Wednesday, April 10, 2013


ನೀವು ದಿನಾಲು ನಾಲ್ಕಾರು ದಿನಪತ್ರಿಕೆಗಳನ್ನು ಓದುವವರಾಗಿದ್ದರೆ ಕೆಲವು ತಮಾಷೆಯ ಸಂಗತಿಗಳು ಗಮನಕ್ಕೆ ಬರುತ್ತವೆ. ಒಂದು ಪತ್ರಿಕೆಯಲ್ಲಿ ಬಂದ ಸುದ್ದಿ ಎರಡು  ಮೂರು ದಿನಗಳಲ್ಲಿ ಸ್ವಲ್ಪ ಆಚೀಚೆ ಮಸಾಲೆಗಳನ್ನು ಸೇರಿಸಿಕೊಂಡು ಅಂಕಣವಾಗಿ ಹೊರಹೊಮ್ಮುತ್ತದೆ. ಪತ್ರಿಕೆಯೊಂದರಲ್ಲಿ ಬಿಸಿಬಿಸಿಯಾಗಿ ಹೆಚ್ಚಿನ ಪ್ರಾಶಸ್ತ್ಯ ಪಡೆದ ಸುದ್ದಿ ಇನ್ನೊಂದು ಪತ್ರಿಕೆಯಲ್ಲಿ ಎಲ್ಲೋ ಮೂಲೆಯಲ್ಲಿ ಸ್ಥಳ ಪಡೆದಿರುತ್ತದೆ. ಪತ್ರಿಕೆಯ ರಾಜಕೀಯ ಚಿಂತನೆಗಳನ್ನು, ಒಲವುಗಳನ್ನು ಅವಲಂಬಿಸಿ ಕೆಲವು ಮುಂದಾಳುಗಳು ಪತ್ರಿಕೆಗಾಗಿಯೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆಯೇ ಎನಿಸುವಷ್ಟು ರೇಜಿಗೆ ಹುಟ್ಟಿಸುವಂತೆ ಪತ್ರಿಕೆ ಸುದ್ದಿ ಬಿಂಬಿಸುತ್ತದೆ.


ಇನ್ನು ಕೆಲವು ಪತ್ರಿಕೆಗಳಲ್ಲಿ ಲೇಖನಗಳೆಂಬುವವು ಹತ್ತು ಸಾಲುಗಳಿದ್ದು ಅದರ ಹತ್ತು ಪಟ್ಟು ಸ್ಥಳವನ್ನು ಚಿತ್ರಗಳೇ ತುಂಬಿರುತ್ತವೆ. ಆಗಾಗ ಅಂತರ್ಜಾಲವೇ , ಅಂತರ್ಜಾಲದ (internet) ಚಿತ್ರಗಳೇ ಪತ್ರಿಕೆಯ ತುಂಬೆಲ್ಲ ತುಂಬಿರುತ್ತವೆ.


ಇನ್ನೂ ಚೋದ್ಯದ ಸಂಗತಿಯೆಂದರೆ ಕೆಲವೊಮ್ಮೆ ಎರಡು , ಮೂರು ಪತ್ರಿಕೆಗಳಲ್ಲಿ ಒಂದೇ ಅಥವಾ ಸ್ವಲ್ಪ ವ್ಯತ್ಯಾಸದೊಂದಿಗೆ ಅದೇ ತಲೆಬರಹದ, ಅದೇ ಸುದ್ದಿ ವಿನ್ಯಾಸದ ಒಕ್ಕಣೆಗಳು ಕಂಡುಬರುತ್ತವೆ. ಎರಡು ಪತ್ರಿಕೆಗಳ ಆ ಸುದ್ದಿಗಳನ್ನು ಅಕ್ಕ ಪಕ್ಕದಲ್ಲಿಟ್ಟು ತುಲನಾತ್ಮಕವಾಗಿ ಓದಿದರೆ , ಒಬ್ಬರೇ ವರದಿಗಾರ   ಪಂಡಿತರು ದ್ವಿಪಾತ್ರ ಮಾಡಿದ್ದಾರೆಯೇ ಎಂಬ ಕುತೂಹಲ ಉಂಟಾಗುತ್ತದೆ.


