Friday, May 31, 2013

ನೀರಿನ ಸಮಸ್ಯೆ - ಪರಿಹಾರಕ್ಕೆ ಸಲಹೆ.

ಸರಕಾರಕ್ಕೆ ಇಚ್ಚಾ ಶಕ್ತಿ ಇದ್ದರೆ, ಬೆಂಗಳೂರು ನಗರವೊಂದನ್ನು    ಪ್ರಾಯೋಗಿಕವಾಗಿ   ಆಯ್ಕೆ  ಮಾಡಿಕೊಂಡು  ಎಲ್ಲಾ ಬಡಾವಣೆಗಳಲ್ಲಿರುವ   CA  site  ಗಳಲ್ಲಿ  ಒಂದು ಸಾವಿರ ಅಡಿ ಆಳದ ಎಂಭತ್ತರಿಂದ ನೂರು ಅಡಿ ಅಗಲದ ನೆಲ ಬಾವಿಗಳನ್ನು ತೋಡಿ , ಸೂಕ್ತವಾದ ರಕ್ಷಣಾ ಗೋಡೆಯನ್ನು ಕಟ್ಟಿ  ಮಳೆಗಾಲದ ನೀರು ಸಂಗ್ರಹ ಮಾಡಬಹುದು.


ಈಗಿನ ದ್ಯತ್ಯ ಯಂತ್ರಗಳನ್ನು ಬಳಸಿಕೊಂಡು ಹದಿನೈದು ಇಪ್ಪತ್ತು ದಿವಸಗಳಲ್ಲಿ ಈ ಬಾವಿಗಳನ್ನು ತೋಡಿ ಇನ್ನೊಂದು ಹತ್ತು ಹದಿನೈದು ದಿವಸಗಳಲ್ಲಿ ಜನ, ಜಾನುವಾರುಗಳು ಬೀಳದಂತೆ ತಡೆಗೋಡೆಗಳನ್ನು ಕಟ್ಟಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಹಲವು ನೆಲ ಬಾವಿಗಳು ಇನ್ನೂ ನೀರು ಸಂಗ್ರಹಿಸಿ ಅಲ್ಲಲ್ಲಿ ಸಮೃದ್ಧಿಯಾಗಿರುವದು ಕಂಡುಬರುವದು.


ಸರಕಾರ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಬೇಕು. ಶೃದ್ಧೆಯುಳ್ಳ  ಅಧಿಕಾರಿ, ಕಂಟ್ರಾಕ್ಟರ್ ಸಮೂಹ ಗುರುತಿಸಿ ಕೆಲಸ ಕೈಗೊಳ್ಳಬೇಕು. ಅವಶ್ಯವಿದ್ದರೆ ಟಾಸ್ಕ್ ಫೋರ್ಸ್ ರಚಿಸಿ ವಿಶೇಶ ಅಧಿಕಾರ ಕೊಡಬೇಕು. ಕೆಲಸ ಮುಗಿದೊಡನೆ ಈ ಕಾರ್ಯದ ಶುಭಾಶುಭ ಗಳನ್ನು ಅಭ್ಯಸಿಸಲು ಪರಿಣಿತರ ತಂಡವೊಂದನ್ನು ರಚಿಸಬೇಕು. ಈ ಎಲ್ಲ ಕಾರ್ಯಗಳಾಗಲು ಮುಖ್ಯಮಂತ್ರಿಯವರ ನೇತ್ರತ್ವದಲ್ಲಿ ಎಲ್ಲ ಅಧಿಕಾರವುಳ್ಳ ಸಮಿತಿಯೊಂದನ್ನು ಕೂಡಲೆ ರಚಿಸಿ, ಕಾರ್ಯಪೃವ್ರತ್ತರಾಗಬೇಕು.


ಆದೀತಲ್ಲವೇ ಸಿದ್ಧರಾಮಯ್ಯನವರೇ ?  ನೀರಿನ ಸಿದ್ದರಾಮಯ್ಯ ಎಂದು ಹೆಸರು ಗಳಿಸಿ ಚರಿತ್ರೆಯಲ್ಲಿ ಶಾಶ್ವತವಾಗಿರಬಹುದಲ್ಲವೇ, ನಜೀರ ಸಾಬರಂತೆ.


ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಎಂದೆಂದೂ ,/
ಎಲ್ಲರಂತೆ ನಡೆದರೆ ಸಿದ್ಧರಾಮಯ್ಯ , ಆಗುವರು ಹತ್ತರಲಿ ಹನ್ನೊಂದು,//
ಸಿಕ್ಕಿದ ಅವಕಾಶ ಬಳಸದೆ ಇದ್ದರೆ , ಸಿಗದು ಅವಕಾಶ ಇನ್ನೆಂದೂ,/
ನಾಳೆ, ನಾಡಿದ್ದು ಎನ್ನದೆ, ಇಂದೇ ನಡೆಯಲಿ ಪ್ರಜಾಹಿತ ಎಂದೆಂದೂ.//




ಹರಿಹರ ಭಟ್, ಬೆಂಗಳೂರು.

Saturday, May 25, 2013

ನಾಗೇಶ್ ಹೆಗಡೆಯವರು ಮಂಡಿಸಿದ ಅಭಿಪ್ರಾಯಗಳಿಗೆ ಇಂದಿನ ಸಮಾಜದಲ್ಲಿ ಗೋ ರಕ್ಷಕರು,

ನೋಡಿ  ನಾವೀಗ ಬದುಕುತ್ತಿರುವದು ಪ್ರಜಾಪ್ರಭುತ್ವದಲ್ಲಿ. ಇಷ್ಟವೋ , ಅನಿಷ್ಟವೋ ಪ್ರಜಾಪ್ರಭುತ್ವದ ನೀತಿ ನಿಯಮಗಳಿಗೆ ಅನುಸಾರವಾಗಿ ಬದುಕಬೇಕು. ಒಬ್ಬರ ವಾದ ಇನ್ನೊಬ್ಬರ ದೃಷ್ಟಿಯಲ್ಲಿ ಶುಷ್ಕವೆನಿಸಿದರೂ ಸಹ ಆ ವಾದಗಳಿಗೆ ತಮ್ಮ ಅಭಿಪ್ರಾಯ ರೂಪದಲ್ಲಿ ಪ್ರತಿವಾದ ನೀಡಿ ಸಹಕರಿಸಬೇಕಾದುದು ಸುಸಂಸ್ಕೃತ ಮನುಕುಲದ  ಮೂಲ ರೀತಿ , ನೀತಿ.  ಪ್ರತಿಯಾಗಿ ಹೊಣೆಗೇಡಿ ಉಗ್ರಗಾಮಿ ನಡೆಗಳತ್ತ ವಾಲುವದು ಮನುಕುಲಕ್ಕೆ ಧೀರ್ಘಾವಧಿಯಲ್ಲಿ ಮಾಡುವ ಅಪಚಾರ.


