Tuesday, January 22, 2013

Bheeshma Yakshagaana.



ಯಕ್ಷಗಾನ ಲೋಕದ ಎನ್ಸೈಕ್ಲೋಪೀಡಿಯಾ ದಿವಂಗತ ಡಾ. ಕೆರೆಮನೆ ಮಹಾಬಲ ಹೆಗಡೇರು. ರಂಗಸ್ಥಳದಲ್ಲಿ ಯಾರೊಬ್ಬರೂ ಸಹಕಾರಿಯಾಗದಿದ್ದರೂ , ಭಲೇ ಮಹಾಬಲ ಎನ್ನುವಂತೆ ಭಾಗವತಿಕೆಯನ್ನೂ   ಮಾಡಿಕೊಂಡು , ತಾಳ, ಲಯ , ರಾಗ ಬದ್ಧವಾಗಿ ಕುಣಿದು ಹೂಂಕರಿಸಿ , ಝೇಂಕರಿಸಿ ರಂಗವನ್ನು ಸಮರ್ಥವಾಗಿ ರಂಗೇರಿಸಿ , ಇನ್ನೂ ಬೇಕು - ಮತ್ತೂ ಬೇಕು ಎಂಬ ಪ್ರೇಕ್ಷಕನ ಮಹದಾಸೆಯನ್ನು  ಪೂರೈಸಬಲ್ಲ, ಪೂರೈಸಿದ    ಶ್ರೇಷ್ಟ ಯಕ್ಷಗಾನಿ .  ಈ  ಗಂಡು ಮೆಟ್ಟಿನ ಕಲೆ ಯಕ್ಷಗಾನದ  ಇತಿಹಾಸದಲ್ಲಿ ಅಳಿಸಲಾಗದ, ಮರೆಯಲಾಗದ  ನೆನಪುಗಳನ್ನು   ಸುವರ್ಣಾಕ್ಷರಗಳಲ್ಲಿ ಬರೆದು ಹೋಗಿದ್ದಾರೆ.  ಕಟ್ಟಿರೈ ಈ ಚೋರನ ಎಳೆತಂದು ................ , ಕುರುರಾಯನಿದನೆಲ್ಲ ಕಂಡು ಸಂತಾಪದಿ ..................., ಇತ್ಯಾದಿ ಯಕ್ಷಗಾನ ಪದ್ಯಗಳನ್ನು ಕೇಳಿದೊಡನೆ ಮೈ ನವಿರೇಳುವಂತಹ , ಅಸಹಾಯಕತೆಯಲ್ಲೂ ಎದ್ದು ನಿಲ್ಲುವ ಛಲ ಭಾವಾಂಕುರವಾಗುವ ಪರಿ  ಇಂದಿಗೂ ಜನಮಾನಸದಲ್ಲಿರುವ ಸತ್ಯ.  ತನ್ನಲ್ಲಿ ಆವಿರ್ಭವಿಸುವ ಭಾವಪ್ರಚೋದಕ ವಿಷಯ ವಿಚಾರಗಳು ಯಕ್ಷರಂಗಕ್ಕೆ ಸಂಭಂದಿಸಿದ್ದು  ಯಾವುದೇ ಇರಲಿ,  ರಂಗ ಸಂಗದ ಯಾವುದೇ ಘಟಾನುಘಟಿಯಾಗಿರಲಿ   ನಿರ್ಭಿಡೆಯಿಂದ  ವ್ಯಕ್ತಪಡಿಸಬೇಕಾದುದು ಯಕ್ಷಧರ್ಮ ಎಂಬುದನ್ನು ಬಲವಾಗಿ ನಂಬಿ, ನಂಬಿದಂತೆ ನಡೆದು ತೋರಿಸಿ , ಪರಿಣಾಮ - ಪರಿಸ್ತಿತಿಗೆ  ಯಾವುದೇ ರೀತಿಯ ಅನಿಯಮಿತ - ಅನೈತಿಕ ಹೊಂದಾಣಿಕೆ ಮಾಡಿಕೊಳ್ಳದೆ ಯಕ್ಷೇಶ್ವರರಾಗಿ ಬಾಳಿ , ಬೆಳಗಿ ಬದುಕಿದ ಧ್ಯೇಯತೇಜಸ್ವಿ ಕೆರೆಮನೆ ಮಹಾಬಲ ಹೆಗಡೆಯವರೆಕೋ ತುಂಬ ನೆನಪಾಗಿ ಕಾಡುತ್ತಿದ್ದಾರೆ.



