Sunday, February 17, 2013

" ಅಪ್ಪ ಅಂದ್ರೆ ಆಕಾಶ " , ಮಣಿಕಾಂತ್


ನಿಮ್ಮೊಡನೆ   ಒಂದು ವಿಚಾರ ಹಂಚಿಕೊಳ್ಳುತ್ತೇನೆ.


ಇಂದಿನ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದ ಪತ್ರಿಕೆಗಳು, ದೃಶ್ಯ  ಮಾಧ್ಯಮಗಳು ಕಾರ್ಯಕ್ರಮ  ಸಂಘಟಕರಿಗೆ  ಸಾಕಷ್ಟು ಪ್ರಚಾರ ಕೊಟ್ಟು ಪ್ರೋತ್ಸಾಹಿಸುವದಾದರೂ , ಪ್ರೇಕ್ಷಕರಿಗೆ , ಮಾಧ್ಯಮಗಳ ಅಭಿಮಾನಿಗಳಿಗೆ ಸೂಕ್ತ ನ್ಯಾಯವನ್ನೊದಗಿಸುತ್ತಿಲ್ಲಾ ಎಂಬುದು ನಿರ್ವಿವಾದ ಸಂಗತಿ.



ಹುಬ್ಬೇರಿಸಿದಿರಾ? ನನ್ನ ಅನುಭವಗಳನ್ನು ಕೇಳಿ ಧೀರ್ಘವಾಗಿ ಯೋಚಿಸಿ. ನನ್ನ ವೈಯಕ್ತಿಕ ಲಾಭ - ನಷ್ಟದ ವಿಚಾರ ಇಲ್ಲಿಲ್ಲ. ಸರ್ವೇ ಸಾಮಾನ್ಯ ಸಾಮಾಜಿಕ ಜೀವಿಯೊಬ್ಬ ಒಳ್ಳೆಯ ಕಾರ್ಯಕ್ರಮವೊಂದನ್ನು ತಪ್ಪಿಸಿಕೊಂಡರೆ ಅಥವಾ ಪೇಪರ್ ಗಳಲ್ಲಿ ಬರುತ್ತದಲ್ಲಾ, ಟಿ.ವಿ ಯಲ್ಲಿ ನೋಡುತ್ತೇವಲ್ಲಾ ಎಂದು ಕಾರ್ಯಕ್ರಮಕ್ಕೆ ಹೋಗುವದನ್ನು ಉಪೇಕ್ಷಿಸಿದರೆ ಯಾವ ರೀತಿ ತಮಗೆ ತಾವೇ ಹಾನಿಯನ್ನುಂಟುಮಾಡಿಕೊಳ್ಳುತ್ತಾರೆ   ಎಂಬುದನ್ನು ಎರಡು ಅನುಭವಗಳಿಂದ ಹೇಳಲಿಚ್ಚಿಸುತ್ತೇನೆ.



ನಿಮಗೆಲ್ಲ ಗೊತ್ತಿರುವ , ಓದಿ ತಿಳಿದಿರುವ  " ಅಪ್ಪ ಅಂದ್ರೆ ಆಕಾಶ " , ಮಣಿಕಾಂತ್ ರವರ ಪುಸ್ತಕ ಬಿಡುಗಡೆ ಸಮಾರಂಭ , ರವೀಂದ್ರ ಕಲಾಕ್ಷೇತ್ರದಲ್ಲಿ   ಕಾರ್ಯಕ್ರಮ.  ಎಚ್  .ಎಸ್.ವೆಂಕಟೇಶ ಮೂರ್ತಿ , ಸಿನೇಮಾ  ನಟಿ ಭಾವನಾ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಸಿನೇಮಾ ನಿರ್ದೇಶಕ ಗುರು ಪ್ರಸಾದ ಸಾಂಗತ್ಯದಲ್ಲಿ.