ನಾಗೇಶ್ ಹೆಗಡೆಯವರು ಮಂಡಿಸಿದ ಅಭಿಪ್ರಾಯಗಳಿಗೆ ಇಂದಿನ ಸಮಾಜದಲ್ಲಿ ಗೋ ರಕ್ಷಕರು, ಗೋ ರಕ್ಷಕರ ಅನುಸರಿಸುವವರು ಎಂದು ತಮ್ಮನ್ನು ಗುರುತಿಸಿಕೊಂಡವರು ಈ ಅವಕಾಶದಲ್ಲಿ ತಮ್ಮ ಮರು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಜನ ಜಾಗ್ರತಿ ಎಂದರೆ ಊರಿಂದ ಊರಿಗೆ ಹೋಗಿ ಭಾಷಣ  , ಉಪನ್ಯಾಸಗಳನ್ನು ಮಾಡುವದು , ಆ  ಉಪನ್ಯಾಸಗಳಿಂದ   ಪ್ರೆರೇಪಿತರಾಗಿ ಒಂದು ವಿಲಕ್ಷಣ   ಉಗ್ರಗಾಮಿ ನೀತಿಗಳನ್ನು ಪ್ರಸರಿಸುವದು , ಪರಿಣಾಮವಾಗಿ ಸಮಾಜದ ಶಾಂತಿ ಕದಡಿದಾಗ ತಮ್ಮ ಸ್ವಾರ್ಥ ಅಂದರೆ hidden  agenda ಸಾಧಿಸುವದು ಆಗಬಾರದು.  ಸಮಾಜದಲ್ಲಿ  , ಅಭಿಪ್ರಾಯಗಳಿಂದ ವಿಭಾಗಿಸಲ್ಪಟ್ಟ ಜನಸಮೂಹದ ಹೊರತಾಗಿ, ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿ  ತಟಸ್ಥವಾಗಿ ಬದುಕುವ ಜನಸಂಖ್ಯೆ   ಅಪಾರವಾಗಿದೆ.  ಸನಾತನ ಧರ್ಮ ಅನುಸರಿಸುವವರಲ್ಲಿಯೂ ಯಾವುದೇ ಮಠ , ಮಂದಿರಗಳ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳದೆ, ತಮ್ಮ ಸಂಸಾರ - ಜೀವನವನ್ನು ಸನಾತನ ಧರ್ಮ ಸೂತ್ರಗಳಿಗನುಗುಣವಾಗಿ ನಡೆಸಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುವವರ ಸಂಖ್ಯೆಯೇ ಜಾಸ್ತ್ಗಿ ಇದೆ.


ಇಂದಿನ ಜೀವನ ಕ್ರಮದಲ್ಲಿ ನಾಗೇಶ್ ಹೆಗಡೆಯವರು ಎತ್ತಿದ ಪ್ರತಿಯೊಂದು ಅಂಶವೂ ಪ್ರಸ್ತುತತೆ ಹೊಂದಿದೆ. ಶಾಸ್ತ್ರ, ವೇದ ಉಪನಿಷತ್ ಗಳಲ್ಲಿ ಪಾಂಡಿತ್ಯವಿಲ್ಲದಿದ್ದರೂ , ಒಬ್ಬರ ಅಭಿಪ್ರಾಯಗಳಿಗೆ ಇನ್ನೊಬ್ಬರು ನೀಡುವ ಪ್ರತಿವಾದಗಳನ್ನು ಅವಲೋಕಿಸಿ , ಹಂಸ ಕ್ಷೀರ ನ್ಯಾಯದಂತೆ ಯೋಗ್ಯವಾದುದನ್ನು ಆಯ್ಕೆ ಮಾಡಿಕೊಳ್ಳಲು ಇಂದಿನ ಜನಸಾಮಾನ್ಯನು ಪ್ರಭುದ್ಧತೆ ಹೊಂದಿದ್ದಾನೆ.  ಸರ್ವರಿಗೂ ಸಮಪಾಲು, ಸಹಬಾಳ್ವೆ ಎಂಬ ಇಂದಿನ   ಸಮಾಜ ಜೀವನದ  ಘೋಷಣೆಯನುಸಾರ,  ಹೆಗಡೆಯವರ ಈ ವಾದಗಳಿಗೆ ಎಲ್ಲಾ ಮಠ , ಮಂದಿರಗಳ ಪ್ರಮುಖರು ಸೂಕ್ತವಾದ ಅಭಿಪ್ರಾಯ, ಪ್ರತಿವಾದ, ಗೋ ರಕ್ಷಣೆ ಇಂದಿನ ಸಮಾಜ ಜೀವನದಲ್ಲಿ ಹೇಗೆ ಕಾರ್ಯ ಸಾಧು ಎಂಬುದನ್ನು ವ್ಯಕ್ತ ಪಡಿಸಬೇಕಾಗಿದೆ.  ಅದಿಲ್ಲದಿದ್ದರೆ ಮಠ , ಮಂದಿರಗಳ ಅನುಸರಿಸುವವರೂ ನಿಧಾನವಾಗಿ ದೂರಾಗುವದರಲ್ಲಿ ಯಾವುದೇ ಅನುಮಾನ ಕಾಣುವದಿಲ್ಲ.  ಈ ಮೂವತ್ತು ವರ್ಷಗಳ ಬದಲಾವಣೆಗಳಿಂದ ನಮ್ಮ   ಅರಿವಿಗೆ ಬಂದಿದ್ದೆಂದರೆ , ಈ ಕಾಲಘಟ್ಟದಲ್ಲಿ ಮಠ , ಮಂದಿರಗಳಿಗೆ ಹಣ ಕಾಸು , ಆಸ್ತಿ ಪಾಸ್ತಿಗಳ ಕೊರತೆಯಿಲ್ಲ, ನಿಜವಾದ ಕೊರತೆಯಿರುವದು ಭಕ್ತರ - ಸನಾತನೀಯ ಕುಟುಂಬಗಳ ಶಿಷ್ಯರ ಹಾಜರಾತಿ ಕೊರತೆ. ಈ ಬೆಳವಣಿಗೆಗಳು ಸೂಚಿಸುವ ಭಯಂಕರ ಅಷ್ಟೇ ಸತ್ಯವಾದ ವಿಷಯವೆಂದರೆ ಸನಾತನ ಧರ್ಮದ ತಿರುಳನ್ನು ಅರಿತ ಜನಾಂಗಗಳು ಇಂದಿನ   ಮಠ , ಮಂದಿರಗಳಿಂದ    ದೂರವಾಗುತ್ತಿದ್ದಾರೆ ಹಾಗೂ  ಮಠ , ಮಂದಿರಗಳಲ್ಲಿ ಸದಾಕಾಲ ತೋರಿಬರುವ ಜನರಲ್ಲಿ ಅವರದೇ ಆದ ಸ್ವಹಿತಾಸಕ್ತಿಗಳು, ರಾಜಕೀಯ ಹಿತಾಸಕ್ತಿಗಳು , ವಿವಿಧ ಸೋಗಿನಲ್ಲಿ ವಾಂಛೆ ಗಳನ್ನು ಹುದುಗಿಟ್ಟ ಮಂದಿ ಕಾಣಬರುತ್ತಾರೆ.  ಸನಾತನ ಧರ್ಮಕ್ಕೆ ಹಾಗೂ ಗೋ ರಕ್ಷಣೆ, ಗೋ ಹಿತ್ತಸಕ್ತಿಗಳಿಗೆ ನಿಜವಾದ ಅನಾಹುತಗಳಾಗುತ್ತಿರುವದು ಈ ರೀತಿ ಸ್ವಹಿತಕ್ಕಾಗಿ, ಸಾಮಾಜಿಕ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದಿನೇ ದಿನೇ ಪ್ರಭಾವಿ ಗುಂಪುಗಳಾಗಿ ಮಾರ್ಪಡುತ್ತಿರುವ ಜನಸಮೂಹದಿಂದ ಮಾತ್ರ.


