Saturday, March 2, 2013

ಇಂದಿನ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಮ್ಮೆ ಅವಲೋಕಿಸಿ.


ಇಂದಿನ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಮ್ಮೆ  ಅವಲೋಕಿಸಿ. ಮೊದಲನೇ ಕಾರ್ಯಕ್ರಮಕ್ಕೆ ಹೋದಾಗ ನೀಡುವ ಸಮಾಧಾನ ಎರಡನೇ ಕಾರ್ಯಕ್ರಮಕ್ಕೆ ಹೋದಾಗ ನೀಡುವದೇ ಇಲ್ಲ. ಎರಡನೆ, ಮೂರನೇ .... ಹೀಗೇ ಅನುಕ್ರಮವಾಗಿ ಅದೇ ಅಭಿರುಚಿಯ, ಅದೇ ಸಂಘಟಕರ ಕಾರ್ಯಕ್ರಮಗಳಿಗೆ ಹೋದಾಗ ಕಾರ್ಯಕ್ರಮ ಸಂಘಟಕರಲ್ಲಿ ಢಾಳಾಗಿ ಕಾಣಬರುವ ಆಸಕ್ತಿ ಕೊರತೆ, ಮಾಯವಾಗಿರುವ ಕಾರ್ಯಕ್ರಮ ವೈವಿಧ್ಯತೆ, ಬಹುಮಟ್ಟಿಗೆ ಎಲ್ಲೆಡೆ ಕಂಡು ಬರುವ ಅದೇ ಪ್ರೇಕ್ಷಕ ವರ್ಗ , ಕಾರ್ಯಕ್ರಮಗಳೆಲ್ಲ ಇಂದು ಕೇವಲ ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳಾಗಿ ಫೈಲ್ ಗಳಲ್ಲಿ ಕೂತಿರುವ ಅವೇ ನೀರಸ ವೋಚರ್ ಗಳು , ಡಿವಿಡಿ ಗಳು , ಅಲ್ಲಿಂದ ದೊರಕುವ ಹಣ ಇಷ್ಟಕ್ಕಾಗಿಯೇ ಎಲ್ಲ ಶ್ರಮ ವ್ಯಯವಾಗುತ್ತಿದೆಯೋ ಎನಿಸುತ್ತದೆ.



ನಾನು ಕೆಲವು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಆಸ್ವಾದಿಸಬಯಸಿ ಹೋಗುತ್ತಿದ್ದೇನೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಅದೇ ವ್ಯವಸ್ಥೆ , ಅದೇ ರಂಗ ಪರಿಕರ ಸಾಮಾನ್ಯ . ಆದರೆ ಕಲಾವಿದರಲ್ಲೂ ಅದೇ ನಿರ್ಜೀವ ವಸ್ತುಗಳ ತಾಳ ಸಮ್ಮಿಳನ. ಆಧುನಿಕ ಸಂಗೀತ ಮುದ್ರಿಕೆಗಳಂತೆ ಅದೇ ಏಕ ತಾನತೆ. ಸ್ವರ ಏರುವದೆಂದರೆ   ಅರಚುವದೊಂದೇ ವಿಧಾನ ಎಂಬಂತೆ , ಜನ ಮಾನಸದಲ್ಲಿ ಶ್ರೇಷ್ಟ ಕವಿಗಳೆಣಿಸಿದವರ ಕವನಗಳನ್ನೆತ್ತಿಕೊಂಡು , ಪ್ರಸ್ತುತಪಡಿಸುವ ವಿಧಾನ ಸಂಘಟಕರಿಗಷ್ಟೇ ಪ್ರೀತಿ. ಈ ಅಭಿಪ್ರಾಯಕ್ಕೆ ಪುಟವಿಟ್ಟಂತೆ , ಬಲವಂತವಾಗಿ ಪ್ರೇಕ್ಷಕರನ್ನು ಪೀಡಿಸಿ ಚಪ್ಪಾಳೆ ತಟ್ಟಿಸುವ ಕಾರ್ಯಕ್ರಮ ನಿರ್ವಾಹಕರು.