ಕನ್ನಡ ಪ್ರಭ ಪತ್ರಿಕೆ ( 18.02.2013 ) ರ ಪುಟ 3 ರಲ್ಲಿ ಬಂದ ವರದಿ ನೀವೆಲ್ಲ ಓದಿರುತ್ತೀರಿ. ಓದಿಲ್ಲದಿದ್ದವರೊಮ್ಮೆ ಓದಿ ಈ ನನ್ನ ಮಾತುಗಳನ್ನು ಕೇಳಿಸಿಕೊಂಡರೆ ನಾನು ತೇಲಿ ಬಿಡುತ್ತಿರುವ ವಿಚಾರ ಹೆಚ್ಚು ಸ್ಪಷ್ಟವಾದೀತು. ವಿಶ್ವೇಶ್ವರ ಭಟ್ಟರು ಚತುರ ಮುಂದಾಳತ್ವ   ಗುಣಗಳುಳ್ಳವರೆಂಬಲ್ಲಿ ಎರಡು ಮಾತಿಲ್ಲ. ಹಾಗೆಯೇ ಮೇಧಾವಿ ಮತ್ತು ಉತ್ತಮವಾಗಿ ವಿಷಯ ಪ್ರಸ್ತುತ ಪಡಿಸುವ ಮಾತುಗಾರರು. ಅವರ ಬರಹಗಳನ್ನೋದಿ ಬಹಳ ಅಭಿಮಾನಿಗಳಿದ್ದಾರೆಂಬುದೂ  ಅಷ್ಟೇ ಸತ್ಯ. ಆದರೆ ನಿನ್ನೆಯ ಅದ್ಭುತ ಕಾರ್ಯಕ್ರಮ , ಅದ್ಭುತ ಮಾತುಗಳನ್ನಾಡಿದ ವಾಗ್ಮಿಗಳ ಆಶಯ , ರಂಜನೀಯವಾಗಿ ಅಷ್ಟೇ ಗಂಭೀರವಾಗಿ ಗಂಭೀರ ವಿಷಯಗಳನ್ನು ಹೊರಹಾಕಿದ ಮಾತುಗಳು ಇವೆಲ್ಲವುಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವನಿಗೆ ಕಾರ್ಯಕ್ರಮದ ವರದಿ ನಿಸ್ತೇಜವಾದ ಅನುಭವ ನೀಡುವದೆಂಬುದೂ ಅಷ್ಟೇ ಸತ್ಯ. ಹತ್ತರ ಜೊತೆ ಹನ್ನೊಂದು ಎಂಬಂತೆ ಪ್ರಕಟವಾದ ಈ ವರದಿ , ಕಾರ್ಯಕ್ರಮಕ್ಕೆ ಬರದೆ, ಮನೆಯಲ್ಲೇ ಉಳಿದು ಕಾರ್ಯಕ್ರಮ ಹೇಗಾಯಿತೆಂಬ ಕುತೂಹಲವುಳಿಸಿಕೊಂಡ   ಸಾಹಿತ್ಯಾಭಿಮಾನಿಗಳಿಗೆ ನ್ಯಾಯ ಒದಗಿಸಿಲ್ಲ ಈ ವರದಿ ಎಂದು ಧೃಡವಾಗಿ ಹೇಳಬಹುದು.   ಹೇಗೆ  ಎಂದಿರಾ ? ಓದಿ ಕೆಳಗಿನ ನನ್ನ ವರದಿ.



