Monday, June 17, 2013

ರೂಪಾಯಿ ಇಪ್ಪತ್ತೈದು ಲಕ್ಷ ಘೋಷಿಸಿದ ಸಂಸದ, ಶ್ರೀ .ಎಚ್.ಎನ್.ಅನಂತಕುಮಾರ್ ಮತ್ತು ಲಕ್ಷ ಲಕ್ಷ ಕೊಡುಗೆ ಕೊಡುವತ್ತ ಮನಸ್ಸು ಇದೆ , ಪದಾಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸೂಚ್ಯವಾಗಿ ಅರುಹಿದ ನೂತನ ಕಾಂಗ್ರೆಸ್ ಶಾಸಕ ಶ್ರೀ. ಶಿವರಾಮ  ಹೆಬ್ಬಾರ.



ನಿನ್ನೆ ( ಜೂನ್ 17 , 2013  ) ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ಹಬ್ಬದ ವಾತವರಣ. ಪ್ರಖರವಾದ ವಿಧ್ಯುದ್ದೀಪಾಲಂಕಾರದ ಜೊತೆಗೆ ಶುಭ್ರ , ಸ್ವಚ್ಚ, ಶ್ವೇತ ಬಣ್ಣದಿಂದ  ಕಂಗೊಳಿಸುವ . ನಮ್ಮ ನಿಮ್ಮೆಲ್ಲರ ಮನದ ಮೂಲೆಯಲ್ಲಿ ಹುದುಗಿರುವ ಸ್ವರ್ಗ ಸೌಂದರ್ಯವನ್ನು ನೆನಪಿಸುವ , ತಂಪು ಸೂಸಿ ಮನವನ್ನು ಪ್ರಫುಲ್ಲಗೊಳಿಸುವ , ಮುದ ನೀಡುವ ಮಾದಕ ಸೌಂದರ್ಯವನ್ನು ಹೊರಸೂಸುವಂತೆ ಶೃಂಗಾರಗೊಂಡ  ಸಭಾವೇದಿಕೆ. ದಾರಿಯುದ್ದಕ್ಕೂ ಬಣ್ಣ ಬಣ್ಣದ ವಸ್ತ್ರವಿನ್ಯಾಸದಿಂದೊಡಗೂಡಿದ ಶೃಂಗಾರ ಸ್ವಾಗತ. ಓಹೋ ಈ ಸಮಾಜದವರೆಲ್ಲಾ ಚಿಂತೆಯಿಂದ ವಿಮುಕ್ತಿ ಹೊಂದಿ ಸಮೃದ್ಧಿಯಲ್ಲಿ ಇಂದು ಬಾಳುತ್ತಿರುವವರೋ ಎಂಬಂತಹ ನಗು, ಕೇಕೆ  ಹೊರಸುಸುತ್ತ , ತಮ್ಮ ತಮ್ಮಲ್ಲಿ ಮಾತಿನ   ಹೊನಲು ಹಾರಿಸುತ್ತ , ಅತಿಥಿ - ಅಭ್ಯಾಗತರಿಗಾಗಿ   ಕಾದಿದ್ದ  ಸಮಯ,  ಆಗ ಸಾಯಂಕಾಲ ನಾಲ್ಕು ಗಂಟೆ.



ಹೌದು, ಹವ್ಯಕ ಸಮಾಜದವರೆಲ್ಲ ಸೇರಿ, ನೂತನ ವಿಧಾನ ಸಭೆ ಗೆ ನಡೆದ ಚುನಾವಣೆಯಲ್ಲಿ  ಆಯ್ಕೆಯಾದ ,  ವಿಪ್ರ ಜನಾಂಗದಲ್ಲಿ ಜನಿಸಿದ ಶಾಸಕರನ್ನು ಆಮಂತ್ರಿಸಿ, ಸನ್ಮಾನಿಸುವ ಈ ಕಾರ್ಯಕ್ರಮ ಅತಿ ವಿಝೃಂಬಣೆಯಿಂದ    ಸಂಪನ್ನವಾಯಿತು.  ಹವ್ಯಕ ಸಭಾಭವನ ಹವ್ಯಕ ಸಮಾಜದ ಹಿರಿಯರಿಂದ, ಗಣ್ಯರಿಂದ , ದಾನಿಗಳಿಂದ , ಚುರುಕು - ಚತುರ ಹವ್ಯಕ ಯುವ ಜನಾಂಗದಿಂದ ತುಂಬಿತ್ತು.



