Thursday, February 14, 2013

ಮಂತ್ರಿಯೊಬ್ಬ ಸದಾ ಸೂಳೆಯರ ಸಹವಾಸದಲ್ಲಿರುತ್ತಿದ್ದ.


ಈವತ್ತು ಒಂದು ದಿನಪತ್ರಿಕೆಯಲ್ಲಿ ಒಂದು ಒಳ್ಳೆಯ ಲೇಖನ ಓದಿದೆ. ಸರಕಾರದ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಚಿತ್ರಣ.  ಬಹಳ  ಅಭಿಮಾನದಿಂದ ಲೇಖಕನಿಗೆ  ಒಮ್ಮೆ ಅಭಿನಂದಿಸೋಣ ಎಂದು ಒಂದುವರೆ ಪುಟದ ಪತ್ರ ಬರೆದೆ.



ಯಾಕೋ ಮನಸ್ಸು ಖಿನ್ನವಾಯಿತು . ಕಳೆದ ವಾರ, ಪತ್ರಿಕೆಗಳಲ್ಲಿ ಹಣ ನೀಡಿ ಅಥವಾ ಇನ್ನ್ಯಾವದೋ ಮುಲಾಜಿಗೆ ಒಳಗಾಗುವಂತೆ ಮಾಡಿ ಪತ್ರಿಕೆಯವರನ್ನು ಖರೀದಿಸುತ್ತಾರೆ , ಅದೇ ಪ್ರಕಾರ ಇಂದಿನ ದಿನಗಳಲ್ಲಿ ಆ ಪ್ರಭಾವಗಳಿಗೆ ಒಳಗಾಗಿ ತಮ್ಮನ್ನು ತಾವೇ ಮಾರಿಕೊಳ್ಳುವ ಪತ್ರಿಕಾ ಮಂದಿ ಜಾಸ್ತಿಯಾಗುತ್ತಿದ್ದಾರೆ , ಎಂಬ ವರದಿಯು ನೆನಪಾಯಿತು.



ಸಮಾಜ ಏನು , ಎತ್ತ ಎಂಬುದನ್ನು ಯೋಚಿಸಿದರೆ ಗಾಬರಿಯಾಗುತ್ತದೆ.  ಯೋಚನೆಯೇ ಮಾಡದೆ ಗಾಳಿ ಬಂದತ್ತ ತೂರಿಕೊಳ್ಳುವ ಮಂದಿಯನ್ನು ನೋಡಿ ಮೈ ಉರಿದುಕೊಳ್ಳುತ್ತದೆ .  ಯಾವುದೋ ಒಂದು ಕಥೆ ನೆನಪಾಗುತ್ತಿದೆ: ಪ್ರಭಾವಿ ಮಂತ್ರಿಯೊಬ್ಬ ಸದಾ ಸೂಳೆಯರ ಸಹವಾಸದಲ್ಲಿರುತ್ತಿದ್ದ. ಇದರಿಂದ ಅವನ ರಾಜ್ಯದಲ್ಲಿ ಸೂಳೆಗಾರಿಕೆ ಅವ್ಯಾಹತವಾಗಿ ನಡೆದುಬಂದಿತ್ತು. ಒಂದು ದಿನ ಆ ಮಂತ್ರಿ ತನ್ನ ಗೌಪ್ಯ ಅರಮನೆಯಲ್ಲಿ ಹೆಣ್ಣೊಂದನ್ನು ಸೇರಬೇಕೆಂದು ಹೋದಾಗ , ಹಸೆಯಲ್ಲಿ ಅವನಿಗಾಗಿ ಕಾಯುತ್ತಿದ್ದ ಹೆಣ್ಣು ಆ ಮಂತ್ರಿಯ ಮಗಳಾಗಿದ್ದಳು !!!



