Tuesday, August 27, 2013

ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?

ನಾನೇನೂ   ಈ ಕೃತಿ ಇನ್ನೂ ಓದಿಲ್ಲ.  ಆದರೆ ಪುಸ್ತಕ ಕುರಿತು ಇಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ  ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ.  ಹೌದಾದರೆ ಕೃತಿ  ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು  ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ.  ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?


ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ   ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.


ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ.  ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ  ಹಾನಿಕರ.

http://epapervijayavani.in/Details.aspx?id=8093&boxid=14755119


ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.

August 27 , 2013.

Friday, August 16, 2013

ಇಂದು, ಈಗಲೇ ಸಮಾಜದಲ್ಲಿ ಬರಬೇಕಾದ ಬದಲಾವಣೆ.

ಶ್ರೀ ಗುರುಭ್ಯೋ  ನಮಃ  /  ಹರಿಃ  ಓಂ   //

ಹರೇ ರಾಮ.


ಜೈ ಜೈ ಶ್ರೀ ರಾಮಕಥಾ , ಜೈ ಜೈ ಶ್ರೀ ರಾಮಕಥಾ. ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಹಿಡಿದಿಡುವ ರಾಮಕಥಾ.  ಎರಡನೆ ಮಾತಿಲ್ಲ. ಜೀವನದ ಕೆಲ ಸಮಯವನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವ ಯಶಸ್ವಿ ಪ್ರಯೋಗ. ಎರಡನೇ ಮಾತಿಲ್ಲ. ರಾಮಕಥಾ ಕಲಾವಿದರ ತಂಡಕ್ಕೂ , ರಾಮಕಥಾ ನೇತ್ರತ್ವಕ್ಕೂ , ರಾಮಕಥಾ ಪ್ರಾಯೋಜಕ ಆರ್ಥಿಕ ಬಲಾಢ್ಯ ಬಂಧುಗಳಿಗೂ ಮನಸ್ವಿ ಅಭಿನಂದನೆಗಳನ್ನು ಅಭಿವ್ಯಕ್ತಿಸುತ್ತ , ಸಮಾಜದ ವಾಸ್ತವಿಕತೆಯತ್ತ ಯೋಚಿಸೋಣ.



