Tuesday, November 19, 2013

About : Shree Akhila Havyaka Mahasabha ® Bangalore.

About  :   Shree Akhila Havyaka Mahasabha ® Bangalore.


ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಲ್ಲೇಶ್ವರದಲ್ಲಿರುವ ಕಟ್ಟಡವನ್ನು ಉರುಳಿಸಿ ನೆಲಸಮ ಮಾಡಿ ಇಟ್ಟಿದ್ದು ನಿಮ್ಮೆಲ್ಲರ ಗಮನದಲ್ಲಿದೆ ತಾನೇ?


ಕಟ್ಟಡದ ಪುನರ್ ನಿರ್ಮಾಣಕ್ಕೆ ನಿಮ್ಮೆಲ್ಲರಲ್ಲಿ ಹಣದ ಸಹಾಯ ಕೇಳಲು ಬರುತ್ತಿದ್ದಾರೆ, ಬರುವವರಿದ್ದಾರೆ ತಾನೇ? ಆಗ ಪದಾಧಿಕಾರಿಗಳಿಗೆ ಈ ಪ್ರಶ್ನೆಗಳನ್ನು ಕೇಳಲು ಮರೆಯದಿರಿ:


೧. ಸಾಕಷ್ಟು ಮೊತ್ತದ  ಆದಾಯವನ್ನು ತರುತ್ತಿರುವ ಕಟ್ಟಡವನ್ನು ಪುನರನಿರ್ಮಾಣಕ್ಕೆ ಬೇಕಾದ ಹಣ ಸಂಗ್ರಹವಾಗುವ ಮುನ್ನ ಕೆಡವುವಂತಹ ಅವಶ್ಯಕತೆ ಏನಿತ್ತು?  ವಸತಿಗೃಹದಲ್ಲಿರುವ ವಿಧ್ಯಾರ್ಥಿಗಳನ್ನು ಅವಧಿಗೆ ಮುನ್ನ ತೆರವುಗೊಳಿಸುವ ಅವಶ್ಯಕತೆ ಯಾಕಿತ್ತು?



೨.  ಕಟ್ಟಡ ನಕ್ಷೆ ತಯಾರಿ ಮಾಡಿ ಪೂರ್ವಾನುಮತಿ ಪಡೆಯುವ ಹಂತದಲ್ಲಿ ಎಡವಿದ್ದೇಕೆ?  ಅಲ್ಲಲ್ಲಿ ಕೇಳಿಬಂದಂತೆ ಒಮ್ಮೆ ಅರವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಪಡೆದ ಪೂರ್ವಾನುಮತಿಯನ್ನು ಪುನಃ ಪರಿಶೀಲನೆಗೊಳಪಡಿಸಿ ಮತ್ತೆ ನಲವತ್ತೈದು ಸಾವಿರ ರೂಪಾಯಿ ಖರ್ಚು ಮಾಡುವ ಪ್ರಸಂಗವನ್ನು ತಂದಿತ್ತವರು ಯಾರು ಎಂಬುದನ್ನೇಕೆ ಸಾರ್ವಜನಿಕ ಪಡಿಸಲಿಲ್ಲ?  ಈ ರೀತಿ ಅಜಾಗರೂಕತೆಯಿಂದ ಸಮಾಜ ಬಾಂಧವರ ಹಣ ವ್ಯರ್ಥವಾದರೂ ಆ ರೀತಿಯ ಜನರನ್ನೇ ಏಕೆ ಅವಲಂಬಿಸಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಸುತ್ತೀರಿ? ಇಲ್ಲಿ ಪದಾಧಿಕಾರಿಗಳ ಸ್ವ ಹಿತ ಅಡಗಿರುವದಾದರೂ ಏನು


೩.  ೨೦೧೩ ರಲ್ಲಿ ನಡೆದ ಚುನಾವಣೆಗೆ ಮತ್ತು ವಾರ್ಷಿಕ ಮಹಾಸಭೆಗೆ ಪೋಲಿಸ್ ರಕ್ಷಣೆ ಪಡೆಯುವಂತೆ ಸಂದರ್ಭಗಳನ್ನು ತಂದಿತ್ತ ಪದಾಧಿಕಾರಿಗಳ ಆಡಳಿತ ರೀತಿ ಹೇಸಿಗೆ ಹುಟ್ಟಿಸುವಂತಿಲ್ಲವೇ? ಜಗತ್ತಿನಲ್ಲೆಲ್ಲ ಸುಭಗರು, ಸೌಮ್ಯ ಮನೋಭಾವದ ಜನಾಂಗ , ಸುಸಂಕೃತರು, ವಿದ್ಯಾವಂತರು, ಸಹೃದಯಿಗಳು , ಶಾಂತಿಪ್ರಿಯರು ಎಂದೆಲ್ಲ ಶತಶತಮಾನಗಳಿಂದ ಹೆಸರುವಾಸಿಯಾದ ಸಮಾಜಕ್ಕೆ ಕಳಂಕ ತಂದಿರಲ್ಲವೇ


೪. ಏನಕೇನ ಪ್ರಕಾರೇಣ ಖುರ್ಚಿಯನ್ನುಳಿಸಿಕೊಳ್ಳಬೇಕು , ಗುಪ್ತ ಗುಪ್ತವಾಗಿ ಬಚ್ಚಿಟ್ಟ ಮಾಹಿತಿಗಳು ಹೊರಬರಬಾರದು ಎಂದು ತಮ್ಮ ಕೇರಿಯ, ಊರಿನ , ಯಾವುದೇ ಮೀಟಿಂಗ ಗಳಿಗೆ ಬರದ, ಬಂದರೂ ಎಲ್ಲ ಸುಮ್ಮನೆ ಹ್ನೂ ಎನ್ನಬಹುದಾದವರನ್ನೇ ಆಯ್ದು ಆಯ್ದು ಅಧಿಕಾರ ಬಲದಿಂದ ಸ್ಥಾನವನ್ನುಳಿಸಿಕೊಳ್ಳುವ ಹಪಾ ಹಪಿ ಯಿಂದ ಒಟ್ಟಾರೆ ಸಮಾಜಕ್ಕೆ ಹಾನಿಯಾಗುತ್ತಿದೆಯಲ್ಲವೇ


೫.  ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿಮ್ಮ ಕಾರ್ಯ ರೀತಿ ಕುರಿತು ಆಸಕ್ತಿ ವಹಿಸಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನೇ ಹೊಂದಿಲ್ಲ. ಕೇವಲ ಕಾನೂನಿಗೋಸ್ಕರವಾಗಿ ಕಣ್ಣುಮುಚ್ಚಾಲೆಯ ಲೆಕ್ಕ  ಪತ್ರಗಳು , ಆಂತರಿಕ ವರದಿ , ವಾರ್ಷಿಕ ಸಭೆ ಎಂದು ಅಧಿಕಾರದ ದರ್ಪವನ್ನು ತೋರ್ಪಡಿಸುತ್ತೀರಿ. ಮಾತನಾಡುವವನ ಧ್ವನಿ  ಅಡಗಿಸುವ ತಂತ್ರಗಳನ್ನೆಲ್ಲ ಕಾರ್ಯಗತ ಮಾಡಿದ್ದೀರಿ ಎಂದು ಸ್ವಾಭಾವಿಕವಾಗಿ ತೋರ್ಪಡುವದು. ನಮ್ಮ ಸಮಾಜಕ್ಕೆ ಇವೆಲ್ಲ ಶೋಭೆ ತರಬಲ್ಲುದೇ ?