ನೀವು ನಾಲ್ಕಾರು ಕಾರ್ಯಕ್ರಮಗಳಿಗೆ ಹೋಗಿ ಬಂದರೆ ದೊರಕುವ ಅನುಭವಗಳೆಂದರೆ ಬೆಂಗಳೂರಿನ ತುಂಬೆಲ್ಲ ಈ ರೀತಿ ಜಾಲವೇ ಹರಡಿದೆ.  ಒಬ್ಬರು ಇಬ್ಬರು ಕಾರ್ಯಕ್ರಮ ನಿರ್ವಾಹಕರು, ನಾಲ್ಕಾರು - ಎಂಟು ಹತ್ತು ಕಲಾಕಾರರು, ಒಂದೆರಡು ಫೋಟೋ- ವಿಡಿಯೋ ಗ್ರಾಫರ್ಗಳು , ಪೂರಕವಾಗಿ ಬಿಲ್ಲು ಬರೆದು, ಹಣ ನೀಡಲು ಒಬ್ಬಿಬ್ಬರು ಕಲಾ ಸಂಸ್ಕ್ರತಿ  ಇಲಾಖೆಯ ಸರಕಾರೀ ಅಧಿಕಾರಿಗಳು , ಆ ಅಧಿಕಾರಿಗಳೇ ಅಥವಾ ಆ ಅಧಿಕಾರಿಗಳಿಂದ ಸೂಚಿಸಲ್ಪಟ್ಟ  ಅತಿಥಿಗಳು ಈ ರೀತಿ ಒಂದು ವ್ಯವಸ್ತಿತ ವ್ಯವಸ್ಥೆ ಎನ್ನಬಹುದೋ, ಸಂಚು ಎನ್ನಬಹುದೋ ಒಟ್ಟಾರೆ ಸರಕಾರದ ಕಲಾ ಸಂಸ್ಕ್ರತಿ ಪ್ರೋತ್ಸಾಹದ ವಿಡಂಬನೆ.




ಈ ರೀತಿ ವ್ಯವಸ್ತಿತ ಜಾಲ ಇಂದು ಬೆಂಗಳೂರಿನಲ್ಲಿ ಎಲ್ಲೆಡೆ ಹಬ್ಬಿದೆ. ರಾಜ್ಯೋತ್ಸವ , ಅಣ್ಣಮ್ಮದೇವಿ ಕಾರ್ಯಕ್ರಮಗಳಿಂದ ಹಿಡಿದು ಪ್ರತಿ ಸಮಾಜದಲ್ಲಿ ನಡೆಯುವ, ಶಾಲಾ ವಾರ್ಷಿಕೋತ್ಸವದ ಅಣುಕುಗಳಂತಿರುವ, ಸಾಂಸ್ಕ್ರತಿಕ ಕಾರ್ಯಕ್ರಮಗಳೂ ಇದೇ ರೀತಿ ಹಳ್ಳ ಹಿಡಿದಿವೆ. ಯಾವ ಕಲಾ ಪ್ರಕಾರಗಳನ್ನೂ ಈ ಚಾಳಿ ಬಿಟ್ಟಿಲ್ಲ.  ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಒಂದು ಆರೋಹಣ , ಅವರೋಹಣಗಳಿಗೆ ಇಪ್ಪತ್ತು ನಿಮಿಷ ನಲವತ್ತು ನಿಮಿಷಗಳು ಬೇಕಿದ್ದಲ್ಲಿ ಐದರಿಂದ ಎಂಟು ನಿಮಿಷಗಳಲ್ಲೇ ಆರೋಹಣ , ಅವರೋಹಣ ಮಾಡಿ ಸಂಗೀತದ ಕೊಲೆಯೇ ನಡೆದು, ಹೊಸದಾಗಿ ಬರುವ ಸಂಗೀತಾಸಕ್ತರಿಗೆ ಇದೇ ಶಾಸ್ತ್ರೀಯ ಸಂಗೀತ ಎಂಬ ಭಾವ ತುಂಬುವ ಸರಕಾರೀ ಬಿಲ್ಲು ಪ್ರಾಯೋಜಿತ ಸಂಘಟನೆಗಳೇ ಇಂದು ಬೆಂಗಳೂರು ತುಂಬಿವೆ. ಎಂಟು ಹತ್ತು ತಾಸುಗಳಲ್ಲಿ ಆಸ್ವಾದಿಸಬೇಕಾದ ಕಲಾ ಪ್ರಕಾರದ ರಾಗ, ತಾಳ, ಲಯಗಳನ್ನು ಎರಡು ಮೂರು ತಾಸುಗಳಲ್ಲಿ ತುರುಕಿ ವಿವಿಧ ತಾಳ, ಲಯ, ಯಮನ್ , ಝಲಕ್ ಗಳನ್ನು ತುರುಕಿ ಪ್ರೆಕ್ಷಕನಿಗೋಸ್ಕರ ಎಂಬ ಹಣೆಪಟ್ಟಿ ಹಚ್ಚಿ ವ್ಯವಸ್ತಿತವಾಗಿ ಕಲೆಯ ಕೊಲೆಯೇ ಶಾಂತವಾಗಿ ನಡೆಯುತ್ತಿದೆ.