ನಿನ್ನೆ ಯಕ್ಷಗಾನ ಭೀಷ್ಮ ಪರ್ವ ನೋಡಿದ್ದೇ ಈ ಮಾನಸಿಕ ಹೊಯ್ದಾಟಗಳಿಗೆ ಕಾರಣ. ನೂರರಲ್ಲಿ ಅರವತ್ತರ್ಸ್ಟು  ಭಾಗ ಮಹಾಬಲ ಹೆಗಡೆಯವರ ಅನುಕರಣೆ , ನಿರಾಕರಿಸಲಾಗದಸ್ಟು ಸ್ಪಸ್ಟ. ಇನ್ನುಳಿದಿದ್ದು ಈ ಕಾಲದ ಅಪಸವ್ಯವಾದ ಇಳಿವಯಸ್ಸಿನ ಭೀಷ್ಮನೂ ತುಂಡು ಗುಪ್ಪು ಹೊಡೆದು ತಾಳಕ್ಕೆ ಹೆಜ್ಜೆ ಹಾಕುವದು .  ಮಾನಸಿಕವಾಗಿ, ಚಿಂತನಾತ್ಮಕವಾಗಿ ಮುಪ್ಪನರಿಯದ  ಭೀಷ್ಮ ಎಂಬುದು ಸತ್ಯವಾದರೂ, ಕುಣಿತದಲ್ಲಿ ದೈಹಿಕ ಸ್ವಾಸ್ತ್ಯದ ಇಳಿಜಾರಿನಲ್ಲಿರುವ ಭೀಷ್ಮನನ್ನು ವ್ಯಕ್ತಪಡಿಸದಿದ್ದರೆ ಕಲಾ ಪ್ರೇಮಿಗಳಿಗೆ ಆಭಾಸವಾಗುತ್ತದೆ ಎಂಬುದೂ ಗಮನದಲ್ಲಿಡುವದು ಅವಶ್ಯಕ.   ಕಲಿಯುವಿಕೆಯ ಹಂತದಲ್ಲಿ ಅಥವಾ ಕಲಾ  ಪ್ರದರ್ಶನದ ಆರಂಭಿಕ ವರ್ಷಗಳಲ್ಲಿ  ಶ್ರೇಷ್ಟ ನಟರನ್ನು ಅನುಕರಿಸುವದು ಅಪೆಕ್ಷಣೀಯವಾದರೂ , ಕಾಲಸಂದಂತೆ , ಕಲಾರಾಧನೆ ಹೆಚ್ಚಿದಂತೆ ಕಲಾವಿದನೊಬ್ಬ ಇನ್ನೊಬ್ಬರ ಛಾಯೆಯಿಂದ    ಹೊರಬಂದು, ತನ್ನದೇ ಛಾಪು ಮೂಡಿಸದಿದ್ದರೆ , ಕಾಲಕ್ರಮೇಣ ಜನಮಾನಸದಿಂದ ದೂರವಾಗುವದು , ವಾಸ್ತವಿಕತೆ ಅರಿವಿಗೆ ಬಂದಾಗ ಬದಲಾವಣೆ ಅಸಾಧ್ಯವಾದ ಹಂತ ತಲುಪಿರುವದನ್ನು ಅಷ್ಟೇ ಅಲ್ಲದೆ ನಿರಾಶಾವಾದದತ್ತ ಬದಲಾವಣೆ ಹೊಂದುವದನ್ನೂ ಅಲ್ಲಲ್ಲಿ ಕಂಡಿದ್ದೇವೆ, ಕಾಣುತ್ತಿದ್ದೇವೆ.  ಇನ್ನು ಪ್ರಸಂಗಗಳನ್ನು ಆಯ್ದು ಪ್ರದರ್ಶಿಸುವಾಗ ಪಾತ್ರಪೋಷಣೆಗೆ ಸೂಕ್ತವಾದ ಕಲಾವಿದರನ್ನಿಟ್ಟುಕೊಳ್ಳದಿದ್ದರೆ ಆಡು ಭಾಷೆಯ ಗಾದೆಯಂತೆ " ತನ್ನೂರಿನ ಶಾಲೆಗೆ ತಾನೇ ಪ್ರಥಮ ಬಹುಮಾನಿತ, ವಿಶ್ಲೇಷಿಸಿದರೆ ಶಾಲೆಗೊಬ್ಬನೇ ಹುಡುಗ " ಎಂಬಂತೆ ಇತ್ಯಾತ್ಮಕ ರೀತ್ಯಾ ಸ್ಪರ್ಧೆಯೇ ಇಲ್ಲದಂತೆ ಪಾತ್ರಗಳೆಲ್ಲಾ ಕೇವಲ ಹೂಂಗುಟ್ಟುವದರಲ್ಲೇ ಕಾಲ ವ್ಯಯವಾಗಿ , ಪ್ರಸಂಗದಲ್ಲಿರುವ ಮುಖ್ಯ ಪಾತ್ರಗಳೆಲ್ಲಾ ಪೋಷಕ ಪಾತ್ರಗಳಾಗಿ ಬದಲಾವಣೆ ಪಡೆದು " ಏಕ ವ್ಯಕ್ತಿ ಪ್ರದರ್ಶನದಂತೆ " ರಸಾಭಾಸವಾಗುವದು . ಅಲ್ಲದೆ ಪಾತ್ರಧಾರಿಗಳನ್ನು ಸಮರ್ಥವಾಗಿ ಆಯ್ದು ಸರ್ವರಿಗೂ ಸಮನ್ವಯಿಸಲ್ಪಟ್ಟ ಅವಕಾಶಗಳನ್ನು ನೀಡಿದರೆ ಕಲಾವಿದನಲ್ಲಿರುವ ಪ್ರಸಂಗ ಪ್ರದರ್ಶನದ ಆರಂಭದಲ್ಲಿರುವ ತುಡಿತ - ನೃತ್ಯದಲ್ಲಿ  , ಸಾಹಿತ್ಯದಲ್ಲಿ, ರಸ ಭಾವಗಳ ವ್ಯಕ್ತನೆಯಲ್ಲಿ ಪ್ರಸಂಗ ಕಾಲಾವಧಿಯ ಮಧ್ಯಭಾಗದಲ್ಲಿ ಕ್ಷೀಣಗೊಂಡು , ಅಂತ್ಯದಲ್ಲಿ ಕೆಲವೊಮ್ಮೆ ಮುಗಿದರೆ ಸಾಕಪ್ಪ ಎಂದು , ಮುಗಿದೊಡನೆ ಉಸ್ಸಪ್ಪಾ ಎಂಬಂತಹ ಸ್ತಿತಿಯಿಂದ ದೂರವಾಗಿ, ಸ್ಪರ್ಧಾತ್ಮಕ ಮನೋಭಾವದ ಸಮರ್ಥ ಕಲಾವಿದರಿಂದ , ಒಬ್ಬನ ಸಮಯ ಬಳಕೆಯ ಅವಧಿಯಲ್ಲಿ ಇನ್ನೊಬ್ಬನಿಗೆ ವಿಶ್ರಾಂತಿಯೊದಗಿ , ಪ್ರಸಂಗವನ್ನು ಆದಿಯಿಂದ ಅಂತ್ಯದ ವರೆಗೂ ಕಲಾರಸಿಕರ ಆಶಾ ಭಾವನೆಗಳಿಗೆ ಭಂಗ ಬರದಂತೆ , ರಸಾಸ್ವಾದನೆ ಹೆಚ್ಚುವಂತೆ ಪರಿಶ್ರಮಿಸಬಹುದು. ವಜ್ರಗಳೆರಡನ್ನು ಜೊತೆಗಿಟ್ಟ್ರೆ , ವಜ್ರಗಳ ಹೊಳ್ಪಿಗೇನೂ ಭಾಧೆಯಿಲ್ಲವೋ ಹಾಗೆ ಶ್ರೇಷ್ಟ ಕಲಾವಿದರು ಒಗ್ಗೂಡಿದಾಗ , ಕಲಾವಿದರ ಕಲಾಸಾಧನೆಯೇನೂ ಕಮ್ಮಿಯಾಗುವದಿಲ್ಲ, ಬದಲಿಗೆ ವಜ್ರ ತಿಕ್ಕಿದಷ್ಟು ಹೊಳಪು ಪಡೆಯುವಂತೆ , ಕಲಾವಿದರ ಶ್ರೆeಸ್ಟತೆ  ಹೆಚ್ಚುವದು. ಅಹಮಿಕೆ ಅಡ್ಡಬರಬಾರದಷ್ಟೇ !!