೬. ಒಟ್ಟಾರೆ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ನಮ್ಮ ಸಮಾಜ ಕಡಿಮೆ ಜನ  ಸಂಖ್ಯೆಯನ್ನು ಹೊಂದಿದೆ. ಈ ಸಮಾಜದಲ್ಲೇ ಹತ್ತಾರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿವೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ಪಡೆದ , ವಿವಿಧ ರೀತಿಯ ಉದ್ಯೋಗ ಕೈಗೊಂಡಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ಯಾವ ಕಾರ್ಯಗಳೂ ಈ ಸಂಸ್ಥೆಯಿಂದ ತೋರಿಬರುತ್ತಿಲ್ಲ.  ಶಾಲೆಯೊಂದರ ಚಟುವಟಿಕೆಗಳಂತೆ ಆಟೋಟ, ವರ್ಷದಲ್ಲಿ ಹತ್ತಾರು ವಿವಾಹ ಮಾಹಿತಿ ಬೈಠಕ್ಕಗಳು , ವರ್ಷಕ್ಕೊಮ್ಮೆ ಪುಸ್ತಕಗಳನ್ನು ಕೊಳ್ಳಲೂ  ಸಾಲದಾದಂತ ವಿಧ್ಯಾರ್ಥಿ ವೇತನಗಳು ಇವುಗಳನ್ನು ನೆಚ್ಚಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಮ್ಮ ಮುಂದಾಳತ್ವವನ್ನು ಏಕೆ ಮತ್ತು ಹೇಗೆ ಮೆಚ್ಚಬೇಕು ? ಹಣಕಾಸು ವ್ಯವಹಾರದ ಸೂಕ್ತ ರೀತಿಯ ಪಾರದರ್ಶಕತೆ , ಎಲ್ಲ ರೀತಿಯ ಔದ್ಯೋಗಿಕ  ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಮಾಜ ಬಾಂಧವರ ಪ್ರತಿನಿಧಿತ್ವ ಆಡಳಿತ ಮಂಡಳಿಯಲ್ಲಿ ಇಲ್ಲದಿರುವಿಕೆ , ಹತ್ತಾರು ವರ್ಷಗಳಿಂದ ಅದೇ ನಿರ್ದೇಶಕರು ಮುಂದುವರಿದಿರುವಿಕೆ ಇತ್ಯಾದಿ ಅಂಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ಪ್ರಸಕ್ತ ಮುಂದಾಳತ್ವದಲ್ಲಿ ಸಮಾಜ ಬಾಂಧವರಿಗೆಲ್ಲ  ವಿಶ್ವಾಸದ  ಕೊರತೆ ಸಹಜವಲ್ಲವೇ ? ಇಲ್ಲದಿದ್ದರೆ ಅರವತ್ತೆರಡು   ವರ್ಷಗಳ ಇತಿಹಾಸವಿರುವ  ಈ ಸಂಸ್ತೆ ಪ್ರವರ್ಧಮಾನಕ್ಕೆ ಬರದಿರುತ್ತಿತ್ತೇ ?


೭. ಸಮಾಜದಲ್ಲಿ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರು , ಈ ರೀತಿ ಜನಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಸೂಕ್ತ ಸಹಾಯ ಸೌಲಭ್ಯಗಳ ಅವಶ್ಯಕತೆಯಿರುತ್ತದೆ. ಈಗ ಹಾಲಿ ನೀವು ನಡೆಸುತ್ತಿರುವ ಯಾವ ವಿಧ್ಯಾರ್ಥಿನಿಲಯಗಳಲ್ಲಿ ಎಷ್ಟು ಅಸಹಾಯಕ ಬಡ ಮಕ್ಕಳಿಗೆ ಉಚಿತ ಸೌಲಭ್ಯ  ನೀಡಿದ್ದೀರಿ? ಸಮಾಜ ಬಾಂಧವರಿಂದ ಸಂಗ್ರಹಿಸಿದ ಹಣದಿಂದ  ವಿಧ್ಯಾರ್ಥಿನಿಲಯಗಳನ್ನು ಕಟ್ಟಿ ಉಳ್ಳವರ ಮಕ್ಕಳಿಗೆ ಸೌಲಭ್ಯ  ಒದಗಿಸಿ ಆದಾಯದ ಮೂಲ ವರ್ಧಿಸಬೇಕೆಂಬ ನಿಮ್ಮ ಧೋರಣೆಯನ್ನು ನಾವ್ಯಾಕೆ ಅನುಮೋದಿಸಿ ಹಣಕಾಸಿನ ದೇಣಿಗೆ ನೀಡಬೇಕು?


  ಈ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳುವ ಅಧಿಕಾರ , ಜವಾಬ್ದಾರಿ ಎಲ್ಲ ಸಾಮಾನ್ಯ ಸದಸ್ಯರಿಗೆ ಇರುತ್ತದೆ. ಅದೇ ರೀತಿ ಸಾಮಾನ್ಯ ಸದಸ್ಯರು ಜಾಗ್ರತರಾಗಿದ್ದಲ್ಲಿ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವ ಅರಿವು ಉಂಟಾಗುತ್ತದೆ. ಸಮಾಜ ಅಭಿವೃದ್ಧಿ ಕಾಣುತ್ತದೆ. ಅಭಿವೃದ್ಧಿಯಾದ ಸಮಾಜ ಸುಖ , ನೆಮ್ಮದಿಗಳಿಂದ  ಮಿನುಗುತ್ತದೆ. ತಪ್ಪಿದಲ್ಲಿ ಪದಾಧಿಕಾರಿಗಳಷ್ಟೇ ಮಿನುಗುತ್ತಾರೆ ಮತ್ತು ಒಮ್ಮೆ ಮಿನುಗುವ ಬೆಳಕಿನ ಅಭಿಲಾಷೆ ಪಡೆದರೆ ಇನ್ಯಾರೂ ಹತ್ತಿರ ಸುಳಿಯದಂತೆ ವ್ಯೂಹ ರಚಿಸುತ್ತಿರುತ್ತಾರೆ. 