ಬೆಳಿಗ್ಗೆ ೧೦.೩೦ ಕ್ಕೆ ನಿಗದಿಯಾದ ಕಾರ್ಯಕ್ರಮ ಹನ್ನೊಂದಕ್ಕೆ ಉಪಾಸನಾ ಮೋಹನ್ ತಂಡದ ಸುಗಮ ಸಂಗೀತದೊಂದಿಗೆ ಆರಂಭವಾಯಿತು. ಉಪಾಸನಾ ಮೋಹನ್, ಯಶವಂತ್ ಹಳೆಬಂಡಿ, ನಾಗಚಂದ್ರಿಕಾ ಭಟ್, ಕುಮಾರಿ.ವರ್ಷಾ ಸುರೇಶ  ಗಾಯನ ಸವಿ ಉಣಬಡಿಸಿದರು. ಹನ್ನೊಂದಕ್ಕೆ ಅಥಿತಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನಡೆಯಲೇಬೇಕಾದ ದೀಪ ಬೆಳಗುವಿಕೆ, ಹೊದಿಕೆ ಬಿಚ್ಚಿ ಪುಸ್ತಕ ತೋರಿದ ಅತಿಥಿಗಳು, ಛಾಯಾಗ್ರಾಹಕರು , ಮೊಬೈಲ್ ಮಾದಕರು ಇವರೆಲ್ಲರ ಕಾಟ ತಪ್ಪಿ ಬಹಳ ಸಮಯದಿಂದ ಕಾದು ಕುಳಿತಿದ್ದ ಪ್ರೇಕ್ಷಕರಿಗೆ  ಅಥಿತಿಗಳ ಮಾತು ಆರಂಭ.  ತನ್ಮಧ್ಯೆ   ಭಾವ ಜೀವಿಗಳೆಲ್ಲರ ಭಾವ ಸ್ಪುರಿಸಿದ ಲಕ್ಷೋಪ ಲಕ್ಷ ಜನರಿಗಿಂತ ಭಿನ್ನವಾದ ಚಟುವಟಿಕೆಗಳನ್ನು ಎಲೆ ಮರೆಯ ಕಾಯಿಗಳಂತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜವೂ ಹೆಮ್ಮೆಪಡುವ ಕಾರ್ಯವೆಸಗಿದ ಜನಸಾಮಾನ್ಯರಂತಿದ್ದೂ, ಜನಸಾಮಾನ್ಯರೆಲ್ಲ ಮಾಡಲಾಗದ ಕಾರ್ಯಗಳನ್ನು ಮಾಡಿದ , ತನ್ಮೂಲಕ ಮಣಿಕಾಂತ್ರವರ ಶ್ರಮದಿಂದ ಜಗತ್ತಿಗೆಲ್ಲ ಪ್ರಕಾಶಿಸಿದ ಸರಳ ಜೀವಿಗಳಿಗೆ ಸನ್ಮಾನ ಆಪ್ತವಾಗಿ  , ಆತ್ಮೀಯವಾಗಿ ನೆರವೇರಿಸಲಾಯಿತು.



ಭಾವನಾ ಎಲ್ಲ ಸಿನೇಮಾ ನಟಿಯರಿಗಿಂತ ಭಿನ್ನವಾಗಿ ಸರಳ ಸುಂದರವಾಗಿ ಸೀರೆಯುಟ್ಟು , ಮುಖದಲ್ಲಿ ಮುಗ್ಧತೆ ಹೊಂದಿ , ಸಿನೇನಾ ನಟಿಯರ ಆಸ್ತಿಯಾದ  ತೀಕ್ಷ್ನ ಚುಂಬಕ ನಗುವನ್ನು ಬೆಲ್ಲ ತುಪ್ಪದ ಕಾಂಬಿನೇಶನ್ ನಂತೆ ಸುರಿಸುತ್ತ , " ಒಂಟಿತನ ಓಡಿಸಲು ಅಪ್ಪ ಅಂದರೆ ಆಕಾಶ ದಂತಹ ಪುಸ್ತಕಗಳಲ್ಲಿರುವ ಕಥೆಗಳು ಆಸರೆಯಾಗುತ್ತವೆ " ಎಂದರು.  ಎಚ್.ಎಸ್.ವಿ ಯವರು " ಇಂದು ಪತ್ರಿಕೆಗಳನ್ನು ಬೆಳಿಗ್ಗೆ ಓದಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ   ಕೊಳಕು ರಾಜಕಾರಣಿಗಳ ಹಳಸಲು ಮುಖವನ್ನು ಕುರಿತು ಹೆಚ್ಚು ಹೆಚ್ಚು ಬರೆಯುವ ಪತ್ರಿಕೆಗಳು ಒಳ್ಳೊಳ್ಳೆ  ಸಮಾಜಮುಖಿಯಾದ ಸುದ್ದಿಗಳನ್ನು ತುಣುಕು ಸುದ್ದಿಗಳಾಗಿ ಪ್ರಕಟಿಸುವದು ವಿಷಾದನೀಯ ಮತ್ತು ಖಂಡನಾರ್ಹ " ಎಂದರು. unsung  heros ನ sing  ಮಾಡೋ ಮಣಿಕಾಂತ್,  ಎಂದು ಮಣಿಕಾಂತ್ ಗೆ ಚಪ್ಪಾಳೆ ಮೂಲಕ ಜನರೆಲ್ಲಾ ಅಭಿನಂದಿಸುವಂತೆ ಮಾಡಿದರು.  ಎಚ್ . ಎಸ್. ವಿ ಯವರು ತಮ್ಮ ಭಾಷಣಗಳಲ್ಲೆಲ್ಲ ಅಡಿಗರಿಂದಾರಂಭಿಸಿ   ಅಡಿಗರಲ್ಲೆ  ಉದಾಹರಣೆಗಳನ್ನು ಎತ್ತಿಕೊಳ್ಳುತ್ತಾರೆ , ಇದರಿಂದ ಬ್ರಾಹ್ಮಣರ ಪಕ್ಷಪಾತಿ ಎಂಬ ಆರೋಪಗಳು ನಿರಾಧಾರವೆಂಬುವಂತಿಲ್ಲವಾದರೂ,  ಎಚ್ .ಎಸ್. ವಿ ಯವರ ಭಾಷಣ ಕೇಳುವದೇ   ಒಂದು ಸುಸಂಸ್ಕೃತ ಮೋಜು.  ಇಂದೂ ಸಹ ಮಣಿಕಾಂತ್ ಮಾಡಿದ ಒಳ್ಳೆಯ ಕಾರ್ಯ , ಎಲೆ ಮರೆಯ ಕಾಯಿಗಳನ್ನು ಸಮಾಜಕ್ಕೆ ಪರಿಚಯಿಸಿ ಸನ್ಮಾನಿಸುವ ಯೋಜನೆಯನ್ನು ಬಹು ಸರಳವಾದ ಮಾತುಗಳಲ್ಲಿ , ಕೇಳುಗನು   ಅತಿ ಪ್ರಭಾವಿತನಾಗುವಂತೆ ಅಕ್ಷರ ವ್ಯಾಖ್ಯಾನ ಮಾಡಿದರು.  ಎಚ್ .ಎಸ್.ವಿ ಯವರ ಸರಳ ನಗು, ಸರಳ ಜೀವನ, ಸರಳ ಮಾತುಗಳು ಬಹುಕಾಲ ನೆನಪಿನಲ್ಲಿರುವಂತೆ ಮಾಡುತ್ತವೆ. ಇನ್ನೊಮ್ಮೆ ಅವಕಾಶ ತಪ್ಪಿಸಿಕೊಳ್ಳದಿರಿ  .



