Saturday, February 23, 2013

ಇದೇನು ಪ್ರಗತಿಯೋ ? ಇದೇನು ಲೈಫೋ ?


ಇದೇನು ಪ್ರಗತಿಯೋ ? ಇದೇನು ಲೈಫೋ ?
------------------------------------------------


ಕೆಂಗೇರಿ ಉಪಗನಗರ  ವಾರ್ಡ್ ನಂಬರ್ ೧೫೯.    ದಿನಪತ್ರಿಕೆಯೊಂದು    ಕಾರ್ಪೊರೇಟರ್ ಅಂಜನಪ್ಪನವರ ಸಹಕಾರದೊಂದಿಗೆ ಜನತಾ ದರ್ಶನ ಕಾರ್ಯಕ್ರಮ ನಡೆಸಿತು. ಬಹಳ ಉತ್ಸಾಹದಿಂದ ಸ್ಪಂದಿಸಿದ ನಾಗರಿಕರು ಸಮಸ್ಯೆಯ ಮೂಟೆಗಳನ್ನೇ  ಬಿಚ್ಚಿ ಇಟ್ಟರು.  ವಿಶ್ವಾಸಗಳ ಮಹಾಪೂರವೇ ಹರಿದುಬಂತು.



ಮುಂದೇನಾಯಿತು ?  ಪತ್ರಿಕೆಯಲ್ಲಿ ಬರುತ್ತಿರುವ ಪರಿಹಾರಗಳು ಖಾರಾ ಮಂಡಕ್ಕಿಯ ಮೇಲೆ ರುಚಿಗಾಗಿ ಸಿಂಪಡಿಸುವ ಲಿಂಬು ಹುಳಿಯಂತಿದೆ.



ನೋಡಿ ಪ್ರತಿ ದಿನ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು.



 ಕತ್ತಲಾದ ಮೇಲೆ ಯಾವ ರಸ್ತೆಯಲ್ಲಿ ನಡೆದಾಡಿದರೂ ಅನುಭವಕ್ಕೆ ಬರುವ ಸಾಮಾನ್ಯ ಸಂಗತಿಗಳು, ಪ್ರತಿ ರಸ್ತೆಯಲ್ಲಿರುವ ಬೀದಿ ದೀಪಗಳಲ್ಲಿ ಸರಾಸರಿ ಹತ್ತರಲ್ಲಿ ನಾಲ್ಕರಿಂದ ಐದು ಮಾತ್ರ ಬೆಳಗುತ್ತಿರುವವು, ಅವೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಮಂಕು ಮಂಕಾಗಿ ಮಿನುಗುವವು. ಹಾಗಾಗಿ ಯಾವುದೇ ರಸ್ತೆಯಲ್ಲಿ ಕತ್ತಲಾದ ನಂತರ ಹೋದರೆ , ಮಬ್ಬು ಮಬ್ಬು ಬೆಳಕಿನಲ್ಲಿ ಓಡಾಡಬೇಕಾದುದು ಸರ್ವೇ ಸಾಮಾನ್ಯ.