ಇದೇ ರೀತಿ ಯಕ್ಷಗಾನದ ಪ್ರಕಾರಗಳೂ ಇದೇ ದಾರಿ ಹಿಡಿದಿವೆ. ಪ್ರೇಕ್ಷಕನಿಗೋಸ್ಕರ  ಸಮಯ ಮಿತಿ ಪ್ರಸಂಗಗಳು ಎಂಬ ಹಣೆ ಪಟ್ಟಿಯೊಂದಿಗೆ  ಪ್ರದರ್ಶನ ಗೊಳ್ಳುವ ಆಖ್ಯಾನಗಳು, ಒಣಗಿಸಲು ಬಿಚ್ಚಿಟ್ಟ ಹರುಕು   ಸೀರೆಯ ತೇಪೆಗಳಂತೆ, ಭಾಸವಾಗುತ್ತಿವೆ. ರಣ ರಂಗದಲ್ಲಿ ಸೋತು ಜರ್ಜರಿತವಾದ ಧುರ್ಯೋಧನನು ವೈಶಂಪಾಯನ ಕೊಳವನ್ನು ಪ್ರವೇಶಿಸುವ ಮುನ್ನ ರಚಿಸಬೇಕಾದ ರಂಗ ಸನ್ನಿವೇಶಗಳಿಗೆ, ರಂಗ ಭಾವಗಳಿಗೆ, ರಂಗ ಭಾವನೆಗಳಿಗೆ,  ಪ್ರೇಕ್ಷಕನು  ಪಡೆಯಬೇಕಾದ ಈ ಎಲ್ಲ ಅನುಭೂತಿಗಳಿಗೆ ಭಾವ ತುಂಬಲು ಅಂದಿನ ಹಿರಿಯ ನುರಿತ ಕಲಾವಿದರೇ ಎರಡು ಮೂರು ತಾಸುಗಳನ್ನು ತೆಗೆದುಕೊಳ್ಳುತ್ತಿದ್ದ ಕಾಲವದಾದರೆ , ಇಂದು ಕೇವಲ ಇಪ್ಪತ್ತು ನಲವತ್ತು ನಿಮಿಷಗಳಲ್ಲೇ ತಾನು ಆ ಎಲ್ಲ ಭಾವ, ಭಾವನೆಗಳನ್ನು ರಂಗದ ಮೇಲೆ ತಂದೇನೆಂದು   ಬೀಗುತ್ತ , ಸುತ್ತ ಹತ್ತಾರು ಭೋ ಪರಾಕು ಜೀವಿಗಳನ್ನು ಬೆಳೆಸಿಕೊಳ್ಳುತ್ತ, ಸರಕಾರೀ ಖಜಾನೆಯತ್ತ ವಾರೆಗಣ್ಣು ಬೀರುತ್ತ , ಕಲಾ ಪ್ರಕಾರಗಳನ್ನು ಬೆಳೆಸ ಹೊರಟ ಕಲಾಕಾರರಿಂದ ಇಂದು ಯಕ್ಷಗಾನವೂ ವಿಡಂಬನೆಯಿಂದ ನಲುಗುತ್ತಿದೆ.



