Tuesday, February 12, 2013

Hugging.


ಕಾಲ ಕಾಲಕ್ಕೆ ಜೀವನದ ಎಲ್ಲ ವಿಭಾಗಗಳಲ್ಲೂ ಬದಲಾವಣೆಗಳು ಬರುತ್ತಾ ಹೋಗುತ್ತವೆ. ಬದಲಾವಣೆಗಳು ಯಾರನ್ನೂ ಕೇಳಿ ಬರುವದಿಲ್ಲ ಅಥವಾ ಯಾರಾದರೂ ತಮ್ಮನ್ನು ಅವ್ಹಾನಿಸಲಿ ಎಂದು ಕಾಯ್ದು ಕೂತಿರುವದಿಲ್ಲ.



ನಾವು ಚಿಕ್ಕವರಿದ್ದಾಗ ಅಂದರೆ  ಸುಮಾರು ನಲವತ್ತೈದರಿಂದ ಐವತ್ತು ವರ್ಷಗಳ ಹಿಂದೆ ಮನೆಗೆ ಹಿರಿಯರು ಬಂದಾಗ ಗೃಹಿಣಿ ನೀರು ಬಿಂದಿಗೆಯೊಂದನ್ನು ತಂದಿಟ್ಟು ನಮಸ್ಕರಿಸಿ ಹೋಗುತ್ತಿದ್ದಳು. ಮನೆಯಲ್ಲಿರುವ ವಯಸ್ಸಿನಲ್ಲಿ ಚಿಕ್ಕವರೆಲ್ಲಾ ಅತಿಥಿಗಳಿಗೆ / ಅಭ್ಯಾಗತರಿಗೆ ಕಾಲು ಮುಟ್ಟಿ ನಮಸ್ಕರಿಸಿ, ಉಪನಯನ ಆಗಿರುವ ಮಕ್ಕಳು ಗೋತ್ರ ಪ್ರವರ ಹೇಳಿ ನಮಸ್ಕರಿಸುತ್ತಿದ್ದರು. ಕುಲ ಪುರೋಹಿತರು, ಶ್ರೇಷ್ಟ ಸಾಧನೆಯಿಂದ  ಸಮಾಜದಲ್ಲಿ ಗುರುತಿಸಲ್ಪಟ್ಟಿರುವ ಬ್ರಾಹ್ಮಣರು ಬಂದರೆ ಮನೆಯಲ್ಲಿರುವ ಎಲ್ಲ ಗಂಡಸರೂ ಕಾಲು ಮುಟ್ಟಿ ಗೋತ್ರ ಪ್ರವರ ಹೇಳಿ ನಮಸ್ಕರಿಸುತ್ತಿದ್ದರು. ಹೆಂಗಸರು ಮಂಡಿಯೂರಿ ನಮಸ್ಕರಿಸುತ್ತಿದ್ದರು. ಸಿರ್ಸಿ, ಯಲ್ಲಾಪುರ ಭಾಗದ ಹಳ್ಳಿಗಳಲ್ಲಿ ಈ ಪದ್ದತಿಯ ಜೊತೆಗೆ ಆತ್ಮೀಯವಾಗಿ , ಮನೆಯ ಪ್ರತಿ ಸದಸ್ಯನೂ "ಈಗ ಬಂದ್ರಾ ?" ಎಂದು ಅತಿಥಿ / ಅಭ್ಯಾಗತರನ್ನು " ಮಾತನಾಡಸ್ದೆ " ಎಂದು ಹೇಳಿ ತಮ್ಮ ತಮ್ಮ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು .



ಕ್ರಮೇಣ ಈ ಪದ್ಧತಿ ಮರೆಯಾಗುತ್ತ , ಆತ್ಮೀಯವಾಗಿ   ಮುಗುಳ್ನಗುವ ಪದ್ಧತಿ ಅಲ್ಲಲ್ಲಿ ಆರಂಭವಾಗಿ , ಎಲ್ಲೆಡೆ ವ್ಯಾಪಿಸಿತು. ಇನ್ನು ಕ್ರಮೇಣ  ಹಸ್ತ ಲಾಘವ , hand  shake  ಆರಂಭವಾಗಿ ಎಲ್ಲೆಡೆ ಕಂಡು ಬರುತ್ತಿದೆ.