ಇನ್ನು ನಾಗೇಶ ಹೆಗಡೆಯವರಲ್ಲಿ ನನ್ನದೊಂದು ಪ್ರಶ್ನೆಯಿದೆ. ನೈಸರ್ಗಿಕ ನಿಯಮವೇ ಒಬ್ಬರನ್ನು ತಿಂದು ಇನ್ನೊಬ್ಬರು ಬದುಕುವದು ಎಂಬ ನೀತಿ ಪಾಠ. ಡಾರ್ವಿನ್ನನ ವಿಕಾಸವಾದದಂತೆ, ಅರಣ್ಯಗಳಲ್ಲಿ ಅಂಡಲೆಯುವ ಮಾನವನ ಇತಿಹಾಸದಂತೆ , ಇನ್ನೂ ಪ್ರಚಲಿತವಿರುವ ಆಫ್ರಿಕಾ ದೇಶದಲ್ಲಿ  ಮನುಷ್ಯನ ಮಾಂಸವನ್ನೇ ತಿಂದು ಹಸಿವನ್ನು ಇಂಗಿಸಿಕೊಳ್ಳುವ ಜನಾಂಗ Cannibals ಗಳಂತೆ ಬದುಕುವ ವ್ಯವಸ್ಥೆಗೆ ನಮ್ಮ ಇಂದಿನ ಸಮಾಜ ಹಿಂಬಡ್ತಿ ಪಡೆಯಬೇಕೆ  ?  ಪ್ರಾಣಿಸಮೂಹಕ್ಕೆ ಅನ್ವಯವಾಗುವ ಈ ನೈಸರ್ಗಿಕ ಕಾನೂನನ್ನು ಮಾನವ ಜನಾಂಗಕ್ಕೂ ಅನ್ವಯಿಸಿ ತಮ್ಮ ವಾದವನ್ನು ಪುಷ್ಟೀಕರಿಸಬೇಕಾದ , ಬೌದ್ಧಿಕ ಕೊರತೆ - ದೌರ್ಬಲ್ಯ ತಮ್ಮಲ್ಲಿಲ್ಲದಿದ್ದರೂ  ಆ ಪ್ರಲೋಭನೆಗೇಕೆ ಒಳಗಾಗುತ್ತೀರೀ ? ಆ ರೀತಿಯ ಮಾನಸಿಕ,  ಬೌದ್ಧಿಕ ಪ್ರಲೋಭನೆಗೊಳಗಾದ ನಮ್ಮ ರಾಜಾಕೀಯ   ನೇತಾರರು, ಧಾರ್ಮಿಕ ನೇತಾರರು , ಸಾಮಾಜಿಕ ನೇತಾರರು ನಮ್ಮ ನಿತ್ಯ ಜೀವನವನ್ನು ಅಂದರೆ ಬಹುತೇಕ ಜನಸಾಮಾನ್ಯರ ನಿತ್ಯ ಜೀವನವನ್ನು ನರಕ ಸದೃಶವಾಗಿ ಬದಲಾಯಿಸಿರುವದು ತಮ್ಮ ಗಮನಕ್ಕೆ ಬಂದೇ ಬಂದಿರುತ್ತದೆ.  ಈ ದುರದೃಷ್ಟಕರ   ಬೆಳವಣಿಗೆಗಳಿಗೆ ಸ್ಪಂದಿಸದಿರುವ ಜಾಣ ಕುರುಡುತನ ಪ್ರದರ್ಶನವೇ, ತಮ್ಮಿಂದ ?


ನನ್ನ ತಿಳುವಳಿಕೆ ಪ್ರಕಾರ ತಾವು ಇನ್ನೊಂದು   ಅಂಶವನ್ನು ಗಮನಿಸಿಲ್ಲ, ಚರ್ಚಿಸಿಲ್ಲ ಅಥವಾ ಮತ್ತೆ ಜಾಣ ಕುರುಡುತನ ಕಾರಣವೋ ತಿಳಿಯುತ್ತಿಲ್ಲ. ನಮ್ಮ ಸುತ್ತ ಮುತ್ತ ನಾವು ವಾಸಿಸುವ ಈ ಭೂಮಿಯಲ್ಲಿ ಸಾವಿರಾರು ಏಕೆ ಸೂಕ್ಷ್ಮವಾಗಿ ಯೋಚಿಸಿದರೆ ಲಕ್ಷಗಟ್ಟಲೆ ಮಾನವ ಪ್ರಭೇದಗಳನ್ನು(ವಿಚಾರ ಸರಣಿ, ಬದುಕುವ ರೀತಿ ) ಕಾಣುತ್ತೇವೆ.  ಅದೇ ರೀತಿ ದೇಶ ದೇಶ, ಪ್ರದೇಶ ಪ್ರದೇಶಗಳಲ್ಲಿ ವಾಸಿಸುವ ಜನಗಳಲ್ಲಿ ವಿಚಾರ ಭೇಧ, ಪ್ರಭೇದ ಗಳನ್ನು ಕಾಣುತ್ತಿದ್ದೇವೆ, ಅರಿತಿದ್ದೇವೆ. ಒಬ್ಬರಿಗೆ ಸರಿಯಾಗಿ ಅನಿಸಿದ್ದು ಇನ್ನೊಬ್ಬರಿಗೆ ಸರಿ ಎನಿಸುವದಿಲ್ಲ ಅಥವಾ ತಪ್ಪು ಎಂದೇ ಅನಿಸುತ್ತದೆ.  ವೈಜ್ಞಾನಿಕವಾಗಿ , ದೇಹದ ಜೈವಿಕ ಬೆಳವಣಿಗೆಗನುಸಾರವಾಗಿ ಇರುವ ಮೆದುಳು ಈ ರೀತಿ ವಿಚಾರ ಪ್ರಭೇದಗಳಿಗೆ ಕಾರಣ ಎಂಬುದು   ಸರ್ವೇ ಸಾಮಾನ್ಯವಾಗಿ ಒಪ್ಪಿಕೊಂಡ ವಿಚಾರ.  ಈ ರೀತಿ ಜೈವಿಕ ಬೆಳವಣಿಗೆಗಳಿಗೆ ಆಹಾರ ಪದ್ಧತಿ , ನೇರವಾಗಿ ಹೇಳುವದಾದರೆ ಗೋ ಮಾಂಸ ಭಕ್ಷಣೆ ಯಾವ ರೀತಿ ಅನುಕೂಲ ಅಥವಾ ಅನಾನುಕೂಲ , ಪ್ರತಿಕೂಲ ಸ್ಥಿತಿ ನಿರ್ಮಿಸುವದೆಂಬುದರ   ಕುರಿತು ಇರುವ ಅಭ್ಯಾಸವೇನಾದರೂ ತಮ್ಮ ಗಮನದಲ್ಲಿದೆಯೇ?


ನಾಗೇಶ್ ಹೆಗಡೆಯವರಲ್ಲಿ ಒಂದು ವಿನಂತಿ. ನನ್ನ ಈ ವಿಚಾರಗಳನ್ನು ಓದಿ ನನ್ನನ್ನು ಯಾವುದೇ ರೀತಿ brand  ಆಗಿಸಬೇಡಿ.  ನಾನು ಯಾವುದೇ brand  ನ ವಿಚಾರಗಳಿಗೆ ಕಟ್ಟುಬಿದ್ದಿರುವವನಲ್ಲ.   ಸದ್ವಿಚಾರ, ಜೀವನಕ್ಕೆ ಉಪಯೋಗಿಯಾಗಬಲ್ಲ  ಯಾವುದೇ ವಿಚಾರಗಳಿದ್ದರೆ  ಸ್ವಾಗತಿಸುವ ನಿಲುವು ಹೊಂದಿದವನಾಗಿದ್ದೇನೆ.


