ಬ ಲ ಸುರೇಶ ರವರ ದಿಗ್ದರ್ಶನದಲ್ಲಿ ಸಂಪನ್ನಗೊಂಡ ಹವ್ಯಕ ಭಾಷೆಯಲ್ಲಿ ವಿರಚಿತ ನಾಟಕ " ಕಾದ್ಗೆ ಪಂಚಾತ್ಗೆ " ನೋಡಿದೆ.
ಬ ಲ ಸುರೇಶ ಬಹು ಸರಳ ಜೀವಿಗಳು , ಪರಿಚಯವಿರಲಿ ಇಲ್ಲದಿರಲಿ ಎದುರಿಗೆ ಬಂದವರನ್ನೆಲ್ಲಾ ಮುಗುಳ್ನಗೆಯಿಂದ ಆಕರ್ಷಿಸುವವರು. ಧಾರಾವಾಹಿಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ,ಬಹುಜನಪ್ರಿಯರು.
ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ ಧಾರಾವಾಹಿ ನಿರ್ದೇಶಕರೊಬ್ಬರು ಇಷ್ಟೊಂದು ಜನಪ್ರಿಯತೆ ಸಾಧಿಸುತ್ತಿದ್ದಾರೆಂದರೆ ನಮ್ಮ ಸಮಾಜದಲ್ಲಿ ಬಿಡುವಿನ ವೇಳೆಯನ್ನು ಹೊಂದಿದ , ಧಾರಾವಾಹಿಗಳನ್ನು ವೀಕ್ಷಿಸಲು ಸಮಯ ಹೊಂದಾಣಿಕೆಮಾಡಿಕೊಳ್ಳಬಲ್ಲ ಅಂದರೆ ಕೆಲಸ ಕಡಿಮೆ ಮತ್ತು ಧಾರವಾಹಿ ವೀಕ್ಷಣೆಯಲ್ಲಿ ಜಾಸ್ತಿ ತೊಡಗಿಕೊಳ್ಳುವ ಸಂಖ್ಯಾಬಲ ಇದೆ ಎಂದಾಯಿತು. ಇದು ವಿಷಾದನೀಯ ವಿಷಯ ಯಾಕೆಂದರೆ ಇಂದು ನಗರಗಳಲ್ಲಿ ಮನೆಯ ಪ್ರೌಢರೆಲ್ಲರೂ ಆದಾಯ ತರುವ ದುಡಿಮೆಯಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಸಾಕಷ್ಟು ದುಡಿದು ಸೇರಿಸಿಟ್ಟುಕೊಂಡವರಿಗೆ ಈ ಮಾತು ಅನ್ವಯ ವಾಗದಿದ್ದರೂ , ಈ ದಿನಗಳಲ್ಲಿ ಬೆಂಗಳೂರಿನಂತಹ ಶಹರಗಳಲ್ಲಿ ಸತಿಪತಿಗಳಿಬ್ಬರೂ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಈ ಅನಿವಾರ್ಯತೆಗೆ ಹೊಂದಿಕೊಳ್ಳಲಾಗದ ಕುಟುಂಬಗಳ ಸಾಮರಸ್ಯ ಜೀವನಕ್ಕೆ ತೊಡಕಾಗುವ ಈ ಕಾಲದ ಈ ಸಂದರ್ಭದಲ್ಲಿ ಬ ಲ ಸುರೇಶರಂತೆ ಧಾರಾವಾಹಿ ನಿರ್ದೇಶಕರುಗಳು , ಯಶಸ್ವಿಯಾಗುತ್ತಿರುವದು ವೈಯಕ್ತಿಕ ಶ್ರೇಯೋಭಿವೃದ್ಧಿಯಾದರೂ , ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಹಾನಿಕರ ಎಂಬ ಅಭಿಪ್ರಾಯ ಚಿಂತನೀಯ ವಿಷಯ.
