Tuesday, January 1, 2013

ಅದಮ್ಯ ಚೇತನ    -   ಚೇತನದೊಂದಿಗೆ ಚಿಂತನೆ ಬರಲಿ.


" ಅದಮ್ಯ ಚೇತನ " ಮೊದಲನೆಯ ದಿನದ ಕಾರ್ಯಕ್ರಮಕ್ಕೆ ಹೋಗಿದ್ದೆ. ( ೩೦.೧೨.೨೦೧೨ ). ಬಹು
ವಿಜ್ರಂಭಣೆಯ ಕಾರ್ಯಕ್ರಮ.  ಸಿರಿವಂತರ  ಅಂದರೆ ಕರೋಡಪತಿಗಳ ಮನೆಯ ಮದುವೆ ಪಂಚತಾರ ಹೋಟೆಲ್ಗಳಲ್ಲಿದ್ದಂತೆ. ಇಲ್ಲಿ ಸಾಮಾನ್ಯರಿಗಿಲ್ಲ ಮರ್ಯಾದೆ.  ಸಿರಿವಂತರಿಗೆ,  ಮುಖ ಪರಿಚಯವುಳ್ಳವರಿಗೆ, ಮಂತ್ರಿ ಮಾಗಧರ ಪಟಾಲಂ ಗಳಿಗೆ ರಾಜಮರ್ಯಾದೆ.  ಪಬ್ಲಿಕ್ ಎಂಬ ನಾಮಾಂಕಿತರಿಗೆ  ರೈಲ್ವೆ ಯವರೇ ಕಿತ್ತೊಗೆದ ಮೂರನೆ ದರ್ಜೆ ವೈಭೋಗ !


ಎರಡು ಲಕ್ಷ ಮಕ್ಕಳು, ಸರಕಾರೀ ಶಾಲೆ ಮಕ್ಕಳಿಗೆ ಮದ್ಯಾಹ್ನ ಊಟದ ಸರಬರಾಜು ಎಂಬ ಹೆಗ್ಗಳಿಕೆಯನ್ನೇ ಪುಂಖಾನುಪುಂಕವಾಗಿ ಊದುತ್ತಾರೆ. ಹೇಳಿದ್ದನ್ನೇ ಹೇಳುವದು, ಯಾರೊಬ್ಬರನ್ನೊe  ಖುಷಿ ಪಡಿಸುವ ಧಾವಂತದಲ್ಲಿ , ಫುಡ್ ಪಾಯಿಸನ್  ಆಗದಂತೆ  ಊಟ ನೀಡುತ್ತಿರುವದೆ ವಿಶೇಷ ಎಂದು ಮಂತ್ರಿಗಳೂ ಬಾಯಿತುಂಬ ಹೇಳುತ್ತಾರೆ. ಒಂದು ಚೂರೂ ನಾಚಿಕೆಯಿಲ್ಲದಂತೆ , ಸರಕಾರದಿಂದಾಗದ ಕಾರ್ಯಕ್ರಮ , ಮಾಡುತ್ತಿದ್ದಾರೆ ಎಂದು ಘಂಟಾನುಘೋಶದಿಂದ  ಊದುತ್ತಾರೆ.  ಇಷ್ಟೊಂದು ಅಧಿಕಾರ , ಹಣ ಸಂಪತ್ತು  ತಮ್ಮ ಸುಪರ್ದಿಯಲ್ಲಿ ಪ್ರಜೆಗಳೆಲ್ಲ ಕೊಟ್ಟಿ ರುವಾಗ ತಾವೇನೂ ಮಾಡಲಿಲ್ಲ , ಇವರಿಗೇ ಎಲ್ಲ ಅವಕಾಶಗಳನ್ನು ಬಿಟ್ಟು ಬಿಟ್ಟಿದ್ದೇವೆ  ಎಂಬುದನ್ನು ಮುಗ್ಧತೆಯಿಂದ ಸಾರ್ವಜನಿಕವಾಗಿ , ತಮಗೆ ಅರಿವಾಗದಂತೆ  ಅಲವತ್ತುಕೊಳ್ಳುತ್ತಾರೆ,  ಅತಿ ಪ್ರಭಾವಿಯಾಗಿರುವ ಮಂತ್ರಿಗಳು.  ಸಾಮಾನ್ಯ ಪ್ರಜೆಯು ಯೋಚಿಸುವಂತೆ, ಈ ಅಗಾಧವಾದ ಸ್ತುತ್ಯ ಕಾರ್ಯಗಳಿಗೆ ಹಣದ ಮೂಲ ಯಾವುದು, ಯಾವ ಪ್ರತಿಫಲಗಳನ್ನಪೆeಕ್ಷಿಸಿ ಈ ಪ್ರಮಾಣದ ಹಣ ಹರಿದು ಬರುತ್ತದೆ ಎಂಬ ಕಡೆ ಯೋಚಿಸದೆ ಇರುವ ಜಾಣತನ  ಅಥವಾ  ಯೋಚಿಸಿದರೂ ಹೇಳದಂತಹ ಅಸಹಾಯಕತೆಯ ಬಂಧನದಲ್ಲಿ ಇರಬಹುದಾದ ಮಂತ್ರಿವರ್ಯರ ಭಾಷಣ ಕೇಳುವದೇ ಅಸಹ್ಯವೆನಿಸುವದು.


