Saturday, March 2, 2013

ಹವ್ಯಕ ಪತ್ರಿಕೆ ಸಂಪಾದಕೀಯ


ಇಂದು ಹವ್ಯಕ ಪತ್ರಿಕೆ ಕೈ ಸೇರಿದೆ. ಸಂಪಾದಕೀಯ ಓದಿದೆ.



ನಮ್ಮ ಹುಳುಕು ಕೊಳಕುಗಳನ್ನು ಸಾರ್ವಜನಿಕವಾಗಿ ತೋರಿಕೊಳ್ಳಬಾರದು, ಆಕಾಶದತ್ತ ಮುಖ ಮಾಡಿ ಉಗುಳಿದರೆ ನಮ್ಮ ಮೇಲೆ ಬೀಳುವದು ಆ ಉಗುಳು ಎಂಬ ಮಾತುಗಳನ್ನು ಉಳಿದವರಿಗೆ ಉದಾಹರಿಸುವ ನಮ್ಮ ಶ್ರೀಕಾಂತ್ ಹೆಗಡೆಯವರು ಬರೆದ ಸಂಪಾದಕೀಯ ಓದಿ , ಅಯ್ಯೋ ಪಾಪ ನಮ್ಮ ಸಮಾಜ , ಸಮಾಜ ಸಂಘಟನೆ ಈ ಸ್ಥಿತಿ ಕಾಣುವಂತಾಗಿದೆಯಲ್ಲಾ ಎಂದು ಖೇದವಾಯಿತು. ಈ ಎಲ್ಲಾ ಮಾತುಗಳು ಸಂಪಾದಕರೊಬ್ಬರ ಅಭಿಪ್ರಾಯವಾದರೆ ಸಂಪಾದಕರು ಅಥವಾ ಸಂಪಾದಕೀಯ ಮಂಡಲಿಯ ಮಾತುಗಳಾದರೆ ಸಂಪಾದಕ ಮಂಡಲಿ ಒಟ್ಟಾರೆ ಯೋಚಿಸಬಹುದು ಜೊತೆಗೆ ಪ್ರತಿಕ್ರಿಯೆಗಳಿಗೂ ಸ್ವಾಗತ.



ನೀವೆಲ್ಲ ಈ ಸಂಪಾದಕೀಯ ಓದಿರಬಹುದು. ಓದಿಲ್ಲದಿದ್ದರೆ ಒಮ್ಮೆ ಓದಿ. ಬೆಳವಣಿಗೆ ಎಂಬುದು ನಿಂತ ನೀರಿನಂತಲ್ಲ. ಎಲ್ಲಿ ಒಳ್ಳೆಯ ಗುಣಗಳು, ಬದಲಾವಣೆಗಳಿಗೆ ಒಗ್ಗಿಕೊಳ್ಳುವ ಮನಸ್ಸುಗಳುಳ್ಳ  ಮುಂದಾಳತ್ವವಿರುವದೋ ಅಲ್ಲಿ, ಆ ಸಂಸ್ಥೆಗಳು ಬೆಳವಣಿಗೆಯ ಓಘ ಕಾಣುತ್ತವೆ. ಇಲ್ಲದಿದ್ದರೆ ಕಾಲ ಕ್ರಮೇಣ ಈ ರೀತಿ ಅಲವತ್ತುಕೊಳ್ಳುವ ಸ್ಥಿತಿ ತಲುಪುತ್ತವೆ .  ಆ ರೀತಿಯ ದನನೀಯ ಸ್ಥಿತಿಯಲ್ಲಿಯೂ ತನ್ನನ್ನು/ ತಮ್ಮನ್ನು ಹೊರತುಪಡಿಸಿ ಉಳಿದವರೆಡೆಗೆ ಆರೋಪದ ಬೆರಳು ತೋರುವದಿದೆಯಲ್ಲಾ ಅದು , ಇಂಗ್ಲಿಶ್ನಲ್ಲಿರುವ  ಗಾದೆ ಮಾತಿನಂತೆ " ಕೊನೆಯ ಮೊಳೆ ಹೊಡೆಯುವ ಕಾರ್ಯ ".  ಹೇಗೆ ಯೋಚಿಸೋಣ.



