ಬ್ರಾಹ್ಮಣರು ಎಂಬ ಜನಾಂಗಕ್ಕೆ ಕಳಂಕಪ್ರಾಯವಾಗಿ ಇಂದಿನ ಬ್ರಾಹ್ಮಣ ಮುಖಂಡರುಗಳು ವರ್ತಿಸುತ್ತಿದ್ದಾರೆ.
ಬ್ರಾಹ್ಮಣರು ಎಂಬ ಜನಾಂಗದ ಮುಖಂಡರುಗಳು ಎಂದು ಯಾರ್ಯಾರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೋ, ನಾವು ಯಾರ್ಯಾರನ್ನು ಬ್ರಾಹ್ಮಣ ವಂಶದಲ್ಲಿ ಜನಿಸಿ ಬ್ರಾಹ್ಮಣರ ನೇತಾರರು ಎಂದು ಗುರುತಿಸಿದ್ದೇವೆಯೋ ಅವರ ವೈಯಕ್ತಿಕ ಜೀವನದಲ್ಲಿ ಇತ್ತೀಚಿನ ಹತ್ತರಿಂದ ಹದಿನೈದು ವರ್ಷಗಳಲ್ಲಿ ಆದ ಆರ್ಥಿಕ ಪ್ರಗತಿಯನ್ನು ಅಭ್ಯಸಿಸಿ. ಜೊತೆಗೆ ತಮ್ಮ ಸುತ್ತಮುತ್ತಲಿನ ಬ್ರಾಹ್ಮಣರಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಅವಲೋಕಿಸಿ. ಬ್ರಾಹ್ಮಣ ನೇತಾರರು ಆಡುವ ಮಾತಿಗೂ , ಮಾಡುವ ಕೃತಿಗೂ ಇರುವ ಅಂತರ ಢಾಳಾಗಿ ಗೋಚರಿಸುತ್ತದೆ.
"ಸತ್ಯಂ ಬ್ರೂಯಾತ್ , ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ " ಎಂಬುದನ್ನು ತಿರುಚಿ "ಸತ್ಯಂ ನ ಬ್ರೂಯಾತ್ , ಅಪ್ರಿಯಂ ನ ಬ್ರೂಯಾತ್ , ಬ್ರೂಯಾತ್ ಅಸತ್ಯ ಪ್ರಿಯಂ " ಎಂದು ಜೀವನದಲ್ಲಿ ಯಶಸ್ಸನ್ನು ಪಡೆಯಲು ಅನುಕೂಲ ಸಿದ್ಧಾಂತವನ್ನು ಅಪ್ಪಿಕೊಂಡಿದ್ದಾರೆ. ಅರ್ಥವನ್ನೇ ಅರಿಯದೆ, ಅರ್ಥವನ್ನರಿತವರು ತಥ್ಯದ ಗೋಜಲಿಗೆ ಹೋಗದೇ , ಕಂಠಪಾಠ ಮಾಡಿದ ಮಂತ್ರಗಳನ್ನೇ ಉಸುರುತ್ತ ಜೀವನಾವಶ್ಯಕಗಳನ್ನು ಪೂರೈಸಲು ಹೆಣಗುವ ಒಂದು ವರ್ಗವಾದರೆ, ಬ್ರಾಹ್ಮಣ ಸಮಾಜಕ್ಕೆ ತಾನೇ ಅಧಿಕಾರಯುತ ನೇತಾರ ಎನ್ನುತ್ತಾ, ದ್ವಿಮುಖ ದ್ವಂದ್ವ ಜೀವನ ನಡೆಸುತ್ತಾ ಅರ್ಥಿಕ ಬಲಾಡ್ಯಕ್ಕಾಗಿ ಹೋರಾಡುವ ಇನ್ನೊಂದು ವರ್ಗ. ಈ ವರ್ಗಗಳ ಮಧ್ಯೆ ವೇದ , ವೇದಾಂಗಗಳ ಸಮರ್ಥ ಉತ್ತರಾಧಿಕಾರಿ ನಾವೇ ಎಂದು ಪರಸ್ಪರ ಕಾಲೆಳೆಯುವ , ಸರ್ವ ಸಂಗ ಪರಿತ್ಯಾಗಿ ಎಂಬ ಘೋಷಣೆಯನ್ನು ಆಗಾಗ ನೆನಪಿಸುತ್ತಾ , ಎಲ್ಲ ಶಿಷ್ಯರಿಗಾಗಿ , ಎಲ್ಲ ಸಾತ್ವಿಕ ಸಮಾಜಕ್ಕಾಗಿ ಎಂದು ಬಾಹ್ಯ ಪ್ರಪಂಚಕ್ಕೆ ತೋರ್ಪಡಿಸುತ್ತ .........