ಇಂದು (30 .03 .2013 ) ಮಲ್ಲೇಶ್ವರದ ಹವ್ಯಕ ಮಹಾಸಭೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿರಾಜಮಾನನಾಗಿರುವ, ಸರ್ವ ಜನರ ಸಂಕಷ್ಟ ಪರಿಹರಿಸುವ ಶ್ರೀ ಸಿದ್ಧಿವಿನಾಯಕನ ಪ್ರತಿಷ್ಟಾಪನೆಯ ವಾರ್ಷಿಕೋತ್ಸವ. ನಿಮಗೆಲ್ಲಾ ತಿಳಿದಿರುವ ವಿಚಾರ.
ನಿಮಗೆ ನನ್ನದೊಂದು ನೇರ ಪ್ರಶ್ನೆ. ಹವ್ಯಕ ಮಹಾಸಭೆಯ ಮುಖ ಪತ್ರಿಕೆಯಲ್ಲಿ ಸಾಕಷ್ಟು ಮುಂಚಿತವಾಗಿ ಪ್ರಕಟನೆ ಕೊಟ್ಟು , ಸರ್ವರೂ ಬರಬೇಕೆಂದು ಮಹಾಸಭೆಯ ಪದಾಧಿಕಾರಿಗಳೆಲ್ಲ ನಿಮ್ಮನ್ನು ಆತ್ಮೀಯವಾಗಿ ಕರೆದಾಗ ಬೆಂಗಳೂರು ಹವ್ಯಕ ಬಾಂಧವರಿಗೆ , ಬರಲಾರದಂತಹ ಮಹತ್ಕಾರ್ಯಗಳೇನಿದ್ದೀತು ಎಂಬ ವಿಚಾರ ಹೊಳೆದು ಹೋಯಿತು. ಹವ್ಯಕ ಬಾಂಧವರ್ಯಾರೂ ಬರಲಿಲ್ಲ ಎಂದಲ್ಲ , ಬಂದಿದ್ದ ಎರಡು ನೂರು - ಮೂರು ನೂರು ಹವ್ಯಕರಿಗೇ ಸಮಾಜದ ಕಾರ್ಯಕ್ರಮಗಳು ಸೀಮಿತವಾಗಿರಬೇಕೆ? ಪ್ರತಿಯೊಬ್ಬರಿಗೂ ಅವರದೇ ಆದ ದಿನದ ಚಟುವಟಿಕೆಗಳಿರುವದು ಸಾಮಾನ್ಯ. ಕೆಲಸಕ್ಕೆ ಹೋಗುವವರು ರಜಾ ಹಾಕಬೇಕಾದೀತು, ಅಂಗಡಿ ಇಟ್ಟಿರುವವರು ಸ್ವಲ್ಪ ಮೊದಲು ಅಂಗಡಿ ಮುಚ್ಚಬೇಕಾದೀತು ಇಲ್ಲ ಇನ್ನೊಬ್ಬರಿಗೆ ಸ್ವಲ್ಪ ಜವಾಬ್ದಾರಿ ನೀಡಿ ಬರಬೇಕಾದೀತು , ವಕೀಲರಾದರೆ ಕೇಸಿಗೆ ವಾಯಿದೆ ಕೇಳಬೇಕಾದೀತು , ಹೀಗೆ ಹತ್ತು ಹಲವಾರು ಪ್ರಸಂಗಗಳಿದ್ದೀತು. ಆದರೆ ಪ್ರತಿಯೊಬ್ಬರೂ ಅನಿವಾರ್ಯವಾಗಿ ಬರಲೇಬೇಕಾದ ಕಾರ್ಯಕ್ರಮವಲ್ಲವೇ?