ನಾವು ನಮ್ಮ ಭವಿಷ್ಯವನ್ನು ಇಂದು ಕಾಣ ಹೊರಟಿರುವದು ಯಾವ ಜನಾಂಗ ( generation  ) ಅಂದರೆ ಇಂದು ಮೂವತ್ತರಿಂದ ಐವತ್ತು ವರ್ಷಗಳಲ್ಲಿರುವವರು, ಸಾಮಾನ್ಯವಾಗಿ ಮನೆಯಿಂದ ಹೊರದೂಡಲ್ಪಟ್ಟವರೋ , ಇಲ್ಲ ಹೊರ ಪ್ರಪಂಚದಲ್ಲಿ ಅವಕಾಶಗಳಿದ್ದು ಹೋಗಿ ನಿನ್ನ ಜೀವನ ಕಂಡುಕೋ , ಎಂದು ಹೊರದಬ್ಬಲ್ಪಟ್ಟವರೋ,  ಮನೆ ಮಾಣಿ ಪ್ರಯೊಜನಕ್ಕಿಲ್ಲೇ , ನಿದ್ದಂಡಿ ಎಂಬ ಮೂದಲಿಕೆಗಳಿಗೊಳಗಾಗಿ ಮನೆಯಿಂದ ಓಡಿ ಹೋಗಿ ಜೀವನ ಕಂಡುಕೊಂಡವರೋ, ಊರಿಗೆ - ಕೇರಿಗೆ ಮಠದ ಸ್ವಾಮಿ - ಗುರುಗಳು ಬಂದಾಗ, ಸಹಜ ಬಾಲ್ಯ- ಯೌವನ ಕುತೂಹಲಗಳಿಂದ ಹಾಗೇಕೆ- ಹೀಗೇಕೆ ಎಂದು ಪ್ರಶ್ನಿಸಿ ಮೂದಲಿಕೆ, ಬಹಿಷ್ಕಾರಗಳಿಗೆ   ಒಳಗಾಗಿ ಊರು ಬಿಟ್ಟವರೋ , ಮಟ ಮಟ ಮಧ್ಯಾಹ್ನ - ನಡುರಾತ್ರಿ ಎಲ್ಲೋ ಅಪರೂಪಕ್ಕೆ ಕಾಣಬರುವ ತಮ್ಮ ಜಾತಿಯ ಹಿಂದಿನ ತಲೆಮಾರುಗಳ ಜನ ಊರು ಬಿಟ್ಟವರು ಪಟ್ಟಣ ಸೇರಿ ನೆಲೆಸಿದ್ದಾರೆ, ಟೀಕ್ - ಟಾಕ್ ಆಗಿ  ಊರಿಗೆ ಬಂದಾಗ ತಮಾ ನೀ ಮುಂಬೈ - ಬೆಂಗಳೂರಿಗೆ ಬಾರೋ ಬೇಕಾದಷ್ಟು ಕೆಲಸಾ ಸಿಗ್ತೋ, ಕೆಲ್ಸಾ ಕೊಡ್ಸಾನೋ .....  ಎಂಬ ತರಹೇವಾರಿ ನಗುಗಳಿಗೆ ಜೋತುಬಿದ್ದು , ಯಾರ್ಯಾರನ್ನೋ ಕೇಳಿ, ಅಲೆದು ಅಲೆದು ಮನೆ ಕಂಡು ಹಿಡಿದು ಹೋದಾಗ , ಈಗೆಲ್ಲೋ ಒಮ್ಮೆಲೇ ಕೆಲಸಾ ಸಿಗ್ತೋ, ಮುಂದಿನ   ವಾರ ಬಾ  ಎಂದು ಬಾಗಿಲು ಮುಚ್ಚಿದಾಗ, ಪಟ್ಟಣದಲ್ಲಿ ನೆಲೆಯಿಲ್ಲದ, ಜೋಬಿನಲ್ಲಿ ಕಾಸಿಲ್ಲದ , ಮನೆಗೆ ವಾಪಸ್ಸಾಗಲು