ತಮ್ಮ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತಿದ್ದೇನೆ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ / ಬರಹಗಾರ.
www.hariharbhat.blogspot.com
May 26 , 2013.


ನಾಗೇಶ ಹೆಗಡೆ: ಗೋಹತ್ಯೆ ಗೋಜಲು! ಒಂದಿಷ್ಟು ವಾಸ್ತವ, ಒಂದಿಷ್ಟು ವಿಜ್ಞಾನ, ಒಂದಿಷ್ಟು ವಿವೇಕ

ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಸರಕಾರ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂಥ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು-ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ಥಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು-ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೊ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೊ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗಿ ಕಿತ್ತುಕೊಳ್ಳುತ್ತಿದೆ.
ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು….
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.
ಸೆಗಣಿ-ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ?
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಅಕೇಶಿಯಾ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಸಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತು ಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ-ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ವಿಷಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳೆ ಆಗುತ್ತದೆ. ಇವೆಲ್ಲವನ್ನು ಅನುಭವಿಸಿದಿ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡಿ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತಿ ಬರುತ್ತದೆ.
ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೆ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ ದನ ತಾನಾಗಿ ಸತ್ತಿದ್ದರೂ, ಪ್ರಮಾಣ ಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೊಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.
ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.
ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು-ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆ ಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?
ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.
ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೆ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ-ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಗೋಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನೆ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಬಿಡುತ್ತಿದ್ದರಂತೆ. ಹಾಸುಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದು ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನೆಗಳ ಭಯ ಇರಬಹುದು. ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದು ಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಜಿ. ರಾಮಕೃಷ್ಟ ಹೇಳುವ ಹಾಗೆ, ‘ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು’ ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳಿ ಬಂದರೆ ಮೇಲ್ಜಾತಿಯ ‘ದೀಕ್ಷೆ ಕೊಡಿಸುತ್ತೇನೆ’ ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; ‘ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ’ ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.
ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೆ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ-ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.
ಆದರೂ ಬುದ್ಧ-ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.
ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರೆಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರೂ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ-ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೆ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ, ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.
ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು… ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲುತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್‌ಟ್ರಬಲ್, ಹೊಟ್ಟೆನೋವಿನಿಂದ ಸಂಕಟ ಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು-ಕುರಿ-ಹಂದಿ- ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ ೩೩ ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ ೨೨ ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗೆ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ- ಮುಂಡ ಕಾಲು ಗೊರಸುಗಳನ್ನು (ಅದು ಕುರಿ-ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವೆ ಅಂಗಡಿ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳು ನಡೆಯಕೂಡದು.
ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು ೧೫೦ ಕಿಲೊ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ ೭೦ ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ ೫೦ ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು ೮೪ ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ ೨೪ ಕೋಟಿ ಟನ್ ಇದ್ದು ಅದರ ಶೇಕಡಾ ೯೫ ಭಾಗ ಪಶುಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್‌ಗೆ ೨೮ ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ ೯೦೦ ಲೀಟರ್ ನೀರು ವ್ಯಯವಾಗುತ್ತಿದೆ.
ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನುಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ ‘ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ’ ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.
ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ-ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಂದಿವೆ. ಜರ್ಸಿ ಅಥವಾ ಎಚ್‌ಎಫ್ ಹಸುಗಳಿಗೆ ಹೋರಿಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಅಕೇಶಿಯಾ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ-ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ…. ಅಂಥ ಅನೈಸರ್ಗಿಕ ಹಾಲು ಹೈನು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೊ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.
ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖ್ಯೆಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. ‘ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ’ ಎಂದು ಐಸೆಕ್‌ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ ೨೦ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೇಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. (ಅವುಗಳನ್ನು ಹಾಗೇ ಸುತ್ತಾಡಲು ಬಿಟ್ಟರೆ ‘ಊರೂರಲ್ಲಿ ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಡಕಲು ದನಗಳೇ ಕಾಣುತ್ತವೆ ಕಣ್ರೀ’ ಎಂದು ತೇಜಸ್ವಿ ಒಮ್ಮೆ ಹೇಳಿದ್ದರು) ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು-ಕುರಿಗಳನ್ನು ಬೆಳೆಸುವುದು.
ದನದ ಮಾಂಸಕ್ಕೆ ಬದಲಿಯಾಗಿ ಆಡು-ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು-ಮೇಕೆಗಳು ಲಂಗು ಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ-ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಲಯಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು -ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖ್ಯೆಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್‌ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇವರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯ ವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೆವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನೆ ಹಬ್ಬಲು ಕಾರಣವಾಗಬಹುದು. ಬನ್ನೇರು ಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನು ತಿಂದೇ ಸತ್ತಿವೆ.
ಔಷಧ ಮತ್ತು ರಸವಸ್ತುಗಳ ಉತ್ಪಾದನೆಗೆ ಗೋಹತ್ಯೆ ನಿಷೇಧದಿಂದ ಹೇಗೆ ಧಕ್ಕೆ ಬರಲು ಸಾಧ್ಯ? ವೈದ್ಯಕೀಯಕ್ಕೂ ದನಕರುಗಳಿಗೂ ಅದೆಂಥ ಸಂಬಂಧ?
ವೈದ್ಯಕೀಯ ರಂಗಕ್ಕಷ್ಟೇ ಅಲ್ಲ, ಉದ್ಯಮರಂಗಕ್ಕೆ ಮತ್ತು ನಮ್ಮ ದಿನಬಳಕೆಯ ಸಾವಿರಾರು ವಸ್ತುಗಳಿಗೆ ಬೇಕಾದ ಕಚ್ಚಾ ಪದಾರ್ಥಗಳು ಕಸಾಯಿಖಾನೆಗಳಿಂದಲೇ ಲಭಿಸುತ್ತವೆ. ಅದರ ವ್ಯಾಪ್ತಿ ಜನಸಾಮಾನ್ಯರ ಊಹೆಗೂ ಮೀರಿದ್ದಾಗಿದೆ. ಅದನ್ನು ತುಸು ವಿವರವಾಗಿ ನೋಡೋಣ:
ಒಂದು ಹಸು, ಎತ್ತು ಅಥವಾ ಎಮ್ಮೆ ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ಮಾಂಸದ ಆಯ್ದ ಭಾಗಗಳನ್ನು ಕೆಲವರು ಆಹಾರಕ್ಕೆ ಬಳಸುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಪುಡಿ ಮಾಡಿದ ಮೂಳೆಗಳನ್ನು ಸಕ್ಕರೆಯನ್ನು ಬಿಳಿ ಮಾಡಲೆಂದು ಮೂಳೆಪುಡಿಯನ್ನು ಬಳಸುತ್ತಾರೆ. ರಸಗೊಬ್ಬರಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ‘ಬೋನ್‌ಮೀಲ್’ ಫ್ಯಾಕ್ಟರಿಗಳಿಂದಲೇ ಪೂರೈಸಲಾಗುತ್ತದೆ. ಇದರಾಚಿನ ಗೋಪುರಾಣ ಹೀಗಿದೆ:
ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ಮನುಷ್ಯರ ಸರ್ಜರಿ ಮಾಡುತವಾಗ ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್‌ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ-೧೨, ಲಿವರ್ ಎಕ್ಸ್‌ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನ್ನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.
ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.
ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್‌ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ರಕ್ತಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್‌ಗೂ ದನದ ರಕ್ತವೇ ಮೂಲದ್ರವ್ಯ. ಇಡೀ ದೇಶದ ಗ್ರಾಮೀಣ ಗರ್ಭಿಣಿಯರಿಗೆ ಇಂದು ವಿತರಣೆಯಾಗುವ ಐರನ್ ಟ್ಯಾಬ್ಲೆಟ್‌ಗಳಿಗೆ ಇದೇ ಮೂಲವಸ್ತು.
ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯಚ್ಚ ಗುಣಮಟ್ಟದ ವಿಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್‌ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.
ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ ‘ಟ್ಯಾಲೊ’ ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯನ್ನು ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಬಸ್ಸು, ಲಾರಿ, ಕಾರುಗಳ ಹೈಡ್ರಾಲಿಕ್ ಬ್ರೇಕ್‌ಗಳಿಗೆ ದನದ ಎಣ್ಣೆ ಬಳಕೆಯಾಗುತ್ತದೆ. ಬಸ್ ನಿಂತಾಗ ಅಟೊಮೆಟಿಕ್ ಬಾಗಿಲು ತೆರೆಯಲಿಕ್ಕೂ ಇದೇ ದ್ರವ ಬೇಕು. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್‌ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್‌ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್‌ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.
ಸೂರಿನಿಂದ ಮಳೆನೀರು ಸೋರುವುದನ್ನು ತಡೆಗಟ್ಟಬಲ್ಲ ‘ವಾಟರ್ ಪ್ರೂಫಿಂಗ್’ ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ.
ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯೂಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.
ದನಗಳ ಅಂಗಾಂಶಗಳನ್ನು ಜೋಡಿಸುವ ‘ಕೊಲಾಜೆನ್’ ಎಂಬ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧವಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್‌ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್‌ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ. ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೊಟೊಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನೆಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತವೆ.
ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್‌ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಔದ್ಯಮಿಕ ಅಧಿಪತಿಗಳು ಬಳಸುವ ಅತಿ ದುಬಾರಿ ಸೋಫಾ ಮತ್ತು ಕಾರಿನ ಕುಶನ್‌ಗಳಿಗೆ ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮವೇ ಬಳಕೆಯಾಗುತ್ತದೆ….
ಸಾಕು, ಸಾಕು ಈ ಗೋಪುರಾಣ! ದನಗಳು ತಾವಾಗಿ ಸಾವಪ್ಪಿದ ನಂತರವೂ ಅವುಗಳ ದೇಹದಿಂದ ಇವೆಲ್ಲ ಉಪಯುಕ್ತ ವಸ್ತುಗಳನ್ನು ಪಡೆಯಲು ಸಾಧ್ಯವಿದೆ, ಏನಂತೀರಿ?
ಅಲ್ಲೊಂದು ಇಲ್ಲೊಂದು ದನ ಸತ್ತರೆ ಈ ಯಾವ ಉತ್ಪಾದನೆಗೂ ಅವಕಾಶವಿಲ್ಲ. ಹಿಂದೆ ಹೇಳಿದಂತೆ, ಇವನ್ನೆಲ್ಲ ಕಸಾಯಿಖಾನೆಗಳಲ್ಲಿ ಸಂಸ್ಕರಣೆ ಮಾಡಿದರಷ್ಟೇ ಉದ್ಯಮಗಳಿಗೆ ಬೇಕಾದ ಪ್ರಮಾಣದಲ್ಲಿ ಅವು ಲಭ್ಯವಾಗುತ್ತವೆ. ಗೋಹತ್ಯೆ ನಿಷೇಧಿಸಿದರೆ ಮನುಷ್ಯರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಔಷಧಗಳನ್ನೆಲ್ಲ ವಿದೇಶಗಳಿಂದಲೇ ತರಿಸಬೇಕಾಗುತ್ತದೆ. ವೆಚ್ಚ ಅತಿಯಾಗುತ್ತದೆ. ಅಷ್ಟೇ ಅಲ್ಲ, ದನಗಳ ಕಾಯಿಲೆಗಳಿಗೂ ಔಷಧ ವೆಚ್ಚ ಹೆಚ್ಚುತ್ತದೆ!
ಹಾಗಿದ್ದರೆ, ಪಶುಸಂಗೋಪನೆ ಈಗಿನ ಸ್ಥಿತಿಯಲ್ಲೇ ಮುಂದುವರೆಯಬೇಕೆನ್ನುತ್ತೀರಾ? ಸಭ್ಯ ಪ್ರಾಣಿ ಗೋವಿನ ಬಗ್ಗೆ ದಯೆ, ಪ್ರೀತಿಯನ್ನೆಲ್ಲ ಕಳೆದುಕೊಂಡ ನಾವು ಮನುಷ್ಯತ್ವವನ್ನೇ ಕಳೆದುಕೊಂಡಂತೆ ಅಲ್ಲವೆ?
ಅದು ಹಾಗಲ್ಲ. ಗೋವುಗಳ ಸ್ಥಿತಿ ಈಗಿಗಿಂತ ಉತ್ತಮವಾಗಬೇಕೆಂದು ನಾವು ವಾದಿಸುತ್ತೇವೆ. ವ್ಯವಸ್ಥಿತ, ವೈಜ್ಞಾನಿಕ ಪಶುಸಂಗೋಪನೆ ಮತ್ತು ಸಂಸ್ಕರಣೆ ನಡೆಯಬೇಕು. ಗೋ-ಕುಲವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಜೀವಜಾಲ ಮತ್ತೆ ಸಮತೋಲ ಸ್ಥಿತಿಗೆ ಬರಬೇಕು. ನಮ್ಮದು ಸಮೃದ್ಧ, ಸುಸಂಸ್ಕೃತ ದೇಶ ಎಂಬುದು ಬಿಂಬಿತವಾಗಬೇಕು. ಹಾಗಾಗಬೇಕಾದರೆ ಗೋಹತ್ಯೆ ನಿಷೇಧವೆಂಬ ಬುಡುಬುಡಿಕೆ ಬಾರಿಸುವ ಬದಲು ಈ ಮುಂದೆ ಹೇಳಿದ ಕ್ರಮಗಳನ್ನು ಕೈಗೊಂಡು ನಮ್ಮ ಮಾನವೀಯ ಕಳಕಳಿಯನ್ನು ಮೆರೆಯಬೇಕು.
ಗೋವುಗಳಿಗೆ ಸಾಕಷ್ಟು ಸಾವಯವ ಆಹಾರ, ಶುದ್ಧ ಮೇವು, ಶುದ್ಧ ನೀರು ಸಿಗುವಂತಾಗಬೇಕು. ಈಗಂತೂ ಕೆಮಿಕಲ್ ಮೇವು ತಿಂದು, ನೈಟ್ರೇಟ್ ಲವಣಗಳಿರುವ ಬೋರ್‌ವೆಲ್ ನೀರು ಕುಡಿದು ಇಡೀ ಹೈನು ಉದ್ಯಮ ಇಂದು ಕಾಯಿಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಅದನ್ನು ತಪ್ಪಿಸಬೇಕೆಂದರೆ ಸಾಧ್ಯವಿದ್ದಷ್ಟೂ ಗೋಮಾಳಗಳ ಸಂವರ್ಧನೆ ಆಗಬೇಕು. ಗುಡ್ಡಬೆಟ್ಟಗಳಲ್ಲಿ ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ ಬದಲಿಗೆ ನಮ್ಮ ನಾಡಿಗೆ ಸಹಜವೆನಿಸಿದ ಹುಲ್ಲುಮೇವು ಬೆಳೆಯುವಂತಾಗಬೇಕು. ಕೃಷಿಭೂಮಿಯಿಂದ ಸಿಗುವ ಬೇಹುಲ್ಲಿನ ವಿಷ ರಸಗಳ ಪತ್ತೆಗೆ ಸರಳ ಸಾಧನಗಳು ಹೈನುಗಾರರಿಗೆ ಲಭಿಸಬೇಕು. ಹಾಲಿನಲ್ಲಿರುವ ಕೆಮಿಕಲ್ ವಸ್ತುಗಳ ಪತ್ತೆಗೆ ಉಪಕರಣಗಳು ಸಿಗಬೇಕು (ನಮ್ಮ ಈಗಿನ ಮೇವಿನಲ್ಲಿ ಎಂಡೊಸಲ್ಪಾನ್ ವಿಷದ ಪ್ರಮಾಣ ತೀರ ಜಾಸ್ತಿ ಇರುವುದರಿಂದ, ವಿದೇಶಗಳಿಗೆ ಹೈನು ಉತ್ಪನ್ನಗಳನ್ನು ರಫ್ತು ಮಾಡುವ ‘ಡೈನಾಮಿಕ್ಸ್’ ನಂಥ ಕಂಪನಿಗಳು ಕರ್ನಾಟಕದ ಹಾಲನ್ನು ಖರೀದಿಸುತ್ತಿಲ್ಲ. ನಮ್ಮ ಕಾಮಧೇನುವಿನ ವಿಷವನ್ನು ನಾವೇ ಸೇವನೆ ಮಾಡಬೇಕಾಗಿದೆ). ಈ ಕ್ರಮಗಳನ್ನು ಕೈಗೊಂಡರೆ ನಮ್ಮ ಗುಡ್ಡಬೆಟ್ಟ ಕೆರೆಕಟ್ಟೆಗಳ ಜೀವಸಮೃದ್ಧಿಯೂ ಹೆಚ್ಚುತ್ತದೆ. ಪರಿಸರವೂ ಶುದ್ಧವಾಗುತ್ತದೆ. ಇಂಥ ಪರಿಶುದ್ಧ ಸ್ಥಿತಿಯಲ್ಲಿ ಸಿದ್ಧವಾಗುವ ಸಾವಯವ ಹೈನು ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಗ್ರಾಮೀಣ ಜನರ ಆರ್ಥಿಕ ಬಲದ್ದೂ ಸಂವರ್ಧನೆಯಾಗುತ್ತದೆ.