ನಟನಿಗೆ ದಿನಾಲು ಕಲಿಯಲು, ಬೆಳೆಯಲು, ಉತ್ತುಂಗಕ್ಕೇರಲು ಅವಕಾಶವಿರುವ ಕಲೆ ಯಕ್ಷಗಾನ. ರಾಮಾಯಣ, ಮಹಾಭಾರತಗಳನ್ನಾಧರಿಸಿ   ರಚಿಸಿದ ಪ್ರಸಂಗಗಳು ವಾಂಗ್ಮಯ  ಸಂಪತ್ತನ್ನು ಹೆಚ್ಚಿಸಿಕೊಳ್ಳಲು , ನಾಟ್ಯ - ನೃತ್ಯ ಪ್ರಕಾರಗಳಲ್ಲಿ ವಿವಿಧ ರೂಪಗಳನ್ನು ಸಂಶೋಧಿಸಲು , ರಾಗ - ತಾಳ - ಲಯಗಳಲ್ಲಿ  ನೂತನ ಆವಿಷ್ಕಾರಗಳನ್ನು ಸಂಯೋಜಿಸಲು ಯಕ್ಷಗಾನದ ಚೌಕಟ್ಟಿನಲ್ಲಿ ಸಾಕಷ್ಟು ಅವಕಾಶಗಳಿವೆ. ಆ ಕುರಿತು ತಜ್ಞರು ಧೀರ್ಘವಾಗಿ , ಜವಾಬ್ದಾರಿಯುತವಾಗಿ ಯೋಚಿಸಬೆಕಷ್ಟೇ. ಇಲ್ಲಿ ನುರಿತ , ಶ್ರೇಷ್ಟ ಪಾತ್ರಧಾರಿಗಳ ಪಾಲುದಾರಿಕೆ ಹೆಚ್ಚಿನ ಪ್ರಮಾಣದಲ್ಲಿರಬೇಕು. ದಿನ ನಿತ್ಯದ ಪ್ರದರ್ಶನಗಳಿಂದ  ಎದುರಿನ ಪಾತ್ರಧಾರಿ ಯಾವ ಯಾವ ರೀತಿಯ ಅಪ್ರಸ್ತುತ ಮಾತುಗಳನ್ನಾಡಿದ, ಎಲ್ಲೆಲ್ಲಿ ಅಪಬ್ರಂಶಕ್ಕೀಡಾದ ಶಬ್ದಗಳನ್ನು ಬಳಸಿದ, ಕುಣಿತದಲ್ಲಿ ಲಯ - ತಾಳಗಳೆಲ್ಲಿ ತಪ್ಪಿತು , ಪ್ರತಿ ಪಾತ್ರಧಾರಿ ಯಾವ ಯಾವ ಸಂಧರ್ಭದಲ್ಲಿ ಪೇಲವವಾಗಿ ಅಭಿನಯಿಸಿದ, ಎದುರು ಪಾತ್ರಧಾರಿಯ ಮುಖ ಚರ್ಯೆ - ವರ್ತನೆ ರಸಾಭಿವ್ಯಕ್ತನೆಯಲ್ಲಿ ಹೇಗೆ ಸೋತಿತು , ಎದುರು ಪಾತ್ರಧಾರಿಯಲ್ಲಿರುವ ವಿಶೇಶತೆಗಳೇನು   ಇತ್ಯಾದಿ, ಇತ್ಯಾದಿ ದಿನಿ ನಿತ್ಯ ಅಭ್ಯಸಿಸಿ , ಬದಲಾವಣೆಯತ್ತ, ಸುಧಾರಣೆಯತ್ತ ಸಾಗಿ ತನ್ನ ಕಲಾ ಶ್ರೆಷ್ಟತೆಯನ್ನು ಸಾಕಾರಗೊಳಿಸುತ್ತ , ಪ್ರೇಕ್ಷಕ ಅಭಿಮಾನಿಗಳಿಗೆ ಕಲಾಕೇಸರಿಯಾಗಿ ಕಲೆಯೆಂಬ ಪಾಯಸವನ್ನು ಉಣಬಡಿಸಲು ಸದವಕಾಶ ಒದಗಿಸಿದೆ ಈ ಯಕ್ಷಗಾನ ಕಲೆ. ಯಕ್ಷಗಾನ ಜೆರಾಕ್ಸ್ ಕಾಪಿ ಯಲ್ಲ. ದಿನ ನಿತ್ಯ ನೂತನ, ವಿನೂತನ ರಾಗ, ತಾಳ, ಲಯ ಬದ್ಧ ನಾಟ್ಯ ಸಂಯೋಜನೆಗಳಿಂದ ಲಾಲಿತ್ಯಮಯವಾಗಿ , ಪ್ರಭುದ್ಧ ಸಾಹಿತ್ಯದಿಂದೊಡಗೂಡಿ ಪ್ರೆಕ್ಷಕ  ಭಾಂದವರಿಗೆ ಉಣವಡಿಸುವ ಔತಣ ಯಕ್ಷಗಾನ.