ಈ ಪ್ರದರ್ಶನ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ನಿಲ್ಲಲೂ ಸ್ಥಳವಿರದಷ್ಟು ಸಂಖ್ಯೆಯಲ್ಲಿ ಸೇರಿದ ಜನಸಮೂಹ, ಎಲ್ಲರೂ ಮುಕ್ಕಾಲು ಭಾಗ ನಾಟಕವನ್ನು ನೋಡಿ ಆನಂದಿಸಿದ್ದು, ಆಗಾಗ ಸುರಿಯುತ್ತಿದ್ದ ಮಳೆ ಅಂದರೆ ಚಪ್ಪಾಳೆಗಳ ಮಳೆ , ಹೆಚ್ಚಿನ ಎಲ್ಲ ಪಾತ್ರಧಾರಿಗಳ ಪ್ರೌಢ , ಸಹಜ ಅಭಿನಯ , ಸೂಕ್ತ ರಂಗ ಸಜ್ಜಿಕೆ , ಹವ್ಯಕರ ವಸತಿ ಪ್ರದೇಶಗಳಲ್ಲಿರುವ ವಿಭಿನ್ನ ಮಾತಿನ ಶೈಲಿಗಳು, ಆಚಾರ - ವಿಚಾರಗಳು , ೧೯೭೦ ರ ದಶಕದಿಂದ ಈ ವರೆಗೆ ಹವ್ಯಕರ ನೆಲೆಗಳಲ್ಲಿ ಬಂದಿರುವ ಬದಲಾವಣೆಗಳು, ಹವ್ಯಕ ಮನೋಧರ್ಮದಲ್ಲಿ ಕಂಡುಬರುವ ವಿಕಾರಗಳು .......... ಇತ್ಯಾದಿ ವಿಷಯಗಳಲ್ಲಿರುವ ನೇತ್ಯಾತ್ಮಕ ವಿಚಾರಗಳನ್ನೇ ಬಂಡವಾಳ ಮಾಡಿಕೊಂಡು ಪ್ರಸ್ತುತಪಡಿಸಿದ ನಾಟಕ , ಎಲ್ಲರಿಗೂ ಕ್ಷಣಮಾತ್ರದ ಮನೋರಂಜನಾ ವಸ್ತುವಾಯಿತೆಂಬುದರಲ್ಲಿ ಎರಡು ಮಾತಿಲ್ಲ.
ಅಂದಿನಿಂದ ಇಂದಿನವರೆಗೆ ತೋರಿಬಂದ ಬದಲಾವಣೆಗಳನ್ನು , ಅದರಲ್ಲೂ ವಿಬಿನ್ನ ಭೌಗೋಳಿಕ ಸನ್ನಿವೇಶಗಳು, ಜೀವನದ ಅನಿವಾರ್ಯತೆಗಳು, ವಿಭಿನ್ನ ಭಾಷಾ ಬಳಕೆಗಳು , ತೋರಿಬಂದ - ತೋರಿಬರುತ್ತಿರುವ ಸಾಂಪ್ರದಾಯಿಕ ಬದಲಾವಣೆಗಳು ಇವನ್ನೆಲ್ಲ ನಿಶ್ಚಿತ ಅವಧಿಯಲ್ಲಿ ರಂಗದ ಮೇಲೆ ತರುವದು ಸುಲಭದ ಮಾತಲ್ಲ. ಇವನ್ನೆಲ್ಲ ಒಳಗೊಂಡ ಈ ಪ್ರಯೋಗ ಯಶಸ್ವಿಯಾಗಲು , ವಿಭಿನ್ನ ಪ್ರಾದೇಶಿಕತೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಬ ಲ ಸುರೇಶರ ಜೊತೆಗಿರುವ ಮಿತ್ರರ ಪಾತ್ರ ಬಹು ಶ್ಲಾಘನೀಯ. ಆದರೆ ಈ ನಾಟಕ ಪ್ರಯೋಗದ ಅವಧಿಯಲ್ಲೆಲ್ಲೂ ಆ ಗೆಳೆಯರನ್ನು , ಗೆಳೆಯರ ಶ್ರಮವನ್ನು ಸ್ಮರಿಸಿದಂತೆ ತೋರಿಬಂದಿಲ್ಲ. ಏಕೆಂದರೆ ಒಂದು ಪ್ರಾದೇಶಿಕ ಹಿನ್ನೆಲೆಯಿಂದ ಬಂದು, ಯಾವುದೇ ಪ್ರಮಾಣದಲ್ಲಿ ಜನ ಮಾನಸದಲ್ಲಿ ಬೆರೆತರೂ, ಉದ್ಯೋಗದಲ್ಲಿ ಯಶಸ್ವಿಯಾದರೂ, ಜನಪ್ರಿಯರಾದರೂ , ಕೊರತೆಯೇ ಕಾಣದಂತೆ ವ್ಯಕ್ತಿಯೊಬ್ಬ ಹಲವು ಪ್ರಾದೇಶಿಕ ಜನಜೀವನದ ೧೯೭೦ ರ ದಶಕದಿಂದ ಈ ವರೆಗಿನ ಭಾಷಾ ಬಿನ್ನತೆ, ಅಂದಿನಿಂದ ಇಂದಿನ ವರೆಗಿನ ಭಾಷಾ ಪ್ರಯೋಗಗಳು ಇವನ್ನೆಲ್ಲ ದೋಷರಹಿತವಾಗಿ ಡೈಲಾಗ್ ಬರೆಯುವದೆಂದರೆ ನಂಬಲಸಾದ್ಯ. ಅದಕ್ಕೇ ಹೇಳಿದ್ದು ಈ ಯಶಸ್ಸಿನ ಹಿಂದೆ ಪ್ರತಿ ಭೌಗೋಳಿಕ ಹಿನ್ನೆಲೆಯಿಂದ ಬಂದ ಗೆಳೆಯರ ಶ್ರಮ ಇರಲೇಬೇಕು, ಹಾಗಾಗಿ ಬ ಲ ಸುರೇಶರ ಈ ಪ್ರಯೋಗದ ಯಶಸ್ಸಿನಲ್ಲಿ ಇರುವ ಆ ಮಿತ್ರರ ಶ್ರಮವೂ ಗುರುತಿಸಬೇಕಾದದ್ದೇ.