ಹವ್ಯಕ ಪದಾಧಿಕಾರಿಗಳಿಂದ ಪಾರಂಪರಿಕ ಆರಂಭದ   ಮಾತುಗಳು ಮುಗಿದೊಡನೆ, ಅತಿಥಿ - ಅಭ್ಯಾಗತರೆಲ್ಲ ಸೇರಿ ಜ್ಯೋತಿ ಬೆಳಗಿಸುವ ಕಾರ್ಯ ನೆರವೇರಿತು. ಸನ್ಮಾನಿತ ಶಾಸಕ ದಿನೇಶ್ ಗುಂಡುರಾವ್ ರವರು ಮಾತನಾರಂಭಿಸಿ ಈ ಕಾಲದ ಜಾತಿವ್ಯವಸ್ಥೆಯನ್ನು ನಾವು ಎಷ್ಟೇ ಅಲ್ಲಗಳೆದರೂ, ಎಲ್ಲ ನಿರ್ಧಾರಗಳಿಗೂ ಜಾತಿಯೇ ಪ್ರಧಾನವಾಗಿ ಪರಿಗಣಿಸಲ್ಪಡುತ್ತಿದೆ, ಮಂತ್ರಿಯಾಗಲೂ ಬ್ರಾಹ್ಮಣ ಗುಂಪಿನಲ್ಲೇ ಪೈಪೋಟಿ ನಡೆಸಬೇಕಾದುದು ಇಂದಿನ ಸ್ತಿತಿ , ಎಂದು ನೇರ ನುಡಿಯಿಂದ ವಾಸ್ತವಿಕತೆಯನ್ನು ಬಿಚ್ಚಿಟ್ಟರು. ಬ್ರಾಹ್ಮಣರು ಸಂಖ್ಯಾ ಬಲದಿಂದ ಆರಿಸಿಬರುವವರಲ್ಲ, ಎಲ್ಲ ಸಮಾಜದವರೊಡನೆ ಸ್ನೇಹ  ಸಂಪರ್ಕ, ಉತ್ತಮ ಸೇವಾ ಮನೋಭಾವ ಇಟ್ಟು ಮುನ್ನಡೆಯುವದರಿಂದ ಪುನಃ ಪುನಃ ಶಾಸನ ಸಭೆಗೆ ಆಯ್ಕೆಯಾಗಿ  ಬರುತ್ತಾರೆ  , ಈ ರೀತಿ ಆಯ್ಕೆಯಾಗಿ ಬಂದು ಎಲ್ಲ ಸಮಾಜದ ಸೇವೆ ಮಾಡುವದರ ಜೊತೆ , ತನ್ನ ಸಮಾಜದ ಬಗೆಗೂ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದು ತಮ್ಮ ನೇರ , ವಾಸ್ತವಿಕ ನುಡಿಗಳಿಂದ ಸಭಿಕರೆಲ್ಲ ತಲೆದೂಗುವಂತೆ ಮಾಡಿದರು.



ನನ್ನ ಕ್ಷೇತ್ರ ಕಡೂರಿನಲ್ಲಿ ಇರುವದು ಐದು ನೂರು ಬ್ರಾಹ್ಮಣ ಮತದಾರರು ಮಾತ್ರ .  ನಲವತ್ತ್ಮೂರು ಸಾವಿರಕ್ಕೂ ಅಧಿಕ ಮತಗಳಿಂದ ಆಯ್ಕೆಯಾದ , ಬ್ರಾಹ್ಮಣನಾದ ನಾನೇ ನಿಜವಾದ  ಜಾತ್ಯಾತೀತವಾದದ   ಹರಿಕಾರ , ಪ್ರತಿನಿಧಿ ಎಂದು ಅತಿ ಅಭಿಮಾನದಿಂದ ನುಡಿದರು. ಆರಂಭದಲ್ಲಿ ತನ್ನ ಗೋತ್ರ ಪ್ರವರವನ್ನು ಹೇಳಿ ಎಲ್ಲರಿಗೂ ಅಭಿವಾದಯೇ ಎನ್ನುತ್ತಾ  , ಈ ಆರಂಭದ ವಿಶ್ಲೇಷಣೆ ಮಾಡಿದರು. ಅನಂತಕುಮಾರರಾದಿಯಾಗಿ ಎಲ್ಲರು ತಾನು ಬ್ರಾಹ್ಮಣನೆಂದು ಹೇಳಿಕೊಳ್ಳಬೇಕಾಗಿಲ್ಲ , ಪಕ್ಷವೇ ಗುರುತನ್ನು ಪ್ರತಿನಿಧಿಸುವದು ಸಾಮಾನ್ಯರ ಅರಿವು, ಆದರೆ ನಾನೊಬ್ಬ ಬ್ರಾಹ್ಮಣ, ಬ್ರಾಹ್ಮಣವಾದಿ ಅಲ್ಲವೆಂಬ ರೀತಿ ಸಮಾಜದಲ್ಲಿ ತೋರಿಸಿಕೊಂಡಿರುವ  ಪಕ್ಷವೊಂದರಲ್ಲಿದ್ದರೂ ಬ್ರಾಹ್ಮಣನಾಗಿ , ಬ್ರಾಹ್ಮಣ್ಯ ಬಲದಿಂದಲೇ , ಬ್ರಾಹ್ಮಣೇತರರ ಬೆಂಬಲದಿಂದ ಆಯ್ಕೆಯಾಗಿ ಬಂದಿರುವ ಶಾಸಕ.  ನಾನೂ ಯಾವ ಬ್ರಾಹ್ಮಣ ಶಾಸಕರಿಗೂ  ಬ್ರಹ್ಮ ಹಿತ, ಬ್ರಾಹ್ಮಣ ಚೇತೊಹಾರಿಕೆಯಲ್ಲಿ ಕಮ್ಮಿಯಿಲ್ಲ , ನನ್ನ ಬೆಂಬಲ ಸದಾನಿಮ್ಮೊಡನಿರುತ್ತದೆ ಎಂದು, ಸ್ವರ್ಣವಲ್ಲಿ ಗುರುಗಳು , ಆ ಪ್ರದೇಶಗಳೂ ತಮ್ಮೊಡನೆ ಇರುವ ಸಂಭಂದಹಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜನರ ಅಭಿಮಾನ ಗಳಿಸಿದರು.