ಈ ಕಾಲ ಎಲ್ಲ ಜೀವನ ಪ್ರಕಾರಗಳಲ್ಲೂ  ಸ್ಫರ್ಧಾ ಕಾಲ.  ನೂತನ  ಆವಿಷ್ಕಾರಗಳ   ಸಮಯ. ಆಡು ಭಾಷೆಯಲ್ಲಿ ಹೇಳುವದಾದರೆ  " ಅವ ಎಂಥ ಬಡ್ಡ.. ..  ಬಡ್ಡ ....... ಬಡದ್ನೋ  ಮಾರಾಯಾ , ಇವ  ಧಡ್ಡ .... ಧಡ್ಡ ........ ಕುಣಿದ್ನೋ .........  ಬಾವ .......  ಬೆಳಿಗ್ಗೆ ವರೆಗೂ ಕಣ್ ಯೆಮೆ ಮುಚ್ಚಿ ನಿದ್ದೆ ಬಂಜಿಲ್ಲೆ / ಬೈಂದಿಲ್ಲೆ , ನೋಡು ಆಟ ಮಸ್ತಿತ್ತ .......... ಎಂಬ ಕಾಲವಲ್ಲ  ಈಗ.   ಬಣ್ಣ , ಬಟ್ಟೆಗಳಲ್ಲಿ    ಕಾಲಕ್ಕೆ   ಸಮಂಜಸವಾದ  ಬದಲಾವಣೆಗಳು ಬಂದಂತೆ ಉಳಿದೆಡೆಗಳಲ್ಲೂ ಸ್ಪರ್ಧಾತ್ಮಕ ಪ್ರಪಂಚಕ್ಕೆ    ಸೂಕ್ತವಾದ ಬದಲಾವಣೆಗಳೊದಗಿಬಂದರೆ  ಮಾತ್ರ  ಯಕ್ಷಗಾನ ಜನಮಾನಸದಲ್ಲಿ ಉಳಿದೀತು ಅಲ್ಲದೇ ನವಜನಾಂಗದ ಮೆಚ್ಚುಗೆ ಗಳಿಸಿeತು , ಯಕ್ಷಾಭಿಮಾನಿಗಳ ಅಭಿಮಾನ ಉಳಿಸಿಕೊಂಡಿeತು .  



