಮಿಷ ಗಳಷ್ಟು   ಕಾಲ  ಗಾಯನಾಸಕ್ತರನ್ನು  ಸೆರೆಹಿಡಿದರು.


ಮುಂದೆ " ಭಜರೆ  ಅಭಿಮಾನ ....................."  ಖಿಲಾಸ್ ಖಾನೆ ಕೋಟಿ ರಾಗದಲ್ಲಿ  .


  " ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಪುರುಷೋತ್ತಮಾ .............................
....................................................... ಶ್ರೀ ಕೃಷ್ಣಾ ........................... ಎಂದು ಕೃಷ್ಣ ಭಕ್ತಿ ಸುಧೆಯಾಗಿ ಹರಿದಾಗ ಬೆಳಗ್ಗಿನ ಒಂಭತ್ತುವರೆಯಾಗಿತ್ತು .  ತದನಂತರ "  ಬನ್ಸಿ ವಾಲೆನೇ ಮನಮೋಹಾ ...............................  ಬೋಲೆ ಬೋಲೆ ಮೀಠಿ ಲಾಹೀ .................. "  ಮುಗಿದಾಗ ಗಡಿಯಾರದ ಮುಳ್ಳು ಹತ್ತರ ಮೇಲಿತ್ತು.


Thanks  to  Mr .G .S.Hegde   ಹೇಳುತ್ತಾ,  ಭಾನುವಾರದ ಬೆಳಗನ್ನು ಸುಂದರವಾಗಿಸಿ, ಮನಸ್ಸನ್ನು ಮುದಗೊಳಿಸಿದ  ಪಂಡಿತ ಗಣಪತಿ ಭಟ್,  ಹಾಸಣಗಿ ಯವರನ್ನು ಮನದಲ್ಲೇ ವಂದಿಸುತ್ತ ಆಚೆ ಬಂದಾಗ ಎಂದಿನ ಜನ ಜೀವನ ಆರಂಭಗೊಂಡಿತ್ತು  .


ಹರಿಹರ ಭಟ್, ಬೆಂಗಳೂರು.

hariharbhat .blogspot .com 

Jan  27  , 2013 .

No comments:

Post a Comment