ವರ್ತಮಾನದಲ್ಲಿ ಕಿರೀಟವಿಲ್ಲದವರು ಬರುತ್ತಿಲ್ಲವೆಂಬುದು ಅರ್ಧ ಸತ್ಯವೇ ವಿನಃ ಪೂರ್ಣಸತ್ಯವಲ್ಲ. ಕಿರೀಟ ಹೊತ್ತವರು ಕುಣಿಯುವದನ್ನು, ಕಿರೀಟ ಕಳಚಿಟ್ಟವರು ಬರುತ್ತಿಲ್ಲಎಂಬ ಮಾತನ್ನು ನಾವು ಮನೆಯಲ್ಲಿ ಕುಳಿತು ಚಿಂತನೆಗೆ ಹಚ್ಚಿದರೆ ಸಮಾಜ ಸುಧಾರಿಸೀತೆ? ಕಿರೀಟ ಕಟ್ಟಿರುವವರನ್ನು, ಕಿರೀಟ ಕಳಚಿಟ್ಟವರನ್ನು ಪ್ರಶ್ನಿಸಿ ಕುಣಿಸಬೇಕಾದವರು ಸಾಮಾನ್ಯ ಸದಸ್ಯರಲ್ಲವೇ? ಸಾಮಾನ್ಯ ಸದಸ್ಯರಾದ ನಾವೇ ತಟಸ್ಥರಾದರೆ, ಕುಣಿಯುವವರನ್ನು ಹಾಗಲ್ಲ ಹೀಗೆ ಎಂದು ತಿದ್ದಿ ತೀಡಿ ಮುನ್ನಡೆಸಬೇಕಾದ ನಾವು- ನೀವು ಅಂದರೆ ಸಾಮಾನ್ಯ ಸದಸ್ಯರು ಹೆಚ್ಚು ಹೆಚ್ಚು ಭಾಗವಹಿಸುವಿಕೆ ತೋರಬೇಕಲ್ಲವೇ? ನಾವೇ ಸಮಾಜ, ನಮಗೇ ಸಮಾಜ. ಅಷ್ಟೇ ಅಲ್ಲ ಇಂದು ಎಲ್ಲ ಸಮಾಜದವರು ಸಂಘಟಿತರಾಗಿ ಹೋರಾಡಿ ಹಕ್ಕು ಪಡೆಯುವದು ಸಾಮಾನ್ಯವಾಗಿರುವಾಗ, ನಾವಿಂದು ಸಂಘಟಿತರಾಗಿ ಸುಸಮ್ರದ್ಧ ಸಮಾಜವೊಂದನ್ನು ನಮ್ಮ ಮುಂದಿನ ಜನಾಂಗಕ್ಕೆ ನೀಡುವ ಅವಶ್ಯಕತೆ ಇದೆಯಲ್ಲವೇ?
ಇಂದು ನಿನ್ನೆಯಂತಿಲ್ಲ, ನಾಳೆ ಇಂದಿನಂತಿರುವದಿಲ್ಲ. ಬದಲಾವಣೆ ಜಗದ ನಿಯಮ. ಬದಲಾವಣೆ ಯಾರನ್ನೂ ಹೇಳಿ ಕೇಳಿ ಬರುವದಿಲ್ಲ. ಆದರೆ ಬರುವ ಬದಲಾವಣೆಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಿ ಎಂದಲ್ಲವೇ ಮನುಷ್ಯನ ಮಸ್ತಿಷ್ಕದಲ್ಲಿ ಮಿದುಳಿರುವದು? ಹವ್ಯಕ ಪಿಂಡಗಳು ಈ ಶತಮಾನದ ಬಿರುಗಾಳಿಗಳನ್ನೆಲ್ಲ ಮೆಟ್ಟಿ ನಿಂತು ಇಂದು ಬದುಕುತ್ತಿವೆ. ಆದರೆ ಬರಲಿರುವ ಬಿರುಗಾಳಿಯ ಸೂಚನೆಯಾದ ಇಂದಿನ ಕುಳಿರ್ಗಾಳಿ ಹೇಗಿದೆಯೆಂದರೆ ರಾಜಕಾರಣಿಗಳೆಲ್ಲ ಸಮಾಜವನ್ನು ಜಾತೀಯತೆಯ ವಿಷಬೀಜದಿಂದ ಚ್ಚಿದ್ರ ಚ್ಚಿದ್ರ ಮಾಡಿ , ಕೊಚ್ಚಿ ಕಡಿ ಸಂಸ್ಕ್ರತಿಯನ್ನು ಭಾರತೀಯ ಸಮಾಜದಲ್ಲಿ ಹರಡುತ್ತಿದ್ದಾರೆ. ಇದೇ ಬೆಳವಣಿಗೆಗಳು ಮುಂದೊಂದು ದಿನ ಮನುಷ್ಯ ಮನುಷ್ಯನನ್ನು ಅಟ್ಟಾಡಿಸಿ ಕೊಲ್ಲುವ ಬದಲಾವಣೆಗಳಿಗೆ ನೂಕೀತು. ನಮ್ಮ ಸಮಾಜ ಸಂಘಟಿತವಾಗಿಲ್ಲದಿದ್ದರೆ ಆಗ ನಮ್ಮ ಮುಂದಿನ ಮರಿಗಳು ಹೇಗೆ ಬದುಕಿಯಾವು? ಮುನ್ನೆಚ್ಚರಿಕೆಯಾಗಿ ಈಗಲೇ ನಮ್ಮ ಸಮಾಜವನ್ನು ಸಂಘಟಿಸಬೇಕಲ್ಲವೇ? ಈ ಜವಾಬ್ದಾರಿ ಪ್ರತಿಯೊಬ್ಬ ಸಾಮಾನ್ಯ ಸದಸ್ಯನ ಮೇಲೂ ಇದೆಯಲ್ಲವೇ? ಅದಕ್ಕಾಗಿಯೇ ಕೇಳಿದ್ದು, ನೇರ ಪ್ರಶ್ನೆ , ಇಂದು ನೀವ್ಯಾಕೆ ಬರಲಿಲ್ಲ ?
