Sunday, January 20, 2013

ಕೊಂಡದಕುಳಿ ರಾಮಚಂದ್ರ ಹೆಗಡೆ

ನಿನ್ನೆ  ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನೇತ್ರತ್ವದ ಯಕ್ಷಗಾನ ದಕ್ಷಯಜ್ಞ ನೋಡಿದೆ. ಅತ್ಯಾಧುನಿಕ ವೇಷ ಭೂಷಣಗಳೂ , ರಂಗು ರಂಗಾದ ವರ್ಣ ವಿನ್ಯಾಸಗಳು ಮನಸೆಳೆಯುತ್ತವೆ. ಜೊತೆಗೆ ಆಧುನಿಕ ದೀಪ ವ್ಯವಸ್ತೆಗಳು ಪೂರಕವಾಗಿವೆ.


ಒಂದು ಅಭಿಮಾನದ ವಿಷಯವೆಂದರೆ ಕೇವಲ ರಂಜನೆಯತ್ತ ಗಮನವೀಯದೇ ಯಕ್ಷಗಾನದ ಕುಣಿತ, ತಾಳಗಳ ಜೊತೆಗೆ ಮೇಳೈಸಿರುವ ಮಾತಿನ ಚಮತ್ಕಾರಕ್ಕೂ ಯೋಗ್ಯ ಪುರಸ್ಕಾರ ನೀಡಲ್ಪಟ್ಟಿದೆ. ದಕ್ಷ ಪಾತ್ರಧಾರಿ ತನ್ನ ಪಾತ್ರ ಪೋಷಣೆಗೆ ಬೇಕಾದ ಪದ ಸಂಪದಗಳನ್ನು ಬಹು ವಿಧವಾಗಿ ಯೋಗ್ಯವಾಗಿ ಭೇಷ್ ಎನ್ನುವಂತೆ ಪ್ರಯೋಗಿಸಿದರೂ , ಆಡುಭಾಷೆಯ ಪದಗಳನ್ನುಪಯೋಗಿಸದೇ   ಇದ್ದರೆ , ಪಾತ್ರಕ್ಕೆ ಇನ್ನೂ ಹೆಚ್ಚು ತೂಕ ಬಂದೀತು.   ಚಿತ್ರ - ವಿಚಿತ್ರ ಅಂಗಾಭಿನಯದಿಂದ , ಚಿತ್ರ - ವಿಚಿತ್ರ ಕುಣಿತಗಳಿಂದ , ಚಿತ್ರ - ವಿಚಿತ್ರ ಸಾಹಿತ್ಯದಿಂದ   ಜನರಂಜನೆ  ನೀಡುವದು  ಹಾಸ್ಯಗಾರನಿಗೆ  ಯಕ್ಷಲೋಕ   ಕೊಟ್ಟ ಬಳುವಳಿ. ಈ ಬಳುವಳಿಯನ್ನು ಎಲ್ಲ ಪಾತ್ರಧಾರಿಗಳೂ ಉಪಯೋಗಿಸ ಹೊರಟರೆ , ಯಕ್ಷ ಲೋಕ ವೈಭವ  , ಊಟದ ಬಟ್ಟಲಿನಲ್ಲಿ ಕೇವಲ ಉಪ್ಪಿನಕಾಯಿ ತುಂಬಿದಂತಾದೀತು.  ಯಕ್ಷ ಪ್ರಿಯರೆಲ್ಲಾ, ಅದರಲ್ಲೂ ಕಲಾವಿದರು ತೀಕ್ಷ್ಣವಾಗಿ, ತೀವ್ರವಾಗಿ ಯೋಚಿಸಬೇಕಾದ ವಿಷಯ.



ಈಶ್ವರನನ್ನು ಕೇವಲವಾಗಿ ಹಳಿಯುವ ದಕ್ಷನ ಅಂಗಾಂಗ ಚಲನೆಗಳು ( body  language  ) , ಮುಖ ವ್ಯಕ್ತನೆಗಳು ( expressions  in  face   )  ಮತ್ತು  ಆಮೇಲೆ   ದಕ್ಷನ  ಮಾತುಗಳನ್ನೆಲ್ಲ ಖಡಾ ಖಂಡಿತವಾಗಿ ತುಂಡರಿಸುವ ಈಶ್ವರನ ಶಬ್ದ ಸಾಹಿತ್ಯ  ಬಹು  ಪ್ರಶಂಸನೀಯ.



ಈಶ್ವರ ಪಾತ್ರಧಾರಿ ರಾಮಚಂದ್ರ ಹೆಗಡೆಯವರಿಗೆ ಅವರದೇ ಆದ ಅಭಿಮಾನಿ ಬಳಗವಿದೆ.  ಯಕ್ಷಕಲಾಪ್ರಾಕಾರಗಳಲ್ಲಿ ತಿಳುವಳಿಕೆಯುಳ್ಳ ಅಭಿಮಾನಿ ಬಳಗವನ್ನು ಬಹುಕಾಲ ತನ್ನ ಜೊತೆಗೂಡಿ ಸಾಗಲು  ರಾಮಚಂದ್ರ ಹೆಗಡೆಯವರು  ನೃತ್ಯಪ್ರಕಾರಗಳಲ್ಲಿ   ಮತ್ತು  ಸಾಹಿತ್ಯ ವಾಂಗ್ಮಯ ಅಭ್ಯಾಸದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡರೆ , ಧೀರ್ಘಕಾಲ ಜನ ಮನದಲ್ಲಿ ನೆಲೆಸುವರೆಂಬುದರಲ್ಲಿ ಎರಡು ಮಾತಿಲ್ಲ. ಅವರ ಮಾತಿನ ಓಘ, ವೈಖರಿ ಗಮನಿಸಿದರೆ ಈ ದಿಶೆಯಲ್ಲಿ ಅವರು ತೊಡಗಿಕೊಂಡಂತೆ   ಅಥವಾ ತೊಡಗಿಕೊಳ್ಳುವತ್ತ   ಮನ ಮಾಡಿದಂತೆ ತೋರಿ ಬರುತ್ತದೆ. ಈ ಮಧ್ಯೆ ಇನ್ನೊಂದು ಅಂಶವನ್ನು ಅವರ ಸ್ನೇಹಿತರು ಅವರ ಗಮನ ಸೆಳೆಯುವ ಅವಶ್ಯಕತೆ ಇದೆ. ಅಧುನಿಕ ಜೀವನ ಪದ್ಧತಿಯ
 " ಡೈಟಿಂಗ್ "  ಅಥವಾ ಪ್ರಾಚೀನ   ಪದ್ಧತಿಯ ಯೋಗ , ಬಳಸಿ  ದೇಹವನ್ನು ನೃತ್ಯ ನರ್ತನಕ್ಕೆ ಪ್ರಭಾವಿಯಾಗಿ ರೂಪುಗೊಳಿಸಬೇಕಾದ   ಜರೂರು ಇದೆ.


ಹರಿಹರ ಭಟ್, ಬೆಂಗಳೂರು.
Jan  21 , 2013 .



.

No comments:

Post a Comment