ಸಾಧ್ಯವಾಗದ ಆ ತೆಜೋಹೀನ  , ಉಸಿರಷ್ಟೇ ಹಿಡಿದಿರುವ , ಜೀವನದಲ್ಲೆಲ್ಲೂ ಆಸೆಯ ಪಸೆಯೇ ಕಾಣದ ಹವ್ಯಕ ಕುಡಿಗಳೇ, ತಮ್ಮ ಸ್ವಸಾಮರ್ಥ್ಯದಿಂದ , ಯಾರನ್ನೋ ಬೇಡಿ - ಕಾಡಿ , ಹೇಗೊ ಜೀವನದ ಒಂದೊಂದೇ ಮೆಟ್ಟಿಲುಗಳನ್ನೆರುತ್ತ ಸಾಗಿ ಬಂದು ಇಂದು ಸಮಾಜದಲ್ಲಿ ಗೌರವಾನ್ವಿತ ವಿವಿಧ ಸ್ಥಾನಗಳಲ್ಲಿ ವಿಝೃಂಭಿಸುತ್ತ , ಹೇರಳವಾಗಿ ಆರ್ಥಿಕ ಸಾಮರ್ಥ್ಯವನ್ನು ಪಡೆದು ತಮ್ಮ ಪಾಡಿಗೆ ತಾವೇ ಬದುಕುತ್ತಿರುವ ಹವ್ಯಕ ಜನ ಸಂಖ್ಯಾ ಸಮೂಹವನ್ನು ಉದ್ದೇಶಿಸಿ ಬರೆದ ಮಾತುಗಳಲ್ಲವೇ? , ಈ ಸಂಪಾದಕೀಯದಲ್ಲಿದ್ದುದು .




ಈ ಅಭಿಪ್ರಾಯಗಳೆಲ್ಲ ಪುಂಡು ಪೋಕರಿಗಳ ಮಾತು, ಕೆಲಸವಿಲ್ಲದವರ ತೆವಲುಗಳು, ನಾವೇ ಸಮಾಜದ ಉದ್ಧಾರಕರು, ನಮ್ಮ ಹಿಂದೆ ಹೆಜ್ಜೆ ಹಾಕಿ ಎಂಬ ಅಣಿಮುತ್ತುಗಳನ್ನುದುರಿಸುವವರು   ಆತ್ಮ ಸ್ಥೈರ್ಯ, ಧೈರ್ಯಗಳಿದ್ದರೆ ಸಾರ್ವಜನಿಕವಾಗಿ ಸಾರಾ ಸಗಟಾಗಿ  ಘೋಷಿಸಲಿ - ಸಮಾಜದ ಎಷ್ಟು ಸದಸ್ಯರಿಗೆ ಸಂಘಟನೆಯಿಂದ ನೈಜ ಅನುಕೂಲ ಒದಗಿಬಂದಿದೆ? ಎಷ್ಟು ಹವ್ಯಕ ಕುಡಿಗಳಿಗೆ ನೂರಿನ್ನು, ಸಾವಿರ ರೂಪಾಯಿಗಳ ದೈನೇಸಿ ಭಿಕ್ಷಾ ರೂಪದ ಕಾಂಚಾಣ ಒದಗಿಸುವ ಬದಲು , ಇಂದಿನ ಕಾಲಕ್ಕನುಗುಣವಾಗಿ ಐದು ಗುಂಟೆ - ಹತ್ತು ಗುಂಟೆ ತೋಟವಿರುವ , ದಿನ ಗೂಲಿ ಮಾಡಿ ಜೀವನ ಸಾಗಿಸುತ್ತಿರುವ ತಂದೆ ತಾಯಿತರ ಹೊಟ್ಟೆಯಲ್ಲಿ ಹುಟ್ಟಿ ಇಂಜಿನಿಯರಿಂಗ್ , ಮೆಡಿಕಲ್ ಸೀಟ್ ಗಿಟ್ಟಿಸಿದ ಯಾವ ಹವ್ಯಕ ಕುಡಿಗೆ ಸಂಪೂರ್ಣ  