ಇನ್ನು ನಿನ್ನೆ ನೋಡಿದ ಭೀಷ್ಮ ಕಾಪಿ ಕ್ಯಾಟ್   ( copy  cat  ) ಯಾವ ಮಟ್ಟಿಗೆಂದರೆ , ಸಂಭಾಷಣೆ , ವಾಗ್ಝರಿ ಉತ್ತುಂಗಕ್ಕೆ ತಲುಪಿ ಇನ್ನೂ ಹೆಚ್ಚಿನ ನಿರೀಕ್ಷೆಯಲ್ಲಿ ಸುಸಂಸ್ಕ್ರತ ಕಲಾರಸಿಕನಿರುವಾಗ , ಜನ ಸಾಮಾನ್ಯರನ್ನು ರಂಜಿಸುವ ಆಡು ಭಾಷೆಯ , ಕೀಳು ಅಭಿರುಚಿಯ ಹಾಸ್ಯ ಮಿಶ್ರಿತ ಪದ ಪುಂಜಗಳ ಸರಣಿಯೊಂದನ್ನು ಹೊಸೆದು ರಸಾಭಾಸಗೊಳಿಸುವದನ್ನು ದೋಷ ಎನ್ನಬಹುದಾದರೆ , ಈ ದೋಷವೂ ಗುರುವಿನಿಂದ ಶಿಷ್ಯನ ವರೆಗೆ ಹರಿದು ಬಂದಿದೆ. ಆಖ್ಯಾನದಲ್ಲಿ , ಕರ್ಣ ನಿರ್ಗಮನದ ತರುವಾಯ, "ಅವನೇನು ಗಾಳ ಹಾಕಿ ಮೀನು ಹಿಡಿತಿದ್ನ ?" ಎಂಬಂತಹ ಮಾತುಗಾರಿಕೆ ಜನಪ್ರಿಯತೆ ಪಡೆಯುವದೇ  ಗುರಿ  ವಿನಃ  ಭೀಷ್ಮ ಪಿತಾಮಹನಂತಹ ಮೇರು ವ್ಯಕ್ತಿತ್ವದ ವ್ಯಕ್ತಿ ಅಭಿನಯಕ್ಕೆ , ಪ್ರಸ್ತುತೆಗೆ ನ್ಯಾಯೋಚಿತ ಗೌರವವಲ್ಲ.



