Sunday, March 24, 2013


ನಮ್ಮ ಕನ್ನಡ ಸಾಹಿತಿಗಳು ಮಾಡುತ್ತಿರುವದೇನು?


ಸಭೆ, ಸಮಾರಂಭ, ಚರ್ಚೆ, ಭಾಷಣಗಳಲ್ಲಷ್ಟೇ ಕನ್ನಡ ಕನ್ನಡ ಎಂದು ಕನ್ನಡದ ಅಭಿಮಾನ ತೋರ್ಪಡಿಸುವರು. ಹೆಚ್ಚಿನ ಕನ್ನಡ ಸಾಹಿತಿಗಳ ಕನ್ನಡ ಪ್ರೇಮ ಹೇಗಿದೆ ಎಂದರೆ, ಸುಲಭವಾಗಿ ಅರ್ಧ ಘಂಟೆ ಚೊಕ್ಕ ಕನ್ನಡದಲ್ಲಿ ಮಾತನಾಡಲಾರದೆ , ಮಧ್ಯೆ ಮಧ್ಯೆ ಇಂಗ್ಲಿಶ್ ಮೊರೆಹೋಗಿ , ಕನ್ನಡ ಕನ್ನಡ ಎಂದು ಅರಚುವರು. ಅರಚುವರು ಎಂದು ಹೇಳಿದ್ದೇಕೆಂದರೆ, ಭಾಷಾಭಿಮಾನಿಯೊಬ್ಬ  ಸಂವಹನೆಗೆ ತೊಡಗಪ್ರಯತ್ನಿಸಿದರೆ ತಮ್ಮ ದೊಡ್ಡತನ ಪ್ರದರ್ಶಿಸಿ , ಇನ್ನೊಮ್ಮೆ ಮಾತನಾಡೋಣ ಎಂದೋ, ಇಂಗ್ಲಿಶ್ ಮಾತುಗಳನ್ನು ಬಳಸಿ ತಾನೊಬ್ಬ ಧೀಮಂತ ಎಂದೋ ಪ್ರದರ್ಶನ ಮಾಡುವರು.



ಯಾವುದೋ ಪ್ರಶಸ್ತಿಯನ್ನು ಲಕ್ಷದಲ್ಲಿಟ್ಟು ಸಾಹಿತ್ಯ ಬರೆಯುವ ಸಾಹಿತಿಗಳೇ ತುಂಬಿಹೋಗಿದ್ದಾರೆ. ಪ್ರಶಸ್ತಿಗಾಗಿ ಯಾವುದೋ ರಾಜಕಾರಣಿ, ಅಧಿಕಾರಿಯ ಬಾಗಿಲು ತಟ್ಟುತ್ತ ಇನ್ನೊಬ್ಬ ಸಾಹಿತಿಯ ಕಾಲೆಳೆಯುವದರಲ್ಲೇನೂ ನಾಚಿಕೆಪಟ್ಟುಕೊಳ್ಳುವದಿಲ್ಲ . ಈ ರೀತಿ ಎಲ್ಲೆಡೆ corruption ತುಂಬಿದೆಯಲ್ಲಾ ಎಂದರೆ, ದೇಶಾವರೀ ನಗೆ ಬೀರಿ , " we are all corrupt " ಎಂದು ಮುಖ ಗಂಟಿಕ್ಕಿ ಮೌನಕ್ಕೆ ಶರಣಾಗುವರು. ಒಬ್ಬ ರಾಜಕಾರಣಿ ಹೆಸರು ಹೇಳಿ , ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸಾರ್ವಜನಿಕವಾಗಿ ಕರೆ ನೀಡುವರು. ವಿಚಿತ್ರವೆಂದರೆ ಅದೇ ರಾಜಕಾರಣಿ , ಭಾಷಣದಲ್ಲಿ " ನಾನೇನೂ ಸುಭಗನಲ್ಲ " ಎಂದು ಅಲ್ವತ್ತುಕೊಳ್ಳುವನು. ಈ ರೀತಿ ಸಾಗಿದೆ ನಮ್ಮ ಕನ್ನಡ ಸಾಹಿತಿಗಳ ಸಾಹಿತ್ಯ ತೇರು.