ಇಂದಿನ ಹವ್ಯಕ ಸಮಾಜದಲ್ಲಿ ಎಣಿಕೆಗೆ ಸಿಗುವಷ್ಟು ಹವ್ಯಕ ಬಂಧುಗಳು ಮಾತ್ರ ಆರ್ಥಿಕವಾಗಿ ಬಲಾಢ್ಯರಾದ ಗುಂಪಿನಲ್ಲಿದ್ದಾರೆ. ಇಂದಿನ ಜನಜೀವನದ ಅವಿಭಾಜ್ಯ ಅವಶ್ಯಕತೆಗಳಾದ ಕುಟುಂಬಕ್ಕೊಂದು ಸರ್ವ ಋತು ರಕ್ಷಣೆ ನೀಡುವ ಸೂರು, ಪ್ರತಿ ಮಗುವಿಗೂ ಫಲಪ್ರದವಾಗಿ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವಂತಹ ಶಿಕ್ಷಣ , ಅಧುನಿಕ ಬದಲಾವಣೆಗಳಿಂದ ದೂರದೂರುಗಳು ಸಾಮಿಪ್ಯ ಪಡೆದಿರುವದನ್ನು ಅವಲೋಕಿಸಿ ಭಾವನಾತ್ಮಕ   ಬಂಧನಗಳನ್ನು ಬಲಾಢ್ಯಗೊಳಿಸಲು , ಕ್ರಮಿಸಲು ಬೇಕಾದ ಸ್ವಂತ ವಾಹನ  .. ಇತ್ಯಾದಿ ಅವಶ್ಯಕತೆಗಳನ್ನು ಪೂರೈಸಲಾಗದೆ , ಜೀವನ ಜಂಜಡಗಳಲ್ಲಿ ಸಿಲುಕಿಕೊಂಡಿರುವ ಹವ್ಯಕ ಭಾಂಧವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಆದರೆ ಆರ್ಥಿಕವಾಗಿ ಬಲಾಢ್ಯರಾದ ಬಂಧುಗಳ ಅಹಮಿಕೆಯ ವ್ಯಕ್ತನೆಯ ವೈಭವೋಪೇರಿತ ಮದುವೆ  , ಮುಂಜಿ, ಪಾರಾಯಣ , ರಾಮಕಥಾ.... ಇತ್ಯಾದಿ ಅಘಟಿತ ಘಟನೆಗಳಿಂದ  ಧಿಗ್ಬ್ರ್ಹಮಣೆಗೊಳಗಾಗಿ  , ಪ್ರಾಪಂಚಿಕ ವಾಸ್ತವಿಕತೆಯಿಂದ ಕೆಲ ಸಮಯ ದೂರವಾದರೂ, ತದ  ನಂತರ ವಾಸ್ತವಿಕತೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆಯ ಭೀಕರ ದಿನ ಜೀವನಕ್ಕೆ , ಪುನಹಪ್ರವೇಶ . ಇದುವೇ ಇಂದಿನ ವಾಸ್ತವಿಕತೆಯಾಗಿದೆ.  ಆದುದರಿಂದಲೇ ಇಂದಿನ ಹೆಚ್ಚಿನ ಹವ್ಯಕ ಬಾಂಧವರು ಸಮಾಜದ ಚಟುವಟಿಕೆಗಳಿಗೆ ತಾಟಸ್ತ್ಯ ಮನೋಭಾವನೆಯಿಂದ ದೂರದಲ್ಲಿರಬಯಸುತ್ತಾರೆ. ಒಂದೆಡೆ  ಹನ್ನೆರಡು ಲಕ್ಷ ಜನಸಂಖ್ಯೆಯೆಂದೂ, ಇನ್ನೊಂದೆಡೆ  ನಾಲ್ಕಾರು ಲಕ್ಷ ಜನಸಂಖ್ಯೆಯೆಂದೂ ಪರಿಗಣಿಸಲ್ಪಟ್ಟ ಹವ್ಯಕ ಸಮಾಜ ಇಂದು ಅಲ್ಲಲ್ಲಿ  ನೂರರ ಸಂಖ್ಯೆಯಲ್ಲಿ ವಿಝ್ರಂಭಿಸುತ್ತಿರುವ ನೇತಾರರ, ಆರ್ಥಿಕ ಬಲಾಢ್ಯರ ಕೈಯಲ್ಲಿ ನೋವಿನಿಂದ ನಲುಗುತ್ತಿದೆ. ಈ ನೋವು ಆಳ ಪ್ರಪಾತಿಯಾಗಿ ( undercurrent ) ಹರಿಯುತ್ತಿದ್ದರೆ, ಅರ್ಥಿಕ ಬಲಾಢ್ಯರ , ಅವರ ಹಿಂಬಾಲಕರ ಹೇಕಾರಗಳು , ಕೇಕೆಗಳು ಸಮಾಜದ ವ್ಯಕ್ತ ಸ್ಥರದಲ್ಲಿ  ತಾರಕಕ್ಕೇರಿದ ಲಯವಾಗಿ ಹೊರಹೊಮ್ಮುತ್ತಿದೆ.


ಏನು ಮಾಡಲಾದೀತು? ದಾರಿ ಸುಗಮವಲ್ಲ.