ನಮ್ಮ ಕಾಗೇರಿಯವರು ನಮ್ಮ ಹವ್ಯಕ ಭಾಷೆಯಲ್ಲಿ ಮಾತನಾಡಿ ಕೃಷಿಯನ್ನು ಅವಲಂಬಿಸಿ, ಬ್ರಾಹ್ಮಣ್ಯವನ್ನು ಕಾಪಿಟ್ಟು , ಗೋ ಸಂರಕ್ಷಣೆ , ಗೀತಾ ಪಠಣ , ಯಕ್ಷಗಾನ ಕಲೆ ಉಳಿಸುತ್ತ , ಬೆಳೆಸುತ್ತ ಬಂದ ಹವ್ಯಕರು ಬ್ರಾಹ್ಮಣರಲ್ಲೇ   ವೈಶಿಷ್ಠ್ಯತೆ ಹೊಂದಿದವರು,   ಈ ಕಾಲ ಘಟ್ಟದಲ್ಲಿ ಕೈಗೊಳ್ಳುತ್ತಿರುವ ನೂತನ ಕಟ್ಟಡ ಯೋಜನೆಗೆ ತಮ್ಮೆಲ್ಲರಿಂದ ಹೆಚ್ಚಿನ ಧನ ಸಹಾಯ ಅಪೇಕ್ಷಿಸುತ್ತಿದ್ದಾರೆ    ಎಂದು  ಅಹವಾಲನ್ನಿತ್ತರು.