ಸದಸ್ಯರಾಗಿದ್ದವರ ಮನೆಗಳಿಗೆಲ್ಲ ಬಂದ ಹವ್ಯಕ ಪತ್ರಿಕೆ ಸಂಚಿಕೆಯಲ್ಲಿರುವ ಪದಾಧಿಕಾರಿಗಳ ಗುಣ ವಿಶೇಷತೆಗಳನ್ನು ಕಂಡುಕೊಳ್ಳಿ . ನಿಮಗೆಲ್ಲ ನನಗಿಂತ ಹೆಚ್ಚಿನ ಅರಿವು ಇದೆ. ನಿಮ್ಮ ಭೆಟ್ಟಿಗೆ ಪದಾಧಿಕಾರಿಗಳು ಬಂದಾಗ ನಮ್ಮೂರಿನವ, ನಮ್ಮ ಕೇರಿಯವ, ನಮ್ಮ ಮಗ, ನಮ್ಮ ಬಾಂಧವ ಎಂಬುದನ್ನು ನೆನಪಿಸಿಕೊಂಡು ಟೀ , ಕಾಫಿ ಯೊಂದಿಗೆ ಸತ್ಕರಿಸಿ. ದೇಣಿಗೆಯ ಆಶ್ವಾಸನೆ ನೀಡುವ ಮುನ್ನ ಈ  ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಅವರೊಂದಿಗೆ ಕೂಲಂಕುಶವಾಗಿ ಪ್ರಶ್ನಿಸಿ , ಸಮಾಜದಲ್ಲಿ ಸಂಘಟನೆಗೆ ಸ್ಪಂದಿಸಿ ಎಂಬ ಅರಿಕೆ. 


ನಮ್ಮ ಸಮಾಜ ಬಾಂಧವರ ಸಂಖ್ಯೆ ನಾಲ್ಕರಿಂದ ಐದು ಲಕ್ಷ ಎಂದು ಒಂದು ಅಂಬೋಣ. ಅಂದರೆ ಸಾಮಾನ್ಯವಾಗಿ ನಲವತ್ತೈದರಿಂದ ಅರವತ್ತು ಸಾವಿರ ಕುಟುಂಬಗಳಿರಬಹುದು. ಈ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಸದಸ್ಯ ಸಂಖ್ಯೆ  ಕೇವಲ ಹದಿನಾರು , ಹದಿನೇಳು ಸಾವಿರಗಳು ಮಾತ್ರ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಹೆಚ್ಚು ಹೆಚ್ಚು ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡು , ಜವಾಬ್ದಾರಿಯುತ ಪದಾಧಿಕಾರಿಗಳನ್ನು ಸಂಘಟನೆಗೆ ನೀಡಿ ಎಂಬ ಬಿನ್ನಹ. 


ಈ ಅಹವಾಲನ್ನು ಎಲ್ಲ ಹವ್ಯಕರಿಗೆ, ಎಲ್ಲ ಹವ್ಯಕ ಕುಟುಂಬಗಳಿಗೆ ತಲುಪಿಸುವ  ಜವಾಬ್ದಾರಿ  ತಮ್ಮದೆಲ್ಲರದ್ದಾಗಿದೆ. ಪ್ರಯತ್ನಪೂರ್ವಕವಾಗಿ ಈ ವಿಚಾರಗಳನ್ನು ಹೆಚ್ಚು  ಹೆಚ್ಚು ಪ್ರಚಾರ ಮಾಡಿ, ಪದಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಸಮಾಜ ಬಾಂಧವರಲ್ಲೆಲ್ಲಾ ಬೆಳೆಸಿ ಎಂಬ ಅರಿಕೆಯೊಂದಿಗೆ,


ಹರಿಹರ . ಎಸ್.  ಭಟ್ , ಬೆಂಗಳೂರು. 
ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

ನವೆಂಬರ್ ೨೦, ೨೦೧೩.   


Friday, October 4, 2013

Let our journalism friends introspect.

ಜನರನ್ನು  ಬೇಸ್ತು ಬೀಳಿಸುವ ಸುದ್ದಿ ಮಾಧ್ಯಮಗಳು ಮತ್ತು ಟೀ . ವಿ ವಾಹಿನಿಗಳು .


ಈ ದಿನಗಳಲ್ಲಿ ಯಾವುದೇ ಸುದ್ದಿ ಮೂಲಗಳ ಸತ್ಯಾಸತ್ಯತೆಯನ್ನು ಅರಿಯುವ ಗೋಜಿಗೆ ಹೋಗದೆ , ಟಿ. ಆರ್. ಪಿ ಹೆಚ್ಚಿಸುವ ಒಂದೇ ಉದ್ದೇಶದಿಂದ ಯಾರೋ ಪುಂಡ ಪೋಕರಿಗಳು ನೀಡುವ  ಸುದ್ದಿಯನ್ನು ಆಧರಿಸಿ ಕೂಡಲೇ ಪ್ರಸಾರ ಮಾಡುವ ತೆವಲಿನಿಂದ ಸುದ್ದಿ ಮಾಧ್ಯಮಗಳು ಹೊರ ಬರಬೆಕಾಗಿದೆ . ಅಲ್ಲದೆ ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಅನುಕೂಲವಾಗುವಂತೆ ಎರಡು ಮೂರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಮುಂತಾದವುಗಳ ಒಡೆತನ ಹೊಂದಿ, ಒಂದೆಡೆ ನೀಡಿದ ಸುದ್ದಿ ಸುಳ್ಳೆಂದು ಜಗ ಜಾಹೀರಾದಾಗ , ಆ ಸುದ್ದಿ ಸುಳ್ಳೆಂದು ತಿಳಿದುಬಂದಿದೆಯೆಂದು ಇನ್ನೊಂದು ತಮ್ಮದೇ ಒಡೆತನದ ಸುದ್ದಿ ಮಾದ್ಯಮದಲ್ಲಿ ಪ್ರಕಟಿಸಿ , ತಮ್ಮ ಅಜಾಗರೂಕತೆಯನ್ನು ಮುಚ್ಚಿಹಾಕುವ ಪ್ರವ್ರತ್ತಿ ಜಾಸ್ತಿಯಾಗುತ್ತಿದೆ.



ಮಾಧ್ಯಮ ಮಿತ್ರರ ಈ   ಟಿ.  ಆರ್. ಪಿ  ತೆವಲುಗಳನ್ನು ದುರುಪಯೋಗಪಡಿಸಿಕೊಂಡು ಸಮಾಜ ಘಾತುಕ ವ್ಯಕ್ತಿಗಳು, ರಾಜಕೀಯ ವಿರೋಧಿಗಳ ವಿರುದ್ಧ ಪಿತೂರಿ ನಡೆಸಿ ತಮ್ಮ ಬೇಳೆ ಬೇಯ್ಸಿಕೊಳ್ಳುವ ಕುಟಿಲ ರಾಜಕಾರಣಿಗಳು........ ಇತ್ಯಾದಿ ವ್ಯವಸ್ಥೆಯ ದುರುಪಯೋಗಪಡಿಸಿಕೊಳ್ಳುತ್ತಿರುವದು ಆಘಾತಕಾರಿ ವಿಚಾರ.