ಈ ಗುರುಪ್ರಸಾದ್ ನಿರ್ದೇಶಿಸಿದ ಸಿನೆಮಾಗಳನ್ನು ನೋಡಿ ಆನಂದಗೊಂಡಿದ್ದೆ.  ಇಂದು ಈ ಗುರುವಿನ ಮಾತುಗಳ ಮೋಡಿ ಅನುಭವಿಸಿ , ಯಶಸ್ವಿ  ನಿರ್ದೇಶಕರೆಂದೊಡನೆ  ಕಾರ್ನಾಡ್, ಕಾರಂತ್  ರನ್ನು ಚಿತ್ರಿಸಿಕೊಳ್ಳುವ ನನಗೆ , ನಿರ್ದೇಶಕನೊಬ್ಬ ಹೀಗೂ ಇರಬಹುದೇ ಎಂಬ ಆಶ್ಚರ್ಯದ ಬಲೆಯಿಂದ ಈಚೆ ಬರಲಾಗಲಿಲ್ಲ. ಉತ್ಪ್ರೇಕ್ಷೆಯೇನಿಲ್ಲ , ಈ ಮನುಷ್ಯ ಹೊರಹಾಕುವ ಪ್ರತಿ ವಾಕ್ಯಗಳಿಗೂ ಕೇಳುಗ ಮನ ಬಿಚ್ಚಿ ನಗುತ್ತಾನೆ, ಕೈ ಬಿಚ್ಚಿ ಚಪ್ಪಾಳೆ ತಟ್ಟುತ್ತಾನೆ. ನನಗೆ ಈ ಗುರುಪ್ರಸಾದ ಯಾವ ರೀತಿ ಸೂಜಿಗಲ್ಲಿನಂತೆ ಆಕರ್ಶಿಸಿದರೆಂದರೆ ನಾನು ಒಂದು ಶಬ್ದವನ್ನೂ ಟಿಪ್ಪಣಿ ಮಾಡಿಕೊಳ್ಳಲಾಗಲಿಲ್ಲ. ಕಣ್ಣುಗಳನ್ನು ಹೊರಳಿಸಿದರೆ ಎಲ್ಲಿ ಗುರುವಿನ ಮುಖಭಾವ , ಮಾತಿನ ಸಂಚಲನೆ, ಮೋಡಿಯಿಂದ ವಂಚಿತನಾಗಿಬಿಡುವೆನೇ ಎಂಭ ಭಯದಿಂದ ಏನೂ ಟಿಪ್ಪಣಿ ಮಾಡದೆ ಕುಳಿತಿದ್ದುದು ನನಗೇ ಸದೇಖಾಶ್ಚರ್ಯ.  ಈ ಗುರುವಿನ ಮಾತುಗಳನ್ನು ಕೇಳದೆ ನೀವು ಏನೇನು ಮಿಸ್ ಮಾಡಿಕೊಂಡಿರಿ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ, ಅನುಭವಿಸಿಯೇ ಅರಿಯಬೇಕು.  ಇನ್ನೊಮ್ಮೆ ಮಿಸ್ ಮಾಡಿಕೊಳ್ಳಬೇಡಿ.