ನಂತರ ಮಾತನಾಡಿದ ಯಲ್ಲಾಪುರದ ಶಾಸಕ ಶ್ರೀ ಶಿವರಾಮ ಹೆಬ್ಬಾರ, ಅರಬೈಲು ಹವ್ಯಕ ಸಮಾಜದ ಈ ಕಾಲಮಾನದ ಸ್ತಿತಿ ಗತಿಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸಿದಂತೆ ಕಂಡುಬಂದಿದ್ದು ವಿಶೇಷವಾಗಿ ಉಲ್ಲೇಖನೀಯ. ಹವ್ಯಕ ಸಮಾಜ ಮುಂದುವರಿದ ಸಮಾಜ, ಅವರಿಗೆ ಯಾವುದೇ ಆಸರೆಯ ಅವಶ್ಯಕತೆಗಳಿಲ್ಲ ಎಂಬಂತೆ ಇತರೆ ಸಮಾಜದವರು ಅಭಿಪ್ರಾಯ ಹೊಂದಿದ್ದಾರೆ, ಆದರೆ ಇದು   ವಸ್ತವಿಕತೆಯಿಂದ ಬಹು ದೂರ. ಹವ್ಯಕರಲ್ಲಿ ಅತಿ ಕಡು ಬಡವರಿದ್ದಾರೆ, ಇಂದೂ ಗುಡಿಸಲುಗಳಲ್ಲಿ ಗುಡ್ಡಗಾಡಿನಂತಹ ಪ್ರದೇಶಗಳಲ್ಲಿ ಅತಿ ಹೀನಾಯ ಸ್ತಿತಿಗಳಲ್ಲಿ ಬದುಕುತ್ತಿದ್ದವರಿದ್ದಾರೆ,  " ನಾನು ಮತ್ತು ಕಾಗೇರಿ ಆ ರೀತಿ ಬದುಕುತ್ತಿರುವವರನ್ನು ದತ್ತು ತೆಗೆದುಕೊಂಡು ಐಎಎಸ್, ಐಪಿಎಸ್........  ಇತರೆ ಉದ್ಯೋಗಗಳಿಗೆ ತಯ್ಯಾರು ಮಾಡಬೇಕು " ಎಂಬ   ಮನದಾಳದ ಮಾತುಗಳಿಂದ ಪ್ರತಿಯೊಬ್ಬ ಹವ್ಯಕನ ಹೃದಯ ತಟ್ಟಿದರು.  ಹೆಬ್ಬಾರರು ಮುಂದುವರಿದು, ಸಭೆಯಲ್ಲಿ ಎದುರು ಆಸೀನರಾಗಿದ್ದ  ಶ್ರೀ ಎಂ.ಎನ್ .ಭಟ್ , ಮದ್ಗುಣಿಯವರ ಕಾರ್ಯಶೈಲಿಯನ್ನು ಮೆಚ್ಚುತ್ತ , ಹಿಂದೊಮ್ಮೆ ಬಡವಿಧ್ಯಾರ್ಥಿಗಳ ಆರ್ಥಿಕ ಸಹಾಯಕ್ಕೆ ದೇಣಿಗೆ ಪಡೆಯಲು ಸುಮಾರು ಎರಡು ನೂರು ಸಲ ಬೆಂಬಿಡದೆ ಫೋನ್ ಸಂಪರ್ಕ ಮಾಡಿ ಆ ಕಾಲದಲ್ಲೇ ತನ್ನಿಂದ ಹವ್ಯಕ ಮಹಾಸಭೆಗೆ ಎರಡೂ ವರೆ ಲಕ್ಷ ರೂಪಾಯಿಗಳಷ್ಟು ದೇಣಿಗೆ ಪಡೆದಿದ್ದನ್ನು ಸ್ಮರಿಸಿಕೊಂಡರು.  ಇಲ್ಲೇ ಮಜಾ ಇದ್ದಡ....... ಮತ್ತೆ ,......... ಅಲ್ದಾ ನೋಡಿ.  ಸೂಚ್ಯವಾಗಿ, ಸೂಕ್ಷ್ಮವಾಗಿ ಹೆಬ್ಬಾರರು ನಮ್ಮ ಮಹಾಸಭೆಯ ಈಗಿನ ಪದಾಧಿಕಾರಿಗಳಿಗೆ ನೀಡಿದ ಸಂದೇಶ - "  ಆಗಿನ ಕಾಲದಲ್ಲೇ ಎರಡುವರೆ ಲಕ್ಷದಷ್ಟು ಮೊತ್ತ ನೀಡಿದ ನಾನು ( ಹೆಬ್ಬಾರರು ), ಇಂದು ಶಾಸಕನಾಗಿ, ಆಡಳಿತ ಪಕ್ಷದ ಶಾಸಕನಾಗಿ ನಿಂತಿದ್ದೇನೆ, ದಾನ ನೀಡುವ ಮನಸ್ಸುಳ್ಳವನೆಂಬ ಹಂಬಲವನ್ನು ಆಗಲೇ ಪೂರೈಸಿದ್ದೇನೆ, ಈ ಕಾಲಮಾನದಲ್ಲಿ ನೀವು ( ಮಹಾಸಭೆಯವರು ) ಸಂಪರ್ಕವನ್ನು ಸಮಂಜಸವಾಗಿ ಸಾಧಿಸಿದರೆ ನನ್ನಿಂದ, ನನ್ನ ಸಂಪರ್ಕ ಸಾಧ್ಯತೆಗಳಿಂದ ಲಕ್ಷವೇಕೆ ಕೋಟಿಯನ್ನೇ ಸೇರಿಸಬಹುದು. "  ಇದಲ್ಲವೇ ಸಮಾಜ ಸ್ಪಂದನೆ?