ಆದರಿಂದ ತಮ್ಮ ಮೇಲೆ ಸದಾ ಸ್ವನಿಯಂತ್ರಣ ಹೊಂದಿರಲಿ, ಸಮಾಜಕ್ಕೆ ಪತ್ರಿಕಾ ಮಿತ್ರರಿಂದ ಒಳ್ಳೆಯ ಸಂದೇಶಗಳು ರವಾನಿಸಲ್ಪಡಲಿ, ಸ್ವಸ್ತ  ಸಮಾಜ ಕೆಡಲು ಪತ್ರಿಕಾ ಮಿತ್ರರ ಕೊಡುಗೆ ಇರದಿರಲಿ ಮತ್ತು ಈ ದಿಶೆಯಲ್ಲಿ  ಪತ್ರಿಕಾ ಮಿತ್ರರು  ಸ್ವ ಅವಲೋಕನ ಮಾಡಿಕೊಳ್ಳಲಿ ಎಂಬ ಸದಾಶಯ ಇಂದಿನ ಕಾಲಘಟ್ಟದಲ್ಲಿ  ಬಹು ಪ್ರಸ್ತುತವಾಗುತ್ತಿದೆ.



ಹರಿಹರ ಭಟ್, ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ
ಸೆಪ್ಟೆಂಬರ್ ೦೫ , ೨೦೧೩
www.facebook.com/hariharsatyanarayan.bhat
www.hariharbhat.blogspot.com

Saturday, September 28, 2013

ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?

                                     ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?


ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ? ಇಂದು ಎಲ್ಲರ ಕೈಲೂ ಏ. ಟಿ. ಎಂ ಕಾರ್ಡ್ ಇದ್ದೇ ಇರುತ್ತದೆ. ಸಾಧಾರಣವಾಗಿ ಪ್ರಯಾಣ ಸಮಯದಲ್ಲಿ, ಯಾವುದಾದರೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಕಳೆಯುವ ಸಾಧ್ಯತೆಗಳಿವೆ. ಆಗ ಒಮ್ಮೆಲೇ ನಾವು ಗಾಬರಿಯಾಗುತ್ತೇವೆ. ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಾರ್ಡ್ ಎಲ್ಲೆಲ್ಲೋ ಬಿಟ್ಟಿರುತ್ತೇವೆ. ಹಾಗಾಗಿ ಏ. ಟಿ. ಎಂ ಕಾರ್ಡ್ ಬಗ್ಗೆ ನಾವು ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿ ಪಡೆಯೋಣ.


ಯಾವುದೇ ರೀತಿಯ ಎಸ್. ಎಮ್. ಎಸ್ ಗಳು , ಮೇಲ್ ಗಳು ಬಂದರೂ ನಿಮ್ಮ ಏ.ಟಿ.ಎಮ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ. ಅಲ್ಲದೆ ಬ್ಯಾಂ ಕ್ ಸಿಬ್ಬಂಧಿ ಅಥವಾ ಇನ್ಯಾರೇ ಪರಿಚಿತರು ಕೇಳಿದರೂ ಸಹ ನಿಮ್ಮ ಏ.ಟಿ.ಎಮ್ ಕಾರ್ಡ್ ವಿವರ / ಪಿನ್ ನಂಬರ್ / ಮಾಹಿತಿ ನೀಡಬೇಡಿ.


ನೀವು ಏ.ಟಿ.ಎಮ್ ನಿಂದ ಹಣ ತೆಗೆದಾಗ ಅಥವಾ ಇನ್ನ್ಯಾರೇ ಅನಧಿಕ್ರತವಾಗಿ ನಿಮ್ಮ ಖಾತೆಯಲ್ಲಿ ವ್ಯವಹಾರ ಮಾಡಿದರೆ ಅದರ ಮಾಹಿತಿ ಎಸ್.ಎಮ್.ಎಸ್ ಮೂಲಕ ಪಡೆಯುವ ಸೌಲಭ್ಯ ಇದೆ. ಈ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ದಾಖಲಾತಿ ಮಾಡಿ. 



ಮೊದಲನೇ ಸಲ ಬಳಸಿದ ಪಿನ್ ಬದಲಾಯಿಸಿ ಮತ್ತು ಆ ನಂತರ ಆಗಾಗ ಪಿನ್ ಬದಲಾಯಿಸುತ್ತಿರಿ. 



ಯಾವತ್ತೇ ಆದರೂ ಪಿನ್ ಬರೆದಿರುವ ಚೀಟಿಯನ್ನು ಕಾರ್ಡ್ ಜೊತೆ ಇಡಬೇಡಿ ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ.

ಪಿನ್ ನೆನಪಿನಲ್ಲಿಡುವದೇ ಉತ್ತಮ ವಿಧಾನ. 



ಏ.ಟಿ.ಏಮ್ ಅಥವಾ ಅಂಗಡಿ ಗಳಲ್ಲಿ ಖರೀದಿ ಮಾಡುವಾಗ ಕೀ ಪ್ಯಾಡ್ ಮೇಲೆ ಕೈ ಮರೆ ಮಾಡಿ ಪಿನ್ ನಂಬರ್ ಒತ್ತಿ.


ನೀವು ಏ.ಟಿ.ಏಮ್ ರೂಮ್ನಲ್ಲಿರುವಾಗ ಯಾರನ್ನು ಒಳಪ್ರವೇಶಿಸಲು ಬಿಡಬೇಡಿ. ಅಪರಿಚಿತರ ಸಹಾಯವನ್ನು ಎಂದೂ ಅಪೇಕ್ಷಿಸಬೇಡಿ.



ಹೊಸ ಏ.ಟಿ.ಏಮ್ ಕಾರ್ಡ್ ಪಡೆದರೆ , ಹಳೆ ಕಾರ್ಡ್ ನ್ನು ಬ್ಲಾಕ್ ಮಾಡಿ ಮತ್ತು ಹಳೆ ಕಾರ್ಡ್ ನ್ನು ಹರಿದು ಹಾಕಿ. 



ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಮಾಲ್ ಗಳಲ್ಲಿ ಏ.ಟಿ.ಏಮ್ ಕಾರ್ಡ್ ಬಳಸುವಾಗ ನೀವು ಎದುರು ನಿಂತಿರಿ , ಇನ್ನೆಲ್ಲಿಯೋ ಒಯ್ದು ಸ್ವೈಪ್ ಮಾಡಲು ಒಪ್ಪಬೇಡಿ.


ನೀವು ಪಡೆದ ರಸೀತಿ ಯನ್ನು ಏ.ಟಿ.ಏಮ್ ರೂಮ್ ನಲ್ಲಿ ಬಿಸಾಕಬೇಡಿ. ಜೊತೆಗೆ ತೆಗೆದುಕೊಂಡು ಹೋಗಿ ಹರಿದು ಇನ್ನೆಲ್ಲೋ ಬಿಸಾಕಿರಿ. 



ಯಾವಾಗಲಾದರೂ ಏ.ಟಿ.ಎಂ ಮಷೀನ್ ಗೆ ಇನ್ನೇನಾದರೂ ಹೆಚ್ಚಿನ ಚಿಕ್ಕ ಪುಟ್ಟ ಸಲಕರಣೆ ಜೋಡಿಸಿದ್ದು ಗಮನಕ್ಕೆ ಬಂದರೆ ಆ ಏ.ಟಿ.ಎಮ್ ನಲ್ಲಿ ವ್ಯವಹರಿಸಬೇಡಿ.