ಬೆಂಗಳೂರಿನ ರಸ್ತೆಯ ಚರಂಡಿಗಳಲ್ಲಿ ಮಳೆಕೊಯ್ಲು ಎಂಬ ಯೋಜನೆಯಲ್ಲಿ ಹತ್ತು ಮಾರುಗಳಿಗೊಂದು ಹೊಂಡ ಹೊಡೆದು , ಜೆಲ್ಲಿ ಕಲ್ಲಿಗಳನ್ನು ತುಂಬಿದ್ದರು. ಆ ಮೇಲೆ ಜೋರಾಗಿ ಮಳೆ ಬಂದಾಗ ಮಣ್ಣು ಕೊಚ್ಚಿ ಬಂದು ಮೊದಲಿನಂತಾಗಿ  ನೀರು ಇಂಗುವದು ನಿಂತು ಹೋಗಿದೆ. ಅಲ್ಲಿಗೆ ಯಾವುದು ಏನಾಯ್ತು ಎಂದು ಯೋಚಿಸುವ ಪರಿಪಾಠವೇ ಇಲ್ಲದ ಯೋಜನೆಯೊಂದು ಮುಗಿದುಹೋಯಿತು. ಈ ಯೋಜನೆಯಂತೆ ಕೆಲಸ ನಡೆಯುತ್ತಿದ್ದಾಗ ನಾನು ಒಬ್ಬ ಗುತ್ತಿಗೆದಾರನನ್ನು ಮಾತನಾಡಿಸಿದೆ. ಒಂದು ಹೊಂಡದ ಕೆಲಸಕ್ಕೆ ನಾಲಕ್ಕುವರೆ ಸಾವಿರ ರೂಪಾಯಿ ಬಿಲ್ಲು ಮಾಡುತ್ತಾರೆ ಎಂದನು. ಎರಡು ಕೂಲಿ, ಒಂದು ದಿನದ ಕೆಲಸ, ಮುಕ್ಕಾಲು ಫುಟ್ ಅಗಲ, ಎರಡು ಫುಟ್ ಉದ್ದ ಮೂರು ಫುಟ್ ಆಳವಿರುವ ಹೊಂಡ ಈ ಕೆಲಸಕ್ಕೆ ನಾವು , ನೀವು ನೀಡಬಹುದಾದ ಹಣ ಒಂದು ಸಾವಿರ ರೂಪಾಯಿ ಅಂದಾಜು. ಸರಕಾರೀ ಸಂಸ್ಥೆಯ ಲೆಕ್ಕದಲ್ಲಿ ನಾಲಕ್ಕು ವರೆ ಸಾವಿರ ರೂಪಾಯಿಗಳು !!!!!  ಉಳಿದ ಹಣ ಎಲ್ಲಿ ಹೋಗುತ್ತದೆ ಎಂದು ಆ ಗುತ್ತಿಗೆದಾರನನ್ನು ಕೇಳಿದೆ , ಏನ್ ಸರ್, ತಮಾಷೆ , ಮಾಡ್ತೀರಾ, ನಿಮಗೆಲ್ಲ ಗೊತ್ತಿದೆ ಎಂದು ನಗುತ್ತಾನವನು.  



ಯೋಚನೆಯೇ ಮಾಡದೆ ಬದುಕುವ ಜನರನ್ನು ನೋಡಿ ಒಮ್ಮೊಮ್ಮೆ ಅಸೂಹೆಯಾಗುತ್ತದೆ. ಬಂದದ್ದು ಬಂದಂತೆ ಎಂದು ಬದುಕುವ ಆ ರೀತಿ ಜನರು ಸುಖವಾಗಿದ್ದಾರೆ, ಸುಖವಾಗಿರುತ್ತಾರೆ ಎನಿಸುತ್ತದೆಯೇ?
ಇದೇ ರೀತಿ ಬೆಳವಣಿಗೆಗಳು ಸಾಗಿದಾಗ ಬರುವ ನಾಳೆಗಳಲ್ಲಿ ಬದುಕುವ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ನೆಮ್ಮದಿಯಿಂದ ಬದುಕಬಹುದೇ?



ಮೇಲೆ ಹೇಳಿದ ಲೇಖಕನಿಗೆ ಬರೆದ ಅಭಿನಂದನಾ ಪತ್ರವನ್ನು ಕಳಿಸಲು ಮನಸ್ಸಾಗದೆ ಡಿಲೀಟ್( delete  ) ಮಾಡಿದೆ.




ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 15, 2013.


No comments:

Post a Comment