ಅರ್ಥಿಕ ಬಲ, ಸಾಮಾಜಿಕ ಮುಂದಾಳುಗಳ ಮೇಲೆ ಹತೋಟಿ , ಸಾಮಾನ್ಯ ಮನುಷ್ಯನ ಮನಸ್ಸಿನ ಮೇಲೆ ದಿಗ್ಭಂದನೆ ಸಾಧಿಸುತ್ತ ತನ್ನನು ತಾನೇ ಪ್ರತಿಷ್ಠಾಪಿಸುತ್ತ ಸಾಗಿರುವ ಕೇಸರಿ ವರ್ಗ , ಇವುಗಳ ಮಧ್ಯೆ ಸಾಮಾನ್ಯ ಬ್ರಾಹ್ಮಣನೊಬ್ಬ ಸಿಲುಕಿ ತನ್ನ ದೈನಂದಿನ ಅವಶ್ಯಕತೆಗಳನ್ನು ಪೂರೈಸಲಾಗದೆ , ವಿಷಮಯ ಚಕಿತನಾಗಿ, ಅಸಹಾಯಕನಾಗಿ ದಿನ ದೂಡುತ್ತಿದ್ದಾನೆ.
ಹೀಗೆಲ್ಲ ಅನಿಸಿಕೆಗಳನ್ನು ಹಂಚಿಕೊಂಡರೆ, ಕೇವಲ ಶುಷ್ಕ ಬರವಣಿಗೆಯಾದೀತು. ಅತಿ ವರ್ತಮಾನದ ಬದಲಾವಣೆಗಳನ್ನೇ ಗಮನಿಸಿ. ಈಗ ವಿಧಾನ ಸಭಾ ಚುನಾವಣೆಯ ಕಾಲ. ಬ್ರಾಹ್ಮಣ ಅಬ್ಯರ್ಥಿಗಳನ್ನೊಮ್ಮೆ ಅಭ್ಯಸಿಸಿ. ಇಂದಿನ ಅವರ ಆರ್ಥಿಕ ಬಲಾಡ್ಯತೆಯನ್ನು ಗಮನಿಸಿ. ಅವರ ತಂದೆ ತಾಯಿಯರ ಕಾಲದ ಅವರ ಕುಟುಂಬದ ಆರ್ಥಿಕ ಸಾಮರ್ಥ್ಯವನ್ನೆಲ್ಲ ತುಲನಾತ್ಮಕವಾಗಿ ಪರಿಶೀಲಿಸಿ . ಕೇವಲ ಹತ್ತು ಹದಿನೈದು ವರ್ಷಗಳಲ್ಲಿ ನೇತಾರರ ಜೀವನ, ಅರ್ಥಿಕ ಸಾಮರ್ಥ್ಯ ನಾಲ್ಕಾರು ಪಟ್ಟು ಹೆಚ್ಚಾಗಬಹುದಾದರೆ, ಸಾಮಾನ್ಯ ಬ್ರಾಹ್ಮಣನೊಬ್ಬ , ಸೂಕ್ತ ಶ್ರಮದ ಹೊರತಾಗಿಯೂ ಬದಲಾವಣೆಯನ್ನೇಕೆ ಕಂಡುಕೊಳ್ಳಲಾರ? ಯಾರು ನೇತಾರರ ಸುತ್ತ ಸುತ್ತುತ್ತಿರುತ್ತಾರೋ, ಹೊಗಳುಭಟರಾಗಿ ನೇತಾರರಿಗೆ ವಿನೀತರಾಗಿ ನೇತಾರರ ಅನೈತಿಕ ಚಟುವಟಿಕೆಗಳಲ್ಲಿ ಪಾಲುದಾರರಾಗಿ ಅಥವಾ ಸಹಕಾರಿಯಾಗಿ ಜೊತೆ ನೀಡುತ್ತಿರುತ್ತಾರೋ , ಅವರಷ್ಟೇ ಏಳಿಗೆ ಕಾಣುವದು ಸಮಾಜದಲ್ಲಿ ತೋರ್ಪಡುತ್ತಿದೆಯಲ್ಲವೇ?