ನೀವು ಮಾಡಿದ ಏ.ಟಿ.ಎಮ್ ವ್ಯವಹಾರದ ಬಗ್ಗೆ ನಿಮ್ಮ ಪಾಸ್ ಬುಕ್ ಜೊತೆ ಆಗಾಗ ತುಲನಾತ್ಮಕವಾಗಿ ಅಭ್ಯಾಸ ಮಾಡಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದರೆ ಸಮಯ ವ್ಯತ ಮಾಡದೆ ಕೂಡಲೇ ನಿಮ್ಮ ಕಾರ್ಡನ್ನು ಹಾಟ್ ಲಿಸ್ಟ್ ಗೆ ಸೇರಿಸಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದಾಗ ಹಾಟ್ ಲಿಸ್ಟ್ ಗೆ ಸೇರಿಸಲು ನಿಮ್ಮ ಬ್ಯಾಂಕ್ ನ ದೂರವಾಣಿ ನಂಬರ್ ನ್ನು ನಿಮ್ಮೊಡನೆ ಸದಾ ಇರಿಸಿಕೊಳ್ಳಿ . 



ಕೆಲವು ಬ್ಯಾಂಕ್ ಗಳ ದೂರವಾಣಿ ಸಂಖ್ಯೆ , ಹಾಟ್ ಲಿಸ್ಟ್ ಗೆ ಸೇರಿಸಲು ಹೀಗಿದೆ : 



State Bank of India 1800-112211



State Bank of Mysore 1800 - 425 -3800 ; 1800 - 112211 ; 080 - 26599990



Canara Bank 1800 - 425 - 6000 ; 1800 - 425 - 07000



Corporation Bank 1800 - 425 - 2407 ; 080 - 26600587 ; 080 - 26602500



Syndicate Bank 1800 - 425 - 0585 ; 09483522433 



Vijaya Bank 1800 - 425 - 9992 ; 080 - 41133500



ಈ ರೀತಿಯಲ್ಲಿ ಕಾಳಜಿ ವಹಿಸಿರಿ. ಕಾರ್ಡ್ ಕಳೆದಾಗ ಗೊಂದಲವಾಗುವದು ಸಹಜವಾದುದು. ಆದರೆ ದೃತಿ ಗೆಡಬೇಡಿ. ಕೂಡಲೇ ಕಾರ್ಯಪೃವೃತ್ತರಾಗಿ. 



ನಿಮ್ಮ ಏ.ಟಿ.ಎಮ್  ಕಾರ್ಡ್ ಕಳೆದಾಗ , ಕಾರ್ಡ್ ಬ್ಲಾಕ್ ಮಾಡಲು ತಡ ಮಾಡಿದರೆ ಕಾರ್ಡ್ ಸಿಕ್ಕವರು ಕೂಡಲೇ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಜಾಸ್ತಿ.  ಆದ ಕಾರಣ ನಿಮಗೆ ಆಗುವ ಹಾನಿ ತಪ್ಪಿಸಲು ಕಾರ್ಡ್ ಕಳೆದ ಕೂಡಲೇ , ಕಾರ್ಡ್ ಬ್ಲಾಕ್ ಮಾಡಿ. ತಡ ಮಾಡಬೇಡಿ, ನೆನಪಿರಲಿ. 


                                                                  **********

Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ . 

Tuesday, August 27, 2013

ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?

ನಾನೇನೂ   ಈ ಕೃತಿ ಇನ್ನೂ ಓದಿಲ್ಲ.  ಆದರೆ ಪುಸ್ತಕ ಕುರಿತು ಇಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ  ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ.  ಹೌದಾದರೆ ಕೃತಿ  ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು  ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ.  ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?


ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ   ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.


ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ.  ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ  ಹಾನಿಕರ.

http://epapervijayavani.in/Details.aspx?id=8093&boxid=14755119


ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.

August 27 , 2013.

Friday, August 16, 2013

ಇಂದು, ಈಗಲೇ ಸಮಾಜದಲ್ಲಿ ಬರಬೇಕಾದ ಬದಲಾವಣೆ.

ಶ್ರೀ ಗುರುಭ್ಯೋ  ನಮಃ  /  ಹರಿಃ  ಓಂ   //

ಹರೇ ರಾಮ.


ಜೈ ಜೈ ಶ್ರೀ ರಾಮಕಥಾ , ಜೈ ಜೈ ಶ್ರೀ ರಾಮಕಥಾ. ಪ್ರತಿಯೊಬ್ಬರನ್ನು ಸೂಜಿಗಲ್ಲಿನಂತೆ ಹಿಡಿದಿಡುವ ರಾಮಕಥಾ.  ಎರಡನೆ ಮಾತಿಲ್ಲ. ಜೀವನದ ಕೆಲ ಸಮಯವನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವ ಯಶಸ್ವಿ ಪ್ರಯೋಗ. ಎರಡನೇ ಮಾತಿಲ್ಲ. ರಾಮಕಥಾ ಕಲಾವಿದರ ತಂಡಕ್ಕೂ , ರಾಮಕಥಾ ನೇತ್ರತ್ವಕ್ಕೂ , ರಾಮಕಥಾ ಪ್ರಾಯೋಜಕ ಆರ್ಥಿಕ ಬಲಾಢ್ಯ ಬಂಧುಗಳಿಗೂ ಮನಸ್ವಿ ಅಭಿನಂದನೆಗಳನ್ನು ಅಭಿವ್ಯಕ್ತಿಸುತ್ತ , ಸಮಾಜದ ವಾಸ್ತವಿಕತೆಯತ್ತ ಯೋಚಿಸೋಣ.