ನೋಡಿ ಇಂದು ಏನಾಗುತ್ತಿದೆ ? ಒಂದು ಉದಾಹರಣೆಯೊಂದಿಗೆ ಹೇಳುವದಾದರೆ ಕೆಲವು ಚುರುಕು ನಡೆಯ ಮಹಿಳೆಯರು ಸೇರಿ ಒಂದು ವರುಷದಿಂದ ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಮಹಿಳೆಯರಿಗೆ ಅನುಕೂಲಕರವಾದ , ಮನಸ್ಸಿಗೆ ಮುದ ನೀಡುವಂತಹ ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮ ಸಂಘಟನೆಯಿಂದ ಹೇಳುವದಾದರೆ ಯಶಸ್ವಿಯಾಗಿದ್ದಾರೆ. ಪತ್ರಿಕೆಯಲ್ಲಿ ವರದಿ ಬಂದಿದೆ. ಆದರೆ ಕಾರ್ಯಕ್ರಮಕ್ಕೆ ಬಂದು ಕೈ ತಟ್ಟಿ ಪ್ರೋತ್ಸಾಹಿಸಿ ಪ್ರಯೋಜನ ಪಡೆಯಬೇಕಾದ ನೀವೆಷ್ಟು ಸಹಕರಿಸಿದ್ದೀರಿ? ಯೋಚಿಸಬೇಕಲ್ಲವೇ? ಯಾವುದೋ ಒಂದು ಸ್ತ್ರೀ ಪ್ರಸೂತಿ ತಜ್ಞೆ ವೈದ್ಯೆ ಬಂದು , ಪ್ರಸೂತಿಯ ಸಮಯದಲ್ಲಿ ಅರಿಯಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕುರಿತು ತಿಳಿಹೇಳಿದರೆ , ಪ್ರಯೋಜನ ಕಿರೀಟ ಕಟ್ಟಿದವರಿಗಷ್ಟೇನಾ? ಪ್ರತಿಯೊಬ್ಬ ಸಾಮಾನ್ಯ ಸದಸ್ಯರೂ ಪ್ರಯೋಜನ ಪಡೆಯಲಿ ಎಂದು ತಾನೇ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವದು? ಅಜ್ಜಿಯಿರಲಿ, ಅತ್ತೆಯಿರಲಿ , ಕುಮಾರಿಯಿರಲಿ , ಸೋಮಾರಿಯಿರಲಿ ತಿಳಿದ ಜ್ಞಾನ ಅನುಕೂಲಕ್ಕೆ ಬಂದೀತಲ್ಲವೆ? ವಿಷಾದದ ಸಂಗತಿಯೆಂದರೆ ಈ ಯಶಸ್ವಿ ಕಾರ್ಯಕ್ರಮ ಸಾಮಾನ್ಯ ಸದಸ್ಯರ ಭಾಗವಹಿಸುವಿಕೆಯ ಕೊರತೆಯಿಂದ , ಮುಂದಿನ ಒಂದೇ ಒಂದು ಕಾರ್ಯಕ್ರಮದೊಂದಿಗೆ ಮುಕ್ತಾಯ ಕಾಣುತ್ತಿದೆ. ಈ ವಿಷಯ ಗೀತಕ್ಕ ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡಾಗ ವಿಷಾದವೆನಿಸಿತು .