ಅಂತೆಯೇ ನಿನ್ನೆಯ ವಿಪ್ರ ಹಿತರಕ್ಷಣಾ ವೇದಿಕೆಯಿಂದ ಎಲ್ಲರಿಂದ ಪರಮಪೂಜ್ಯರೆನಿಸಿಕೊಂಡ ಪೇಜಾವರ ಶ್ರೀಗಳು ನೀಡಿದ ಕರೆಯನ್ನೊಮ್ಮೆ ಅವಲೋಕಿಸಿ. " ಬ್ರಾಹ್ಮಣರ ಒಗ್ಗಟ್ಟಿನಿಂದ ಹಿಂದೂ ಸಮಾಜಕ್ಕೆ ಒಳಿತು " . ಈ ಒಗ್ಗಟ್ಟಿನಿಂದ ಏನು ಅನುಕೂಲವಾದೀತು ಎಂದು ಯೋಚಿಸುವ ಮುನ್ನ, ಹಿಂದೇನಾಗಿದೆ ಎಂದು ವಿಮರ್ಶಿಸುವದೊಳ್ಳೆಯದಲ್ಲವೇ? ಶ್ರೀ ಗಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿದವರು . ಸನ್ಯಾಸಿ ಜೀವನದ ಅವಧಿಯಲ್ಲಿ ಸಮಾಜಮುಖಿಯಾಗಿ ಬಹಳ ಚಿಂತನೆ ನಡೆಸಿದವರು. " ಹಿಂದೂ ಎಂದೂ ಒಂದು" ಎಂಬಂತಹ ಘೋಷಣೆಗಳಿಗೆ ಜೀವದಾನ ನೀಡಿದವರು. ದ್ವೈತಿಯಾಗಿ ಮಾದ್ವ ಬ್ರಾಹ್ಮಣ ಸಮಾಜಕ್ಕೆ ದಿಗ್ದರ್ಶಿಯಾಗಿರುವವರು. ಈ ಧೀರ್ಘ ಅವಧಿಯಲ್ಲಿ ಅವರೇ ಮುನ್ನಡೆಸುತ್ತಿರುವ ಬ್ರಾಹ್ಮಣ ಸಮಾಜದ ಅಂಗವಾಗಿರುವ ಮಾಧ್ವರಲ್ಲಿ ಬಡತನ ನಿರ್ಮೂಲನೆಮಾಡಲಾಗಲಿಲ್ಲ. ಶ್ರೀಗಳ ಸುತ್ತ ಸುತ್ತುವ ಸಿರಿವಂತ ಮಾದ್ವರಷ್ಟೇ ಶ್ರೀಗಳ ಕೃಪಾಕಟಾಕ್ಷ ಪಡೆಯುತ್ತಿದ್ದಾರೆ. ಈ ರೀತಿ ವ್ಯಕ್ತನೆ ಸುಮ್ಮನೆ ಬರುತ್ತಿಲ್ಲ. ಮನೆಯ ಅಡುಗೆ ಕೆಲಸ ಮಾಡಿ ಜೀವನ ನೂಕುವ ಮಾದ್ವ ಮಹಿಳೆಯರು, ತೋಟದ ಮನೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಿರುವ ಮಾದ್ವ ಪುರುಷರು , ಹೊಟೇಲು, ಖಾರಖಾನೆಗಳಲ್ಲಿ ದುಡಿದು ಜೀವನದ ಅವಶ್ಯಕತೆಗಳನ್ನೆ ಕಾಣಲಾಗದೆ ಪರಿತಪಿಸುತ್ತಿರುವ ಮಾದ್ವರು, ಆರ್ಥಿಕವಾಗಿ - ಸಾಂಸ್ಕೃತಿಕವಾಗಿ ಅತೀ ಹಿಂದುಳಿದ ಮಕ್ಕಳು ಓದುವ ಶಾಲೆಗಳಲ್ಲಿ ಮುದ್ರಾಧಾರಿಯಾಗಿ ಎಲ್ಲರ ಮಧ್ಯೆ ಕಂಗೊಳಿಸುತ್ತ, ಇತರರಿಂದ ಅವಹೇಳನಕ್ಕೊಳಗಾಗಿ ಓದುತ್ತಿರುವ ಮಾಧ್ವ ಮಕ್ಕಳು .............. ಇವರುಗಳಿಗೆಲ್ಲ ಶ್ರೀ ಶ್ರೀ ಗಳು ಮನಸ್ಸು ಮಾಡಿದ್ದರೆ ಯಾವುದೋ ಕಾಲದಲ್ಲೇ ಒಂದು ವ್ಯವಸ್ತಿತ, ಕನಿಷ್ಟ ಅವಶ್ಯತೆಗಳನ್ನು