ಈಗ ಅಂದರೆ ಈಗಿನ ಸಮಾಜದಲ್ಲಿ ಕಂಡುಬರುವ ಬೆಳವಣಿಗೆಯೆಂದರೆ   hugging , ಆತ್ಮೀಯವಾಗಿ ಅಪ್ಪುಗೆ   ಕೊಡುವದು. ಯುವ ಜನಾಂಗ ಎಲ್ಲೆಂದರಲ್ಲಿ ಮೈ ಚಳಿ ಬಿಟ್ಟು ಒಬರನ್ನೊಬ್ಬರು ಮುಂಗೈನ್ನು ಹಿಡಿದು ಅಥವಾ ಭುಜಗಳನ್ನು ಹಿಡಿದು ಹೃದಯದ   ಮೇಲ್ಭಾಗದಲ್ಲಿ ತಬ್ಬಿಕೊಳ್ಳುವದು.  ನಗರವಾಸಿ ಯುವಕ ಯುವತಿಯರಲ್ಲಿ ಇದು ಸರ್ವೇ ಸಾಮಾನ್ಯವಾಗುತ್ತ ಸಾಗಿದೆ. ಎಲ್ಲೋ ನಾಲ್ಕಾರು ದಿನಗಳ ಪರಿಚಯದ ಅಥವಾ ನಾಲ್ಕಾರು ತಿಂಗಳುಗಳ ಪರಿಚಯದ ಯುವಕ ಯುವತಿಯರಲ್ಲಿ ಸಹಾ ಈ ಬೆಳವಣಿಗೆಗಳು ಕಂಡುಬರುತ್ತಿವೆ. ಇಲ್ಲಿ ಯುವಕ , ಯುವತಿಯರೆಂಬ ಭೇದವಿಲ್ಲ. ಯುವಕನೊಬ್ಬ ಯುವತಿಯೊಡನೆ, ಯುವತಿಯೊಬ್ಬ ಯುವಕನೊಡನೆ, ಯುವಕ ಯುವಕನೊಡನೆ, ಯುವತಿ ಯುವತಿಯೊಡನೆ hugging  ನಲ್ಲಿ ತೊಡಗಿರುವದು ಕಂಡುಬರುತ್ತದೆ. ಬಹು ವಿಧದ ಆಚಾರ ವಿಚಾರವುಳ್ಳ ಜನರು ಬೆರೆಯುವ ಸಾರ್ವಜನಿಕ ಸ್ಥಳಗಳಲ್ಲಿ ಈ ಬೆಳವಣಿಗೆ ಸಾರ್ವತ್ರಿಕವಾಗಿ ಕಂಡು ಬರದಿದ್ದರೂ, ಯುವ ಜನಾಂಗವೇ ಹೆಚ್ಚಾಗಿ ಕಂಡುಬರುವ ಕಾಲೇಜು ಕ್ಯಾಂಪಸ್ ಗಳು , ಬಹು ಆಕರ್ಷಣೀಯ ಮಾಲ್ ಗಳು , ಅಧುನಿಕ   ಸಿನೆಮಾ ಥಿಯೇಟರ್  ಕಡೆಗಳಲ್ಲಿ ಜಾಸ್ತಿ ಕಂಡುಬರುತ್ತಿವೆ.



ಈತ್ತೀಚೆ ನಾನೊಮ್ಮೆ ನನ್ನ ಪರಿಚಯದವರೊಬ್ಬರ ಮನೆಗೆ  ಹೋಗಿ ವಾಪಸ್ಸು ಬರುವಾಗ  ಪ್ರಿ. ಕೆ .ಜಿ ಯಲ್ಲಿ ಓದುತ್ತಿರುವ ಮಗು ಅಂದರೆ ಮೂರು ವರ್ಷದ  ಮಗುವಿನ ತಾಯಿ , ಅಂಕಲ್ ಹೋಗುತ್ತಿದ್ದಾರೆ ನೋಡು, hugg  him , ಎಂದೊಡನೆ ಆ ಮುದ್ದಾದ ಮಗು ಬಂದು , ನನ್ನನ್ನು ಆತ್ಮೀಯವಾಗಿ ಅಪ್ಪಿಕೊಂಡು , bye ....... ಎಂದು ಓಡಿಹೋಯಿತು. ಇದು ಈ ಕಾಲದ ಅತಿ ಆಧುನಿಕ ಬೆಳವಣಿಗೆ.



ಹಳ್ಳಿಗಳಲ್ಲಿ ಪ್ರಚಲಿತವಿರುವ ಗಾದೆ ಒಂದಿದೆ.  ನಿಂತು ಉಚ್ಚೆ ಹೊಯ್ಯುವ ಗುರುವಿಗೆ , ಓಡುತ್ತಾ ಉಚ್ಚೆ ಹೊಯ್ಯುವ ಶಿಷ್ಯ.  ಹಾಗೆ ಇನ್ನೊಂದು ಮಾತಿದೆ,  ಕಾಲಾಯ ತಸ್ಮೈ ನಮಃ .



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
February 12, 2013.

No comments:

Post a Comment