ಪಶುಸಂಗೋಪನೆಯಲ್ಲಿ ಅಸಮತೋಲ ನಿವಾರಣೆಯಾಗಬೇಕು. ಅಂದರೆ, ಹೋರಿ, ಎತ್ತು, ಎಮ್ಮೆ, ಕೋಣಗಳನ್ನೂ ಬೆಳೆಸಬೇಕು. ಅವನ್ನು ಪುಷ್ಟಿಗೊಳಿಸಲು ಬೇಕಾದ ಅಗಸೆ, ಹಾಲಿವಾಣ, ಸುಬಾಬುಲ್, ವೆಲ್ವೆಟ್ ಅವರೆ, ಕಾಡು ಅಲಸಂದೆ ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡಿ ಹೊಲದ ಬದುಗಳಲ್ಲಿ, ಬರಡುಭೂಮಿಯಲ್ಲಿ ಬೆಳೆಸಿದರೆ, ಅವೇ ಹಣದ ಬೆಳೆಯಾಗುತ್ತವೆ. ಅಷ್ಟೇ ಅಲ್ಲ, ಅಂತರ್ಜಲವನ್ನು ಹೆಚ್ಚಿಸುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಕೆರೆಗಳಲ್ಲಿ ಹೂಳು ಶೇಖರವಾಗದಂತೆ ತಡೆಯುತ್ತವೆ. ಕೆರೆಕೊಳ್ಳ ಮತ್ತು ಸುತ್ತಲಿನ ಇಡೀ ಪರಿಸರ ಸಮೃದ್ಧ ಜೀವವೈವಿಧ್ಯದ ನೆಲೆದಾಣವಾಗುತ್ತದೆ. ಸಾಕುಪ್ರಾಣಿಗಳ ಬದುಕಿನ ಗುಣಮಟ್ಟವನ್ನು ಹೆಚಿಸ್ಚುವತ್ತ ಗಮನವಿರಬೇಕೇ ವಿನಾ ಕೃಶವಾಗಿದ್ದರೂ ಸರಿ ‘ಸಹಜ ಸಾವೇ ಬರಲಿ’ ಎಂದು ವಾದಿಸುವುದು ಸರಿಯಲ್ಲ. ಸಹಜ ಪರಿಸರದಲ್ಲಿ ಓಡಾಡುತ್ತ, ಉತ್ತಮ ಪೋಷಕಾಂಶ ಸೇವಿಸುತ್ತ ಅವು ನೆಮ್ಮದಿಯಿಂದ ಗರಿಷ್ಠ ಬೆಳೆವಣಿಗೆಯ ಹಂತ ತಲುಪಲು ಅವಕಾಶ ಕೊಟ್ಟು ನಂತರ ಪ್ರೀತಿಯಿಂದಲೇ ಅವನ್ನು ಕಸಾಯಿಖಾನೆಗೆ ಕಳಿಸಿಕೊಡಲು ಸಾಧ್ಯವಿದೆ. ನಿಸರ್ಗದಲ್ಲಿ ಹುಲಿ, ಸಿಂಹ, ಮೊಸಳೆಗಳ ಬಾಯಿಗೆ ಸಿಕ್ಕು ಸಾವಪ್ಪುತ್ತವೆ ತಾನೆ? ಅದು ಪ್ರಕೃತಿ ನಿಯಮಕ್ಕೆ ಅತಿ ಹತ್ತಿರದ ಪಶುಸಂಖ್ಯಾ ನಿಯಂತ್ರಣ ಕ್ರಮವೂ ಹೌದು.
ಸರಕಾರಿ ನೆರವು ಪಡೆಯುವ ಹೈನುಗಾರಿಕೆಯಲ್ಲಿ ಗೋಬರ್ ಅನಿಲ ಉತ್ಪಾದನೆಯನ್ನು ಕಡ್ಡಾಯಗೊಳಿಸಬೇಕು. ಈಗಿನ ವ್ಯವಸ್ಥೆಯಲ್ಲಿ ಸೆಗಣಿಯ ರಾಶಿಯಿಂದ ಹೊರಬೀಳುವ ಮೀಥೇನ್ ಅನಿಲ ನಿರುಪಯುಕ್ತವಾಗಿ ಹೋಗುತ್ತಿದೆ ಅಷ್ಟೆ ಅಲ್ಲ, ವಾತಾವರಣಕ್ಕೆ ಸೇರಿ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಸುಧಾರಿತ ದೇಶಗಳು ನಮ್ಮ ಪಶುಸಂಪತ್ತಿನ ದುರ್ವ್ಯಯದ ಬಗ್ಗೆ ಟೀಕೆ ಮಾಡಲು ಅವಕಾಶವಿರಕೂಡದು. ಸೆಗಣಿ ಅನಿಲದ ಬಾಟಲೀಕರಣ ಸಾಧ್ಯವಾದರೆ ಅದರಿಂದ ಟ್ರ್ಯಾಕ್ಟರ್ ಟಿಲ್ಲರ್ ಓಡಿಸಬಹುದು. ನೀರೆತ್ತುವ ಪಂಪ್‌ಗಳಿಗೆ ಶಕ್ತಿ ಸಿಗುತ್ತದೆ. ಆಗ ಪಶುಸಂಗೋಪನೆ ಮತ್ತೆ ಸಮತೋಲಕ್ಕೆ ಬರುತ್ತದೆ; ಮತ್ತೊಮ್ಮೆ ನಿಜವಾದ ಅರ್ಥದಲ್ಲಿ ಕೃಷಿ ಎಂಬುದು ಪಶುಕೇಂದ್ರಿತವಾಗಿ ಗ್ರಾಮವಾಸಿಗಳ ಆರ್ಥಿಕಬಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಕಸಾಯಿಖಾನೆಗಳ ಆಧುನೀಕರಣವಾಗಬೇಕು. ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದ ಹಾಗೆ ಸಾಧ್ಯವಾದಷ್ಟೂ ನೋವಿಲ್ಲದ ಸ್ಟನ್ನಿಂಗ್ ವಿಧಾನದಲ್ಲೇ ಪಶುವಧೆ ನಡೆಯಬೇಕು. ನಂತರದ ಸಂಸ್ಕರಣೆಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
ಗಲ್ಲಿ ಮೊಹಲ್ಲಾಗಳ ಸಂದುಗೊಂದಿನಲ್ಲಿ ಪಶುವಧೆಗೆ ಅವಕಾಶ ಕೊಡಬಾರದು. ಈಗಿನ ಸ್ಥಿತಿಯಲ್ಲಿ ಅದಕ್ಕೆ ನಿರ್ಬಂಧ ಹೇರುವುದು ಕಷ್ಟಸಾಧ್ಯ; ಏಕೆಂದರೆ ಕಸಾಯಿಖಾನೆಗಳು ತೀರಾ ದೂರದಲ್ಲಿವೆ. ಅಚ್ಚುಕಟ್ಟಾದ, ಮಾಲಿನ್ಯದ ಲವಲೇಶವೂ ಇಲ್ಲದ ಚಿಕ್ಕ ಚಿಕ್ಕ ಕಸಾಯಿಖಾನೆಗಳನ್ನು ಸ್ಥಾಪಿಸಲು ಸಾಧ್ಯವಿದೆ. ಅಂಥವು ಸೂಕ್ತ ಸ್ಥಳಗಳಲ್ಲಿ ಸ್ಥಳಗಳಲ್ಲಿ ಸ್ಥಾಪಿಸಬೇಕು. ಅಲ್ಲಿಂದ ಹೊರಬರುವ ಶೇಷದ್ರವ್ಯಗಳು ಚರಂಡಿಗೆ ಸೇರದಂತೆ ಪ್ರತ್ಯೇಕ ಸಾಗಿಸಬೇಕು. ಅಲ್ಲೆಲ್ಲ ಶಿಸ್ತಿನ ಮೇಲ್ವಿಚಾರಣೆ ನಡೆಯುತ್ತಿರಬೇಕು.
ಬೀದಿಬದಿಗಳಲ್ಲಿ, ತೆರೆದ ಅಂಗಡಿಗಳಲ್ಲಿ ಮಾಂಸದ ಪ್ರಾಣಿಗಳ ವಿವಿಧ ಅಂಗಗಳ ಪ್ರದರ್ಶನವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಯಾವ ಸಂದರ್ಭದಲ್ಲೂ ಸೈಕಲ್‌ಗಳ ಮೇಲೆ, ದ್ವಿಚಕ್ರ ವಾಹನಗಳ ಮೇಲೆ ಮೂಕಪ್ರಾಣಿ-ಪಕ್ಷಿಗಳ ಸಾಗಾಟಕ್ಕೆ ಅವಕಾಶ ಕೊಡಬಾರದು.
ಇಂಥ ವ್ಯವಸ್ಥೆಯಲ್ಲಿ ಸಾಮಾಜಿಕ ನೆಮ್ಮದಿ ನೆಲೆಸುತ್ತದೆ. ವಾಸ್ತವದ ನೆಲೆಗಟ್ಟಿನಲ್ಲೇ ಈಗಿರುವ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಗೋವುಗಳೂ ಸೇರಿದಂತೆ ಎಲ್ಲ ಜೀವಿಗಳ ಮೇಲೆ ನಮಗಿರುವ ಮಾನವೀಯ ಅನುಕಂಪ, ಅಂತಃಕರಣ ಹಾಗೂ ಸಂವೇದನೆಗಳಿಗೆ ಭಂಗ ಬರುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದೇ ಆದರೆ ಕೆಲವು ಗಂಭೀರ ಪ್ರಶ್ನೆಗಳು ಏಳುತ್ತವೆ. ಯಾವುದೇ ಕಾನೂನು ನಮ್ಮಲ್ಲಿ ಜಾರಿಗೆ ಬಂದರೂ ಈಗಿನ ಚಟುವಟಿಕೆಗಳು ಹೆಚ್ಚೆಂದರೆ ಭೂಗತವಾಗುತ್ತವೆ, ಕಾನೂನುಬಾಹಿರ ಕೃತ್ಯದ ಸಾಮಾಜಿಕ ವೆಚ್ಚ ಹೆಚ್ಚುತ್ತದೆ. ಗೋವಧೆ ಆಗದಂತೆ ಊರೂರಲ್ಲಿ ನಿಗಾ ಇಡಬೇಕಾದವರು ಯಾರು? ಪೊಲೀಸರಿಗೆ ಈಗಾಗಲೇ ಹೊರೆಯಷ್ಟು ಕೆಲಸಗಳಿವೆ. ಕೊಲೆ, ದರೋಡೆ, ಕಳ್ಳಸಾಗಣೆಯಂಥ ಕುಕೃತ್ಯಗಳ ಮೇಲೆ ನಿಗಾ ಇಡವ ಬದಲು ಅವರು ಅರೆಹೊಟ್ಟೆಯ ಗೋವುಗಳ ಸಂರಕ್ಷಣೆಗೆ ಹೊರಡಬೇಕೆ? ಅವರಿಂದ ಅದು ಸಾಧ್ಯವಿಲ್ಲವೆಂದು ಸಂಘ ಪರಿವಾರದ ಉತ್ಸಾಹಿಗಳಿಗೆ ಅಥವಾ ಖಾಸಗಿ ಜನರಿಗೆ ಇಂಥ ಅಧಿಕಾರವನ್ನು ಕೊಟ್ಟರೆ ಅದು ಇನ್ನಷ್ಟು ಕ್ಷೆಭೆಗೆ ಕಾರಣವಾಗಬಹುದು. ಬಿಹಾರ, ಝಾರ್‌ಖಂಡ್‌ಗಳಲ್ಲಿ ಸರಕಾರವೇ ಹಳ್ಳಿಯವರಿಗೆ ಬಂದೂಕು ಕೊಟ್ಟು ‘ಸಲ್ವಾ ಝುಡೂಮ್’ ಹೆಸರಿನಲ್ಲಿ ಅರಾಜಕತೆ ಉಂಟು ಮಾಡಿದಾಗಿನ ಪರಿಸ್ಥಿತಿಯೇ ಇಲ್ಲಿ ತಲೆದೋರಬಹುದು. ದ್ವೇಷ, ಸೇಡು, ಅಸೂಯೆ, ಕ್ರೌರ್ಯಗಳ ರಕ್ತಬೀಜಾಸುರ ಸಂತಾನವನ್ನೇ ನಾವು ಸೃಷ್ಟಿ ಮಾಡಿದಂತಾಗುತ್ತದೆ. ರಾಸುಗಳನ್ನು ರಸ್ತೆಯಲ್ಲಿ ಒಯ್ಯುವುದೇ ಹಿಂಸಾಕೃತ್ಯಗಳಿಗೆ, ಕೋಮುಗಲಭೆಗಳಿಗೆ ಕಾರಣವಾಗಬಹುದು.
ಇಂಥ ಸಂವಿಧಾನಬಾಹಿರ ‘ಜಂಗಲ್‌ರಾಜ್’ ನಮಗೆ ಬೇಕೆ? ಅದರಿಂದಾಗಿ ತಲೆದೋರುವ ಸಾಂಕ್ರಾಮಿಕ ತ್ವೇಷಗಳು ಬೇಕೆ? ಅಥವಾ ಪ್ರೀತಿಯಿಂದ ಗೋವುಗಳನ್ನು ಸಾವಯವ ವಿಧಾನದಲ್ಲಿ ಪಾಲನೆ ಪೋಷಣೆ ಮಾಡುತ್ತಲೇ ಅದರ ಜತೆಜತೆಗೇ ನಿಸರ್ಗ ಸಂವರ್ಧನೆ, ಆರ್ಥಿಕ ಸುಧಾರಣೆ ಹಾಗೂ ಸಮುದಾಯದ ನೆಮ್ಮದಿ ಕಾಪಾಡುವ ಕ್ರಮಗಳು ಬೇಕೆ?