ಮಾತು ಮಾತಿಗೆ ಸರಕಾರ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಉಳಿದ ದಕ್ಷಿಣ ಭಾಶೆಗಳಿಗಿಂತ ನಾವು ತಂತ್ರಜ್ಞಾನ ಅಳವಡಿಕೆಯಲ್ಲಿ ತುಂಬಾ ಹಿಂದಿದ್ದೇವೆ. ಕಂಡ ಕಂಡ ಕಡೆ ಸಿಕ್ಕಿದ ಅವಕಾಶಗಳನ್ನೆಲ್ಲಾ ಉಪಯೋಗಿಸಿ ಸರಕಾರದತ್ತ ಬೆರಳು ತೋರಿಸಿ, ಸುಖ ನಿದ್ರೆ ಮಾಡುತ್ತಾರೆ.  ಒಂದು ನೂರು ಸಾಹಿತಿಗಳು ಕಚ್ಚೆ ಪಂಚೆ ಬಿಗಿದು, ಪ್ಯಾಂಟ್ ಶರ್ಟ್ ಏರಿಸಿ ವಿಧಾನಸೌಧಕ್ಕೆ ಹತ್ತಾರು ಬಾರಿ ನಡೆದರೆ ಸರಕಾರ ಈ ಕೆಲಸ ಮಾಡಲಿಕ್ಕಿಲ್ಲವೇ? ಬೆಕ್ಕಿಗೆ ಯಾರು ಘಂಟೆ ಕಟ್ಟಬೇಕು?  ಭಯ -  ಮುಂದಿನ ಪ್ರಶಸ್ತಿಗೆ ಅದೇ ರಾಜಕೀಯ ಪುಢಾರಿ, ವಿಧಾನ ಸೌಧದ ಮಂತ್ರಿ, ಸರಕಾರೀ ಅಧಿಕಾರಿಗಳ ಬಾಲ ಹಿಡಿಯಬೇಕಲ್ಲವೆ? ಹಾಗಾಗಿ ಸಿಕ್ಕಿದ ಸಭೆಗಳಲ್ಲೆಲ್ಲ, ವಾಹಿನಿಯವರು ತಮ್ಮ ಮುಖಕ್ಕೆ ಮೈಕ್ ಹಿಡಿದಾಗಲೆಲ್ಲಾ ಕನ್ನಡ ..... ಕನ್ನಡ ಎಂದು ಅರ್ಭಟಿಸುವದು, ಮತ್ತೆ ಮೊಮ್ಮಕ್ಕಳನ್ನು ಲಕ್ಷ , ಲಕ್ಷ ರೂಪಾಯಿ ಸುರಿದು ಬೆಂಗಳೂರಿನಲ್ಲಿಯೇ   ಅತಿ ವಿಖ್ಯಾತ ಇಂಗ್ಲಿಶ್ ಮಾಧ್ಯಮ ಶಾಲೆಗೇ ಸೇರಿಸುವದು  ನಡೆದೇ ಇದೆ .  ಈ ರೀತಿ ಸಮಷ್ಟಿಗೆ ಕನ್ನಡ ಭೋಧಿಸುವ ಭಾಷಣದ ಸಾಹಿತಿಗಳ ಗುಂಪು  , ವೈಯಕ್ತಿಕ ಜೀವನದಲ್ಲಿ ಕನ್ನಡ ಅಳವಡಿಸಿಕೊಳ್ಳದ ವರೆಗೆ ಕನ್ನಡಕ್ಕಿದೇ  ಗತಿ?  



ನಮ್ಮ ಸಾಹಿತಿಗಳು ಕನ್ನಡದಾಚೆಯವನೊಬ್ಬ ಅತಿಥಿಯೆಂದರೆ, ಆತನ ಅನುಕೂಲಕ್ಕಾಗಿ ಸಭೆಯಲ್ಲಿರುವ ನೂರಾರು ಕನ್ನಡಿಗರನ್ನು ಅವಗಣಿಸಿ ಇಂಗ್ಲಿಷ್ನಲ್ಲಿ ಭಾಷಣ  ಮಾಡುತ್ತಾರೆ. ಅದೇ ಅತಿಥಿ ತನಗೆ ಇಂಗ್ಲಿಶ್  ಬರುವದಿಲ್ಲ ಎಂದು ತನ್ನ ಮಾತೃ ಭಾಷೆಯಲ್ಲಿ ಮಾತನಾಡುತ್ತಾರೆ. ನಾಚಿಕೆ , ನಜ್ಜು ಇಲ್ಲದ ನಮ್ಮ ಸಾಹಿತಿಗಳು , ನಾಳೆ ಅವನೇ ಪ್ರಶಸ್ತಿ   ಪುರಸ್ಕಾರಗಳನ್ನು   ನಿರ್ಧರಿಸುವ ಮಂಡಳಿಯಲ್ಲಿದ್ದಾನು ಎಂಬ ದುರಾಲೋಚನೆಯಿಂದ ಅಥವಾ ದೂರಾಲೊಚನೆಯಿಂದ  ತಮ್ಮ ಮಾತೃ ಭಾಷೆಗೆ ಅವಮಾನ ಮಾಡುತ್ತಾರೆ. ಮತ್ತೆ  ಅದೇ ಮನೋಭಾವದ ಸಾಹಿತಿಗಳೇ  ಸಮಾಜದಲ್ಲಿ ವಿಜ್ರಂಭಿಸುತ್ತಾರೆ.  ಹೀಗೆ ನಡೆದಿದೆ ಕನ್ನಡ ಸಾಹಿತ್ಯ ಸಂತೆ.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 24 , 2013.

No comments:

Post a Comment