ಅರ್ಜುನ ಪಾಶುಪತಾಸ್ತ್ರವನ್ನು ಭೀಷ್ಮನ ಮೇಲೆ ಪ್ರಯೋಗಿಸಿದಾಗ , " ಭಳಿರೆ ಮಗನೆ ಪಾರ್ಥ .................." ಹಾಡಿಗೆ ಕಾಡಿದ ಅಭಿವ್ಯಕ್ತನೆಯ ಕೊರತೆ , ಕೆರೆಮನೆ ಮಹಾಬಲರನ್ನು ಮತ್ತೆ ನೆನೆಯಿತು. ಅಂತೆಯೇ " ಶ್ರೀ ಮನೋಹರ ಸ್ವಾಮೀ ಪರಾಕು ............................"  ಹಾಡಿನ ಕುಣಿತ ನೋಡಿ , ಹನುಮನೂ ಒಂದೇ , ಭಲ್ಲೂಕನೂ ಒಂದೇ, ಭೀಷ್ಮನೂ   ಒಂದೇ !!!! ಕುಣಿತಕ್ಕೆ ಎಂಬ ಸೋಜಿಗ ಉಂಟಾಯಿತು.


ನಿನ್ನೆಯ ಭೀಷ್ಮ ಪರ್ವ ಆಖ್ಯಾನದಲ್ಲಿ ಅಭಿಮನ್ಯು ಪಾತ್ರಧಾರಿಣಿ  ಕುಮಾರಿ .ನಾಗಶ್ರೀ ಗೀಜಗಾರ್ ತನ್ನ ಚುರುಕು ಮಾತು, ತಾಳ - ಲಯಗಳ ಮೇಲೆ ಸಾಧಿಸಿದ ಹಿಡಿತ , ಹಿರಿಯ ಕಲಾವಿದ  , ಜನ ಮೆಚ್ಚಿದ ಕಲಾಕಾರ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿಯವರ ಭೀಷ್ಮನ   ಎದುರು  ಸಮರ್ಥ ಪಾತ್ರ ಪೋಷಣೆ ಮಾಡಿ ಗಮನಸೆಳೆದಳು.  ಪಾರಂಪರಿಕ   ಕಲೆ  ಅಧುನಿಕ ಪದ್ಧತಿಯ ವ್ಯವಸ್ಥಿತ ಕಲಿಕೆಯಿಂದ ಹೇಗೆ ಲಯ ತಾಳ ಹಿಡಿತವುಳ್ಳ ಯಕ್ಷಗಾನದ ನೃತ್ಯವನ್ನು ಎಳೆವೆಯಲ್ಲಿಯೇ ಗತ್ತಿನ ಗಮ್ಮತ್ತಿನೊಂದಿಗೆ ಸಾಧಿಸಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾಳೆ ಈ ನಾಗಶ್ರೀ.  ಪಾತ್ರ ಪೋಷಣೆಗೆ ಬೇಕಾದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಅರಳುವ , ನಗೆ ಸೂಸುವ ಮುಖಾರವಿಂದ , ಹಲ್ಲು ಪ್ರದರ್ಶನ ..... ಈ ಬದಲಾವಣೆಗಳು ಶ್ರೇಷ್ಟ ಕಲಾವಿದೆಯ ಸ್ಥಾನದತ್ತ ಕೊಂಡೊಯ್ಯಬಲ್ಲವು.



" ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ   ಭಾರತ   ....................... "  ಶ್ಲೋಕಕ್ಕೆ  ನೀಡಿದ  ಸ್ವರ ಸಂಯೋಜನೆ ಮತ್ತು ಮಾಧುರ್ಯ, ಶ್ರೀ ಕೃಷ್ಣನ ಅಭಿನಯ  ಮನಸೂರೆಗೊಂಡಿತು .



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ  .
hariharbhat.blogspot.in 
Jan  21  , 2013 .

No comments:

Post a Comment