Sunday, January 13, 2013

ಶ್ರೀ ಭಗವದ್ಗೀತಾ ಅಭಿಯಾನದ ಹದಿಮೂರನೆ ಅಧ್ಯಾಯದ ಸಮರ್ಪಣ

ಶ್ರೀ ಭಗವದ್ಗೀತಾ ಅಭಿಯಾನದ ಹದಿಮೂರನೆ ಅಧ್ಯಾಯದ ಸಮರ್ಪಣ ಸಮಾರಂಭದ ಕಾರ್ಯಕ್ರಮಕ್ಕೆ ಹೋಗಿದ್ದೆ.  ಸ್ವರ್ಣವಲ್ಲಿ  ಶ್ರೀ ಗಳ ಪ್ರಸ್ತಾವನಾ ಮಾತುಗಳು, ಗೀತೆಯ ಹದಿಮೂರನೇ ಅಧ್ಯಾಯದ ಪಠಣ ಕೇಳಿ ನಂತರ ಇನ್ನೊಂದು ಕಾರ್ಯಕ್ರಮ ನಿಮಿತ್ತ ಆಚೆ ಹೋದೆನು.


ಗೀತಾ  ಪಠಣಕ್ಕೆ ಮುನ್ನ ಕಾಲಲ್ಲಿ ಚಪ್ಪಲಿಯಿರುವವರು ಚಪ್ಪಲಿ ಬಿಟ್ಟು ಪಠಣ ಮಾಡುವಂತೆ ಸೂಚಿಸಲಾಯಿತು. ನನ್ನ ಅಕ್ಕ ಪಕ್ಕ ದಲ್ಲಿರುವ ಹದಿ ವಯಸ್ಸಿನವರಿಗೆ  " ಚಪ್ಪಲಿ ಬಿಡಲು ಏನು ಕಾರಣವಿರಬಹುದು ? " ಎಂಬ ಕುತೂಹಲ. ಅವರಲ್ಲೇ ಚರ್ಚೆ. ಪಠಣ ಮಧ್ಯೆ ಇವೆಲ್ಲ ನಡೆದುಹೋಯಿತು.   ಅರಿತವರು ( ಸಂಘಟಕರು ಅರಿತವರೆಂಬ ವಿಶ್ವಾಸ ) ಕೆಲವೇ ಸೆಕೆಂಡ್ ಗಳಲ್ಲಿ ಉಧ್ಗೋಶದ ಮಧ್ಯೆ   ವಿವರಣೆ ನೀಡಿದ್ದರೆ ಸಾರ್ವಜನಿಕ ಕಾರ್ಯಕ್ರಮ ಮಾಡುವದರ ಉದ್ದೇಶ , ಅಂದರೆ ಹಿಂದೂ ಧರ್ಮ ಜಗವ್ಯಾಪಿಯಾಗಬೇಕು ಎಂಬ ಸದುದ್ದೇಶ , ಸಾಧಿಸುವತ್ತ ಸಹಾಯಕವಾದಿತೇನೋ ಅನಿಸಿತು. ನನ್ನ ತಿಳುವಳಿಕೆಯಂತೆ ಭೂಮಿ ಮತ್ತು ವ್ಯೋಮದ ಮಧ್ಯೆ ಇರುವ ಈ ದೇಹಕ್ಕೆ ಇನ್ನ್ಯಾವುದೇ ಭಾದಕಗಳಿಲ್ಲದೆ ( ಇಲ್ಲಿ ಚಪ್ಪಲಿ ) ನಮ್ಮ ಸ್ವರ ತಂತುಗಳಿಂದ ಹೊರಟ ನಾದ  ಭೂಮಿ - ದೇಹ - ವ್ಯೋಮದ ಸಂಪರ್ಕ ಬೆಸೆದು ( through electrical impulses ) ಇವುಗಳ ಆಚೆ ಇರುವ ಪರಮಾತ್ಮನ ತಲುಪಲಿ ಎಂದಿರಬಹುದೆನೋ ಎಂದು.