ಸಹಾಯ ಮಾಡಿದ ಇತಿಹಾಸವಿದೆ? ಇಂದಿನ ದಿನದಲ್ಲಿ ಎಲ್ಲರಿಂದ ಜಾಣ ಎನಿಸಿ, ಶಾಲೆಯ ಮಕ್ಕಳೆಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ  ಪಡೆದು, ಶಿಕ್ಷಣ ಮುಂದುವರೆಸಲಾಗದ ಹವ್ಯಕ ಮಕ್ಕಳೆಷ್ಟು ಮಂದಿಗೆ ಅವಶ್ಯಕ ಪೂರ್ಣ ಧನ ಸಹಾಯ ಮಾಡಿದ ಇತಿಹಾಸವಿದೆ? ಯಾರ್ಯಾರದೋ ಕಾಲುಹಿಡಿದು ಕೈ ಮುಗಿದು ಹೇಗೇಗೋ ಹಣ ಹೊಂದಿಸಿ ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ಓದಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಅಲೆಯುವ ಹವ್ಯಕ ಎಷ್ಟು ಮಾಣಿಗಳಿಗೆ, ಕೂಸುಗಳಿಗೆ ಈ ಸಂಘಟನೆಗಳು, ಮುಂದಾಳುಗಳು ಆರಂಭದ ಅವಶ್ಯಕ ನೆಲೆ ನೀಡಿದ್ದಾರೆ? ಹವ್ಯಕ ಜ್ವಲಂತ ಸಮಸ್ಯೆಗಳು ಎಂದು ನಗರ , ನಗರ ಗಳಿಗೆ ಪ್ರಯಾಣಿಸಿ ಸಂಘಟನೆಯ ಹಣ ವನ್ನು ಪೋಲು ಮಾಡಿ ತಮ್ಮ ಮುಖ ಸ್ತುತಿ  , ತಮ್ಮ ತೆವಲುಗಳನ್ನು ಪೂರೈಸುವದನ್ನು ಬಿಟ್ಟು ಇನ್ಯಾವ ಸಾಧನೆ, result , ಸಮಾಜದ ಯಾವ ಸಮಸ್ಯೆ ಪರಿಹಾರವಾದ ಇತಿಹಾಸವಿದೆ? ................ ಈ ಎಲ್ಲ ಸಾಧನೆಗಳನ್ನು (result) ಪತ್ರಿಕೆ ಹೊರತರಲಿ, ಕೇವಲ ಹತ್ತಾರು ಜನರ ಸುತ್ತ ಗಿರಗಟ್ಟಲೆ  ಹೊಡೆಯುತ್ತಿರುವದನ್ನು   ಬಿಟ್ಟು , ಪತ್ರಿಕೆ ಸಮಾಜದ ಸಾರ್ವತ್ರಿಕ , ಸರ್ವಸದಸ್ಯರ ಪ್ರತಿನಿಧಿಯಾಗಲಿ. ಮುಖ ಪತ್ರಿಕೆ ಯೊಂದು  ಮುಖ ಸ್ತುತಿ ಪತ್ರಿಕೆಯಾಗಿ ಮಾರ್ಪಡುತ್ತಿರುವದು ಶೋಚನೀಯ, ಖಂಡನೀಯ.