ಹವ್ಯಕ  ಸಮಾಜದ ಶ್ರೇಷ್ಟ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡ, ಸಮಾಜ ಭಾಂಧವರು ಬಹುತೇಕರು ಆಧುನಿಕ  ಜೀವನ ಶೈಲಿಯ ಪ್ರಭಾವಕ್ಕೊಳಗಾಗಿ, ಆಧುನಿಕ ಜೀವನದ ಸುಖ ಲೋಲುಪತೆಯನ್ನು ಪಡೆಯಲಾಗದೆ , ಅತ್ತ ಜೀವನ ಸಾಗಿಸುವ ಅನಿವಾರ್ಯತೆಗೊಳಗಾಗಿ ಯಾವುದ್ಯಾವುದೋ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಕಡು ಬಡವರಾಗಿದ್ದರೂ, ಸಮಾಜದ ಶ್ರೇಷ್ಟ ಸಂಸ್ಕೃತಿಯ ಗುಣಗಳನ್ನು  ಅವರ ಮಕ್ಕಳಲ್ಲಿ ಮೈಗೂಡಿಸಿ , ಮುಂದಿನ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಕಾತರರಾಗಿದ್ದಾರೆ. ಆದರೆ ಇಂದಿನ ಕ್ರೂರ ವಾಸ್ತವಿಕತೆಗಳಾದ ಶಾಲಾ ಡೊನೇಶನ್ನುಗಳು , ಇನ್ಫ್ಲುಯೆನ್ಸ್ ಗಳು ಸಮಾಜ ಬಾಂಧವರನ್ನು  ಅಸಹಾಯಕತೆಗೆ ತಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಆ ರೀತಿ ಸಮಾಜಬಾಂಧವರನ್ನು ಈ ವಿಷವರ್ತುಲಗಳಿಂದ ವಿಮುಕ್ತಿಗೊಳಿಸಲು ಸಮಾಜ ನೇತಾರರೆಲ್ಲ ಒಗ್ಗೂಡಿ , ಆರ್ಥಿಕವಾಗಿ ಬಲಾಢ್ಯರಾಗಿರುವ - ಸಮಾಜಕ್ಕೆ ಆರ್ಥಿಕವಾಗಿ ದಾನ ನೀಡಬಲ್ಲ ಉದಾರಿ ಹೃದಯ ಸಾಮ್ರಾಜ್ಯವನ್ನು ಹೊಂದಿದ ಸಮಾಜ ಬಾಂಧವರಿಂದ ಬರುವ ದಾನದ ಹಣವನ್ನು ಕ್ರೋಢೀಕರಿಸಿ ,  ಹೆಚ್ಚಿನ  ಸಂಖ್ಯೆಯಲ್ಲಿ   ಉಚಿತವಾದ , ಶಿಕ್ಷಣಸ್ನೇಹಿಯಾದ ಪೂರಕ ವಾತಾವರಣವುಳ್ಳ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ  ಅವಕಾಶಗಳುಳ್ಳ , ಸರ್ವ ರೀತಿಯ ಯೋಗ್ಯವಾದ ಖರ್ಚು ವೆಚ್ಚಗಳನ್ನು  ಹೊಂದಿಸಿ ಉಚಿತವಾಗಿ ಶಿಕ್ಷಣ , ಆರ್ಥಿಕವಾಗಿ ಹಿಂದುಳಿದ ಮಾತಾ ಪಿತೃರ ಮಕ್ಕಳಿಗೆ  ದೊರಕುವ ಸೌಲಭ್ಯವನ್ನೊದಗಿಸುವತ್ತ    ಗಮನ ಹರಿಸಬೇಕಾಗಿರುವದು ಇಂದಿನ  ತುರ್ತು ಅವಶ್ಯಕತೆಯಾಗಿದೆ.  ಗಮನವೀಯಬೇಕಾಗಿದ್ದು ಯೋಗ್ಯ ಪ್ರಚಲಿತ ಶಿಕ್ಷಣ , ಉಚಿತ ಶಿಕ್ಷಣ , ಆರ್ಥಿಕವಾಗಿ ಅತೀ ಹಿಂದುಳಿದಿರುವ ಸಮಾಜಬಾಂಧವರಿಗೆ ಮೊದಲ ಆದ್ಯತೆಯಿರಬೇಕಾಗಿದೆ.



ಈ ರೀತಿ ಬದಲಾವಣೆಯ ಮನೋಧರ್ಮ ಒಮ್ಮೆ ಸಮಾಜದಲ್ಲಿ ತೀವ್ರ ಸಂಚಲನೆ ಪಡೆದರೆ , ವರ್ತಮಾನಕಾಲದಲ್ಲಷ್ಟೇ ಅಲ್ಲ ಸರ್ವ ಕಾಲದಲ್ಲೂ, ಸಾರ್ವತ್ರಿಕವಾಗಿ ನಮ್ಮ ಸಮಾಜ ಶ್ರೇಷ್ಟ ಪರಂಪರೆಯನ್ನು ಉಳಿಸಿ, ಬೆಳೆಸಲಾದೀತು.  ಅವಕಾಶ ಕಲ್ಪಿಸದಿದ್ದರೆ " ನಮ್ಮನ್ನು ನಾವೇ ಶ್ರೇಷ್ಟರು " ಎಂದು ಡಂಗುರ ಸಾರುತ್ತಾ ಸಾಗುವ ಕಾಲ ಸದಾ ಮುಂದುವರಿದೀತು. ಬದಲಾವಣೆಗೆ ಸಕಾಲ ಇದು, ಸಮಾಜದ ನೇತಾರರು  ಮನಸ್ಸು ಮಾಡಲೇಬೇಕಾದ ಪರ್ವ ಕಾಲ ಇದು.


www.http://hareraama.in/



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
ಆಗಸ್ಟ್ ೧೭, ೨೦೧೩.