Tuesday, May 14, 2013

ಕರ್ನಾಟಕಾ ವಿಧಾನ ಸಭೆ ಚುನಾವಣೆ 2013


ಕರ್ನಾಟಕಾ  ವಿಧಾನ ಸಭೆ ಚುನಾವಣೆ  2013


ಕರ್ಣಾಟಕ  ರಾಜ್ಯದ  ವಿಧಾನಸಭೆ  ಚುನಾವಣೆ  ಮುಗಿದು  ಕಾಂಗ್ರೆಸ್  ಪಕ್ಷ  ಅಧಿಕಾರ  ಪಡೆದಾಯಿತು . ಅಧಿಕಾರದ ಪ್ರಭಾವದಿಂದೊದಗುವ ಸಮಸ್ಯೆಗಳು ಒಂದೊಂದಾಗಿ ಇನ್ನು ತೆರೆದುಕೊಳ್ಳಲು ಆರಂಭವಾಗುತ್ತವೆ ಮತ್ತು ಆರಂಭಿಕ ಸೂಚನೆಗಳು ಅಲ್ಲಲ್ಲಿ ಗೋಚರಿಸುತ್ತಿವೆ. ಇಷ್ಟಕ್ಕೇ ಸಮಸ್ಯೆಗಳ ಸಾಲು ನಿಲ್ಲುತ್ತವೆಂದೇನಲ್ಲ, ಹೊಸ ಹೊಸ ವಿನೂತನ ಸಮಸ್ಯೆಗಳು ಉದ್ಭವವಾಗುವದು ಸರ್ವೇ ಸಾಮಾನ್ಯ.



ಅಧಿಕಾರ ಸಿಕ್ಕಿದ ಸಂತೋಷದಲ್ಲಿ ಮತದಾರ ನೀಡಿದ ಸೂಚನೆಗಳನ್ನು ಕಾಂಗ್ರೆಸ್ಸ್ ಪಕ್ಷ ವಿಮರ್ಶಿಸದೇ ಮರೆತುಬಿಡುವ ಸಾಧ್ಯತೆಗಳೇ ಹೆಚ್ಚು. ಅಧಿಕಾರ ಹಿಡಿಯಲಾಗದ ಪಕ್ಷ ಸೋಲಿನ  ವಿಮರ್ಶೆಗೆ ತೊಡಗುವದು , ಅಧಿಕಾರ ದೊರಕಿದವರು ಆಡಳಿತದೆಡೆ ಸಾಗುವದು  ಸರ್ವೇ ಸಾಮಾನ್ಯವಾಗಿ ಇರುವ ಬೆಳವಣಿಗೆಗಳು. ಆದರೆ ಈ ಚುನಾವಣೆಯ ವಿಶೇಷವೆಂದರೆ ಆಡಳಿತ ದೊರೆತ ಪಕ್ಷ ತನ್ನ ವಿಜಯವನ್ನು ತನಗೆ ದೊರೆತ ಮತಗಳ ಸಂಖ್ಯೆಯ ಆಧಾರದಲ್ಲಿ  ಕ್ಷೇತ್ರಾವಾರು  ವಿಮರ್ಶಿಸಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಹೆಚ್ಚಿನ ಸಂಖ್ಯೆಯ ಮತದಾರರನ್ನು ಆಕರ್ಷಿಸುವ ಅಗತ್ಯತೆ ಕಂಡುಬರುತ್ತದೆ. ಇದೇ ಜಾಗ್ರತ ಮತದಾರ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಸಲಹೆಯಾಗಿದೆ.



ಹಿಂದಿನ ಚುನಾವಣೆಗೆ ಹೋಲಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಮತ ಗಳಿಕೆಯಲ್ಲಿ ಒಟ್ಟಾರೆ ಕೇವಲ ಶೇಕಡಾ ಎರಡು ವೃದ್ಧಿ ಸಾಧಿಸಿದೆ. ಬಿ ಜೆ ಪಿ ಹೋಳಾಗಿ, ಹಿಂದೆ ಒಂದೇ ಪಕ್ಷವಿದ್ದಾಗ ಗಳಿಸಿದ ಮತಗಳು ವಿಭಜನೆಯಾದ್ದರಿಂದ ಇಂದು ಕಾಂಗ್ರೆಸ್ಸ್ ಅಧಿಕಾರ ಹಿಡಿಯಿತು.  ಬಿ.ಜೆ.ಪಿ , ಕೆ.ಜೆ.ಪಿ ಮತ್ತು ಬಿ ಎಸ್ ಆರ್  ಕಾಂಗ್ರೆಸ್ಸ್ ಈ ಚುನಾವಣೆಯಲ್ಲಿ ಗಳಿಸಿದ ಮತಗಳನ್ನು ಒಟ್ಟು ಸೇರಿಸಿ  ತುಲನಾತ್ಮಕವಾಗಿ ನೋಡಿದರೆ , ಬಿ ಜೆ ಪಿ ಹೋಳಾಗದಿದ್ದರೆ ನಿಶ್ಚಿತವಾಗಿಯೂ ಬಿ.ಜೆ.ಪಿ ಯೇ ಅಧಿಕಾರಕ್ಕೆ ಮರಳುತ್ತಿತ್ತು ಎಂಬುದು ನಿಸ್ಸಂಶಯ. ಈ ಎಲ್ಲಾ ಅಂಶಗಳೇ ಮತದಾರ ನೀಡಿದ ಸಂದೇಶಗಳು ಮತ್ತು ಈ ಸಂದೇಶಗಳೇ ಕಾಂಗ್ರೆಸ್ಸ್ ಪಕ್ಷಕ್ಕೆ ನೀಡಿದ ಎಚ್ಚರಿಕೆ ಮತ್ತು ಬಿ.ಜೆ.ಪಿ, ಕೆ.ಜೆ.ಪಿ, ಬಿ.ಎಸ್.ಆರ್ ಕಾಂಗ್ರೆಸ್ಸಗಳಿಗೆ ನೀಡಿದ ಸೂಚನೆಗಳಾಗಿವೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
www.hariharbhat.blogspot.ಕಂ
May  15  , 2013 .