Saturday, August 16, 2014

"ಯಕ್ಷಗಾನ ಬ್ಯಾಲೆ" - "ಅಭಿಮನ್ಯು ವಧೆ "

ದಿ. ಶಿವರಾಮ ಕಾರಂತರ ಧೀ ಶಕ್ತಿಯಿಂದ ಜನ್ಮ ಪಡೆದ , ಶ್ರೀಮತಿ ಮಾಲಿನಿ ಮಲ್ಯರ ಛಲದಿಂದ ಮತ್ತು ಸಾಸ್ತಾನ ದಂಪತಿಗಳ ಪರಿಶ್ರಮದಿಂದ ಮರುಹುಟ್ಟು ಪಡೆದು ದಿನಾಂಕ  16.08.2014 ರಂದು ಪ್ರದರ್ಶನಗೊಂಡ ಯಕ್ಷಗಾನ ಬ್ಯಾಲೆ  "ಅಭಿಮನ್ಯು ವಧೆ " ಯಲ್ಲಿ ಪ್ರೇಕ್ಷಕನಾಗಿದ್ದೆ. 


ಸಭಾಂಗಣ ತುಂಬಿತ್ತು . ಆಗಮಿಸಿದ ಪ್ರೇಕ್ಷಕರಿಗೆ ನಿರಾಸೆಯಾಗಲಿಲ್ಲ. ಎಲ್ಲ ಪ್ರಕಾರದ ಕಲಾವಿದರಿಂದ ಅಭಿನಂದನೀಯ   ಪ್ರದರ್ಶನ ಇದಾಗಿತ್ತು. ರಾಧಾಕೃಷ್ಣ ಉರಾಳರ ಸ್ತ್ರೀ ಪಾತ್ರದಲ್ಲಿದ್ದ ದು:ಖ ರಸ ವ್ಯಕ್ತನೆ ಪ್ರೇಕ್ಷಕನನನ್ನು ತಾಯಿ ಮಮತೆಯ ಸಾಗರಕ್ಕೆ ಕೊಂಡೊಯ್ದಿತು.  ಯಕ್ಷಗಾನದ ಹೆಮ್ಮೆಯ ಮೃದಂಗ  ಕಲಾವಿದ ಪಾಠಕರ ಕಲಾ ನೈಪುಣ್ಯತೆಯನ್ನು  ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕ ಸೋತಂತೆ ಅನಿಸಿತು. 


ಯಕ್ಷಗಾನದ ಕಲಾ ಪ್ರಕಾರಗಳ ಪ್ರದರ್ಶನದಲ್ಲಿ ಸದಾ ಬಿಲ್ಲು ಹಿಡಿದ ಅರ್ಜುನ ಮತ್ತು ಗಧೆಯನ್ನೇ ಸದಾ ಬಳಸುವ ದುರ್ಯೋಧನ ಇವರನ್ನು ನೋಡಿದ ಯಕ್ಷ ಪ್ರೇಕ್ಷಕರಿಗೆ ಈ ದಿನದ ಪ್ರದರ್ಶನದಲ್ಲಿ  ಅರ್ಜುನ ಸಮಸಪ್ತಕರೊಡನೆ ಯುದ್ಧ ಮಾಡುವಾಗ ಕತ್ತಿ  ಹಿಡಿದು ಯುದ್ಧ ಮಾಡಿದಂತೆ ಮತ್ತು ದುರ್ಯೋಧನ ಅಭಿಮನ್ಯುವಿನೊಡನೆ ಯುದ್ಧ ಮಾಡುವಾಗ ಬಿಲ್ಲು ಹಿಡಿದು ಯುದ್ಧ ಮಾಡಿದಂತೆ ನೀಡಿದ ವ್ಯಕ್ತನೆ ಆಭಾಸವನ್ನುಂಟುಮಾಡಿತು.  


ಯಕ್ಷಗಾನ ನವರಸಗಳ ಅಭಿವ್ಯಕ್ತನೆಯನ್ನೊಳಗೊಂಡ ಕಲಾಪ್ರಕಾರಗಳಲ್ಲೊಂದು.  ಯಕ್ಷಗಾನದಿಂದ ತನ್ನ ಇರುವನ್ನು ಪಡೆದ ಈ "ಯಕ್ಷಗಾನ ಬ್ಯಾಲೆ" ಯಲ್ಲಿ ಹಾಸ್ಯ ರಸದ ಕೊರತೆ ನಿಚ್ಚಳವಾಗಿ  ಎದ್ದು ಕಾಣುತ್ತಿತ್ತು  . ನಿರ್ದೇಶಕರು ಮತ್ತು ಸಂಘಟಕರು ಇತ್ತ ಗಮನಹರಿಸಿ ಹಾಸ್ಯ ರಸವನ್ನು ಸೂಕ್ತವಾಗಿ ಒಳಗೊಳ್ಳುವಂತೆ ಸನ್ನಿವೇಶ ಒಂದು ಅಥವಾ ಎರಡನ್ನು ಸೇರಿಸುವದು ಒಳಿತು ಎಂಬ ಅನಿಸಿಕೆ. 