ಹವ್ಯಕ ಸಮಾಜ ಸೊರಗಿಲ್ಲ. ಬಲಿತಿದೆ. ಬಲಿಯುತ್ತಿದೆ. ಸಂಪಾದಕರು ಅಲವತ್ತುಕೊಂಡಂತೆ ಸಮಾಜ ಭಾಂಧವರು ಈಗಿರುವ ಸಂಘಟನೆಗಳು, ಮುಂದಾಳುಗಳು, ನೇತ್ರತ್ವವಹಿಸಿರುವ ಸನಾತನಿಗಳು ಎಲ್ಲರಿಂದ ದೂರ ಓಡುತ್ತಿದ್ದಾರೆ,  ಸಮೀಪ ಬರಲು ಬಯಸುತ್ತಿಲ್ಲ, ಸಮೀಪ ಬಂದವರು ಇನ್ನೊಮ್ಮೆ ಅತ್ತ ತಲೆ ಹಾಕಿಯೂ ಮಲಗುತ್ತಿಲ್ಲ  , ತಮ್ಮ ಪಾಡಿಗೆ ತಾವು ಸಮಷ್ಟಿಯಲ್ಲಿ ಸಮಾಧಾನಕರ ಜೀವನ ಕಂಡುಕೊಂಡು ತಮ್ಮ ಇತಿ ಮಿತಿಯೊಳಗೆ ತಮ್ಮ ಮುಂದಿನ ಜನಾಂಗವನ್ನು ಬೆಳೆಸುತ್ತಿದ್ದಾರೆ. ಇಂದಿನ ಸಮಾಜ ಮುಖಂಡರುಗಳು ಈ ಬೆಳವಣಿಗೆಗಳನ್ನು ಮೂದಲಿಸುತ್ತ , ತಮ್ಮಂತೆ ತೋರಿಬರುವ ನೂರಾರು ಜನರೊಂದಿಗೆ ತಮ್ಮದೇ ಲೋಕ ಸೃಷ್ಟಿಸಿಕೊಂಡು , ತಮ್ಮ ಹಿಂದಿನ ಪರಂಪರೆಯ ಯಜಮಾನರುಗಳೇ ತಾವೆಂದು ಬೀಗುತ್ತ, ಮುಖ ಪತ್ರಿಕೆಯೆಂಬ ಹಣೆಪಟ್ಟಿಯೊಂದಿಗೆ ಮುಖಸ್ತುತಿ ಪತ್ರಿಕೆಯನ್ನು ಹೊರತರುತ್ತ ,  ಸಮಷ್ಟಿಗೆ, ತಾವೇ ನಾಲ್ಕೈದು ಲಕ್ಷ ಜನಸಂಖ್ಯೆಯಿರುವ ಹವ್ಯಕ ಸಮಾಜಕ್ಕೆ ಮುಖಂಡರುಗಳು ಎಂದು ಕೃತಕ ಬಿಂಬ ಜಾಲ ತೋರ್ಪಡಿಸುತ್ತ, ಸರಕಾರದ, ಉಳಿದ ಸಮಷ್ಟಿಯ ಸಾಂಘಿಕ ಚಟುಬಟಿಕೆಗಳಲ್ಲಿ ತಾವೇ ಸಮಾಜದ ಪ್ರತಿನಿಧಿಗಳು ಎಂದು ಬೀಗುತ್ತ, ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಕಡೆ ಗಮನವಿಟ್ಟು , ಏನೆಲ್ಲಾ ಸಾಧ್ಯವಾದೀತೋ ಈ ಬಿಂಬ ಜಾಲದಿಂದ ಅವುಗಳನ್ನು ವೈಯಕ್ತಿಕ ಹಿತ ಚಿಂತನೆಗೆ ಬಳಸಿಕೊಳ್ಳುತ್ತ ಸಾಗಿರುವ , ಕೆಲವು ದಶಕಗಳಲ್ಲೇ ಇತಿಹಾಸವಾಗಲಿರುವ ಇಂದಿನ ನೇತಾರರು, ಅಲವತ್ತುಕೊಳ್ಳುವ ಸ್ತಿತಿ ತಲುಪಿರುವದು , " ನಾ ಮಾಡಿದ ಕರ್ಮ  ಬೆನ್ನ ಬಿಡದಿಹುದೇ" ಎಂಬ ದಾಸವಾಣಿಯನ್ನು   ನೆನಪಿಗೆ ತರುವದು.