ನಮ್ಮ ವಿಶ್ವೇಶ್ವರ ಭಟ್ಟರ ಮಾತುಗಳನ್ನು ಮೊದಲು ಕೇಳಿದ್ದರಿಂದಲೂ , ಇನ್ನೊಂದೆಡೆ ಕೆಲಸವಿದ್ದುದರಿಂದಲೂ ಕಾರ್ಯಕ್ರಮದ ಇವಿಷ್ಟು ಭಾಗಗಳನ್ನು ಆಸ್ವಾದಿಸಿ ಹೊರಬಂದೆನು.



ಇನ್ನು ನಾನು ಈ ಲೇಖದ ಆರಂಭದಲ್ಲಿ ಹೇಳಿದ ಇನ್ನೊಂದು ಅನುಭವದ ಉದಾಹರಣೆ. ವಿಜಯವಾಣಿ ಪತ್ರಿಕೆಯವರು ಕೆಂಗೇರಿ ಉಪನಗರದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಹಕಾರದಲ್ಲಿ ಜನರ ಸಮಸ್ಯೆಗಳನ್ನರಿಯಲು ಜನಸ್ಪಂದನ ಕಾರ್ಯಕ್ರಮವನ್ನೇರ್ಪಡಿಸಿದ್ದರು. ನಾನೂ ಭಾಗಿಯಾಗಿದ್ದೆ. ಮರುದಿನದ ಪತ್ರಿಕೆಯನ್ನು ಓದಿದರೆ , ಬಿಟ್ಟು ಹೋಗಿದೆ, ವರದಿಯಾಗಿಲ್ಲ ಎಂಬಂತಹ ಒಂದಂಶವೂ ಗೋಚರಿಸಲಿಲ್ಲ, ಪತ್ರಿಕೆಯನ್ನು ಪ್ರಭಾವಿಯಾಗಿ ಜನತೆಯತ್ತ ಕೊಂಡೊಯ್ಯಲು  ಈ ಕಾರ್ಯಕ್ರಮವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೋ ಅದನ್ನೆಲ್ಲ ಅಚ್ಚುಕಟ್ಟಾಗಿ ಮಾಡಿದ್ದಾರೆ.  ಅಂದರೆ ಪತ್ರಿಕಾ ಬಳಗ ಮನಸ್ಸು ಮಾಡಿದರೆ ಕಾರ್ಯಕ್ರಮವೊಂದರ ಫಲವನ್ನು ಆಕಾಶಕ್ಕೂ ಏರಿಸಬಹುದು ಇಲ್ಲ ಪಾತಾಳಕ್ಕೂ ಬೀಳಿಸಬಹುದು ಎಂಬುದಕ್ಕೆ ನಿದರ್ಶನ ಎಂದುಕೊಂಡೆ.



ಈ ಎಲ್ಲಾ ಅಕ್ಷರಗಳ ಸಂಯೋಜನೆಯಿಂದ ನಾನು ಹೇಳುವದೇನೆಂದರೆ   ನೀವೆಲ್ಲ ಹೆಚ್ಚು ಹೆಚ್ಚು   ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ ಹಾಜರಿರಬೇಕು, ಪರೋಕ್ಷವಾಗಿ ಮಾಧ್ಯಮಗಳ ಮೂಲಕ ಪಡೆಯುವದು   , ನಿಮ್ಮ   ಹಾಜರಾತಿಯಿಂದ ಪಡೆಯುವ ಸ್ಪಂದನೆ, ಮನೋಲ್ಲಾಸಗಳಿಗೆ  , ಜ್ಞಾನ ವರ್ಧನೆಗಳಿಗೆ ಎಂದೂ substitute ಆಗಲಾರದು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 18, 2013.

No comments:

Post a Comment