ಇನ್ನು , ನಮ್ಮ ಹಿಂದು ಧರ್ಮದ ಕಾರ್ಯಕ್ರಮಗಳಲ್ಲಿ , ಧರ್ಮಾಭಿಮಾನಿಗಳನ್ನು, ಧರ್ಮಾನುಯಾಯಿಗಳನ್ನು   ಧರ್ಮ ಪರ ಮಾರ್ಗಗಳಲ್ಲಿ ತೊಡಗಿಸಿಕೊಳ್ಳುವ ಭರದಲ್ಲಿ ಇತರೆ ಧರ್ಮಗಳ ಅಂದರೆ ಇಸ್ಲಾಂ , ಕ್ರಿಶ್ಚಿಯನ್ ಮುಂತಾದ ಧರ್ಮದವರ್ಯಾರೋ ಏನೇನೋ ಕಾರಣಗಳಿಂದ ನಮ್ಮ ಧರ್ಮ ಗ್ರಂಥಗಳನ್ನು ಓದಿದರೆ , ಅದನ್ನೇ ನಮ್ಮ ಧರ್ಮ ಗ್ರಂಥಗಳ ಶಕ್ತಿಯನ್ನು ಎತ್ತಿ ಹಿಡಿಯಲು ಉದಾಹರಿಸಿದರೆ ಇದೇನೋ  ಹಾಸ್ಯಾಸ್ಪದ ಎನಿಸುವದು. ಇಂದಿನ ಕಾಲಘಟ್ಟದಲ್ಲಿ ಕುತೂಹಲಕ್ಕಾದರೂ , ಆಧುನಿಕ ಶಿಕ್ಷಣ ಪಡೆದವರು ವಿವಿಧ ಧರ್ಮಗ್ರಂಥಗಳ ಸಾಹಿತ್ಯವನ್ನು ಸಾಧ್ಯವಾದಸ್ಟು   ಓದುತ್ತಾರೆ. ಹಿಂದೂ ಧರ್ಮ ಎಂದೂ ಇತರರ ಧರ್ಮ ಅಥವಾ ಜೀವನ ಪದ್ದತಿಯನ್ನು ಹೀಯಾಳಿಸಿಲ್ಲ   ಅಥವಾ ದ್ವೇಶಿಸಿಲ್ಲ. ಆದರೆ ಇಂದು " ಎಲ್ಲರೊಂದಿಗೆ ನಾವು " ( Inclusive policy  ) ಎಂಬುದನ್ನು ಪ್ರಚುರಪಡಿಸುವತ್ತ ಹೆಚ್ಚಿನ ಒತ್ತು ಹಿಂದೂ ಧರ್ಮದ ಸಭೆಗಳಲ್ಲಿ  ಕಂಡು ಬರುತ್ತದೆ.  ಇಂದಿನ ಸಭೆಯಲ್ಲಿ ಕೇಸರಿ ಬಾವುಟಗಳೆಲ್ಲೂ ಕಂಡುಬರಲಿಲ್ಲ.  ಹಸಿರು ಸಮೃದ್ಧಿಯ ಸಂಕೇತ ಎಂದು ಸಾರುತ್ತಾ ಹಸಿರು ಅಕ್ಷರಗಳಲ್ಲಿ ಬರೆದ  " ಸಮರ್ಪಣಾ ಸಮಾರಂಭ ", " ಭಗವದ್ಗೀತೆ ಶಾಲೆಗಳಲ್ಲಿ ಓದಿಸಿದರೆ ಕೇಸರೀಕರಣ ಅಲ್ಲ , ಹಸೀರೀಕರಣ ಎನ್ನಿ "  ಎಂದು ಒತ್ತು ಪಡೆದ ಮಾತು, ಗೀತಾ ಪಠಣದ ನಾರಿಯರ ಸಮವಸ್ತ್ರಗಳೆಲ್ಲ   ಹಸಿರು,  ಸಭೆಯಲ್ಲಿ ಹಾಸಿದ ಚಾಪೆ ( mat  )   ಸಹ ಹಸಿರು  , inclusive policy  ಎಂಬುದನ್ನು ಸಾರುವತ್ತ ಹೆಚ್ಚಿನ  ಮಹತ್ವ ಕಂಡು ಕೊಂಡಂತಿದೆ.
ಆದರೆ  " ಭಗವದ್ಗೀತೆ ಶಿಕ್ಷಣ , ಆಗಲೇಬೇಕು ತಕ್ಷಣ "   ಎಂದು ನೀಡಿದ ಘೋಷ ವಾಕ್ಯ ಈ ಎಲ್ಲ ಪ್ರಯತ್ನಗಳನ್ನು  ಮರೆಮಾಚುವಂತೆ , ಯಾವ ಮಾಧ್ಯಮ ವಿಭಾಗವು   ಹಿಂದೂ ಧರ್ಮ ವಿರೋಧಿ ಎಂದು ಚರ್ಚಿಸಲ್ಪಡುವದೋ , ಆ ವಿಭಾಗ ತನ್ನ ಕಾರ್ಯಗಳನ್ನು ಹೆಚ್ಚು ಒತ್ತು ನೀಡಿ ಮುಂದುವರೆಸಲು ಅನುಕೂಲವಾಯಿತೆನಿಸುತ್ತಿದೆ.


ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು. ಎಲ್ಲರ ವೇಷ ಭೂಷಣಗಳು ಮನ ಸೂರೆಗೊಳ್ಳುವಂತಿದ್ದವು. ಊಟ ರುಚಿ, ರುಚಿಯಾಗಿತ್ತು. ಇವೆಲ್ಲ ವಿಶೇಷವಲ್ಲ. ಹವ್ಯಕರು, ಅದರಲ್ಲೂ ಬ್ರಾಹ್ಮಣರು ಇವಕ್ಕೆಲ್ಲ ಎತ್ತಿದ ಕೈ.  ಒಂದು ಕೋಟಿ  ಜನಸಂಖ್ಯೆಯಿರುವ  ಬೆಂಗಳೂರು ಶಹರದಲ್ಲಿ  ಒಂದು ನೂರಾ ಅರವತ್ತೈದು ಕೇಂದ್ರಗಳಲ್ಲಿ ಪಾರಾಯಣ, ಇಪ್ಪತ್ತೈದು ಸಾವಿರ ಗೀತಾ ಪುಸ್ತಕ ಹಂಚಲಾಗಿದೆ ಎಂಬ ಹಿರಿಮೆಗಳು ಯಾಕೋ ಕಿರಿದಾಗಿ ಮನ ಕಲಕಿತು.


ಶ್ರೀ  ಗುರುಭ್ಯೋ  ನಮಃ  /   ಸ್ವರ್ಣವಲ್ಲಿ   ಶ್ರೀ  ಗಂಗಾಧರೇಂದ್ರ ಮಹಾ ಸ್ವಾಮಿಕೀ  ಜೈ  //

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
ಜನವರಿ ೧೩ , ೨೦೧೩.

No comments:

Post a Comment