ಅಲ್ಲಲ್ಲಿ ರಸ್ತೆಯ ಉಬ್ಬು ತಗ್ಗುಗಳಲ್ಲಿ   ನೀರು, ಕೊಳಚೆ  ನಿಂತಿರುವದು ಸಾಮಾನ್ಯ . ವಾಹನ ಸವಾರರು ಆ ನೀರು, ಕೊಳಚೆಯನ್ನು ತಪ್ಪಿಸಿ ಸಾಗಲು ಸರ್ಕಸ್ ಮಾಡುವರು, ಪಾದಾಚಾರಿ ರಸ್ತೆಗಳಿಲ್ಲದಿರುವದರಿಂದ    ಮತ್ತು  ಪಾದಾಚಾರಿ ರಸ್ತೆಗಳಿರುವಲ್ಲಿ  ಚಿಕ್ಕ ಪುಟ್ಟ ಅಂಗಡಿಕಾರರೇ ಆ ಪಾದಾಚಾರಿ ರಸ್ತೆಗಳನ್ನು ಅಲ್ಲಲ್ಲಿ ಆಕ್ರಮಿಸಿರುವದರಿಂದ ,  ಬೇರೆ ವಿಧಿಯಿಲ್ಲದೇ ರಸ್ತೆಯಲ್ಲೇ ಸಾಗುವ ಜನರು ದಿನಾಲು ಸಣ್ಣ ಪುಟ್ಟ   ಗಾಯಗಳಿಗೊಳಗಾಗುವರು ಮತ್ತು ಇದೇ ವ್ಯವಸ್ಥೆಗೆ ಹೊಂದಿ ಬದುಕುವದು ಅನಿವಾರ್ಯವಾದ್ದರಿಂದ ವಾಹನಕಾರನ್ನು   ಶಪಿಸುತ್ತ, ಅಂಗಡಿಯವರನ್ನು ಕೆಂಗಣ್ಣಿನಿಂದ ನೋಡುತ್ತ , ಅಲ್ಲಲ್ಲೇ ಆಚೆ ಈಚೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಹೋಗುತ್ತಾರೆ. ಸ್ವಲ್ಪ ಕಂಠ ಬಲ, ತೋಳಿನ ಬಲವುಳ್ಳವರು ಚಿಕ್ಕ ಪುಟ್ಟ ಅವಗಢಗಳನ್ನೇ  ಬಂಡವಾಳ ಮಾಡಿಕೊಂಡು ಅಲ್ಪ ಸ್ವಲ್ಪ ದಿನದ ಖರ್ಚಿಗೆ ಕಾಸು ಮಾಡಿಕೊಳ್ಳುವರು.



ನಮ್ಮ ಜನ ಜೀವನ ಮತ್ತು ಆ ಜನ ಜೀವನದ ಪಾಲುದಾರರಾದ ನಮ್ಮೆಲ್ಲರ ವಿಡಂಬನಾತ್ಮಕ ವ್ಯವಸ್ಥೆ ಹೇಗಿದೆ ನೋಡಿ. ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಕಂಡುಕೊಳ್ಳಬಲ್ಲ ಸುಂದರ ವ್ಯವಸ್ಥೆ ನಮ್ಮ ಆಡಳಿತದಲ್ಲಿದೆ. ಆದರೆ ತಿಂಗಳು ಮುಗಿಯುವ ಕೊನೆಯ ದಿನದೊಳಗೆ ಸಂಬಳ ಪಾವತಿಸುವ
ವ್ಯವಸ್ಥೆಯನ್ನುಳಿದು  ಇನ್ನ್ಯಾವುದೂ  ತಮ್ಮ ದಿನ ನಿತ್ಯದ ಜವಾಬ್ದಾರಿಯಂತೆ ನಡೆಯುವದೇ ಇಲ್ಲ !!!  ಒಂದು ಬೀದಿ ದೀಪ ಕೆಟ್ಟರೆ ಅದನ್ನು ಕೂಡಲೆ ಸರಿಪಡಿಸುವ ವ್ಯವಸ್ಥೆ ಇದೆ. ಸರಿಪಡಿಸಲು ಬೇಕಾದ ಸಾಮಗ್ರಿಗಳನ್ನು ಶೇಖರಿಸಿಟ್ಟು ದಿನ ನಿತ್ಯ ಕತ್ತಲಾದೊಡನೆ ರಸ್ತೆಗಳಲ್ಲಿ ಪರೀಕ್ಷಿಸಿ , ಮರುದಿನ ಸರಿಪಡಿಸುವ ಕಾರ್ಯಕ್ಕಾಗಿ ಸೂಕ್ತ ಜನ ಸಂಪನ್ಮೂಲ, ಧನ ಸಂಪನ್ನ್ಮೂಲ , ವಾಹನ ವ್ಯವಸ್ಥೆ ಎಲ್ಲ ಇವೆ. ಇದಕ್ಕಾಗಿ ಇರುವ ಸಿಬ್ಬಂದಿಯನ್ನು ಹತೋಟಿಯಲ್ಲಿಟ್ಟು ಕೆಲಸ ಮಾಡಿಸಲು  ಅಧಿಕಾರಿ ವರ್ಗವಿದೆ. ಆದರೆ ಯಾಕೀ ದಿನ ನಿತ್ಯ ಯಾತನೆಯ ಅವ್ಯವಸ್ತೆ.............?