ಇಂದಿನ ಹವ್ಯಕ ಸಮಾಜದಲ್ಲಿ ಎಣಿಕೆಗೆ ಸಿಗುವಷ್ಟು ಹವ್ಯಕ ಬಂಧುಗಳು ಮಾತ್ರ ಆರ್ಥಿಕವಾಗಿ ಬಲಾಢ್ಯರಾದ ಗುಂಪಿನಲ್ಲಿದ್ದಾರೆ. ಇಂದಿನ ಜನಜೀವನದ ಅವಿಭಾಜ್ಯ ಅವಶ್ಯಕತೆಗಳಾದ ಕುಟುಂಬಕ್ಕೊಂದು ಸರ್ವ ಋತು ರಕ್ಷಣೆ ನೀಡುವ ಸೂರು, ಪ್ರತಿ ಮಗುವಿಗೂ ಫಲಪ್ರದವಾಗಿ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವಂತಹ ಶಿಕ್ಷಣ , ಅಧುನಿಕ ಬದಲಾವಣೆಗಳಿಂದ ದೂರದೂರುಗಳು ಸಾಮಿಪ್ಯ ಪಡೆದಿರುವದನ್ನು ಅವಲೋಕಿಸಿ ಭಾವನಾತ್ಮಕ   ಬಂಧನಗಳನ್ನು ಬಲಾಢ್ಯಗೊಳಿಸಲು , ಕ್ರಮಿಸಲು ಬೇಕಾದ ಸ್ವಂತ ವಾಹನ  .. ಇತ್ಯಾದಿ ಅವಶ್ಯಕತೆಗಳನ್ನು ಪೂರೈಸಲಾಗದೆ , ಜೀವನ ಜಂಜಡಗಳಲ್ಲಿ ಸಿಲುಕಿಕೊಂಡಿರುವ ಹವ್ಯಕ ಭಾಂಧವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಆದರೆ ಆರ್ಥಿಕವಾಗಿ ಬಲಾಢ್ಯರಾದ ಬಂಧುಗಳ ಅಹಮಿಕೆಯ ವ್ಯಕ್ತನೆಯ ವೈಭವೋಪೇರಿತ ಮದುವೆ  , ಮುಂಜಿ, ಪಾರಾಯಣ , ರಾಮಕಥಾ.... ಇತ್ಯಾದಿ ಅಘಟಿತ ಘಟನೆಗಳಿಂದ  ಧಿಗ್ಬ್ರ್ಹಮಣೆಗೊಳಗಾಗಿ  , ಪ್ರಾಪಂಚಿಕ ವಾಸ್ತವಿಕತೆಯಿಂದ ಕೆಲ ಸಮಯ ದೂರವಾದರೂ, ತದ  ನಂತರ ವಾಸ್ತವಿಕತೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆಯ ಭೀಕರ ದಿನ ಜೀವನಕ್ಕೆ , ಪುನಹಪ್ರವೇಶ . ಇದುವೇ ಇಂದಿನ ವಾಸ್ತವಿಕತೆಯಾಗಿದೆ.  ಆದುದರಿಂದಲೇ ಇಂದಿನ ಹೆಚ್ಚಿನ ಹವ್ಯಕ ಬಾಂಧವರು ಸಮಾಜದ ಚಟುವಟಿಕೆಗಳಿಗೆ ತಾಟಸ್ತ್ಯ ಮನೋಭಾವನೆಯಿಂದ ದೂರದಲ್ಲಿರಬಯಸುತ್ತಾರೆ. ಒಂದೆಡೆ  ಹನ್ನೆರಡು ಲಕ್ಷ ಜನಸಂಖ್ಯೆಯೆಂದೂ, ಇನ್ನೊಂದೆಡೆ  ನಾಲ್ಕಾರು ಲಕ್ಷ ಜನಸಂಖ್ಯೆಯೆಂದೂ ಪರಿಗಣಿಸಲ್ಪಟ್ಟ ಹವ್ಯಕ ಸಮಾಜ ಇಂದು ಅಲ್ಲಲ್ಲಿ  ನೂರರ ಸಂಖ್ಯೆಯಲ್ಲಿ ವಿಝ್ರಂಭಿಸುತ್ತಿರುವ ನೇತಾರರ, ಆರ್ಥಿಕ ಬಲಾಢ್ಯರ ಕೈಯಲ್ಲಿ ನೋವಿನಿಂದ ನಲುಗುತ್ತಿದೆ. ಈ ನೋವು ಆಳ ಪ್ರಪಾತಿಯಾಗಿ ( undercurrent ) ಹರಿಯುತ್ತಿದ್ದರೆ, ಅರ್ಥಿಕ ಬಲಾಢ್ಯರ , ಅವರ ಹಿಂಬಾಲಕರ ಹೇಕಾರಗಳು , ಕೇಕೆಗಳು ಸಮಾಜದ ವ್ಯಕ್ತ ಸ್ಥರದಲ್ಲಿ  ತಾರಕಕ್ಕೇರಿದ ಲಯವಾಗಿ ಹೊರಹೊಮ್ಮುತ್ತಿದೆ.


ಏನು ಮಾಡಲಾದೀತು? ದಾರಿ ಸುಗಮವಲ್ಲ.


ಹವ್ಯಕ  ಸಮಾಜದ ಶ್ರೇಷ್ಟ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡ, ಸಮಾಜ ಭಾಂಧವರು ಬಹುತೇಕರು ಆಧುನಿಕ  ಜೀವನ ಶೈಲಿಯ ಪ್ರಭಾವಕ್ಕೊಳಗಾಗಿ, ಆಧುನಿಕ ಜೀವನದ ಸುಖ ಲೋಲುಪತೆಯನ್ನು ಪಡೆಯಲಾಗದೆ , ಅತ್ತ ಜೀವನ ಸಾಗಿಸುವ ಅನಿವಾರ್ಯತೆಗೊಳಗಾಗಿ ಯಾವುದ್ಯಾವುದೋ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಕಡು ಬಡವರಾಗಿದ್ದರೂ, ಸಮಾಜದ ಶ್ರೇಷ್ಟ ಸಂಸ್ಕೃತಿಯ ಗುಣಗಳನ್ನು  ಅವರ ಮಕ್ಕಳಲ್ಲಿ ಮೈಗೂಡಿಸಿ , ಮುಂದಿನ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಕಾತರರಾಗಿದ್ದಾರೆ. ಆದರೆ ಇಂದಿನ ಕ್ರೂರ ವಾಸ್ತವಿಕತೆಗಳಾದ ಶಾಲಾ ಡೊನೇಶನ್ನುಗಳು , ಇನ್ಫ್ಲುಯೆನ್ಸ್ ಗಳು ಸಮಾಜ ಬಾಂಧವರನ್ನು  ಅಸಹಾಯಕತೆಗೆ ತಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಆ ರೀತಿ ಸಮಾಜಬಾಂಧವರನ್ನು ಈ ವಿಷವರ್ತುಲಗಳಿಂದ ವಿಮುಕ್ತಿಗೊಳಿಸಲು ಸಮಾಜ ನೇತಾರರೆಲ್ಲ ಒಗ್ಗೂಡಿ , ಆರ್ಥಿಕವಾಗಿ ಬಲಾಢ್ಯರಾಗಿರುವ - ಸಮಾಜಕ್ಕೆ ಆರ್ಥಿಕವಾಗಿ ದಾನ ನೀಡಬಲ್ಲ ಉದಾರಿ ಹೃದಯ ಸಾಮ್ರಾಜ್ಯವನ್ನು ಹೊಂದಿದ ಸಮಾಜ ಬಾಂಧವರಿಂದ ಬರುವ ದಾನದ ಹಣವನ್ನು ಕ್ರೋಢೀಕರಿಸಿ ,  ಹೆಚ್ಚಿನ  ಸಂಖ್ಯೆಯಲ್ಲಿ   ಉಚಿತವಾದ , ಶಿಕ್ಷಣಸ್ನೇಹಿಯಾದ ಪೂರಕ ವಾತಾವರಣವುಳ್ಳ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ  ಅವಕಾಶಗಳುಳ್ಳ , ಸರ್ವ ರೀತಿಯ ಯೋಗ್ಯವಾದ ಖರ್ಚು ವೆಚ್ಚಗಳನ್ನು  ಹೊಂದಿಸಿ ಉಚಿತವಾಗಿ ಶಿಕ್ಷಣ , ಆರ್ಥಿಕವಾಗಿ ಹಿಂದುಳಿದ ಮಾತಾ ಪಿತೃರ ಮಕ್ಕಳಿಗೆ  ದೊರಕುವ ಸೌಲಭ್ಯವನ್ನೊದಗಿಸುವತ್ತ    ಗಮನ ಹರಿಸಬೇಕಾಗಿರುವದು ಇಂದಿನ  ತುರ್ತು ಅವಶ್ಯಕತೆಯಾಗಿದೆ.  ಗಮನವೀಯಬೇಕಾಗಿದ್ದು ಯೋಗ್ಯ ಪ್ರಚಲಿತ ಶಿಕ್ಷಣ , ಉಚಿತ ಶಿಕ್ಷಣ , ಆರ್ಥಿಕವಾಗಿ ಅತೀ ಹಿಂದುಳಿದಿರುವ ಸಮಾಜಬಾಂಧವರಿಗೆ ಮೊದಲ ಆದ್ಯತೆಯಿರಬೇಕಾಗಿದೆ.



