Friday, March 15, 2013


" ಹುಚ್ಚು ಮುಂಡೆ ಮದುವೇಲಿ , ಉಂಡವನೇ ಜಾಣ "
-------------------------------------------------------



"ಪರೀಕ್ಷೆಯ ಹಿಂದಿನ ದಿನ ಸೈಬರ್ ಕೆಫೆ , ಟ್ಯುಶನ್ ಕೇಂದ್ರ , ಝೆರಾಕ್ಷ   ಕೇಂದ್ರಗಳ ಬಳಿ ಹಾಗೂ ವಿಧ್ಯಾರ್ಥಿಗಳು ಗುಂಪು   ಗುಂಪು  ಸೇರುವ ಕಡೆಗಳಲ್ಲಿ ವೀಡಿಯೊ ಚಿತ್ರೀಕರಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಶಿಕ್ಷಣ ಮಂತ್ರಿ ವಿಶ್ವೇಶ್ವರ   ಕಾಗೇರಿಯವರ ಹೇಳಿಕೆ.




ಎತ್ತಿಗೆ ಜ್ವರ ಎಮ್ಮೆಗೆ ಬರ  ( ಔಷಧ ) ಎಂಬಂತಿದೆ ಈ ನಿರ್ಣಯ.  ತನ್ನ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಂದಲೇ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಬೇಕೆಂಬ ಸಾಮಾನ್ಯ ಜ್ಞಾನವನ್ನೂ  , ಮಂತ್ರಿಯಾದೊಡನೆ  ಎಲ್ಲ ರಾಜಕೀಯ ಪುಢಾರಿಗಳೂ  ಕಳೆದುಕೊಳ್ಳುವದು ಈ ದೇಶದ ದೌರ್ಭಾಗ್ಯ. ವ್ಯವಸ್ಥೆಯಲ್ಲಿ ಜವಾನನಿಂದ ಆರಂಭವಾಗಿ ಮಂತ್ರಿಯ ಅಧಿಕಾರಿಗಳ ತನಕ ಎಲ್ಲರ ಮೇಲೆ ಮಂತ್ರಿಯ ಹಿಡಿತ ಇರಬೇಕು ಎಂದು ಸೂಕ್ತ ಕಾನೂನುಗಳಿವೆ. ಅದೇ ರೀತಿ ಪ್ರತಿ ಅಧಿಕಾರಿಗೂ ತನ್ನ ಕೆಳಗಿನ ಅಧಿಕಾರಿಗಳು ಮತ್ತು ನೌಕರರ ಮೇಲೆ ಸೂಕ್ತ ಹಿಡಿತ ಸಾಧಿಸಲು ಬಲವಾದ ಕಾನೂನುಗಳಿವೆ. ಈ ಎಲ್ಲಾ ವ್ಯವಸ್ಥಿತ ಕಾನೂನುಗಳ ಹೊರತಾಗಿಯೂ , ಜವಾಬ್ದಾರಿಯುತ ಅಧಿಕಾರಿಯೊಬ್ಬನ ಬೇಜವಾಬ್ದಾರಿಯಿಂದಲೇ ಪ್ರಶ್ನೆ ಪತ್ರಿಕೆಗಳು , ನಿರ್ಧಿಷ್ಟ ಪರೀಕ್ಷಾ ಸಮಯಕ್ಕಿಂತ ಮೊದಲು ಆಚೆ ಬರುತ್ತದೆ ಅಂದರೆ ಲೀಕ್ ಆಗುತ್ತದೆ ಎಂದರೆ ದೋಷವಿರುವದು ನೌಕರ ವರ್ಗದ ಕಾರ್ಯಶೈಲಿಯಲ್ಲಿ ಅಥವಾ ನೌಕರವರ್ಗವನ್ನು ಸಂಭಾಳಿಸಿ ಕೆಲಸ ತೆಗೆದುಕೊಳ್ಳಲಾಗದ ಮಂತ್ರಿಯಲ್ಲಿ !!! . ಈ ರೀತಿ ತಮ್ಮ ಅಧೀನದಲ್ಲಿರುವ ಜನರಿಂದ ನಡೆಯುವ ಸಮಾಜ ದ್ರೋಹೀ ಕೆಲಸಗಳಿಗೆ ಕಡಿವಾಣ ಹಾಕುವದನ್ನು ಬಿಟ್ಟು , ಅಧಿಕಾರಿಗಳು ನೀಡಿದ ಹುಚ್ಚು ಹುಚ್ಚು ಸಲಹೆಗಳನ್ನು ಕಣ್ಣು ಮುಚ್ಚಿ ಸ್ವೀಕರಿಸುವದು ಅಜ್ಞಾನಿ , ಸಾಮಾನ್ಯ ವ್ಯವಹಾರ ಜ್ಞಾನವೂ ಇಲ್ಲದವನೊಬ್ಬನಿಗೆ  ಮಾತ್ರ ಸಾಧ್ಯ.




ವೀಡಿಯೊ ಚಿತ್ರೀಕರಣದಂತಹ ಸಾಮೂಹಿಕ ಸನ್ನಿಯನ್ನಾಧರಿಸದೆ  , ಪ್ರಶ್ನೆ ಪತ್ರಿಕೆಗಳ ತಯಾರಿಕೆ, ಅಚ್ಚು ಹಾಕುವಿಕೆ, ಸಂಗ್ರಹ ವಿಧಾನ, ಪರೀಕ್ಷಾ ಕೇಂದ್ರಗಳಿಗೆ ಸಾಗಾಣಿಕೆ ವಿಧಾನ ಗಳಲ್ಲಿ ಹೆಚ್ಚಿನ ಅನುಭವವಿರುವ ಅಧಿಕಾರಿಗಳನ್ನೇ ಆಯ್ದು , ಪ್ರತಿಯೊಂದು ಅನಪೇಕ್ಷಿತ ಬೆಳವಣಿಗೆಗಳಿಗೂ ಅವರನ್ನೇ ಜವಾಬ್ದಾರಿಯನ್ನಾಗಿ ಮಾಡಿದರೆ , ಸಹಜವಾಗಿಯೇ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುವದು ನಿಂತುಹೋಗುತ್ತವೆ. ಈ ರೀತಿ ಸರಳ ವಿಧಾನಗಳನ್ನೇಕೆ ಅನುಸರಿಸುತ್ತಿಲ್ಲ ಎಂದು ಅಧಿಕಾರಿಗಳನ್ನು  ಜವಾಬ್ದಾರಿಯುತ ಮಂತ್ರಿಯಾಗಿ ಪ್ರಶ್ನಿಸಿ, ಕಾರ್ಯ ಸಾಧಿಸುವದನ್ನು ಬಿಟ್ಟು, ಹೆಚ್ಚು ಹೆಚ್ಚು ಸಾರ್ವಜನಿಕ ಹಣ ಹೊಡೆಯಲು ಅನುಕೂಲವಾದ  , ಹುಚ್ಚು ಹುಚ್ಚು ವಿಧಾನಗಳನ್ನು ಅನುಸರಿಸಿದರೆ, ಮಂತ್ರಿಯ ನಡೆಗಳು , ' ಹಾವು ಸಾಯುವದಿಲ್ಲ, ಕೋಲು ಮುರಿಯುವದಿಲ್ಲ " ಎಂದತಾದೀತೇ ವಿನಃ ಸಮಸ್ಯೆಗೆ ಪರಿಹಾರ ಒದಗಿಸುವದಿಲ್ಲ.




ಹರಿಹರ  ಭಟ್ , ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 16, 2013.


No comments:

Post a Comment