ರಸ್ತೆಯಲ್ಲಿ ಉಬ್ಬು ತಗ್ಗುಗಳಿರದಂತೆ ಯೋಜನೆ ಕಾಗದದಲ್ಲಿರುತ್ತದೆ. ರಸ್ತೆಯನ್ನು ನಿರ್ಮಿಸುವಾಗ ಯೋಚನೆ, ಯೋಜನೆ, ಅನುಮೋದನೆ, ಪರಿಶೀಲನೆ, ನಂತರ ಹಣ ಬಿಡುಗಡೆ ಎಂಬ ಸುಂದರ ವ್ಯವಸ್ಥೆ ನಮ್ಮಲ್ಲಿದೆ. ಅದೇ ರೀತಿ ಇವೆಲ್ಲವನ್ನೂ ಕಾರ್ಯಗತಗೊಳಿಸಲು ಪೂರ್ವಭಾವಿಯಾಗಿ ನಿರ್ಧರಿಸಿರುವ ನೌಕರರ, ಅಧಿಕಾರಿಗಳ ತಂಡವೇ ಇದೆ. ಇನ್ನು ಈ ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗೀಯೂ , ತೊಂದರೆ ತೊಡಕುಗಳು ಬಂದರೆ ನಿವಾರಣಾ ವ್ಯವಸ್ಥೆಯಾಗಿ ಸೂಕ್ತ  ಧನ, ಜನ, ಅಧಿಕಾರಿ ಬಲವಿದೆ. ಕಾಲ ಕಾಲಕ್ಕೆ ಸಾಕಷ್ಟು ಯೋಜನೆಗಳು ಕಾಗದದಲ್ಲಿ ತಯಾರಾಗಿ, ಖರ್ಚು ವೆಚ್ಚಗಳೆಂದು ಆ ಹಣ ವಿನಿಯೋಗವೂ ಆಗಿರುತ್ತದೆ.  ಆದರೆ ನಮ್ಮ ರಸ್ತೆಗಳು ಮಾತ್ರ ಉಬ್ಬು ತಗ್ಗುಗಳಿಂದ  ಕೂಡಿ, ಕೊಚ್ಚೆ ಕೊಸರುಗಳಿಗೆ ತಾಣವಾಗಿ ಮೆರೆಯುತ್ತಿದ್ದು ಪ್ರತಿ ದಿನ ಜನ ಸಾಮಾನ್ಯನಿಗೆ ತೊಂದರೆ ನೀಡುತ್ತಿರುತ್ತವೆ. ವ್ಯವಸ್ಥೆ  ಇಷ್ಟೊಂದು  ಓಕೆ ಇರುವಾಗೆ ಈ ದಿನ ನಿತ್ಯದ ಅವ್ಯವಸ್ಥೆ ಯಾಕೇ .....................?