ಈ ರೀತಿ ಬದಲಾವಣೆಯ ಮನೋಧರ್ಮ ಒಮ್ಮೆ ಸಮಾಜದಲ್ಲಿ ತೀವ್ರ ಸಂಚಲನೆ ಪಡೆದರೆ , ವರ್ತಮಾನಕಾಲದಲ್ಲಷ್ಟೇ ಅಲ್ಲ ಸರ್ವ ಕಾಲದಲ್ಲೂ, ಸಾರ್ವತ್ರಿಕವಾಗಿ ನಮ್ಮ ಸಮಾಜ ಶ್ರೇಷ್ಟ ಪರಂಪರೆಯನ್ನು ಉಳಿಸಿ, ಬೆಳೆಸಲಾದೀತು.  ಅವಕಾಶ ಕಲ್ಪಿಸದಿದ್ದರೆ " ನಮ್ಮನ್ನು ನಾವೇ ಶ್ರೇಷ್ಟರು " ಎಂದು ಡಂಗುರ ಸಾರುತ್ತಾ ಸಾಗುವ ಕಾಲ ಸದಾ ಮುಂದುವರಿದೀತು. ಬದಲಾವಣೆಗೆ ಸಕಾಲ ಇದು, ಸಮಾಜದ ನೇತಾರರು  ಮನಸ್ಸು ಮಾಡಲೇಬೇಕಾದ ಪರ್ವ ಕಾಲ ಇದು.


www.http://hareraama.in/



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ.
ಆಗಸ್ಟ್ ೧೭, ೨೦೧೩.  

Tuesday, July 2, 2013

ಸಾಮಾಜಿಕ, ಸಾಮೂಹಿಕ ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.

ಸಾಮಾಜಿಕ, ಸಾಮೂಹಿಕ  ಜೀವನಶೈಲಿಗಳನ್ನು ಬದಲಾಯಿಸುತ್ತಿರುವ ರಿಯಾಲಿಟಿ ಶೋಗಳು.



ಈಗಿನ ಸಿನೆಮಾಗಳು , ಟಿ.ವಿ ಶೋಗಳು ಜನಪ್ರಿಯತೆಯನ್ನು ಪಡೆಯಲು, ಹೆಚ್ಚು ಹಣ ಗಳಿಸಲು ಆಯ್ದುಕೊಂಡಿರುವ ದಾರಿಯೆಂದರೆ ಯಾವುದಾದರೊಂದು ಕೊಂಟ್ರೊವರ್ಸಿಯನ್ನು ಹುಟ್ಟುಹಾಕುವದು. ಇದು ಜನಸಾಮಾನ್ಯರೆಲ್ಲ ಗಮನದಲ್ಲಿರುವ ಪ್ರಸ್ತುತ ಕಾಲಘಟ್ಟದ ಬೆಳವಣಿಗೆಯಾಗಿದೆ. ಹಿಂದೆಲ್ಲ ಜನಮಾನಸದಲ್ಲಿ ದೀರ್ಘಕಾಲ   ನೆಲೆನಿಲ್ಲುವಂತಹ ಸಿನೇಮಾ, ಟಿ.ವಿ ಶೋಗಳನ್ನು ತೆಗೆಯಲು ಹೆಚ್ಚಿನ ಮುತುವರ್ಜಿ   ನೀಡಲಾಗುತ್ತಿತ್ತು.  ಇಂದಿನ ವಿಶೇಶ ಪರಿಣಿತಿಯತ್ತ ಸಾಗಿರುವ ತಂತ್ರಜ್ಞಾನದ ದಿನಗಳು ಆ ರೀತಿ ಜನಮಾನಸದಲ್ಲಿ ದೀರ್ಘಾವಧಿಗೆ ನೆನಪುಗಳಾಗಿ ನಿಲ್ಲುವಂತಹ ರಂಜನೆಯ ಜೊತೆಗೆ ಸಮಾಜಕ್ಕೆ ದಾರಿದೀಪವಾಗಬಲ್ಲ ಕಾರ್ಯಕ್ರಮಗಳನ್ನು ನೀಡಲು ಪೂರಕವಾಗಿರಬೇಕಿತ್ತು. ಆದರೆ ಇಂದು ಅಯೋಗ್ಯರೆಲ್ಲ ಯೋಗ್ಯರ ಮುಸುಕುಧಾರಿಗಳಾಗಿ ಈ ಕಾಲಮಾನಕ್ಕೆ ವರವಾಗಿರುವ ತಂತ್ರಜ್ಞಾನವನ್ನು ಶಾಪವಾಗಿಸಿ, ಸಾಮಾಜಿಕ ಜೀವನ ಶೈಲಿ, ಸಾಮಾಜಿಕ ನಿತ್ಯಜೀವನ , ಮನುಷ್ಯನ ಜೀವಿತದ ಉದ್ದೇಶ ಇವುಗಳನ್ನೆಲ್ಲಾ ತಿರುಚಿ, ಬಿಚ್ಚು - ಕಚ್ಚು,  ಕುಣಿ - ಮಿಣಿ  ಇವುಗಳನ್ನೇ ಜೀವನ ಮೌಲ್ಯಗಳಾಗಿ ಬಿಂಬಿಸುತ್ತಾ ಹೊರಟಿರುವದು ಶೋಚನೀಯ.