ಅದಮ್ಯ ಚೇತನದ ಕಾರ್ಯಗಳು ಹೇಳುವಂತಹ, ಕಾಣುವಂತಹ ಥಳುಕು ಬಳುಕಿನ ಆಚೆ ಹೇಳಲಾಗದ ಸತ್ಯಗಳಿವೆ ಎಂಬುದು ಒಂದೆರಡು ಘಟನೆಗಳಿಂದ ತಿಳಿಯಿತು. ಸರಕಾರೀ ಶಾಲೆಯಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಮಾಡಿಸಿದ್ದೇವೆ, ಶುಚಿತ್ವ ಕಾಪಾಡುವಂತೆ ವ್ಯವಸ್ತೆ ಮಾಡಿದ್ದೇವೆ , ಸರಕಾರೀ ಶಾಲೆಗಳಲ್ಲಿ ಮಾಡಿದ್ದೇವೆ ಎಂದು ಸುಂದರವಾದ ಕರಪತ್ರದೊಂದಿಗೆ ವ್ಯವಸ್ತಿತವಾಗಿ ವಿವರಣೆ ನೀಡಿದ ಕಾರ್ಯಕರ್ತರನ್ನು , ಮುಗ್ದವಾಗಿ ಎಷ್ಟು ಶಾಲೆಗಳಲ್ಲಿ ಮಾಡಿದ್ದೀರಿ  ಎಂದು   ಪ್ರಶ್ನಿಸಿದಾಗ ಬಂದ ಉತ್ತರ , ಪೆಚ್ಚು ಮೋರೆಯೊಂದಿಗೆ - " ನಾಲ್ಕು ಶಾಲೆಗಳು ".   ಯೋಚಿಸಿ ಬೆಂಗಳೂರಿನ ಜನಸಂಖ್ಯೆ   ಹತ್ತಿರ  ಹತ್ತಿರ  ಎಂಭತ್ತು ಲಕ್ಷ , ಸರಕಾರೀ ಶಾಲೆಗಳು ಸಾವಿರಾರು ಇವೆ , ಬಸವನಗುಡಿ ಸುತ್ತ ಮುತ್ತ ನೂರಾರು ಸರಕಾರೀ ಶಾಲೆಗಳಿರಬಹುದು,  ನಾಲ್ಕು ಶಾಲೆಗಳಿಗೆ ಶೌಚಾಲಯ ನಿರ್ಮಿಸಿ, ಈ ಕೆಲಸವನ್ನು ಜನತೆಗೆ ತಿಳಿಸಲು ಮಾಡಿದ ಮುದ್ರಣ ವೆಚ್ಚವೇ ಹತ್ತಾರು ಸಾವಿರವಾಗಿರಬಹುದು.  ಹೆಚ್ಚಿನ ವಿಷಯ ಕೇಳಿ ಅವರ ಉತ್ಸಾಹ ಕುಗ್ಗಿಸುವ ಮನಸ್ಸು ಬರಲಿಲ್ಲ.


ಇನ್ನು ಪ್ರದರ್ಶನಗಳು . ಆ ಶಂಕರನಿಗೆ ಪ್ರಿಯವಾದದ್ದು. ನಮ್ಮ ದೇವ ದೇವತೆಗಳ ಗೊಂಬೆಗಳು ಬಣ್ಣ ಕಾಣದೆ, ಕೇಶ ಶ್ರಂಗಾರ ಕಾಣದೆ ವರ್ಷಗಳೇ ಉರುಳಿ ಹೋಗಿವೆ.  ಹಣದ ಭರಾಟೆಯ ಈ ದಿನಗಳಲ್ಲಿ , ಕಾಲ ಕಾಲಕ್ಕೆ ಹೊಸತನ ಮೂಡಿಸುವ ಪುರುಸೊತ್ತಾದರೂ ಎಲ್ಲಿ ?  ಎಂಬಂತಹ   ಪ್ರಶ್ನೆಗಳನ್ನು  ಪ್ರದರ್ಶನಕ್ಕೆ ಅಸಹಾಯಕವಾಗಿ ನಿಂತಿರುವ ನಮ್ಮ ದೇವ ದೇವತೆಗಳು  ಕೇಳುತ್ತಿರುವ೦ತಿವೆ . ವಿದೇಶಿ ಪ್ರವಾಸಿಗರನ್ನು ಎಳೆದು ತಂದರೆ ಪ್ರದರ್ಶನ ಬಹು ಹೊಗಳಿಕೆ ಕಾಣಬಹುದೇನೋ ?


ಬಂದವರಿಗೆಲ್ಲ ಊಟದ ವ್ಯವಸ್ತೆ ಇತ್ತು. ಮಂತ್ರಿ ಮಾಗಧರಿಗೆ ವಿಶೇಷ ವ್ಯವಸ್ತೆ . ಇಂದಿನ  ಸಾರ್ವಜನಿಕ ಜೀವನದ ಸಹಜ ಭಾಗ ಎಂದುಕೊಳ್ಳೋಣ.  ಇಲ್ಲೂ " ಪಬ್ಲಿಕ್ ಜನ "  ಎಂದು ಒಂದು ಮೂಲೆಯಲ್ಲಿ ಸಾರ್ವಜನಿಕ ದಾಸೋಹಕ್ಕಿಂತ ಕಡಿಮೆ ದರ್ಜೆಯ ಅನ್ನ ಸಾಂಬಾರು ಜೊತೆಗೆ ನೀರು ಮಜ್ಜಿಗೆ ಸಾಥ್ !!!. ಬಿದ್ದೆನೋ ಎದ್ದೆನೋ ಎಂದು ಓಡುವ ಪಾಯಸ ಬೇರೆ !!!!!!

ನೀವು ಹೋಗಿಲ್ಲವೇ ಪಾಯಸ ಸವಿಯಲು !!!!!


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
January 01 , 2013. 

No comments:

Post a Comment