ಜನಮಾನಸದಲ್ಲಿ ಅಚ್ಚೊತ್ತಿರುವ ಕಲಾಪ್ರಕಾರಗಳಲ್ಲಿ ನಾಟಕವೂ ಒಂದು. ಯಾವುದೇ ಕಲಾಪ್ರಕಾರಗಳ ಉದ್ದೇಶ ಕೇವಲ ಮನರಂಜನೆಯೊಂದೇ ಅಲ್ಲ. ಅನೂಚಾನಾಗಿ ಇಪ್ಪತ್ತನೇ ಶತಮಾನದ ಮಧ್ಯದ ಅವಧಿಯವರೆಗೂ ಮನರಂಜನೆಯ ಜೊತೆ ಜೊತೆಗೆ ಸಮಾಜ ಸುಧಾರಣೆ, ವ್ಯಕ್ತಿಯ ವ್ಯಕ್ತಿತ್ವ ಸುಧಾರಣೆ ... ಇತ್ಯಾದಿ ಧನಾತ್ಮಕ ಅಂಶಗಳಿಗೆ ನಾಟಕಗಳೂ, ಇತರೆ ಕಲಾ ಮಾಧ್ಯಮಗಳೂ ಒತ್ತು ನೀಡಿ ಸಮಾಜದ , ವ್ಯಕ್ತಿಯ ಔನ್ಯತ್ಯಕ್ಕೆ ಪೂರಕವಾಗಿದ್ದವು. ಇತ್ತೀಚಿನ ದಶಮಾನಗಳಲ್ಲಿ ಸಿನೇಮಾ, ಟೀ.ವಿ ಧಾರಾವಾಹಿಗಳು ಕಲಾಪ್ರಕಾರಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಸಮಾಜವನ್ನು, ವ್ಯಕ್ತಿಯ ವ್ಯಕ್ತಿತ್ವವನ್ನು , ಸಾಮಾಜಿಕ ಅಭಿರುಚಿಯನ್ನು ಅಧೋಗತಿಗೆ ಕೊಂಡೊಯ್ಯುತ್ತಿವೆ. ಊಟಕ್ಕಿರಬೇಕಾದ ಉಪ್ಪಿನಕಾಯಿ ಬಾಳೆಯನ್ನೆಲ್ಲಾ ಆವರಿಸಿಕೊಂಡು , ಊಟದ ಸವಿಯನ್ನೇ ಹಾಳುಗೆಡವುವಂದದಿ , ಇಂದು ಈ ಧಾರಾವಾಹಿಗಳು , ಅವುಗಳ ಅಣ್ಣ ತಮ್ಮದಿರು - ಅಕ್ಕ ತಂಗಿಯರಂತಿರುವ ಇತರೆ ಕಲಾಪ್ರಕಾರಗಳು ನೇತ್ಯಾತ್ಮಕ ಅಂಶಗಳನ್ನೇ ಬಂಡವಾಳವನ್ನಾಗಿಸಿ ಸಾಗುತ್ತಿರುವ ಸ್ಥಿತಿ ಅತಿ ಶೋಚನೀಯ.