ಇಂದು ಮಹಾಸಭೆಯಲ್ಲಿ ಮಿತ್ರರೊಬ್ಬರು ನನಗೆ ನೇರವಾಗಿ ಜನ ಬಪ್ಪಾಗೆ / ಬಪ್ಪ ಹಾಂಗೆ ಮಾಡ್ರೋ , ಹರಿಹರ ಭಟ್ರೇ , ಹಾಗೇನಾದ್ರು ಬರಿರೋ ಎಂದರು. ನಾನೇನು ಹೇಳಿದೆ ಗೊತ್ತಾ?, ನೀವೆಲ್ಲ ಅಂದರೆ ಕಿರೀಟ ಕಟ್ಟಿಕೊಂಡವರು, ಸಾಮಾನ್ಯ ಸದಸ್ಯರ ಪರಿಚಯವಿರಲಿ, ಇಲ್ಲದಿರಲಿ ಮಹಾಸಭೆಯ ಆವರಣದಲ್ಲಿ ಅವರನ್ನೆಲ್ಲಾ ನೀವೆ ಮೊದಲ್ಗೊಂಡು ಮಾತನಾಡಿಸಲು ಆರಂಭಿಸಿ, ಒಮ್ಮೆ ಬಂದವನು ಇನ್ನೊಮ್ಮೆ ಬರುತ್ತಾನೆ, ಬರದಿರುವವನನ್ನು ಪ್ರೋತ್ಸಾಹಿಸಿ ಕರೆತರುತ್ತಾನೆ, ಹವ್ಯಕರು ನಮ್ಮ ಮನೆಗೆ ಯಾರೇ ಬಂದರೂ ಪರಿಚಯವುಳ್ಳವರು, ಪರಿಚಯವಿಲ್ಲದವರು ಎಂದು ಯೋಚಿಸದೆ ಯಾವ ರೀತಿ ಪೂರ್ಣ ಮನಸ್ಸಿನಿಂದ ಸ್ವಾಗತಿಸುತ್ತೇವೋ ಆರೀತಿ ಮಾತನಾಡಿಸಿ ನೋಡಿ , ಅದೇ ಪ್ರತಿಯೊಬ್ಬನನ್ನೂ ಚುಂಬಕದಂತೆ ಆಕರ್ಶಿಸಿ ಹವ್ಯಕ ಮಹಾಸಭೆಯ ಕಾರ್ಯಕ್ರಮಗಳಿಗೆ ತುಂಬು ಹೃದಯದ ಸಹಕಾರವನ್ನು ನೀಡುತ್ತದೆ ಎಂದೆನು. ನೀವೇನಂತೀರಿ ?
ಅಂದ ಹಾಗೆ ನಮ್ಮ ವರ್ತಮಾನದ ಅಧ್ಯಕ್ಷರು ಚಟುವಟಿಕೆ ಆರಂಭಿಸಿದಾಗಿನಿಂದ ಮುಖಪತ್ರಿಕೆಯ paper quality ಯಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವದನ್ನು ಗಮನಿಸಿರುತ್ತೀರಿ. ನೀವಿಂದು ಕಾರ್ಯಕ್ರಮಕ್ಕೆ ಬಂದಿದ್ದರೆ, ಊಟಕ್ಕೆ ಕುಳಿತ ಪ್ರತಿಯೊಬ್ಬರನ್ನೂ ಅಧ್ಯಕ್ಷರು, ಮನೆಯ ಯಜಮಾನನಂತೆ ಆಪ್ತವಾಗಿ, ನಗುಮುಖದೊಂದಿಗೆ ಮಾತನಾಡಿಸುತ್ತ ಸಾಗುತ್ತಿರುವದನ್ನ್ನು ನೋಡಿದಾಗ ಹವ್ಯಕರ ಮದುವೆ, ಮುಂಜಿ ಕಾರ್ಯಗಳ ನೆನಪು ತರಿಸುತ್ತಿತ್ತು. ಅವರ ಜೊತೆ ಜೊತೆಗೆ ಕೆಲವು ಪ್ರತಿನಿಧಿಗಳು ಆಪ್ತವಾಗಿ ಕುಡಿಯುವ ಸಾರು ಎಂದವರಿಗೆ ಓಡೋಡಿ ಕುಡಿಯುವ ಸಾರು, ಪಲ್ಯ ಎಂದೊಡನೆ ಪಲ್ಯ ಇತ್ಯಾದಿ ಸರಬರಾಜು ಮಾಡುತ್ತಿದ್ದುದನ್ನು