ಹಾಗಾದರೆ ಮುಂದಾಳು   ಎನಿಸಿಕೊಳ್ಳುವವನು ಏನು ಮಾಡಬೇಕು? ಅವುಗಳೆಲ್ಲವನ್ನು ನಮ್ಮ ಹವ್ಯಕ ಸಮಾಜದ ನಿಜ ನೇತಾರರು ನಮಗೆ ಜ್ಞಾನರೂಪದಲ್ಲಿ   ಬಿಟ್ಟು ಹೋಗಿದ್ದಾರೆ. ಮನುಷ್ಯ ಹಿರಿತನದತ್ತ ಸಾಗಿದಂತೆಲ್ಲ ಮಾವು ಫಲ ಭರಿತವಾಗಿ ಬಾಗಿ ತೊನೆಯುವಂತೆ ವ್ಯಕ್ತಿತ್ವ, ವ್ಯಕ್ತಿತ್ವ ಪ್ರಕಾಶನ ಇರಬೇಕು. ಇಂದು ಅರವತ್ತು - ಎಂಭತ್ತು  ವಯೋಮಾನದಲ್ಲಿರುವವರನ್ನೊಮ್ಮೆ   ಮಾತನಾಡಿಸಿದರೆ ಅರಿವಿಗೆ ಬರುವದು. ಕೇವಲ ಕೆಲಸದ ಆಸೆಯಿಂದ ತನ್ನ ಮತ್ತು ತನ್ನ ಅವಲಂಬಿತರ  ಉದರ   ಪೋಷಣೆಗಾಗಿ ಬರುವ ಕೊನೆ ಕೊಯ್ಲು ಮಾಡುವವನನ್ನು , ಮನೆ ಮಂದಿಗೆ ತೋರುವ ಆದರ , ಸತ್ಕಾರ ತೋರಿ ಆ ಮನುಷ್ಯ  ತನ್ನ ಮನೆಯ ಕೆಲಸದಂತೆ ವಡೆಯನ ಮನೆಯ ಕೆಲಸ ಮಾಡಿ, ಮನೆ ಮಂದಿಗಳನ್ನೆಲ್ಲಾ ವಿಶ್ವಾಸದಿಂದ, ಗೌರವದಿಂದ ಕಂಡು ಪರಿಶ್ರಮ ಮಾಡುತ್ತ, ಮತ್ತೂ ಬರಲಿ - ಇನ್ನೂ ಬರಲಿ, ಮತ್ತೆ ಈ ಸ್ಥಳಕ್ಕೆ   ಬರಬೇಕು, ಇನ್ನೂ ಈ ಸ್ಥಳಕ್ಕೆ  ಬರಬೇಕು ಎಂಬಂತಹ  ಭಾವನಾತ್ಮಕ ಪ್ರಪಂಚವನ್ನೇ ಬೆಸೆದು ಹವ್ಯಕ  ಕುಟುಂಬಗಳಿಗೆ  ಮುಂದಾಳತ್ವ  ನೀಡಿ , ಎರಡು ಮೂರು ತಲೆಮಾರುಗಳಿಗೆ ತಮ್ಮ ಸಿಹಿ ನೆನಪುಗಳನ್ನು ನೀಡಿದ ಹವ್ಯಕ ಮುಖಂಡರುಗಳೆಲ್ಲಿ ? ಇಂದು ದಿನ ನಿತ್ಯದ ಸಮಷ್ಟಿಯ ರಾಜಕೀಯವನ್ನು ಮೀರಿಸಿ, ಒಬ್ಬರ ಕಾಲು ಮತ್ತೊಬ್ಬರೆಳೆಯುವ ಹವ್ಯಕ ಮುಖಂಡರುಗಳೆಲ್ಲಿ?