ಬ ಲ ಸುರೇಶ ರಂತಹ ಹವ್ಯಕ ಸಮಾಜದ ಯಶಸ್ವಿ ವ್ಯಕ್ತಿಗಳು ಸಮಾಜದ ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ. ಸ್ವ ಶ್ರಮದಿಂದಲೂ , ಆ ಪರಮಾತ್ಮನ ಅನುಗ್ರಹದಿಂದಲೂ ಆರ್ಥಿಕವಾಗಿ ಬಲಾಡ್ಯರಾದ ಮತ್ತು ಸಮಾಜದ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದ ಹವ್ಯಕ ಮುಕುಟಮಣಿಗಳು ಇಂದಿನ ಅತಿ ಅವಶ್ಯಕತೆಗಳಾದ , ಹವ್ಯಕ ಯುವಜನಾಂಗ ಅಂದರೆ ಹನ್ನೆರಡರಿಂದ ಇಪ್ಪತ್ತೈದು ವಯಸ್ಸಿನ ಯುವಕ ಯುವತಿಯರು , ನಮ್ಮ ಹವ್ಯಕರ ಮೂಲ ಸಂಸ್ಕೃತಿಯಾದ ವೇದ ಪಾರಾಯಣ ಇತ್ಯಾದಿ ಅಭ್ಯಸಿಸುತ್ತಾ ಇಂದಿನ ಸಾರ್ವಜನಿಕ ಶಿಕ್ಷಣವನ್ನು ಕಲಿಯುತ್ತ ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಲು ಸಹಾಯವಾಗಬಲ್ಲ, ಎರಡರಿಂದ ಐದು ಸಾವಿರ ಯುವಕ ಯುವತಿಯರು ಉಚಿತವಾಗಿ ವಾಸ್ತವ್ಯ ಹೊಂದಿ (hostel), ಸೂಕ್ತ ಶಿಕ್ಷಣ ಪಡೆದು ಅಧುನಿಕ ಪ್ರಪಂಚಕ್ಕೆ ತೆರೆದುಕೊಳ್ಳುವ ಅವಕಾಶಕ್ಕೆ ಅನುಕೂಲವಾಗುವಂತಹ , ಸಾರ್ವಕಾಲಿಕವಾಗಿಯೂ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಳ್ಳುವಂತಹ Free Hotsel , Free Education ನಂತಹ ಸಾಮಾಜಿಕ ವ್ಯವಸ್ಥೆಯ ಆಸ್ತಿ ನಿರ್ಮಿಸಲು ಅನುವುಗೊಳ್ಳಬೇಕು. ಅಲ್ಲಲ್ಲಿ ತೋರಿ ಬರುವ ಅನುಕಂಪ ( lip sympathy ) , paid hotsel ಮುಂತಾದ ವ್ಯವಸ್ಥೆಗಳು ಉಳ್ಳವರಿಗಷ್ಟೇ ಅನುಕೂಲ ವಿನಃ, ಅರ್ಥಿಕ ಸಂಕಷ್ಟದಲ್ಲಿರುವ , ಬಹುದೂರ ಹಳ್ಳಿಗಳಲ್ಲಿರುವ ಹವ್ಯಕ ಬಾಂಧವರಿಗಲ್ಲ. ಬಹುಪಾಲು ಹಳ್ಳಿಗಳಲ್ಲಿ ಹತ್ತು ಗುಂಟೆ - ಮೂವತ್ತು ಗುಂಟೆ ಜಮೀನಿರುವ ಹವ್ಯಕ ಬಾಂಧವರು , ಶಹರಗಳಲ್ಲಿದ್ದು ದಿನ ನಿತ್ಯದ ಕನಿಷ್ಟ ಅವಶ್ಯಕತೆಗಳನ್ನು ಪೂರೈಸಿ ಬದುಕಲು ಶ್ರಮಿಸುತ್ತಿರುವ ಹವ್ಯಕ ಬಾಂಧವರು .......... ಇವರಿಗೆಲ್ಲ ಅನುಕೂಲವಾಗಬಲ್ಲ ವ್ಯವಸ್ಥೆಯ ನಿರ್ಮಾಣಕ್ಕೆ ಬ ಲ ಸುರೇಶರಂತಹ ಯಶಸ್ವಿ ವ್ಯಕ್ತಿಗಳು ಮನಸ್ಸು ಮಾಡಬೇಕು, ಮುಂದಾಳತ್ವ ಪಡೆಯಬೇಕು, ಇದು ಇಂದಿನ ಅತಿ ಅವಶ್ಯಕತೆಗಳಲ್ಲೊಂದಾಗಿದೆ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
March 31, 2013.