ಈಗಷ್ಟೇ ಅವಿರತವಾಗಿ 2 ,160  ಗಂಟೆಗಳಷ್ಟು ಮನರಂಜನೀಯ ವಾಗಿ ನಡೆದ ರಿಯಾಲಿಟಿ ಶೋ ವೊಂದನ್ನು ಪರಾಮರ್ಶಿಸಿದರೆ ಗೋಚರಿಸುವ ಅಂಶಗಳೆಂದರೆ,  ಜೀವನದಲ್ಲಿ ತಮ್ಮ ಅಚಾತುರ್ಯದಿಂದ ಕೊಂಟ್ರೊವರ್ಸಿಗಳನ್ನು ಹರಡಿಕೊಂಡು ಆ ಕೊಂಟ್ರೊವರ್ಸಿಗಳ ಸಿಕ್ಕುಗಳಿಂದ ಹೊರಬರಲು ತಮ್ಮ ಇಮೇಜ್ ಬಿಲ್ಡಿಂಗ್ ಗಾಗಿ ಒದ್ದಾಡುತ್ತಿದ್ದವರಿಗೆ , ಮುಳುಗುವವನಿಗೆ ಆಸರೆಯಾಗಿ ಹುಲ್ಲುಕಡ್ಡಿ ಬಂದಾಗ ಅದನ್ನೇ ತಬ್ಬಿ ದಂತೆ ಈ ಬಡಾ ಬಾಸನ್ನು ಅಪ್ಪಿ , ಮನ ಬಿಚ್ಚಿ , ಹುಚ್ಚುಚ್ಚಾಗಿ ದಿನಗಳೆದಂತೆ ತಬ್ಬುವದೇ ಜೀವನ, ತಬ್ಬಿ ತಬ್ಬಿ ನೋಡುಗರ ಎದೆಬಡಿತ ಹೆಚ್ಚಿಸಿದಷ್ಟೂ , ತಮ್ಮ ಕೊಂಟ್ರೊವರ್ಸಿಗಳಿಂದ ಆಚೆ ಬಂದಂತನಿಸಿ  ನೆಮ್ಮದಿ ಪಡೆಯುವದರಲ್ಲೇ ಸಾರ್ಥ್ಯಕ್ಯ  ಕಂಡ  ಮನೆ ಸೇರಿದ, ಮನೆಯಾಚೆ ಬಂದ , ಇನಾಮು ಪಡೆದ, ಕಪ್ ಎತ್ತಿದ, ಕಪ್ಪಗಾಗಿ ಜೊಲ್ಲು ಸುರಿಸಿದ, ಸೋರಿದ ಜೊಲ್ಲನ್ನು ಮರೆಮಾಚಿ ತೋರಗೊಡದ ಕೊಂಟ್ರೊವರ್ಸಿಗಳಿಗೆ, ಹಿಂದಿನ ದಶಕಗಳಲ್ಲಿ ಮೆರೆದ ಆ ರಂಜನಾ ಜಗತ್ತಿನ ಮುದಿ   ಹುಲಿ ಗಳಿಗೆ ತಾವು - ತಮ್ಮ  ಕ್ರಿಯೆಗಳು ಸಾಮಾಜಿಕ ಜೀವನಕ್ಕೆ, ಯುವಜನಾಂಗಕ್ಕೆ ಎಂತಹ ಸಂದೇಶ ನೀಡುತ್ತಿದ್ದೇವೆ , ನೀಡುತ್ತಿವೆ  ಎಂಬ ಪರಿವೆಯೇ ಇಲ್ಲದಂತಿರುವದು ಖೇದನೀಯ.    



ಈ ರೀತಿ ರಂಜನೆಯ ಬದುಕಿನ ಪರಿಣಾಮವಾಗಿ ಅಮಾಯಕ , ಅನನುಭವಿ ಯುವ ಜೀವಗಳು ಜೀವನ ಸಾರ್ಥಕತೆ ಅಥವಾ ನಿತ್ಯ ಜೀವನ ಸಾಗಿಸಲು, ಪೂರ್ಣ ಬದುಕೊಂದನ್ನು ಕಂಡುಕೊಳ್ಳಲು ವ್ಯಯಿಸಬೇಕಾದ ಕಾಲಾವಕಾಶವನ್ನು ದೂರ ಮಾಡಿ , ಸಂಪೂರ್ಣವಾಗಿ ಬಿಚ್ಚು- ಕಚ್ಚು, ಕುಣಿ - ಮಿಣಿ ಜೀವನದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಅತ್ತ ಆ ರೀತಿ ಗುಂಪುಗಳಲ್ಲಿ ಯಶಸ್ಸನ್ನು ಕಾಣದೆ , ಇತ್ತ ಸಹಜ ಸಿದ್ಧ ಜೀವನ ಪದ್ದತಿಯಿಂದ ದೂರಾಗಿ ಯೌವನದಲ್ಲೇ ನಿರಾಶದಾಯಕರಾಗಿ ,  ತಮ್ಮ ಜೀವನವನ್ನೆ ನಿರಾಶೆಯಿಂದ ಕೊನೆಗೊಳಿಸುವ ಹಂತ ತಲುಪುತ್ತಿರುವದು ಎಲ್ಲೆಡ ವೇದ್ಯ ಸಂಗತಿಯಾಗಿದೆ.



ಈ ನಡುವೆ ಇನ್ನೊಂದು ವಿಷಾದನೀಯ  ವಿಷಯವೆಂದರೆ ಸಾತ್ವಿಕ ಸಮಾಜದಲ್ಲೂ ಈ ರೀತಿಯ ಮನರಂಜನೆಯತ್ತ ಆಕರ್ಷಿತರಾಗುತ್ತಿರುವವರ   ಸಂಖ್ಯೆ   ಗಣನೀಯವಾಗಿ ಹೆಚ್ಚುತ್ತಿದೆ. ಇಂದಿನ ಕಾಂಚಾಣದ ಕುಣಿತ, ಜನ ಸಮೂಹದಿಂದ ಸಿಗುವ ಜನಪ್ರಿಯತೆ  ಇವುಗಳತ್ತ ಆಕರ್ಷಿತರಾಗಿ, ತಮ್ಮ ಜೀವನ ಕಾಲದಲ್ಲಿ ಬಂದೊದಗಿರದ  ಆಸ್ತಿ - ಪಾಸ್ತಿ ,  ಜನಪ್ರಿಯತೆ ತಮ್ಮ ಮಕ್ಕಳ ಕಾಲದಲ್ಲಾದರೂ, ತಮ್ಮ ಮಕ್ಕಳಿಂದಲಾದರೂ ತಮಗೆ ಬರಲಿ ಎಂಬ ಸ್ವಾರ್ಥದಿಂದ , ಅನಾನುಕೂಲದಲ್ಲೇ ಅನುಕೂಲ ಕಲ್ಪಿಸಿ , ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ - ಜುಟ್ಟಿಗೆ ಮಲ್ಲಿಗೆ ಎಂಬಂತೆ , ಮಕ್ಕಳನ್ನು ಆಧುನಿಕ ಶಾಲೆಗಳಿಗೆ ಕಳಿಸಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ,  ಅತ್ತ ಪಾಶ್ಚಿಮಾತ್ಯರಾಗುವ ಧೈರ್ಯ - ಸ್ಥೈರ್ಯವಿಲ್ಲದೆ, ಇತ್ತ ಪೌರಾತ್ಯ ಸಂಸ್ಕಾರಗಳನ್ನು ಆಡಂಬರಾತ್ಮಕವಾಗಿ ಅನುಸರಿಸುತ್ತ , ಬಿ.ಪಿ - ಶುಗರ್ - ಹಾರ್ಟ್ ಅಟೆಕ್     ಗಳೆಂಬ ರಾಕ್ಷಸರ ಕಾಟವನ್ನು ತಾಳಲಾಗದೆ , ಅಯ್ಯೋ ಜೀವನವೇ ......... ಎಂದು ದಿನ ದೂಡುವವರೊಂದೆಡೆಯಾದರೆ, ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಂಡು ಜೀವನಕ್ಕೇ ಅಂತ್ಯ ತಂದೊಡ್ಡಿಕೊಳ್ಳುವ ಮಂದಿ ಇನ್ನೊಂದೆಡೆ ಕಾಣಬರುತ್ತಾರೆ.

                                                *********************