ಹೀಗೆ ನಮ್ಮ ಪತ್ರಿಕಾವಲಯದ ನುರಿತ ಬಂಧುಗಳು ವೈಚಾರಿಕತೆಯ ಕೊರತೆಯಿಂದ ಬಳಲುತ್ತಿವೆಯೋ ಎಂಬ ಸಂಶಯ ಆಗಾಗ ಮೂಡುತ್ತದೆ. ಈ ದಶಮಾನದ ಈ ಬದಲಾವಣೆಗಳು ನಮ್ಮ ವೈಚಾರಿಕ ಸಾಂಸ್ಕೃತಿಕ ಮಿತ್ರರನ್ನು ಸಂಪೂರ್ಣವಾಗಿ ವಿಭಾಗಿಸಿ , ರಾಜಕೀಯ ಲಾಭಗಳತ್ತ ಕೊಂಡೊಯ್ಯುವ ಬದಲಾವಣೆಗಳಾಗುತ್ತಿವೆಯೋ ಎಂಬ ವಿಷಾದವೂ ಒಡಮೂಡುತ್ತಿದೆ.


ಇನ್ನು ವಾರಪತ್ರಿಕೆಗಳು, ಮಾಸಪತ್ರಿಕೆಗಳ ಬಗೆಗಂತೂ ಏನೂ ಹೇಳೋ ಹಾಗಿಲ್ಲ. ಎಲ್ಲಾ ಹಳಸಲು ಪದಾರ್ಥಗಳೇ ಬಹುತೇಕ ತುಂಬಿರುತ್ತವೆ. ಕೆಲವೆಡೆಯಂತೂ ದಿನ  ಪತ್ರಿಕೆಗಳ ಮುದ್ರಿತ ವಿಷಯಗಳನ್ನೆ ಯಥಾವತ್ತಾಗಿ ಎತ್ತಿಕೊಂಡಿರುತ್ತಾರೆ. ಅಲ್ಲಲ್ಲಿ ಬದಲಾವಣೆ ತೋರುವ ವ್ಯವಧಾನವೂ ಸಂಪಾದಕ ಮಹನೀಯರುಗಳಿಗೆ ಅವಶ್ಯವೆನಿಸುವದಿಲ್ಲ.


ಈ ರೀತಿ ಬಹುತೇಕ ದಿನ ಪತ್ರಿಕೆ, ಮಾಸಿಕಗಳಲ್ಲಿ ತೋರಿಬಂದರೂ, ಅಲ್ಲಲ್ಲಿ ಎಲ್ಲಾ ಭಾಷೆಗಳಲ್ಲೂ " ಕಹಿ ಚೂರ್ಣದ ಬಟ್ಟಲಲ್ಲಿ ಸಿಹಿ ಎಳ್ಳುಂಡೆ " ಎಂಬಂತೆ ಕೆಲವು ದಿನ ಪತ್ರಿಕೆಗಳೂ  , ಮಾಸ ಪತ್ರಿಕೆಗಳೂ    ರಾರಾಜಿಸುತ್ತಿವೆ ಎಂಬುದು ನಮ್ಮೆಲ್ಲರ ಭಾಗ್ಯ.


ಯುಗಾದಿ , ಬದಲಾವಣೆಯ ಸಂಭ್ರಮದ  ಕಾಲ. ಅಂತೆ ಎಲ್ಲರೂ ಎಲ್ಲೆಡೆ ಬದಲಾವಣೆ ಆಶಿಸುವ ಸಮಯ. ನಮ್ಮ ಮಿತ್ರರ ಮನದಲ್ಲೂ ಈ ರೀತಿ ಪರ್ವ ಕಾಲದಲ್ಲಿ ಧನಾತ್ಮಕ ಬದಲಾವಣೆಗಳು ಬರಲಿ ಎಂಬ   ಆಶಯದೊಂದಿಗೆ.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
April 11, 2013.

No comments:

Post a Comment