ನಾಟಕಗಳ ಬಗೆಗೆ ಬರೆಯದಿರುವದೇ ವಾಸಿ. ಈ ಎಲ್ಲ ವಿಕ್ಷಿಪ್ತ ಬೆಳವಣಿಗೆಗಳು ಆರಂಭವಾಗಿದ್ದೇ ನಾಟಕವೆಂಬ   ಕಲಾಪ್ರಕಾರದಿಂದ. ಗಲ್ಲಿ ಗಲ್ಲಿ ಗಳಲ್ಲಿ, ಊರು ಊರುಗಳಲ್ಲಿ ಹುಟ್ಟಿಕೊಂಡ ನಾಟಕಮಂಡಳಿಗಳು ಪ್ರೇಕ್ಷಕರಿಲ್ಲದೆ ಸೊರಗಿದಾಗ ಜನ್ಮ ತಳೆದಿದ್ದೇ ಸರಕಾರೀ ಪ್ರಾಯೋಜಿತ ನಾಟಕಗಳು. ಮುಂದೆ ಎಲ್ಲಾ ಕಲಾ ಪ್ರಕಾರಗಳನ್ನು ಆವರಿಸಿದ ಈ ಚಾಳಿ ನೂರಾರು ಜನರಿಗೆ ಜೀವನ ರೀತಿಯೇ ಆಗಿ, ಸರಕಾರೀ ಅಧಿಕಾರಿಗಳ ಜೇಬು ತುಂಬುವ ಕಾರ್ಯದಲ್ಲೂ ಯಶಸ್ವಿಯಾಯಿತು. ವರ್ತಮಾನದಲ್ಲಿ ಸಹಜ ಜೀವನ ಕಲಾ ಪ್ರಕಾರಗಳ ಪೋಷಣೆಗೆ ಎಲ್ಲರೂ ಈ ಸರಕಾರೀ ಪ್ರಾಯೋಜಿತ ಯೋಜನೆಗೆ ಆತು ಬಿದ್ದಿರುವದು ವಿಪರ್ಯಾಸ.  



ಇನ್ನೂ ಒಂದು ಬಹು ಚೋದ್ಯದ ಸಂಗತಿಯೆಂದರೆ ಈ ರೀತಿಯ ತಂಡಕ್ಕೆಲ್ಲಾ ತಮ್ಮದೇ ಆದ ಒಂದೋ ಎರಡೊ ವಿಮರ್ಶಕರಿರುತ್ತಾರೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಆಸ್ಥಾನ ಪಂಡಿತರಿದ್ದಂತೆ. ಈ ವಿಮರ್ಶಕರೂ ತಂಡದ ಎಲ್ಲ ವ್ಯವಸ್ಥೆಗಳಲ್ಲೂ ಭಾಗಿಯಾಗಿರುತ್ತಾರೆ. ಹೊರಗಿನವರಿಗಷ್ಟೇ ವಿಮರ್ಶಕರೆಂಬ ಬಿರುದು ಹೊತ್ತು , ತಂಡದ ಕಾರ್ಯಕ್ರಮಗಳಲ್ಲಿ ಸಂಮಾನಿತರಾಗುತ್ತಾರೆ. ಹೀಗೆ ಇಂದು ವ್ಯವಸ್ಥೆ? ಅವ್ಯವಸ್ಥೆ? ಕಂಪ್ಯೂಟರ್ ಯುಗದ ಚಿಪ್ಪಿನಂತೆ , ಎಲ್ಲ ಒಂದೇ ಪ್ರೊಗ್ರಾಮಿನಲ್ಲಿಟ್ಟು ಸಾಗುತ್ತಿದೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
March 02 , 2013.

No comments:

Post a Comment