ಒಂದೂವರೆ ಘಂಟೆ ಅವಧಿಯ ಈ ಪ್ರದರ್ಶನದಲ್ಲಿ  saxophone  ಮತ್ತು  violin  ಅಳವಡಿಸಿಕೊಂಡಿರುವದು ಪ್ರದರ್ಶನಕ್ಕೆ ಹೆಚ್ಚಿನ ಮೆರಗು ತಂದಿತು. ಈ ಎರಡು ವಾದ್ಯ ಪ್ರಕಾರಗಳನ್ನ್ನು ಅಳವಡಿಸಿಕೊಂಡಿರದಿದ್ದರೆ ಸನ್ನಿವೇಶಗಳು  ಕಲಾರಸಗಳನ್ನು ಪ್ರಭಲವಾಗಿ ಅಭಿವ್ಯಕ್ತಿಗೊಳಿಸುವಲ್ಲಿ  ಸೋಲುತ್ತಿದ್ದವು. 


ಈ ಬ್ಯಾಲೆ ಪದ್ಧತಿಯ ಕಲೆ ಕನ್ನಡಿಗರಿಗೆ ಅದರಲ್ಲೂ ಯಕ್ಷಗಾನ ಪ್ರೇಕ್ಷಕರಿಗೆ ಒಗ್ಗುವದು ಅನುಮಾನ. ಯಾವುದೇ ಕಲಾಪ್ರಕಾರವಿದ್ದರೂ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಕನ್ನಡಿಗ ಒಮ್ಮೆ ಪ್ರದರ್ಶನಕ್ಕೆ ಬಂದಾನು. ಯಕ್ಷಗಾನಕ್ಕೆ ಒಗ್ಗಿಕೊಂಡ ಪ್ರೇಕ್ಷಕ ಪುನಃ ಪುನಃ ಯಕ್ಷಗಾನ ಆಸ್ವಾದಿಸಲು ಬರುವಂತೆ ಈ ಬ್ಯಾಲೆಗೆ ಬರುವದು ಅನುಮಾನ. ಯಕ್ಷಗಾನ ಪ್ರೇಕ್ಷಕನಿಗೆ ಇಲ್ಲಿ ಕಾಣಬರುವ ಬಹು ದೊಡ್ಡ ಕೊರತೆ ಮಾತುಗಾರಿಕೆ ಇಲ್ಲದಿರುವದು , ಸಂವಹನ ಕ್ರಿಯೆಯಲ್ಲಿ ಮಾತು ಎಷ್ಟು ಪ್ರಾಮುಖ್ಯ ಎನ್ನುವದು ಈ ಬ್ಯಾಲೆಯನ್ನು ನೋಡಿದಾಗ ಅರಿವಿಗೆ ಬರುವದು .  ಅಲ್ಲದೇ ಇದೂ ಸಹ ನಮ್ಮ ಜನಮಾನಸದಲ್ಲಿರುವ ಗೊಂಬೆಯಾಟದ ಪ್ರಕಾರದ ಬದಲಾವಣೆಯೋ ಎನಿಸುವದು. ಇಲ್ಲಿ ಸಂಘಟಕರ , ನಿರ್ದೇಶಕರ ಮೇಲೆ ಏನೂ ಆರೋಪ ಮಾಡುವಂತಿಲ್ಲ. ನಮ್ಮ ಜನಮಾನಸದಲ್ಲಿ ಯಕ್ಷಗಾನ ಆ ಪರಿ ಹಾಸು ಹೊಕ್ಕಾಗಿ ಸ್ಥಾನ  ಪಡೆದಿರುವದರಿಂದ ಯಕ್ಷಗಾನ ಪ್ರೇಕ್ಷಕ ಬ್ಯಾಲೆಯನ್ನು ಒಮ್ಮೆ ಆಸ್ವಾದಿಸಬಹುದೇ ವಿನಃ ಯಕ್ಷಗಾನದಂತೆ ಪುನಃ ಪುನಃ ಸೆಳೆದು ತರುವದು ಅನುಮಾನ. 


ಇನ್ನು ಸಂಘಟಕರಿಗೆ ಮತ್ತು ನಿರ್ದೇಶಕರಿಗೆ ಒಂದು ಸಲಹೆ. ಬ್ಯಾಲೆ ರೂಪಕ ಉತ್ತರ ಭಾರತದಲ್ಲಿ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ  ಬಹು ಜನಪ್ರಿಯವಾಗಿರುವದರಿಂದ ಹಿಮ್ಮೇಳ ಒದಗಿಸುವ ಸಾಹಿತ್ಯವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಿಸಿ ಸೂಕ್ತ ಸ್ವರ ಸಂಯೋಜನೆ ಮಾಡಿದರೆ ಈ ಕಲಾ ಪ್ರಕಾರ "ಯಕ್ಷಗಾನ ಬ್ಯಾಲೆ " ಜಗತ್ತಿನಾದ್ಯಂತ  ಜನ ಮನ್ನಣೆ ಗಳಿಸೀತು ಮತ್ತು ಬಹುಕಾಲದ ವರೆಗೆ ಜನಮಾನಸದಲ್ಲಿ ನಿಂತೀತು . ಜೊತೆಗೆ ಯಕ್ಷಗಾನ ಕಲೆಗೂ ಪರೋಕ್ಷ ಸಹಾಯ ಒದಗಿ ಬಂದೀತು .  


https://www.facebook.com/hariharsatyanarayan.bhat