ಪೂರೈಸುವ ಜೀವನವನ್ನು ದಯಪಾಲಿಸಬಹುದಿತ್ತು. ಆದರೆ ಆಗಿಲ್ಲ, ಆಗುತ್ತಿಲ್ಲ, ಅಗುವದೂ ಇಲ್ಲ . ಯಾಕಾಗಿ ?...... ಎಂದರೆ ಆ ಜಗನ್ನಿಯಾಮಕ, ಪರಮಾತ್ಮ, ಸಕಲ ಚರಾಚರಗಳಿಗಿಂತ ಭಿನ್ನವಾಗಿ ವರ್ತಿಸುವವ (ವರ್ತಿಸುವ ಅಂದುಕೊಂಡಿದ್ದೇವೆ, ಹೌದೋ ಅಲ್ಲವೋ ಗೊತ್ತಿಲ್ಲ, ನಂಬಿದ್ದೇವೆ, ಇನ್ನೊಂದು ಸಾಧ್ಯವಾಗುವವರೇ ಈ ನಂಬಿಗೆಗೆ ಸ್ಥಾನ ) ನೀಡಿದ ಜಗವೆಂಬ ಈ ಕೊಡುಗೆಗೆ ಮಧ್ಯವರ್ತಿಗಳಾಗಿ ಈ ರೀತಿಯ ಬ್ರಾಹ್ಮಣರು ಮೆರೆಯುತ್ತಿರುವದರಿಂದ , ಗಳಿಸಿದ ಸ್ಥಾನಗಳನ್ನು ಸುಲಭವಾಗಿ ಬಿಡಲೊಲ್ಲದೆ, ರಾಜಕಾರಣಿಯ ಮನೋಧರ್ಮವನ್ನು ಅವ್ಹಾನಿಸಿಕೊಂಡು , ಸುತ್ತ ಮುತ್ತಲಿನ ಭೋ ಪರಾಕುಗಳ ಮಾಧುರ್ಯದಲ್ಲಿ ಮಿಂದೆeಳುತ್ತ, ಸುಖ ಲೋಲುಪತೆಯಲ್ಲಿ ಕಾಲ ಕಳೆದುಹೋಗುವಾಗ , ಬ್ರಾಹ್ಮಣ್ಯದ ವಾರಸುದಾರನಾದ ಬಡ - ಬ್ರಾಹ್ಮಣನ ಅವಶ್ಯಕತೆಗಳಿಗೆ ಸ್ಪಂದಿಸುವ ಗರ್ಜಾದರೂ ( ಅವಶ್ಯಕತೆ ) ಹೇಗೆ ಬಂದೀತು, ಅಲ್ಲವೇ?
ಈ ಎಲ್ಲಾ ವಿಚಾರಗಳು ಯಾವುದೇ ಒಂದು ಜನಾಂಗ, ಗುಂಪಿಗಷ್ಟೇ ಎನ್ನಬೇಕಾಗಿಲ್ಲ. ಇವು ಸಾರ್ವಕಾಲಿಕ , ಸಾರ್ವತಿಕ ವಿಚಾರಗಳು. ಬಹುತೇಕ ಜನರು ತನ್ನ ವೈಯಕ್ತಿಕ ಇಷ್ಟಾನಿಷ್ಟಗಳಿಗೆಲ್ಲಿ ತೊಂದರೆ ಬಂದೀತು ಎಂದೋ , ಇನ್ನು ಕೆಲವರು ಒಮ್ಮೆ ಶರಣು ಎಂದರೆ ತಾನೇನು ಕಳೆದುಕೊಳ್ಳಲಿಕ್ಕಿದೆ.....? ಎಂದೋ , ಉಳಿದವರು ಅಸಾಹಯಕರಾಗಿ ಜೀವನದ ಜಂಜಾಟಗಳಿಂದ ಆಚೆ ಇಣುಕಲಾಗದೆಯೋ ಸುಮ್ಮನಾಗಿರುವರು. ಸುಮ್ಮನಾಗದಿರುವವರನ್ನು ಸುಮ್ಮನಾಗಿಸುವ ಶಕ್ತಿ , ಸಾಮರ್ಥ್ಯಗಳನ್ನು ಸಮಾಜದ ಇಂದಿನ ನೇತಾರರು ಆಗಲೇ ಗಳಿಸಿಕೊಂಡಿದ್ದಾರೆ.
ಕೆಳಗಿನ ಕೊಂಡಿ (link ) ಓದಿ, ನಿಮ್ಮ ಅನಿಸಿಕೆ ಬರೆಯಿರಿ.
http://epapervijayavani.in/Details.aspx?id=5157&boxid=6217811
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
April 14 , 2013.