ನೋಡಿದರೆ, ಕಿರೀಟ ಕಟ್ಟಿರುವವರೆಲ್ಲಾ ಈ ರೀತಿ ಅಧ್ಯಕ್ಷರಿಗೆ ಸಹಕಾರವಿತ್ತರೆ, ಹವ್ಯಕ ಸಮಾಜ ಸಂಘಟನೆ ಯಶಸ್ವಿಯಾಗೇಯಾಗುತ್ತದೆ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಆಯಾಸವಿಲ್ಲದೇ, ಉಳಿದ ಸಮಾಜದವರು ನಮ್ಮನ್ನು ಆದರ್ಶವಾಗಿ ಒಪ್ಪಿಕೊಳ್ಳುವದರಲ್ಲಿ ಸಂದೇಹವೇ ಬೇಡ, ಎನಿಸಿತು. ಅಂತೆಯೇ ನಮ್ಮ ಸಮಾಜದ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿರುವ ಸ್ಥಳೀಯ ಪ್ರಜಾಪ್ರತಿನಿಧಿ ಡಾ.ಅಶ್ವಥನಾರಾಯಣ ಗೌಡಾ ಅವರನ್ನು ಇಂದಿನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರೋತ್ಸಾಹಿಸಿ, ಕರೆತಂದು ಅವರ ಉಪಸ್ಥಿತಿಯನ್ನು ವ್ಯವಸ್ಥೆಗೊಳಿಸಿದ ನಮ್ಮ ಹಿಂದಿನ ವರ್ಷದ ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ರಾವ್ , ಊಟದ ಸಮಯದಲ್ಲಿ ಸಾತ್ವಿಕ ವಾತಾವರಣವನ್ನು ಕಲ್ಪಿಸಲು ಚೂರ್ಣಿಕೆ, ಗ್ರಂಥ , ಶ್ಲೋಕ ಗಳನ್ನು ಹೇಳುವಂತೆ ಎಲ್ಲರನ್ನು ಪ್ರೋತ್ಸಾಹಿಸಿದ ಶ್ರೀಕಾಂತ್ ಹೆಗಡೆ, ಅಂತ್ರವಳ್ಳಿ ಮುಂತಾದವರ ಕಾರ್ಯ ಶ್ಲಾಘನೀಯ. ಇನ್ನೂ ಸ್ಮರಣೀಯವೆಂದರೆ ನಮ್ಮ ಮಾಜಿ ಅಧ್ಯಕ್ಷರ ಭಾಗವಹಿಸುವಿಕೆ. ದೂರದ ಶಿರಸಿಯಿಂದ ಬಂದು , ಈ ಇಳಿವಯಸ್ಸಿನಲ್ಲೂ , ಯುವಕರನ್ನು ನಾಚಿಸುವಂತೆ ಆಚೀಚೆ ಓಡಾಡುತ್ತ ಎಲ್ಲರೊಡನೆ ಬೆರೆಯುತ್ತಾ ನಗು ಮುಖದ ನಮ್ಮ ಮಾಜಿ ಅಧ್ಯಕ್ಷರಾದ ಜಿ.ವಿ.ಹೆಗಡೆ ಕಾನಗೋಡ್ ಇವರ ಉದಾಹರಣೆಯೇ ಬೆಂಗಳೂರು ವಾಸಿಯಾಗಿರುವ ಪ್ರತಿಯೊಬ್ಬ ಹವ್ಯಕನನ್ನೂ ಸಮಾಜ ಚಟುವಟಿಕೆಗಳತ್ತ ತರಲೇಬೇಕು ಎಂದರೆ ಅತಿಶಯೋಕ್ತಿಯಾಗಲಾರದು.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
No comments:
Post a Comment