ಈ ಮಾತುಗಳೆಲ್ಲ ನಿಮಗೆ ಅಸಹನೀಯವೆನಿಸಿದರೆ, ನಿಮಗೆ ವೈಯಕ್ತಿಕವಾಗಿ ಪರಿಚಯವಿರುವ ಇಂದಿನ ಸ್ವಘೋಷಿತ ಮುಖಂಡರುಗಳನ್ನೊಮ್ಮೆ ಕೇಳಿ ನೋಡಿ : ಇಂದು ಹವ್ಯಕರು ಒಟ್ಟಾರೆ ಸಮಾಜದ ಎಲ್ಲ ಸ್ಥರಗಳಲ್ಲಿ ಅವರವರ ವೈಯಕ್ತಿಕ ಸಾಧನೆಗಳಿಂದ, (ಈ ಮುಖಂಡರುಗಳ ಕೃಪೆಯಿಂದಲ್ಲ ನೆನಪಿರಲಿ ) ಮಿಂಚುತ್ತಿದ್ದಾರೆ, ಮೆರೆಯುತ್ತಿದ್ದಾರೆ. ಈ ಸ್ವಘೋಷಿತ ಮುಖಂಡರುಗಳು ಸಮಾಜದ ಪ್ರತಿನಿಧಿಯಾಗಿ ಎಷ್ಟು ಜನ ಈ ರೀತಿಯ ಸಾಧನೆ ಮಾಡಿದ ಹವ್ಯಕರ ವೈಯಕ್ತಿಕ ಭೇಟಿಗೆ ಪ್ರಯತ್ನಿಸಿದ್ದಾರೆ, ಯಾವ ಯಾವ ಹವ್ಯಕ ಸಾಧಕರನ್ನು, (ಈ ರೀತಿಯ ಸಾಧಕರೇ   ಹೊರತು ಸ್ವಘೊಷಿತ ಮುಖಂಡರುಗಳ ಸುತ್ತ ಭೂ ಚಕ್ರದಂತೆ ಸುತ್ತುವವರನ್ನಲ್ಲ), ಹವ್ಯಕ ಮುಖಪತ್ರಿಕೆಯಲ್ಲಿ ಪ್ರಚುರ ಪಡಿಸಿದ್ದಾರೆ  ? ಕೇಳಿ ನೋಡಿ.




ಈ ಬರಹ ವನ್ನು ಹವ್ಯಕ ಮುಖಪತ್ರಿಕೆಯಲ್ಲಿ ಪ್ರಕಟಿಸಲಿ. ಹವ್ಯಕ ಸಮಷ್ಟಿಯ ವಿವಿಧ ಸ್ಥರಗಳಲ್ಲಿರುವವರೆಲ್ಲಾ ಈ ಅಭಿಪ್ರಾಯ ಖಂಡನೀಯ, ಸುಳ್ಳು ಎಂದು ಎಲ್ಲ ಸಮಾಜ ಬಾಂಧವರು ಸಮಾಜದ ಸಂಘಟನೆಗಳಲ್ಲಿ ತನು-ಮನ-ಧನ ತೊಡಗಿಸಿಕೊಂಡು  ಸಮಾಜ  ಸಂಘಟಾನ್ಮತ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಲಿ ಅಥವಾ  ವಿವಿಧ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾವಿರುವಲ್ಲಿ ಎಲ್ಲರು ಬರಲಿ ತನ್ನ ಹಿಂದೆ ಸರತಿ ನಿಲ್ಲಲಿ ಎಂಬ ಮನೋಭಾವನೆಯ ಹಂದರದಿಂದ ಸ್ವಘೋಷಿತ ಮುಖಂಡರುಗಳು ಹೊರಬಂದು , ಮೊದಲು ನೀವು ಆಮೇಲೆ ನಾವು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಸಕಲ ಹವ್ಯಕರನ್ನೂ ಒಗ್ಗೂಡಿಸುವತ್ತ, ಸರ್ವಸಾಮಾನ್ಯರೂ  ನಮ್ಮ ಸಂಘಟನೆ ಎಂದು ಅಭಿಮಾನದಿಂದ ಎದೆಯುಬ್ಬಿಸಿ ಹೇಳಲು ಅನುವುಮಾಡುವತ್ತ ಕಾರ್ಯಪೃವ್ರತ್ತರಾಗಲಿ , ಹಾಗಾಗಲಿ  ಇಲ್ಲ  ಹೀಗಾಗಲಿ ಒಟ್ಟಾರೆ ಆರ್ಥಿಕವಾಗಿ ದುರ್ಬಲನಾಗಿರುವ ಕಟ್ಟ ಕಡೆಯ ಹವ್ಯಕನೂ ನೆಮ್ಮದಿಯಿಂದ ಬಾಳುವಂತಾಗಲಿ , ಅಸಹನೀಯವಾಗಿ  ಬದುಕನ್ನು ಸವೆಸುತ್ತಿರುವವರ ಹವ್ಯಕ ಕುಡಿಗಳ ಶ್ರೆಯೋಭಿವೃದ್ಧಿಯಾಗಲಿ   ಎಂಬುದೇ ಹಾರೈಕೆ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 03 , 2013.

No comments:

Post a Comment