ಕಲಶಕ್ಕೆ ಕಿರೀಟವಿಟ್ಟಂತೆ, ಸಾಂದರ್ಭಿಕವಾಗಿ, ಸಮಯೋಚಿತವಾಗಿ, ಸಾಮಾನ್ಯವಾಗಿ ಸ್ವಲ್ಪ ಜಾಸ್ತಿ ಎಮೋಷನಲ್ ಆಗಿ , ಹಿಯಣ್ಣನಂತೆ, ಹಿತಚಿಂತಕನಂತೆ ಯಾವುದೇ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿರಲಿ , ಎಷ್ಟೇ ಕೆಲಸದ ಭರಾಟೆಯಿರಲಿ ಮುಗ್ಧವಾಗಿ   ಎಲ್ಲರೊಡನೆ ಬೆರೆಯುತ್ತಾ , ಹೊರಸೂಸುವ ನಗುವಿನೊಂದಿಗೆ ಇರುವ ಚೈತನ್ಯಶೀಲ ಅನಂತಕುಮಾರರವರು   ಮಾತನಾಡುತ್ತಾ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಬದುಕುವ ಹವ್ಯಕರ ಬದುಕು ಪಶ್ಚಿಮ ಘಟ್ಟಗಳ ರಕ್ಷಣೆ, ಅಡಿಕೆ ಬೆಳೆಯ ರಕ್ಷಣೆಗಳಲ್ಲಡಗಿದೆ. ಅಡಿಕೆ ಮತ್ತು ತಾಂಬೂಲ ಹಾನಿಕಾರಕ ಎಂಬುದು ಸಂಸ್ಕೃತಿಗೆ ಮಾಡುವ ಅಪಮಾನ, ಗುಟ್ಕಾ ಮತ್ತು ಅಡಿಕೆ ಬೆಳೆಗೆ ಸಂಭಂಧ ಕಲ್ಪಿಸಿ, ಅಡಿಕೆ ಬೆಳೆಗಾರರಿಗಾಗುವ ಹಾನಿ ತಪ್ಪಿಸಲು ಕೇಂದ್ರ ಸರಕಾರ ಮುಂದಾಗಬೇಕು, ಈ ಕುರಿತು ಅಡಿಕೆ ಬೆಳೆಗಾರರ ಒತ್ತಾಸೆಯಾಗಿ ನಿಲ್ಲುವದಾಗಿ ಬರವಸೆ ನೀಡಿದರು. "ಪಶ್ಚಿಮ ಘಟ್ಟ ಉಳಿಸಿ " ಎಂದು ಅಭಿಯಾನ ಹವ್ಯಕ ಮಹಾಸಭೆಯಿಂದ ಆರಂಭವಾಗಬೇಕು, ಈ ದಿಶೆಯಲ್ಲಿ ಮೂರು ದಿವಸದ ಕಮ್ಮಟವೊಂದನ್ನು ಮಾಡಿ ಎಂದು ಸಲಹೆ ನೀಡಿದರು. ಹವ್ಯಕ ಮಹಾಸಭೆ ನನ್ನ ಸಂಸದ  ಕ್ಷೇತ್ರದಲ್ಲಿರದೆ ಇರುವದರಿಂದ ಸಂಸದ ನಿಧಿಯಿಂದ ಹಣ ನೀಡಲಾಗುವದಿಲ್ಲ ಆದರೆ ತನ್ನ ಮಿತ್ರ ರಾಜ್ಯಸಭಾ ಸದಸ್ಯರಿಂದ , ಮಹಾಸಭೆಯ ನೂತನ ಕಟ್ಟಡಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಕೊಡಿಸುವದಾಗಿ ಆಶ್ವಾಸನೆಯಿತ್ತರು .  


ಸಭಾ ಕಾರ್ಯಕ್ರಮದ ಮಧ್ಯೆ ಸ್ಥಳೀಯ  ಶಾಸಕ ಡಾ. ಅಶ್ವತ್ಥನಾರಾಯಣ ರವರಿಂದ ಮಹಾಸಭೆಗೆ ಸಿಗುತ್ತಿರುವ ಪ್ರೋತ್ಸಾಹ, ಸಹಕಾರ ಕುರಿತು ಶ್ಲಾಘಿಸಲಾಯಿತು ಮತ್ತು ಮುಂದೆಯೂ ಇದೇ ರೀತಿ ಸಹಕಾರ ಕೋರಲಾಯಿತು,    


ಮಹಾಸಭೆಯ ಎಲ್ಲ ಕಾರ್ಯಕರ್ತರ ಶ್ರಮ, ಕಾರ್ಯಕ್ಷಮತೆಯಿಂದ ಈ ಕಾರ್ಯಕ್ರಮ ನೆನಪಿನಲ್ಲುಳಿಯುವಂತೆ ಸಂಪನ್ನಗೊಂಡಿತು.



ಹರಿಹರ ಭಟ್, ಬೆಂಗಳೂರು.
www.hariharbhat.blogspot.com
ಜೂನ್ 17 , 2013 .

 

No comments:

Post a Comment