ಇಂದು ಪ್ರತಿ ಸಮಸ್ಯೆಗೂ ನ್ಯಾಯಾಲಯಗಳ ಬಾಗಿಲು ತಟ್ಟಿ ಪರಿಹಾರಕ್ಕೆ ಪ್ರಯತ್ನಿಸುವದು ಸಾಮಾನ್ಯವಾಗುತ್ತ ಸಾಗಿದೆ. ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆ  ಒಯ್ದರೆ ಅದಕ್ಕೆ ಸೂಕ್ತ ತೀರ್ಪು ಬರಲು ಕನಿಷ್ಟ ಮೂರರಿಂದ  ನಾಲ್ಕು, ಸರ್ವೇಸಾಮಾನ್ಯವಾಗಿ ಎಂಟರಿಂದ ಹತ್ತು ವರುಶಗಳಾಗುತ್ತವೆ. ರಸ್ತೆಯಲ್ಲಿ ನಾಯಿ ಬಿದ್ದು ನಾರುತ್ತಿದೆ , ಆಡಳಿತದಿಂದ ಸಮಸ್ಯೆ ಪರಿಹಾರವಾಗಲಿಲ್ಲ ಎಂದು ನ್ಯಾಯಾಲಯಕ್ಕೆ ಹೋದರೆ , ಬಿದ್ದ ನಾಯಿ ಕೊಳೆತು , ವಾಸನೆ ಆರಿಹೋದ ಮೇಲೆ ವಿಚಾರಣೆಗೆ ಬಂದಾಗ ಸಾಕ್ಷಿಯಿಲ್ಲದೆ , ಪರಿಹಾರ ಕಾಣದಾಗುತ್ತದೆ. ಇದೊಂದು ಉದಾಹರಣೆ ಮಾತ್ರ. ಈ ರೀತಿಯ ನಮ್ಮ ಅಡಳಿತ ವ್ಯವಸ್ಥೆ ಗಬ್ಬೆದ್ದು , ಆ ಗಬ್ಬೆದ್ದ ಆಡಳಿತ ವ್ಯವಸ್ಥೆಯ ದುರ್ನಾತವನ್ನು ಸಹಿಸಿ ಬಾಳುವ ಅಸಹಾಯಕ ಸಾಮಾನ್ಯ ಪ್ರಜೆ  " ದಿನ ನಿತ್ಯ ಸಾಯುವವನಿಗೆ ಅಳುವವರಾರು ?" ಎಂಬಂತೆ ವ್ಯವಸ್ಥೆಯೊಂದಿದೆ ಎಂಬುದನ್ನೇ ಮರೆತು, ಅಲ್ಲಿ ಇಲ್ಲಿ ಸುಲಭವಾಗಿ ಸಿಗುವ ಅಧಿಕಾರಿ ವರ್ಗದ ಯಾವನಿಗೋ ಇಲ್ಲ ಮಧ್ಯವರ್ತಿಗೋ ಕೈ ಬಿಸಿಮಾಡಿ ತನ್ನ ಕೆಲಸ ಸಾಧಿಸಿಕೊಳ್ಳುತ್ತಾನೆ.



ಬಹಳ ಸುಂದರವಾಗಿ ರಚಿಸಿರುವ ಆಡಳಿತ ವ್ಯವಸ್ತೆಯನ್ನು ಹದಗೆಡಿಸಿ ತಮ್ಮ ಅಧಿಕಾರ ಸ್ಥಾಪಿಸಿ   ಸಂಪೂರ್ಣ ಹದ ಗೆಟ್ಟ ವ್ಯವಸ್ಥೆಯನ್ನು ತಮ್ಮ ಹದ್ದು ಬಸ್ತಿನಲ್ಲಿಟ್ಟು  ಮೆರೆಯುತ್ತಿರುವ ಅಧಿಕಾರಿ ವರ್ಗ (ಎಲ್ಲರೂ ಅಲ್ಲ ಎಂಬುದನ್ನು ನೆನಪಿಡಿ ), ಬ್ರಷ್ಟಾಚಾರದ ಕೂಪದಲ್ಲಿ ತೇಲುತ್ತಿರುವ ಜನ ಪ್ರತಿನಿಧಿಗಳು (ಎಲ್ಲರೂ ಅಲ್ಲ ಎಂಬುದು ಗಮನಿಸಬೇಕಾದುದು )  ಇವರಿಗೆಲ್ಲ ಮಾನವೀಯ ಯೋಚನೆಗಳನ್ನು ಬಿತ್ತಲು ನಾವೆಲ್ಲಾ ನಂಬಿ ಬಂದಿರುವ ವಿವಿಧ ಧರ್ಮ, ಜಾತಿ, ಮತಗಳ ದೇವರುಗಳು ಅಸಮರ್ಥರೇ  ..........?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.ಕಂ
February 24, 2013.

No comments:

Post a Comment